ಮಲೆ ಕಬ್ಬಕ್ಕಿ – Malabar Starling

ನಾವು ಈಗಾಗಲೇ ಅನೇಕ ಗೊರವಂಕಗಳು ಹಾಗೂ ಕಬ್ಬಕ್ಕಿಗಳನ್ನು ಕುರಿತಾಗಿ ತಿಳಿದಿದ್ದೇವೆ. ಮುಖ್ಯವಾಗಿ ಈ ಎರಡರ ನಡುವಿನ ವ್ಯತ್ಯಾಸವೆಂದರೆ ಗೊರವಂಕಗಳ ರೆಕ್ಕೆಗಳ ಮೇಲೆ ಬಿಳಿಯ ಮಚ್ಚೆ ಇರುತ್ತದೆ, ಕಬ್ಬಕ್ಕಿಗಳ (ಸ್ಟಾರ್ಲಿಂಗ್‍) ರೆಕ್ಕೆಯ ಮೇಲೆ ಈ ಮಚ್ಚೆ ಇರುವುದಿಲ್ಲ ಹಾಗೂ ಕಬ್ಬಕ್ಕಿಗಳು ಗಾತ್ರದಲ್ಲಿ ಗೊರವಂಕಗಳಿಗಿಂತ ಚಿಕ್ಕವು.

ಈ ಮಲೆ ಕಬ್ಬಕ್ಕಿ ಹೆಸರೇ ಹೇಳುವಂತೆ ಮಲೆನಾಡಿನಲ್ಲಿ ಕಂಡುಬರುವ ಕಬ್ಬಕ್ಕಿ. ಪಶ್ಚಿಮಘಟ್ಟಗಳೇ ಇವುಗಳ ಮುಖ್ಯವಾದ ಆವಾಸವಾದರೂ ಅದರ ಹೊರಗೂ ಕಂಡುಬರುತ್ತದೆ. ಬಿಳಿತಲೆ ಹಾಗೂ ಕೆಂಗಂದು ಹೊಟ್ಟೆಯಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಕೊಕ್ಕಿನ ಬುಡದ ಬಳಿಯ ನೀಲಿ ಇದಕ್ಕೆ ಸುಂದರ ರೂಪವನ್ನು ಕೊಟ್ಟಿದೆ. ಇದಕ್ಕೆ ಬಿಳಿತಲೆ ಕಬ್ಬಕ್ಕಿ ಎಂಬ ಮತ್ತೊಂದು ಹೆಸರೂ ಇದೆ. ಇಂಗ್ಲಿಷಿನಲ್ಲಿ ಇದನ್ನು Malabar starling (Sturnia blythii) ಎಂದು ಕರೆಯುತ್ತಾರೆ.

ಬೀಜ ಹಾಗೂ ಓಟೆಯಿರುವ ಫಲಗಳು, ಕಂಬಳಿಹುಳು, ಕೀಟಗಳೇ ಪ್ರಧಾನವಾದ ಆಹಾರ. ಮಕರಂದವನ್ನೂ ಸೇವಿಸುತ್ತದೆ. ಮರದ ಮೇಲ್ಭಾಗದಲ್ಲಿಯೇ ಇರಲು ಇಚ್ಛಿಸುವಂತಹ ಪ್ರಭೇದವಾದರೂ ಆಹಾರ ಕಂಡಾಗ ಪೊದೆಗಳಿಗೆ ಇಲ್ಲವೆ ನೆಲಕ್ಕೆ ಇಳಿಯುತ್ತದೆ. ಫೆಬ್ರವರಿಯಿಂದ ಮೇವರೆಗೆ ನೈರುತ್ಯ ಭಾರತದಲ್ಲಿ ಮರಿಮಾಡುವ ಇದು ಮರದ ಕಾಂಡದಲ್ಲಿ ಕುಟುರ ಇಲ್ಲವೆ ಮರಕುಟುಗ ಕೊರೆದ ರಂದ್ರದಲ್ಲಿ ಹುಲ್ಲು, ಕಡ್ಡಿ ಇತ್ಯಾದಿಗಳ ಪದರವನ್ನು ಹಾಸಿ ಮೊಟ್ಟೆಯಿಟ್ಟು ಮರಿಮಾಡುತ್ತದೆ. ಮನೆಗಳಲ್ಲಿ ಸಂತಾನೋತ್ಪತ್ತಿ ಮಾಡಿದ ದಾಖಲೆಗಳು ಅಪರೂಪವಾಗಿವೆ. ಗಂಡು ಹೆಣ‍್ಣು ಎರಡೂ ಗೂಡು ಸರಿಪಡಿಸಿಕೊಳ್ಳುವುದರಿಂದ ತೊಡಗಿ ಮೊಟ್ಟೆಗಳಿಗೆ ಕಾವುಕೊಡುವುದು, ಗುಟುಕು ಕೊಡುವುದು ಈ ಎಲ್ಲ ಕಾರ್ಯಗಳಲ್ಲಿ ಭಾಗವಹಿಸುತ್ತವೆ.

ಮರಿಗಳಿಗೆ ದುಂಬಿಗಳ ಲಾರ್ವಾಗಳನ್ನು ತಿನ್ನಿಸುತ್ತವೆಯಾದ್ದರಿಂದ ಪರಿಸರದ ಚಕ್ರಗಳಲ್ಲಿ ಇದಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಇಂತಹ ಹಕ್ಕಿಗಳನ್ನು ನಾವು ಉಳಿಸಿಕೊಳ್ಳಬೇಕಲ್ಲವೆ? ಇವನ್ನು ಕಂಡಾಗ ನಮಗೆ ksn.bird@gmail.com ಮೇಲ್ ಐಡಿ ಗೆ ಬರೆಯಿರಿ.

ನಮಗೆ ಚಿತ್ರಗಳನ್ನು ಒದಗಿಸುತ್ತಿರುವ ಶ್ರೀ ಜಿ ಎಸ್ ಶ್ರೀನಾಥರ ಬಗ್ಗೆ ಎರಡು ಮಾತು.

ಜಿ. ಎಸ್ ಶ್ರೀನಾಥ

ವೃತ್ತಿಯಿಂದ ಲೆಕ್ಕಪರಿಶೋಧಕ ಹಾಗೂ ತೆರಿಗೆ ಸಲಹೆಗಾರರು. ಆಕಸ್ಮಿಕವಾಗಿ ಪಕ್ಷಿ ಛಾಯಾಗ್ರಹಣ ಕ್ಷೇತ್ರಕ್ಕೆ ಬಂದ ಇವರು ತಮ್ಮ ಆಸಕ್ತಿ ಹಾಗೂ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನು ಇದಕ್ಕೆ ವಿನಿಯೋಗಿಸುತ್ತಾರೆ. ಇದಕ್ಕೆ ಬೇಕಾದ ಸಮಯವನ್ನು ಇದಕ್ಕೆ ಒದಗಿಸುವುದು ಸಾಧ್ಯವಾಗದಿದ್ದರೂ ಸಿಕ್ಕ ಸಮಯದಲ್ಲಿಯೇ ಕರ್ನಾಟಕದಲ್ಲಿ ಕಂಡುಬರುವ ಪಕ್ಷಿಗಳಲ್ಲಿ (524) ಸುಮಾರು ನೂರರಷ್ಟು ಅಂದರೆ ಶೇ 20ರಷ್ಟು ಹಕ್ಕಿಗಳ ಚಿತ್ರಗಳನ್ನು ತೆಗೆದಿದ್ದಾರೆ. ಇದರೊಂದಿಗೆ ಚಿಟ್ಟೆಗಳು ಹಾಗೂ ಕೀಟಗಳ ಚಿತ್ರಗಳನ್ನೂ ತೆಗೆದಿದ್ದಾರೆ.

ಜಿ. ಎಸ್ ಶ್ರೀನಾಥ

ಇವರು ತೆಗೆದಿದ್ದ ಕಾಜಾಣ ಚಿತ್ರ ನ್ಯಾಷನಲ್ ಜಿಯೋಗ್ರಾಫಿಕ್‍ ಸಂಸ್ಥೆ ನಡೆಸುವ ಸ್ಪರ್ಧೆಯೊಂದರಲ್ಲಿ ಅಂತಿಮವಾಗಿ ಆಯ್ಕೆಯಾಗಿದ್ದ 500 ಚಿತ್ರಗಳಲ್ಲಿ ಒಂದಾಗಿತ್ತು. ಅನೇಕ ಸ್ಪರ್ಧೆಗಳಲ್ಲಿ ಇವರ ಚಿತ್ರಗಳು ಅಂಗೀಕೃತವಾಗಿವೆ. ಬರೆಹದಲ್ಲೂ ತೊಡಗಿಕೊಂಡಿರುವ ಶ್ರೀನಾಥರ ಬರೆಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಾನವೀಯ ಗುಣಗಳುಳ್ಳ ಇವರದ್ದು ಸರ್ವಕುತೂಹಲಿ ಗುಣ. ಸಾಮಾನ್ಯವಾಗಿ ಲೆಕ್ಕಪತ್ರ ಇತ್ಯಾದಿಗಳಲ್ಲಿ ತೊಡಗಿಕೊಂಡಿರುವವರು ಪ್ರಕೃತಿಯ ಕ್ಷೇತ್ರಕ್ಕೆ ಬರುವುದು ಅಪರೂಪ. ಅಂತಹ ಅಪರೂಪದ ವ್ಯಕ್ತಿ ಶ್ರೀ ಜಿ ಎಸ್ ಶ್ರೀನಾಥ. ಇವರಿಗೆ ಶುಭವಾಗಲಿ! ಸಂಪರ್ಕ 9448040025 ಮತ್ತು gssrinatha@yahoo.com

ಕಲ್ಗುಂಡಿ ನವೀನ್

ಚಿತ್ರಗಳು: ಜಿ. ಎಸ್ ಶ್ರೀನಾಥ, ಸೋಹನ್ ದೇ ಹಾಗು ಶಿವಕುಮಾರ್

ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ

Related post

Leave a Reply

Your email address will not be published. Required fields are marked *