ಮರೆಯದಿರಿ ನಾಗರೀಕತೆಯ ಪ್ರಜ್ಞೆಯನ್ನು
ನಾಗರೀಕತೆ ಎಂದರೆ ಮನುಷ್ಯ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬಾಳಿ ಬದುಕುವ ಅಥವಾ ಇತರರೊಡನೆ ಹೊಂದಾಣಿಕೆಯೊಂದಿಗೆ ಸಹ ಜೀವನ ಮಾಡುವ ರೀತಿ ಎಂದು ಹೇಳಬಹುದಾಗಿದೆ. ನಾಗರೀಕತೆ ಎಂಬುವುದು ಕೇವಲ ಒಬ್ಬ ವ್ಯಕ್ತಿಗಷ್ಟೇ ಸೀಮಿತವಾಗಿರದೆ, ನಾವು ಬದುಕುತ್ತಿರುವ ಸಮಾಜ ಹಾಗೂ ಪರಿಸರಕ್ಕೂ ಸಂಬಂಧಿಸಿದ್ದಾಗಿದೆ. ಆಧುನಿಕತೆಯು ಬೆಳೆದಂತೆ ಒಂದು ನಿರ್ದಿಷ್ಟ ಪ್ರದೇಶದ ಹಾಗೂ ಅಲ್ಲಿನ ಜನರ ಸಾಮಾಜಿಕ ಹಾಗೂ ಸಂಘಟನಾತ್ಮಕ ಜೀವನ ಶೈಲಿಯಲ್ಲಿ ಆಗುವ ಬದಲಾವಣೆಯನ್ನು ನಾಗರೀಕತೆ ಎನ್ನಬಹುದು. ಉತ್ತಮ ನಾಗರೀಕತೆಯು ಪರಿಸರ ಅಥವಾ ವಾತಾವರಣದ ನಿರ್ಮಾಣವಾಗಬೇಕಾದರೆ ಪ್ರಥಮದಲ್ಲಿ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಪ್ರಜೆಗಳ ಜೀವನ ಶೈಲಿ ಹಾಗೂ ಸಂಸ್ಕೃತಿಯಲ್ಲಿ ಧನಾತ್ಮಕ ಬದಲಾವಣೆಗಳು ಅಗತ್ಯವಾಗಿ ಆಗಬೇಕಾಗಿದೆ.
ನಾಗರೀಕತೆಯು ಬೆಳೆಯುತ್ತಾ ಕಾಲಚಕ್ರ ಉರುಳುತ್ತಾ ಹೋದಂತೆ ನಮ್ಮ ಜೀವನ ಶೈಲಿಯಲ್ಲೇನೋ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ನಮ್ಮ ಸಂಸ್ಕೃತಿಯ, ಆಚಾರ ವಿಚಾರಗಳ ಅರ್ಥಪೂರ್ಣ ನಾಗರೀಕತೆಯ ಪ್ರಜ್ಞೆಯೇ ನಮ್ಮಲ್ಲಿ ಇಲ್ಲವಾಗಿದೆ. ನಾಗರೀಕತೆಯ ಪ್ರಜ್ಞೆಯೆಂದರೆ ತಾವು ವಾಸಿಸುತ್ತಿರುವ ಸಮಾಜ ಅಥವಾ ಪರಿಸರದಲ್ಲಿ ಎಲ್ಲರೂ ಸಮಾನ ಹಕ್ಕಿನೊಂದಿಗೆ ಬದುಕುವ ವಾತಾವರಣವನ್ನು ಕಲ್ಪಿಸುವಲ್ಲಿ ಹಾಗೂ ವಾತಾವರಣವನ್ನು ಮುಂದಿನ ಪೀಳಿಗೆಗೂ ಉಳಿಸಿ ಅವರ ಜೀವನಕ್ಕೂ ಸಹಕಾರಿಯಾಗುವಂತೆ ಬೆಳೆಸುವಲ್ಲಿ ಅಲ್ಲಿನ ಜನ ಸಮುದಾಯದ ಮನೋಭಾವವಾಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಪರಿಸರದಿಂದ ಪರಿಸರಕ್ಕೆ ವ್ಯತ್ಯಾಸವಾಗಿದ್ದು ಮಾನವೀಯ ಮೌಲ್ಯಗಳು ತುಂಬಿದ ಉತ್ತಮ ನಾಗರೀಕತೆಯ ಪ್ರಜ್ಞೆಯಲ್ಲಿ ಏಕತೆಯನ್ನು ಎಲ್ಲೆಡೆ ಕಾಯ್ದುಕೊಳ್ಳುವುದು ನಮ್ಮೆಲ್ಲರ ಗುರಿಯಾಗಬೇಕಾಗಿದೆ. ಹಿರಿಯರು ಹಾಗೂ ಹೆತ್ತವರು ತಮ್ಮ ಕುಂದು ಕೊರತೆಗಳನ್ನು ಸರಿಪಡಿಸಿಕೊಳ್ಳುವ, ಯುವಪೀಳಿಗೆಯ ಧನಾತ್ಮಕ ವಿಚಾಧಾರೆಗಳಲ್ಲಿ (ಯೋಚನೆಗಳಲ್ಲಿ) ತಾವೂ ಸಾಮ್ಯತೆಯನ್ನು ತಂದುಕೊಂಡು ಮಾದರಿಯಾಗಿ ಬದುಕುವ ಮನಸ್ಥಿತಿಯನ್ನು ತಮ್ಮಲ್ಲಿ ಹಾಗೂ ತಮ್ಮ ಮಕ್ಕಳಲ್ಲಿ ಹಾಗೂ ತಾವು ಬದುಕುವ ಪರಿಸರದಲ್ಲಿ ಮೂಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ.
“Criminals or Legends are not made by Birth; they became criminal or legends by their living environment” ಎಂಬ ಗಾದೆಯು ಮಾತಿನಂತೆ (ಅಪರಾಧಿಗಳು ಅಥವಾ ಮಹಾನ್ ವ್ಯಕ್ತಿಗಳು ಹುಟ್ಟುತ್ತಲೇ ಅಪರಾಧಿ ಅಥವಾ ಗಣ್ಯವ್ಯಕ್ತಿಗಳಾಗಿ ಹುಟ್ಟಿಲ್ಲ ಬದಲಾಗಿ ಅವರು ಅಂತಹ ವ್ಯಕ್ತಿತ್ವವನ್ನು ಹೊಂದುವಲ್ಲಿ ಅವರು ಬೆಳೆದ ಪರಿಸರವೂ ಪ್ರಮುಖ ಪಾತ್ರವನ್ನು ವಹಿಸಿರುತ್ತದೆ) ಉತ್ತಮ ಸಮಾಜ ಮತ್ತು ಉತ್ತಮ ದೇಶ ನಿರ್ಮಾಣದಲ್ಲಿ ನಮ್ಮ ಈಗಿನ ಯುವ ಪೀಳಿಗೆಯನ್ನು ಧನಾತ್ಮಕ ಮನೋಭಾವದೊಂದಿಗೆ ಬೆಳೆಸುವುದು ಹಾಗೂ ಅವರನ್ನು ದೇಶ ಕಟ್ಟುವ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಹೆತ್ತವರ ಕೊಡುಗೆಯು ಅತ್ಯಂತ ಮಹತ್ವದ್ದಾಗಿದೆ. “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂಬ ನಾಣ್ಣುಡಿಯಂತೆ ಮಕ್ಕಳ ಇಂದಿನ ಮನೋಭಾವವೇ ಮುಂದೊಂದು ದಿನ ಸಮಾಜದ ಭವಿಷ್ಯವನ್ನು ನಿರ್ಧರಿಸಬಹುದು. ಸಾರ್ವಜನಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇತರರಿಗೆ ಕಿರಿಕಿರಿ ಮಾಡುವಂತಹ ದುರ್ವರ್ತನೆಯ ಅನಾಗರೀಕತೆಯನ್ನು ಪ್ರದರ್ಶಿಸುವುದು ಸಮಾಜಕ್ಕೆಸಗುವ ಅಪಚಾರವೇ ಸರಿ. ಹರಪ್ಪ ನಾಗರೀಕತೆಯ ನಂತರ ವ್ಯವಸ್ಥಿತವಾಗಿ ಬದುಕಲು ಬೇಕಾದ ಅನುಕೂಲ ಮಾಡಿಕೊಳ್ಳುವಲ್ಲಿ ಮನುಷ್ಯ ಬಹಳಷ್ಟು ಬುದ್ಧಿವಂತನಾದರೂ ಸಹ ಮಾನಸಿಕವಾಗಿ ಹಾಗೂ ವ್ಯವಸ್ಥಿತವಾಗಿ ಪ್ರಜ್ಞೆಯ ಅರಿವು ಮೂಡಿಸಿಕೊಳ್ಳುವಲ್ಲಿ ಪ್ರತಿ ನಿತ್ಯವೂ ಹಿಂದೆ ಉಳಿಯುತ್ತಿದ್ದಾನೆ.
ನಾವು ವಾಸಿಸುವ ಅಥವಾ ಕೆಲಸ ಮಾಡುತ್ತಿರುವ ಸ್ಥಳ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವುದು. ಇದರಿಂದ ವಾತಾವರಣಕ್ಕೆ ನಿರಂತರವಾಗಿ ಬಳುವಳಿಯಾಗಿ ನೀಡುತ್ತಿರುವ ತ್ಯಾಜ್ಯ ವಸ್ತುಗಳ ಪ್ರಮಾಣವನ್ನು ತನ್ನಿಂದ ಸಾಧ್ಯವಾದಷ್ಟು ಕಡಿತಗೊಳಿಸುವ ಜವಾಬ್ದಾರಿಯನ್ನು ನಾವೆಲ್ಲರೂ ವಹಿಸಿಕೊಳ್ಳಬೇಕಾಗಿದೆ. ನಾವು ಬದುಕುತ್ತಿರುವ ಭೂಪ್ರದೇಶವನ್ನು ತನ್ನ ಜೀವಿತಾವಧಿಯಲ್ಲಿ ಕೇವಲ ತನ್ನ ಸ್ವಾರ್ಥಕ್ಕೆ ಮಾತ್ರ ಬಳಸಿಕೊಳ್ಳದೆ ಮುಂದಿನ ಪೀಳಿಗೆಗೂ ಬದುಕಲು ಬಳಸಲು ಸಾಧ್ಯವಾಗುವಂತಹ ವಾತಾವರಣವನ್ನು ಬಿಟ್ಟು ಹೋಗಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ದಿನಪ್ರತಿ ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವ ಬದಲಾಗಿ ಅವುಗಳನ್ನು ನಿರ್ದಿಷ್ಟವಾದ ರೀತಿಯಲ್ಲಿ ಸಂಗ್ರಹಿಸುವಲ್ಲಿ ಸಹಕರಿಸಿ ಅವುಗಳನ್ನು ವಿಲೇಮಾಡುವಲ್ಲಿ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ. ‘ಕಸವನ್ನು ಎಲ್ಲೆಂದರಲ್ಲಿ ಎಸೆಯುವ ವರ್ಗ ಒಂದಾದರೆ ಕಸವನ್ನು ವಿಲೇ ಮಾಡುವವರು ಇನ್ನೊಂದು ವರ್ಗ’ ಎಂಬಂತಾಗಿದೆ ಇಂದಿನ ಪರಿಸ್ಥಿತಿ. ಇದರ ಬದಲಾಗಿ ಪ್ರಜ್ಞಾವಂತ ನಾಗರೀಕರಾದ ನಾವು ಕಸವನ್ನು ಪ್ರತಿನಿತ್ಯ ಸಮರ್ಪಕವಾಗಿ ನಿರ್ವಹಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ವಿಶೇಷವಾಗಿ ರೈಲು ಮತ್ತು ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ನಾವೆಲ್ಲರೂ ಬಳಸುವ ತಿಂಡಿ-ತಿನಿಸುಗಳು, ಪಾನ್‌ಮಸಾಲಾ, ಜ್ಯೂಸ್ ಇತ್ಯಾದಿಗಳ ಕವರ್‌ಗಳನ್ನು ಉಪಯೋಗಿಸಿದ ನಂತರ ವಿವೇಚನೆಯಿಲ್ಲದೆ ವಾಹನಗಳು ಹಾಗೂ ರೈಲಿನ ಕಿಟಕಿಗಳಿಂದ ಹೊರಗೆಸೆಯುತ್ತೇವೆ. ಇದರಿಂದಾಗಿ ರಸ್ತೆಗಳು ಮತ್ತು ರೈಲು ಹಳಿಗಳ ಇಕ್ಕೆಲಗಳು ತ್ಯಾಜ್ಯಗಳಿಂದ ತುಂಬಿ ಗಬ್ಬೆದ್ದು ನಾರುತ್ತಿವೆ. ಇಂತಹ ಸಂದರ್ಭದಲ್ಲಿ ತ್ಯಾಜ್ಯಗಳನ್ನು ವಾಹನಗಳಿಂದ ಹೊರಗೆ ಎಲ್ಲೆಂದರಲ್ಲಿ ಎಸೆಯುವ ಬದಲಾಗಿ ಅವುಗಳನ್ನು ಸಮರ್ಪಕವಾಗಿ ಸಂಗ್ರಹಿಸಿ ಅದಕ್ಕೆಂದೇ ಮಿಸಲಿಟ್ಟ ಕಸದ ತೊಟ್ಟಿಗಳಲ್ಲೇ ಹಾಕಿ ಇತರರಿಗೆ ಮಾದರಿಯಾಗಬೇಕಾಗಿದೆ. ಇನ್ನು ಸಾರ್ವಜನಿಕ ಸ್ಥಳಗಳಾದ ಬಸ್‌ಸ್ಟಾಂಡ್, ಕಾಂಪೌಂಡ್ಗಳು, ಖಾಲಿ ಗೋಡೆಗಳಲ್ಲಿ, ಖಾಲಿ ಸ್ಥಳಗಳಲ್ಲಿ ತಂಬಾಕು ಪಾನ್ ಇತ್ಯಾದಿಗಳನ್ನು ತಿಂದು ಉಗುಳುವ ಮೂಲಕ ಬಣ್ಣ ಬಣ್ಣದ ಚಿತ್ತಾರವನ್ನು ಮೂಡಿಸಿರುವುದನ್ನು ನಾವು ಎಲ್ಲೆಡೆ ಕಾಣುತ್ತಿದ್ದೇವೆ.
ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಹನಗಳಲ್ಲಿ ಪ್ರಯಾಣಿಸುವಾಗ ಹಿಂದೆ ಮುಂದೆ ನೋಡದೆ ಕಿಟಕಿಯಿಂದ ಹೊರಗಡೆ ಉಗುಳುವುದು ಒಂದು ಅಂಟು ಜಾಡ್ಯವೇ ಸರಿ. ಇತ್ತೀಚೆಗೆ ಬಸ್ಪ್ರ ಯಾಣದ ಒಂದು ಅನುಭವ ನೆನಪಿನಲ್ಲಿ ಇನ್ನು ಹಸಿಯಾಗಿದೆೆ. ನಾನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ ಆಗ ನನ್ನ ಮುಂದಿನ ಸೀಟ್‌ನಲ್ಲಿದ್ದ ವಯಸ್ಕರೊಬ್ಬರು ಪಾನ್ ತಿನ್ನುತ್ತಾ ಕುಳಿತಿದ್ದರು. ಸ್ವಲ್ಪ ಹೊತ್ತಿನಲ್ಲಿ ಅದೇನು ಆತುರವಾಯಿತೋ ತಿಳಿಯದು, ಹಿಂದೆ ಮುಂದೆ ನೋಡದೇ ಮನೆಯ ಖಾಲಿ ಜಾಗದಲ್ಲಿ ಕುಳಿತು ಉಗುಳುವಂತೆ ಕಿಟಕಿಯಿಂದ ತುಪುಕ್ ಎಂದು ಕೆಂಬಣ್ಣದ ಓಕುಳಿಯನ್ನು ಉಗುಳಿಯೇ ಬಿಟ್ಟರು. ಅದು ನೇರವಾಗಿ ಬಸನ್ನು ಹಿಂದಿಕ್ಕಿ ಹೋಗುವ ಧಾವಂತದಲ್ಲಿದ್ದ ಬೈಕ್ ಸವಾರನ ಮುಖ ಹಾಗೂ ಬಿಳಿ ಬಟ್ಟೆಗೆ ಪವಿತ್ರ ಸ್ನಾನವನ್ನೇ ಮಾಡಿಸಿತ್ತು!!!! ಶುಭ ಕಾರ್ಯ ನಿಮಿತ್ತ ಹೊರಟ್ಟಿದ್ದ ಯುವಕನ ಸ್ಥಿತಿ ಏನಾಗಿರಬೇಡ ಯೋಚಿಸಿ? ಇದು ಇಂದಿನ ನಮ್ಮ ಸಂಸ್ಕೃತಿ!!!?? ಇತ್ತೀಚೆಗೆ ಮಹಾರಾಷ್ಟ್ರದ ಸತಾರದಲ್ಲಿ ಸರಕಾರಿ ಬಸ್‌ನಲ್ಲಿ ಪ್ರಯಾಣ ಮಾಡುವ (ದುರಾ)ಅದೃಷ್ಟ ನನಗೆ ಒದಗಿ ಬಂದಿತ್ತು. ಅಲ್ಲಿ ಕುಳಿತುಕೊಳ್ಳುವ ಸೀಟ್‌ನ ಇಕ್ಕೆಲಗಳಲ್ಲೂ ಪಾನ್ ತಿಂದು ಉಗುಳಿ ರಂಗು ರಂಗಿನ ಚಿತ್ತಾರ ಬಿಡಿಸಿರುವ ಅಸಹನೀಯ ಸನ್ನಿವೇಶ ನನ್ನ ಕಣ್ಣಿಗೆ ಬಿತ್ತು. ಈ ಪ್ರಯಾಣವನ್ನು ಸೀಟ್‌ನಲ್ಲಿ ಕುಳಿತುಕೊಳ್ಳಲಾರದೆ ನಿಂತುಕೊಂಡೆ ಪ್ರಯಾಣ ಮಾಡಿದ್ದೆ.
ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ನವೀಕರಿಸಲಾಗದ ನೈಸರ್ಗಿಕ ಸಂಪನ್ಮೂಲಗಳಾದ ವಿದ್ಯುತ್, ಇಂಧನ, ಜಲ ಇವುಗಳನ್ನು ಸಮರ್ಪಕವಾಗಿ ಹಿತಮಿತವಾಗಿ ಬಳಸುವ ಅವಶ್ಯಕತೆಯನ್ನು ನಾವೆಲ್ಲರೂ ಅರಿತುಕೊಳ್ಳಬೇಕಾದದ್ದು ಅತೀ ಅವಶ್ಯಕ. ಮನೆ ಮತ್ತು ಸಾರ್ವಜನಿಕವಾಗಿ ನೀರು ಪೂರೈಸಲು ಇರುವ ನಲ್ಲಿಗಳಲ್ಲಿ, ಮನೆಯ ಸಂಪುಗಳಲ್ಲಿ ಅಥವಾ ತಾರಸಿಯ ಮೇಲಿನ ಟ್ಯಾಂಕ್‌ಗಳಲ್ಲಿ ನೀರಿನ ಸೋರಿಕೆಯಾಗುತ್ತಿದ್ದರೆ ಅವುಗಳನ್ನು ನೋಡಿಯೂ ನೋಡದಂತೆ ನಾವು ನಮ್ಮ ಜವಾಬ್ದಾರಿಯಲ್ಲ ಎಂಬಂತೆ ಮುಂದಕ್ಕೆ ಹೆಜ್ಜೆ ಇಡುತ್ತೇವೆ. ನೀರು ಅನಗತ್ಯವಾಗಿ ಹಾಗೂ ಅನಾವಶ್ಯಕವಗಿ ಪೋಲಾಗುವ ಸಂದರ್ಭಗಳಲ್ಲಿ ನಾವು ಅದನ್ನು ನಮ್ಮ ಜವಾಬ್ದಾರಿ ಎಂಬಂತೆ ಅವುಗಳನ್ನು ಸ್ಥಗಿತಗೊಳಿಸುವ ಅಥವಾ ಸಂಬಂಧಪಟ್ಟವರಿಗೆ ತಿಳಿಸಿ ಸ್ಥಗಿತಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಲೇಬೇಕಾಗಿದೆ.
ಇನ್ನು ತಿನ್ನುವ ಆಹಾರದ ಬಗ್ಗೆ ಹೇಳುವುದಾದರೆ ಜನ ಸಾಮಾನ್ಯರು ಬಳಕೆಗಿಂತ ಹೆಚ್ಚು ಪೋಲುಮಾಡುತ್ತಿರುವ ಆಹಾರದ ಸ್ಥಿತಿ “ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ” ಎಂಬ ನಾಣ್ಣುಡಿಯಂತಾಗಿದೆ. ರೈತ ವರ್ಷವಿಡಿ ಕಷ್ಟಪಟ್ಟು ಆಹಾರವನ್ನು ಬೆಳೆದು ನಮಗೆಲ್ಲರಿಗೂ ನೀಡುತ್ತಾನೆ. ಆದರೆ ನಾವು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಬಡಿಸಿಕೊಂಡು ಅನಾವಶ್ಯಕವಾಗಿ ಆಹಾರವನ್ನು ಪೋಲು ಮಾಡುತ್ತಿದ್ದೇವೆ. “ಆಹಾರವನ್ನು ತಿನ್ನುವ ಹಕ್ಕು ನನಗಿದೆ ಆದರೆ ಅದನ್ನು ಬಿಸಾಕುವ ಹಕ್ಕು ಖಂಡಿತಾ ನನಗಿಲ್ಲ” ಎಂಬುವುದನ್ನು ನಾವು ಮರೆಯಾಬಾರದು. ನಾವು ತಿಂದು ಮಿಕ್ಕಿ ಬಿಸಾಕುವ ಅನ್ನದ ಪ್ರತಿ ತುತ್ತಿಗೂ ಹಾಹಾಕಾರ ಹಾಕುವ ಅದೆಷ್ಟೋ ಹಸಿದ ಹೊಟ್ಟೆಗಳನ್ನು ನಾವು ಪ್ರತಿನಿತ್ಯ ನೋಡುತ್ತೇವೆ. ಆದ್ದರಿಂದ ನನ್ನ ಹಸಿವನ್ನು ನೀಗಿಸುವ ಆಹಾರವನ್ನು ನನ್ನ ಅವಶ್ಯಕತೆಯ ಪ್ರಮಾಣಕಿಂತ ಒಂದು ತುತ್ತು ಕಡಿಮೆ ಆಹಾರವನ್ನು ಬಡಿಸಿಕೊಂಡರೂ ಪರವಾಗಿಲ್ಲ, ಅನಾವಶ್ಯಕವಾಗಿ ಆಹಾರವನ್ನು ಪೋಲು ಮಾಡಲೇಬಾರದು.
ಇಂದಿನ ಯುವ ಜನಾಂಗ ಹೆಚ್ಚು ಹೆಚ್ಚಾಗಿ ಮಾದಕ ವಸ್ತುಗಳ (ಡ್ರಗ್ಸ್, ಮದ್ಯಪಾನ ,ಧೂಮಪಾನ, ಗುಟ್ಕಾ ಇತ್ಯಾದಿ) ದಾಸರಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಶೋಕಿ ಹಾಗೂ ಮೋಜಿಗಾಗಿ ಪ್ರಾರಂಭವಾಗುವ ದುಷ್ಚಟಗಳು ಮುಂದೊಂದು ದಿನ ತಾವುಗಳು ಅವುಗಳ ದಾಸರಾಗಿ ಬಿಡುತ್ತಾರೆ. ಹಾಗೂ ತಮಗರಿವಿಲ್ಲದೆಯೇ ತಮ್ಮನ್ನು ದುಷ್ಚಟದ ದಳ್ಳುರಿಗೆ ತಳ್ಳಿ ತಮ್ಮ ಆರೋಗ್ಯ ಹಾಗೂ ಅಮೂಲ್ಯ ಜೀವನವನ್ನು ಕಳೆದುಕೊಳ್ಳುತ್ತಾರೆ. ಇಷ್ಟೆಲ್ಲ ಅಡ್ಡ ಪರಿಣಾಮಗಳು ಗೊತ್ತಿದ್ದೂ ನಾವು ಮಾದಕ ವಸ್ತುಗಳ ಬೆನ್ನು ಹತ್ತಿರುವುದು ವಿಪರ್ಯಾಸವೇ ಸರಿ. ಇಂದಿನ ಯುವ ಪೀಳಿಗೆಯು ಬೆಳಗಾದ ಕೂಡಲೇ ಯಾವುದೇ ಉದ್ಯೋಗ ಅಥವಾ ಜವಾಬ್ದಾರಿಯೆಡೆಗೆ ಮುಖ ಮಾಡದೇ ಸೋಮಾರಿ ಕಟ್ಟೆಯಲ್ಲಿ ಕುಳಿತು ಕೆಲಸಕ್ಕೆ ಹಾಗೂ ಪ್ರಯೋಜನಕ್ಕೆ ಬಾರದ ವಿಚಾರಗಳ ಕುರಿತು ಚರ್ಚಿಸುತ್ತಾ ಚಿಂತಿಸುತ್ತಾ ಕಾಲಹರಣ ಮಾಡುತ್ತಿರುತ್ತಾರೆ. ‘ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ’ ಎಂಬುವ ನಾಣುಡಿಯೇನೋ ನಿಜ, ಆದರೆ ಮಾನವ ಕುಲದಲ್ಲಿ ಹುಟ್ಟಿದ ನಾವು ನಮ್ಮ ಪ್ರತಿಯೊಂದು ಕ್ಷಣವೂ ಅತ್ಯಂತ ಅಮೂಲ್ಯವಾದದು ಎಂಬುದನ್ನು ಅರಿತುಕೊಂಡು ಹೆತ್ತವರಿಗೆ ಹಾಗೂ ಸಮಾಜಕ್ಕೆ ಹೊರೆಯಾಗದೇ ಒಂದಲ್ಲ ಒಂದು ರೀತಿಯ ಉದ್ಯೋಗ ನಿರ್ವಹಣೆಯ ಮೂಲಕ ಇತರರಿಗೆ ಮಾದರಿಯಾಗಿ ಬದುಕುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕಷ್ಟದಲ್ಲಿರುವ ವ್ಯಕ್ತಿಯ ಕಷ್ಟವನ್ನು ನೋಡಿ ನಗುವುದು ಹಾಗೂ ಅವರನ್ನು ಇನ್ನಷ್ಟು ಕಷ್ಟಕ್ಕೆ ತಳ್ಳುವ ಬದಲಾಗಿ, ಆ ವ್ಯಕ್ತಿಗೆ ಸಾಧ್ಯವಾದಷ್ಟು ಮಾನಸಿಕವಾಗಿ ಧೈರ್ಯ ತುಂಬುವ ಅಥವಾ ನೇರವಾಗಿ ಸಹಾಯ ಮಾಡುವ ಪ್ರಯತ್ನವನ್ನು ಮಾಡುವುದು. ಅದರ ಬದಲಾಗಿ ತನ್ನಿಂದ ಸಹಾಯ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಯಾವುದೇ ಕಾರಣಕ್ಕೂ ಅಂತಹ ವ್ಯಕ್ತಿಗೆ ಇನ್ನಷ್ಟು ತೊಂದರೆಯನ್ನು ನೀಡುವ ಉಸಾಬರಿಗೆ ಹೋಗಲೇಬಾರದು.
‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ (ಎಲ್ಲಿ ಹೆಣ್ಣನ್ನು ಪುಜ್ಯನೀಯ ಭಾವನೆಯಿಂದ ನೊಡಲಾಗುತ್ತದೋ ಅಥವಾ ಗೌರವವನ್ನು ನೀಡಲಾಗುತ್ತದೆಯೋ ಅಲ್ಲಿ ದೇವಾನು ದೇವತೆಗಳು ನೆಲೆಸುತ್ತಾರೆ ಎಂಬ ಮಾತಿನಂತೆ ಜಾತಿ ಧರ್ಮದ ಮೌಢ್ಯತೆಗೊಳಗಾಗದೇ ಒಂದು ಹೆಣ್ಣು ಕಷ್ಟದಲ್ಲಿದ್ದಾಗ ಆಕೆಗೆ ಆ ಕ್ಷಣದಲ್ಲಿ ಸಹಾಯ ಮಾಡುವ ಮನಸ್ಥಿತಿಯನ್ನು ನಾವೆಲ್ಲರೂ ತೋರಬೇಕಾಗಿದೆ. ಯಾರೋ ಒಂದು ಹೆಣ್ಣು ಮಗಳನ್ನು ಒಂದಷ್ಟು ಮಂದಿ ಚುಡಾಯಿಸುತ್ತಿದ್ದರೆ, ಇಂದಿನ ಯುವ ಪೀಳಿಗೆ ನಮಗ್ಯಾಕೆ ಊರಿನ ಉಸಾಬರಿ ಎಂದು ತಮ್ಮ ಪಾಡಿಗೆ ತಾವು ಮುಂದೆ ಹೋಗುವುದನ್ನು ನಾವೆಲ್ಲ ನಿತ್ಯ ನೋಡುತ್ತಿದ್ದೇವೆ. ಆಕೆ ಯಾರದೋ ತಾಯಿ, ಸಹೋದರಿ ಅಥವಾ ಮಗಳು ಆಗಿರಬಹುದು. ಒಟ್ಟಿನಲ್ಲಿ ಆಕೆ ಹೆಣ್ಣು, ಒಂದು ಹೆನ್ಣಿಗೆ ಅಪಚಾರವಾಗುವ ಸಂದರ್ಭ ಬಂದಾಗ ಯಾವುದೇ ವ್ಯಾಪ್ತಿಗೆ ಕಟ್ಟು ಬೀಳದೇ ಒಕ್ಕೊರಲಿನಿಂದ ವಿರೋಧಿಸುವ ಜಾಯಮಾನವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಗಾಂಧೀಜಿ ಕಂಡ ಸ್ವಚ್ಛ ಭಾರತ ಸುಸಂಸ್ಕೃತ ಭಾರತದ ಕನಸು ನನಸಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ನಾಗರೀಕ ಪ್ರಜ್ಞೆಯನ್ನು ಬೆಳೆಸಿಕೊಂಡು ಸಾಮಾಜಿಕ ಜವಾಬ್ದಾರಿಯನ್ನು ಬದುಕಬೇಕಿದೆ. ವಿಶೇಷ ಸಂದರ್ಭಗಳಂದು ನಡೆಸಲಾಗುವ ನಾಗರೀಕ ಪ್ರಜ್ಞೆಯ ಅಭಿಯಾನ ಮತ್ತು ವಿವಿಧ ರೀತಿಯ ಆಂದೋಲನಗಳು ಮತ್ತು ಪ್ರವಚನಗಳು ಕೇವಲ ಆ ದಿನದ ಭಾಷಣಗಳಿಗಷ್ಟೇ ಸೀಮಿತವಾಗಿರದೆ ಜನ ಸಮಾನ್ಯರಲ್ಲಿ ವಸ್ತು ನಿಷ್ಠವಾದ ಬದಲಾವಣೆಗಳನ್ನು ತರುವ ನೈಜ ಅರಿವನ್ನು ಮೂಡಿಸಬೇಕಾಗಿದೆ. ಹಾಗೂ ಇವುಗಳನ್ನು ನಮ್ಮ ಜವಾಬ್ದಾರಿಯೆಂದು ಅರಿತು ದಿನನಿತ್ಯ ಉತ್ತಮ ನಾಗರೀಕತೆಯ ಅಂಶಗಳನ್ನು ಪ್ರತೀ ಕ್ಷಣವೂ ವಿಶೇಷ ಕಾಳಜಿಯಿಂದ ಆಚರಣೆಗೆ ತಂದಲ್ಲಿ ಇತರರಿಗೆ ಮಾದರಿಯಾದ ಉತ್ತಮ ನಾಗರೀಕತೆಯ ಜೀವನವನ್ನು ನಡೆಸಬಹುದು.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು ದ.ಕ.ಜಿಲ್ಲೆ
ದೂ: 9742884160