ಮಲ್ಲಿಗೆ ಸುಮ ಘಮ

ಮಲ್ಲಿಗೆ ಸುಮ ಘಮ

ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೇ….. ಈ ಹಾಡು ಯಾರು ಕೇಳಿರಲ್ಲ. ಬಂಗಾರದ ಮನುಷ್ಯ ಚಲನಚಿತ್ರದ ಜನಪ್ರಿಯ ಗೀತೆ ಇದು. ಈ ಹಾಡು ಯಾಕೆ ಬಂತು ಅಂತ ಕೇಳಿದ್ರಾ… ಇಲ್ಲೊಂದು ಸ್ವಾರಸ್ಯಕರ ಕಥೆ ಇದೆ ನೋಡಿ. ಮೈಸೂರು ಮಲ್ಲಿಗೆ ವಿಶ್ವವಿಖ್ಯಾತಿಯನ್ನು ಗಳಿಸಿದೆ. ಮೈಸೂರಿನಿಂದ ಸುಮಾರು ನೂರ ನಲ್ವತ್ತು ಕಿಲೋಮೀಟರ್‌ಗಳ ದೂರದಲ್ಲಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಕೂಡಾ ಈ ಮಲ್ಲಿಗೆ ಹೂವಿನ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ದಿನಬಳಕೆ ಮತ್ತು ಹಬ್ಬ ಹರಿದಿನಗಳಲ್ಲಿ ಮಲ್ಲಿಗೆ ಹೂವು ಇರದಿದ್ರೆ ಆ ಹಬ್ಬವು ಕಳೆಗಟ್ಟುವುದೇ ಇಲ್ಲ. ಇನ್ನು ಮದುವೆ ಮನೆಗಳು, ಇತರೇ ಶುಭ ಸಮಾರಂಭಗಳಲ್ಲಿ ಮಲ್ಲಿಗೆ ಮಾಲೆ ಇಲ್ಲದಿದ್ರೆ ಹೇಗೆ ?.

ಇಂತಿಪ್ಪ ಮಲ್ಲಿಗೆಯು ವಿಜಯನಗರದ ಅರಸರಿಗೂ ಅತ್ಯಂತ ಪ್ರೀತಿಪಾತ್ರ, ಇಂದಿನ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಎಂಬ ಊರಿನ ಮಲ್ಲಿಗೆಯೂ ಅಷ್ಟೇ ಪ್ರಖ್ಯಾತಿ ಪಡೆದಿದೆ. ಅಂದಿನ ದಿನಗಳಲ್ಲಿ ಹೆಡಿಗೆಗಳಲ್ಲಿ ( ಬುಟ್ಟಿಗಳು ) ಮಲ್ಲಿಗೆ ಹೂವನ್ನು ತುಂಬಿ ತುಂಗಭದ್ರಾ ನದಿಯ ಹರವಿನಲ್ಲಿ ಬಿಡುತ್ತಿದ್ದರು. ಪಂಪಾನಗರದ ( ಇಂದಿನ ಹಂಪಿ ) ಹೂವಿನ ವರ್ತಕರು ಆ ಹೆಡಿಗೆಗಳನ್ನು ಸಂಗ್ರಹಿಸಿ ಅರಮನೆಗೆ, ವಿರೂಪಾಕ್ಷನ ಸನ್ನಿಧಿಗೆ ಮಲ್ಲಿಗೆ ಹೂವನ್ನು ಸರಬರಾಜು ಮಾಡುವ ಪರಂಪರೆ ಇರಿಸಿಕೊಂಡಿದ್ದರು.‌ಹೆಡಿಗೆಯಲ್ಲಿ ಹೂವನ್ನು ತುಂಬಿಕಳಿಸಿದ್ದರಿಂದ ಆ ಊರಿಗೆ ಹೆಡಿಗೇಲಿ ಎಂದು ಹೆಸರಾಗಿ ಕಾಲಕ್ರಮೇಣ ಹಡಗಲಿ ಎಂದಾಗಿದೆ….

ಮಾಗಡಿ ಮತ್ತು ಯಲಹಂಕದ ಕೆಂಪೇಗೌಡರಿಂದ ನಿರ್ಮಾಣವಾದ ಬೆಂದಕಾಳೂರಿನ ಎರಡು ಪ್ರಮುಖ ಆಚರಣೆಗಳು ಮಲ್ಲಿಗೆ ಹೂವಿನಿಂದಲೇ ಅಲಂಕೃತವಾಗಿವೆ.
ಚೈತ್ರಮಾಸದ ಹುಣ್ಣಿಮೆಯಂದು ನಡೆಯುವ ಧರ್ಮರಾಯಸ್ವಾಮಿ ( ದ್ರೌಪದಿ ) ಕರಗ ಮತ್ತೊಂದು ಹಲಸೂರಿನ ಹೂವಿನ ಪಲ್ಲಕ್ಕಿ ಉತ್ಸವ. ಕರಗದ ಬಗ್ಗೆ ಈ ಮೊದಲೇ ಹೇಳಿದ್ದೆ. ಹೂವಿನ ಪಲ್ಲಕ್ಕಿಯ ಬಗ್ಗೆ ತಿಳಿದುಕೊಳ್ಳೋಣ.

ಒಂದು ದೊಡ್ಡ ಹಲಸಿನಮರ ಇದ್ದ ಪ್ರದೇಶದಲ್ಲಿ ಎರಡನೇ ಕೆಂಪೇಗೌಡ ವಿಶಾಲವಾದ ಕೆರೆಯನ್ನು ನಿರ್ಮಿಸುತ್ತಾನೆ. ಆ ಪ್ರದೇಶವು ಹಲಸೂರು ಎಂದು ಹೆಸರಾಗುತ್ತದೆ. ಇನ್ನು ಹೊಯ್ಸಳರು ನಿರ್ಮಿಸಿದ ಸೋಮೇಶ್ವರ ದೇವಸ್ಥಾನವು ಇದೇ ಪ್ರದೇಶದಲ್ಲಿರುತ್ತದೆ. ವಾರ್ಷಿಕ ಜಾತ್ರಾ ಮಹೋತ್ಸವವಾಗಿ ಈ ಸೋಮೇಶ್ವರನು ಹೂವಿನ ಪಲ್ಲಕ್ಕಿಯಲ್ಲಿ ಆಸೀನನಾಗಿ ಈ ಪ್ರದೇಶಗಳಲ್ಲಿ ಸಂಚರಿಸುತ್ತಾನೆ. ಕಾಲ ಕ್ರಮೇಣ ಈ ಪ್ರದೇಶದ ಸುಮಾರು ದೇವಾಲಯಗಳಿಂದಲೂ ನಾನಾ ದೇವರುಗಳ ಪಲ್ಲಕ್ಕಿಗಳು ಇದೇ ದಿನ ಹೊರಡುತ್ತವೆ. ನೆರ ರಾಜ್ಯ ತಮಿಳುನಾಡಿನ ಹಲವು ಕುಶಲಕರ್ಮಿಗಳು ಈ ಸಂಭ್ರಮಕ್ಕೆ ಆಗಮಿಸುತ್ತಾರೆ. ಸಂಪೂರ್ಣವಾಗಿ ದುಂಡು ಮಲ್ಲಿಗೆಯ ಮೊಗ್ಗಿನಿಂದಲೇ ಪಲ್ಲಕ್ಕಿಯನ್ನು ಸಿಂಗರಿಸುತ್ತಾರೆ. ಮೆರವಣಿಗೆ ಹೊರಟೊಡನೇ ಮಲ್ಲಿಗೆಯ ಕಂಪು ಇಡೀ ಬಡಾವಣೆಯಲ್ಲಿ ಘಮ ಘಮಿಸುತ್ತದೆ.

ಬೆಂಗಳೂರು ಕರಗದ ರೀತಿಯಲ್ಲಿಯೇ ಈ ಉತ್ಸವವೂ ಸಾಕಷ್ಟು ಸಂಭ್ರಮ ಸಡಗರಗಳೊಂದಿಗೆ ನೆರವೇರುತ್ತದೆ.

ಸಿ.ಎನ್. ಮಹೇಶ್

Related post

Leave a Reply

Your email address will not be published. Required fields are marked *