ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ

ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ

ನಮ್ಮ ದೇಶದ ಹೆಚ್ಚಿನೆಲ್ಲ ದೇವಸ್ಥಾನಗಳು ಪರ್ವತ ಪ್ರದೇಶಗಳಲ್ಲಿ, ನೀರಿನಿಂದಾವೃತವಾದ ಪ್ರದೇಶಗಳಲ್ಲಿ ಅಥವಾ ವಿಭಿನ್ನವಾದ ಭೌಗೋಳಿಕ ಪ್ರದೇಶಗಳಲ್ಲಿ ನೆಲೆ ನಿಂತಿರುವುದು ನಮ್ಮ ದೇಶದ ಧಾರ್ಮಿಕ ಸ್ಥಳಗಳ ವಿಶೇಷತೆಗಳಲ್ಲಿ ಒಂದಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಬಹುತೇಕ ಪ್ರಮುಖ ದೇವಾಲಯಗಳು ವಿಭಿನ್ನವಾದ ಭೌಗೋಳಿಕ ಪ್ರದೇಶಗಳಲ್ಲಿ ನೆಲೆ ನಿಂತಿರುವುದು ಹಾಗೂ ಇಲ್ಲಿ ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವುದು ಒಂದು ರೀತಿಯಲ್ಲಿ ವಿಭಿನ್ನತೆಯಲ್ಲಿ ವಿಭಿನ್ನವಾಗಿ ಕಾಣಿಸುತ್ತದೆ.

ಇಲ್ಲೊಂದು ವಿಶೇಷವಾದ ದೇವಸ್ಥಾನವಿದ್ದು, ಈ ದೇವಾಲಯವು ಸಮುದ್ರ ಮಟ್ಟದಿಂದ 1000 ಅಡಿಗಳಷ್ಟು ಎತ್ತರದ ನಿತ್ಯಹರಿದ್ವರ್ಣದ ಕಾಡುಗಳ ಮಧ್ಯೆ ನೆಲೆನಿಂತಿದೆ. ಈ ದೇವಾಲಯವನ್ನು “ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಾಲಯ” ವೆಂದು ಕರೆಯಲಾಗುತ್ತದೆ. ಹೌದು ಈ ದೇವಸ್ಥಾನವು ನೆಲೆನಿಂತಿರುವುದು ಬಂಟ್ವಾಳದಿಂದ ಧರ್ಮಸ್ಥಳ ರಸ್ತೆಯಲ್ಲಿ ಸಿಗುವ ವಗ್ಗ ಎಂಬ ಸಣ್ಣ ಪಟ್ಟಣದಿಂದ ಬಲಭಾಗಕ್ಕೆ ತಿರುಗಿ ಚಲಿಸಿದಾಗ ಸಿಗುವ ಕೊಡ್ಯಮಲೆ ಎಂಬ ಪರ್ವತದ ತುತ್ತ ತುದಿಯಲ್ಲಿ ನೆಲೆ ನಿಂತಿದೆ. ಕೆಳಬಾಗದಲ್ಲಿ ಪಾರ್ವತಿ ದೇವಸ್ಥಾನವಿದೆ. ಇದೊಂದು ಸರ್ವಧರ್ಮೀಯರಿಗೂ ವಿಶಿಷ್ಟವಾದ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದ್ದು, ಅಗಾಧ ಸಂಖ್ಯೆಯ ಕೋತಿಗಳನ್ನು ಕಾಣಬಹುದಾಗಿದೆ ಹಾಗು ಇವುಗಳೂ ಸಹ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಇಲ್ಲಿಗೆ ಆಗಮಿಸುವ ಭಕ್ತಾದಿಗಳು ಇಲ್ಲಿನ ಅಗಾಧ ಸಂಖ್ಯೆಯ ಕೋತಿಗಳನ್ನು ವಿಶೇಷವಾದ ಪೂಜ್ಯನೀಯ ಭಾವದಿಂದ ಕಾಣುತ್ತಾರೆ ಹಾಗೂ ಅವುಗಳಿಗೆ ತಾವು ದೇವರಿಗೆ ಅರ್ಪಿಸಿದ ನೈವೇದ್ಯ ಮತ್ತು ಪ್ರಸಾದವನ್ನು ತಿನ್ನಿಸುತ್ತಾರೆ. ಬೆಟ್ಟವನ್ನು ಇಲ್ಲಿರುವ ದೇವಸ್ಥಾನಗಳಿಗೆ ಅನುಗುಣವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲನೆಯದು ಪಾರ್ವತಿ ದೇವಿಯ ಹಾಗೂ ಗಣಪತಿಯ ದೇವಸ್ಥಾನದ ಹಂತ ಹಾಗೂ ಎರಡನೆಯದಾಗಿ ಈಶ್ವರನ ದೇವಸ್ಥಾನವಿರುವ ಅಂತಿಮ ಶಿಖರ ಹಂತ ಎಂದು ಹೇಳಬಹುದು. ಶಿವ ದೇವಾಲಯದ ಅಂತಿಮ ಶಿಖರದ ಹಂತವನ್ನು ತಲುಪಲು ಸುಮಾರು 355 ಕಲ್ಲಿನ ಮೆಟ್ಟಿಲುಗಳನ್ನು ಏರುತ್ತಾ ಸಾಗಬೇಕಿದೆ.

ಸ್ಥಳ ಇತಿಹಾಸ

ಸುಮಾರು 800 ವರ್ಷಗಳ ಹಿಂದೆ ಕಾರಿಂಜತ್ತಾಯ ಮತ್ತು ಇಚಿಲತ್ತಾಯ ಎನ್ನುವ ಇಬ್ಬರು ಸಹೋದರರು ಸನಾತನ ಧರ್ಮವನ್ನು ಪ್ರಚುರಪಡಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಿಂದ ಕುಂಬಳ ಪ್ರಾಂತ್ಯಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ತುಳುನಾಡನ್ನು ತುಳುವ ರಾಜನು ಆಳುತ್ತಿದ್ದು, ಈ ಸಂದರ್ಭದಲ್ಲಿ ಇಲ್ಲಿನ ಪ್ರದೇಶಗಳಲ್ಲಿ ಭೂತಾರಾಧನೆಯು ಅತ್ಯಂತ ಹೆಚ್ಚು ಜನಜನಿತವಾಗಿತ್ತು. ಈ ಸಂದರ್ಭದಲ್ಲಿ ಇಚಿಲತ್ತಾಯನು ವಾಸ ಮಾಡಿದ ಸ್ಥಳವನ್ನು ಇಚಿಲಂಪಾಡಿ ಎಂದು, ಕಾರಿಂಜತ್ತಾಯ ವಾಸವಿದ್ದ ಸ್ಥಳವನ್ನು ಕಾರಿಂಜವೆಂದು ಕರೆಯಲಾಗಿದೆ ಎಂದು ಇಲ್ಲಿನ ಸ್ಥಳ ಪುರಾಣ ತಿಳಿಸುತ್ತದೆ. ಇಚಿಲಂಪಾಡಿ ಮತ್ತು ಕಾರಿಂಜ ಎನ್ನುವ ಎರಡು ಪ್ರಕೃತಿ ರಮಣೀಯ ಸ್ಥಳಗಳ ಮಧ್ಯದಲ್ಲಿ ಇವರಿಬ್ಬರೂ ಸೇರಿ ನಿರ್ಮಿಸಿದ ದೇವಸ್ಥಾನವನ್ನೇ ಶ್ರೀ ಮಹತೋಭಾರ ಶಿವ ದೇವಾಲಯವೆಂದು ಕರೆಯಲಾಯಿತು. ಈ ದೇವಾಲಯ ನಿರ್ಮಿಸಲು ಸಹಕಾರವನ್ನು ನೀಡಿದಂತಹ ಇಲ್ಲಿನ ಸ್ಥಳೀಯ ಬಂಟ್ಸ್ ಕುಟುಂಬಕ್ಕೆ ಈ ದೇವಸ್ಥಾನವನ್ನು ಹಾಗೂ ಅವರ ಕೃಷಿ ಜಮೀನನ್ನು ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೆ ನಿರ್ವಹಣೆಗಾಗಿ ಈ ಇಬ್ಬರೂ ಬ್ರಾಹ್ಮಣರು ಬಿಟ್ಟುಕೊಟ್ಟರೆಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಕಾರಿಂಜೇಶ್ವರ ದೇವಸ್ಥಾನದ ಬೆಟ್ಟದ ಪಾರ್ವತಿ ದೇವಾಲಯ ಇರುವ ಸ್ಥಳದವರೆಗೆ ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನಗಳ ಮೂಲಕ ತಲುಪಬಹುದಾಗಿದ್ದು ಉಳಿದ ಅರ್ಧ ಭಾಗವನ್ನು ಅಂದರೆ ಶಿವ ದೇವಾಲಯ ಇರುವ ಸ್ಥಳದವರೆಗೂ ಕಲ್ಲಿನ ಮೆಟ್ಟಿಲುಗಳನ್ನು ಏರಿಕೊಂಡೇ ಸಾಗಬೇಕಿದೆ. ಮಳೆಗಾಲದಲ್ಲಿ ಇಲ್ಲಿನ ಬೆಟ್ಟವನ್ನು ಹತ್ತುವುದು ಅಥವಾ ಬೆಟ್ಟದೆಡೆಗಿನ ರಸ್ತೆಯಲ್ಲಿ ವಾಹನವನ್ನು ಚಲಾಯಿಸಿಕೊಂಡು ಹೋಗುವುದೇ ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ಏಕೆಂದರೆ ಇಲ್ಲಿ ಬೀಳುವ ಧಾರಾಕಾರ ಮಳೆ ಹಾಗೂ ಇಲ್ಲಿನ ಮಂಜು ಕವಿದ ವಾತಾವರಣವೇ ಪ್ರವಾಸಿಗರಿಗೆ ಒಂದು ವಿಶೇಷ ಅನುಭೂತಿ ವ್ಯಕ್ತವಾಗುವಂತೆ ಮಾಡುತ್ತದೆ.

ಹಿಂದೂ ಪುರಾಣದಲ್ಲಿ ಒಟ್ಟು ನಾಲ್ಕು ಯುಗಗಳಿದ್ದು ಈ ನಾಲ್ಕೂ ಯುಗಗಳಿಗೆ ಶ್ರೀ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನವು ಸ್ಪಷ್ಟ ಪುರಾವೆಯಾಗಿ ನಿಂತಿದೆ. ಈ ದೇವಸ್ಥಾನವನ್ನು ಕೃತಯುಗದಲ್ಲಿ ರೌದ್ರಗಿರಿ, ದ್ವಾಪರಯುಗದಲ್ಲಿ ಭೀಮ ಶೈಲ, ತ್ರೇತಾಯುಗದಲ್ಲಿ ಗಜೇಂದ್ರಗಿರಿಯೆಂದು ಕಲಿಯುಗದಲ್ಲಿ ಕಾರಿಂಜವೆಂದು ಕರೆಯಲಾಗುತ್ತಿದ್ದು, ಇಂದಿಗೂ ಈ ನಾಲ್ಕು ಯುಗಗಳಿಗೆ ಈ ದೇವಾಲಯವು ಪುರಾವೆಯಾಗಿ ಕಾಣಸಿಗುತ್ತದೆ. ಈ ಬೆಟ್ಟದ ಕೆಳಬಾಗದಲ್ಲಿ ವಿಶೇಷವಾದಂತಹ ಕೆರೆಯೊಂದಿದ್ದು ಇದು ಮೂರು ಋತುಗಳಲ್ಲಿಯೂ ಸದಾ ತುಂಬಿಕೊಂಡಿರುತ್ತದೆ. ಈ ಕೆರೆಯನ್ನು ಗದಾತೀರ್ಥವೆಂದು ಕರೆಯುತ್ತಿದ್ದು ಈ ಕೆರೆಯು ದ್ವಾಪರಯುಗದಲ್ಲಿ ಭೀಮಸೇನನು ತನ್ನ ರಾಜ ದಂಡವನ್ನು ನೆಲಕ್ಕೆ ಎಸೆದಾಗ ಉಂಟಾದ ಕೆರೆಯೆಂದು ಹೇಳಲಾಗಿದೆ. ಈ ದೇವಸ್ಥಾನಕ್ಕೆ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಪ್ರವೇಶವಿದ್ದು ಮಹಾಪೂಜೆಯು ಮಧ್ಯಾಹ್ನ 12 ಗಂಟೆಗೆ ಹಾಗೂ ಸಂಜೆ 6 ಗಂಟೆಯಿಂದ 7 ಗಂಟೆ ವರೆಗೆ ಈ ದೇವಸ್ಥಾನದ ಬಾಗಿಲು ತೆರೆದಿದ್ದು ರಾತ್ರಿ 7 ಗಂಟೆಗೆ ಮಹಾಪೂಜೆ ನೆರವೇರುತ್ತದೆ.

ಇಲ್ಲಿ ಅಂಗುಷ್ಟ ತೀರ್ಥ ಹಾಗೂ ಜಾನು ತೀರ್ಥ ಎಂಬೆರಡು ಕೆರೆಗಳಿದ್ದು ಈ ಕೆರೆಗಳು ಮಹಾಭಾರತದ ಭೀಮಸೇನನು ತನ್ನ ಮೊಣಕಾಲನ್ನು ಊರಿದ ಸ್ಥಳವನ್ನು ಜಾನು ತೀರ್ಥವೆಂದೂ ಹೆಬ್ಬೆರಳನ್ನು ಊರಿದ ಸ್ಥಳವನ್ನು ಅಂಗುಷ್ಠ ತೀರ್ಥವೆಂದು ಕರೆಯಲಾಗುತ್ತದೆ. ಈ ಕೆರೆಗಳು ಬೇಸಿಗೆಕಾಲ ಚಳಿಗಾಲ ಮತ್ತು ಮಳೆಗಾಲವೆಂದರೆ ಸರ್ವ ಋತುವಿನಲ್ಲೂ ಸದಾ ನೀರಿನಿಂದ ತುಂಬಿರುತ್ತದೆ. ಈ ಕೆರೆಯೊಳಗೆ ಇನ್ನೊಂದು ಹಂದಿ ಕೆರೆ ಎಂಬ ಕೆರೆಯಿದ್ದು ಈ ಕೆರೆಯನ್ನು ಅರ್ಜುನನು ಇಲ್ಲಿ ನೆಲಕ್ಕೆ ಬಾಣ ಬಿಟ್ಟಾಗ ಉಂಟಾದ ಕೆರೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಈ ಕೆರೆಗಳ ನೀರನ್ನು ಬಳಸಿದರೆ ವಿವಿಧ ರೀತಿಯ ಚರ್ಮವ್ಯಾಧಿಗಳು ನಿವಾರಣೆಯಾಗುತ್ತದೆ ಎಂಬ ಪ್ರತೀತಿಯಿದೆ.

ಕಾರಿಂಜೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದರಿಂದ ಇಲ್ಲಿನ ಆಸುಪಾಸಿನ ಊರುಗಳಿಂದ ಭಕ್ತಾದಿಗಳು ಬಹಳಷ್ಟು ಸಂಖ್ಯೆಯಲ್ಲಿ ಇಲ್ಲಿನ ಬೆಟ್ಟವನ್ನೇರುವುದರಿಂದ ಶಿವರಾತ್ರಿಯ ಸಂದರ್ಭದಲ್ಲಿ ಅತ್ಯಂತ ಹೆಚ್ಚಿನ ಜನಸಂದಣಿಯನ್ನು ಹೊಂದಿರುತ್ತದೆ. ಈ ಸಂದಭರ್ಭದಲ್ಲಿ ಕಾರಿಂಜೇಶ್ವರನಿಗೆ ವಿಶೇಷವಾದ ಪೂಜೆ ಹಾಗೂ ಸೇವೆಗಳನ್ನು ಮಾಡಲಾಗುತ್ತದೆ. ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ನಾಲ್ಕು ದಿವಸಗಳ ಕಾಲ ಅತ್ಯಂತ ಭಕ್ತಿ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು ಶಿವರಾತ್ರಿಯ ಎರಡನೇ ದಿನ ಈಶ್ವರನ ಮೂರ್ತಿಯನ್ನು ತನ್ನ ಹೆಂಡತಿಯಾದ ಪಾರ್ವತಿಯ ಮೂರ್ತಿಯೊಂದಿಗೆ (ಅಂದರೆ ಕೆಳಗಿನ ಪಾರ್ವತಿ ದೇವಸ್ಥಾನದಲ್ಲಿ) ಒಟ್ಟಾಗಿ ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಶಿವರಾತ್ರಿಯ ಮೂರನೇ ದಿವಸ ಈಶ್ವರನ ಮೂರ್ತಿಯನ್ನು ರಥದಲ್ಲಿಟ್ಟು ರಥೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನದಂದು ಈಶ್ವರನ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ನಂತರದಲ್ಲಿ ದೇವರನ್ನು ರಥದಲ್ಲಿಟ್ಟು ವಿಶೇಷವಾಗಿ ಭಕ್ತಾದಿಗಳು ರಥೋತ್ಸವವನ್ನು ಮಾಡುತ್ತಾರೆ. ಶಿವರಾತ್ರಿ ಹಬ್ಬದ ದಿನ ಬೆಟ್ಟದ ಮೇಲಿರುವ ಈಶ್ವರ ದೇವಾಲಯದಿಂದ ಶಿವನ ಮೂರ್ತಿಯನ್ನು ಬೆಟ್ಟದ ಮಧ್ಯಭಾಗದಲ್ಲಿರುವ ಪಾರ್ವತಿಯ ದೇವಸ್ಥಾನಕ್ಕೆ ತಂದು ಪೂಜೆಯನ್ನು ಪ್ರಾರಂಭಿಸಲಾಗುತ್ತದೆ. ಶಿವರಾತ್ರಿಯ ಕೊನೆಯದಿನ ಪಾರ್ವತಿ ದೇವಾಲಯದಲ್ಲಿರುವ ಈಶ್ವರನ ಮೂರ್ತಿಯನ್ನು ಮತ್ತೆ ಬೆಟ್ಟದ ಮೇಲಿರುವ ಶಿವ ದೇವಾಲಯಕ್ಕೆ ಕೊಂಡೊಯ್ಯುವ ಮೂಲಕ ಶಿವರಾತ್ರಿಯ ಆಚರಣೆಯು ಸಂಪನ್ನಗೊಳ್ಳುತ್ತದೆ.

ಕಾರಿಂಜದ ಶ್ರೀ ಮಹತೋಭಾರ ಸದಾಶಿವ ದೇವಸ್ಥಾನದ ತುತ್ತತುದಿ ತಲುಪುವ ಕಲ್ಲಿನ ಮೆಟ್ಟಿಲುಗಳ ಹಾದಿಯಲ್ಲಿ ಅಲ್ಲಲ್ಲಿ ಕೋತಿಗಳ ದೊಡ್ಡ ದೊಡ್ಡ ಗುಂಪುಗಳೇ ಇದ್ದು, ಇವುಗಳು ಇಲ್ಲಿಗೆ ಬರುವ ಭಕ್ತಾದಿಗಳೊಂದಿಗೆ ಅಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಇವುಗಳು ಭಕ್ತರು ನೀಡುವ ಬಾಳೆಹಣ್ಣು, ತಿಂಡಿತಿನಿಸು ಮತ್ತು ಪ್ರಸಾದವನ್ನು ಸ್ವೀಕರಿಸುತ್ತವೆ. ಈ ಕೋತಿಗಳಲ್ಲಿ ಕೆಲವೊಂದು ಕೋತಿಗಳು ಭಕ್ತಾದಿಗಳ ಚೀಲಗಳಿಗೇ ಕೈಹಾಕಿ ತಿನಸುಗಳನ್ನು ಕಿತ್ತುಕೊಳ್ಳುವ ಸಾಧ್ಯತೆಯೂ ಇರುವುದರಿಂದ ಭಕ್ತಾದಿಗಳು ತಮ್ಮ ಚೀಲಗಳ ಕುರಿತು ವಿಶೇಷ ಕಾಳಜಿವಹಿಸುವುದು ಉತ್ತಮ. ಇಲ್ಲಿರುವ ಹಲವಾರು ಮಂಗಗಳ ಪೈಕಿ ಹಿರಿಯ ಹಾಗೂ ದೊಡ್ಡ ಗಾತ್ರದ ಮಂಗವೊಂದಿದ್ದು ಇದನ್ನು ‘ಕಾರಿಂಜದ ಬಡ್ಡ’ ಎಂದು ಕರೆಯುತ್ತಾರೆ. ಮಹತೋಬಾರ ಈಶ್ವರನಿಗೆ ಮಹಾ ಪೂಜೆಯ ಸಂದರ್ಭದಲ್ಲಿ ಅರ್ಪಿಸಲಾಗುವ ನೈವೇದ್ಯವನ್ನು ಸಂಪೂರ್ಣವಾಗಿ ಇಲ್ಲಿರುವ ಕೋತಿಗಳಿಗೇ ಅರ್ಪಿಸುವುದು ಇಲ್ಲಿನ ವಿಶೇಷಗಳಲ್ಲೊಂದು. ತ್ರೇತ್ರಾಯುಗದಲ್ಲಿ ಶ್ರೀರಾಮಚಂದ್ರನು ತನ್ನ ತಮ್ಮನಾದ ಲಕ್ಷ್ಮಣನನ್ನು ಒಳಗೊಂಡಂತೆ ಈ ಬೆಟ್ಟಕ್ಕೆ ಆಗಮಿಸಿ ಇಲ್ಲಿನ ಶಿವ ದೇವರಿಗೆ ಪೂಜೆಯನ್ನು ಸಲ್ಲಿಸಿದ ನಂತರ ಬಹಳ ದೊಡ್ಡ ಪ್ರಮಾಣದಲ್ಲಿ ದೇವರ ನೈವೇದ್ಯವನ್ನು ಮಂಗಗಳಿಗೆ ಅರ್ಪಿಸುವುದನ್ನು ನೋಡಲೆಂದೇ ಇಲ್ಲಿಗೆ ಆಗಮಿಸಿದ್ದ ಎಂದು ಇತಿಹಾಸ ತಿಳಿಸುತ್ತದೆ. ಈ ಪದ್ಧತಿಯು ಇಂದಿಗೂ ಸಹ ಚಾಲ್ತಿಯಲ್ಲಿದ್ದು ಮಹಾದೇವರಿಗೆ ಪೂಜೆಯ ನಂತರದಲ್ಲಿ ಅರ್ಪಿಸಲಾದ ನೈವೇದ್ಯವನ್ನು ಇಲ್ಲಿರುವ ದೊಡ್ಡದಾದ ನೈವೇದ್ಯದ ಕಲ್ಲಿಗೆ ಕೋತಿಗಳಿಗೆಂದೇ ಹಾಕಲಾಗುತ್ತದೆ. ಈ ನೈವೇದ್ಯದ ಕಲ್ಲಿಗೆ ನೈವೇದ್ಯವನ್ನು ತಿನ್ನಲು ಬೆಟ್ಟದ ವಿವಿಧ ಭಾಗಗಳಿಂದ ಕೋತಿಗಳ ದೊಡ್ಡದಾದ ಗುಂಪುಗಳು ಆಗಮಿಸುವುದನ್ನು ನೋಡಲೆಂದೇ ಭಕ್ತಾದಿಗಳು ತುದಿಗಾಲಲ್ಲಿ ನಿಲ್ಲುತ್ತಾರೆ. ಈ ಮಂಗಗಳ ಪೈಕಿ ಅತ್ಯಂತ ಹಿರಿಯ ವಯಸ್ಸಿನ ಮಂಗವೇ ಮೊದಲು ನೈವೇದ್ಯವನ್ನು ತಿನ್ನಬೇಕು ಹಾಗೂ
ನಂತರದಲ್ಲಷ್ಟೇ ಉಳಿದ ಮಂಗಗಳು ತಿನ್ನುತ್ತವೆ. ಒಂದು ವೇಳೆ ಈ ಹಿರಿಯ ಮಂಗ ನೈವೇದ್ಯ ಸ್ವೀಕರಿಸುವ ಮೊದಲು ಉಳಿದ ಮಂಗಗಳು ಸ್ವೀಕರಿಸಿದಲ್ಲಿ ಆ ಮಂಗವನ್ನು ಹಿರಿಯ ಮಂಗವು ಶಿಕ್ಷೆಗೆ ಒಳಪಡಿಸುತ್ತದೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಈಶ್ವರ ದೇವಸ್ಥಾನದ ವಾಸ್ತುಶಿಲ್ಪ ಶೈಲಿಯು ವೈಷ್ಣವ ಮತ್ತು ಜೈನ ಧರ್ಮಗಳ ವಾಸ್ತುಶಿಲ್ಪ ಶೈಲಿಯನ್ನು ಬಹುತೇಕವಾಗಿ ಹೋಲುತ್ತದೆ. ಇಲ್ಲಿನ ಈಶ್ವರನ ಗರ್ಭಗುಡಿಯ ಪಕ್ಕದಲ್ಲಿ ಇರುವ ವಿಶಿಷ್ಟವಾದ ಬಾವುಟದ ತಳಭಾಗದಲ್ಲಿನ ಕಲ್ಲಿನ ಪ್ರತಿಮೆಯು ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಕೆಳದಿಯ ಅರಸರ ಪೋಷಣೆಯಲ್ಲಿ ನಿರ್ವಹಿಸಲ್ಪಡುತ್ತಿತ್ತೆಂದು ತಿಳಿದು ಬರುತ್ತದೆ. ಈ ದೇವಸ್ಥಾನಕ್ಕೆ ಕೇವಲ ಹಿಂದುಗಳಷ್ಟೇ ಭಕ್ತರಾಗಿ ಆಗಮಿಸುವುದಿಲ್ಲ ಬದಲಿಗೆ ಇದೊಂದು ವಿಶಿಷ್ಟವಾದ ಬೃಹತ್ ಕರಿಯ ಬಡೆಯ ಪ್ರವಾಸಿ ಸ್ಥಳವಾಗಿದ್ದು ಪ್ರವಾಸಿಗರು ಇಲ್ಲಿನ ಸದಾ ಹಸಿರಿನಿಂದ ಕೂಡಿದ ಕಾಡುಗಳ ಸೌಂದರ್ಯವನ್ನು ಸವಿಯಲು ಹಾಗೂ ತಂಪಾದ ಗಾಳಿಯನ್ನು ಸೇವಿಸಲು ಬೆಳಗ್ಗಿನ ಜಾವ ಹಾಗೂ ಸಂಜೆಯ ಹೊತ್ತಿನಲ್ಲಿ ಆಗಮಿಸುತ್ತಾರೆ. ಬೆಟ್ಟದಲ್ಲಿನ ತಂಪಾದ ನೀರಿನಲ್ಲಿ ಆಟವಾಡಲು ಹಾಗೂ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಸವಿಯಲು ತಂಡೋಪತಂಡವಾಗಿ ವಿವಿಧ ಊರುಗಳಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ಆಗಮಿಸುತ್ತಾರೆ.

ಪ್ರತೀ ವರ್ಷ ಆಶಾಢ ಅಮವಾಸ್ಯೆಯ (ತುಳುನಾಡಿನ ಆಟಿ ಅಮವಾಸ್ಯೆ) ದಿನದಂದು ಇಲ್ಲಿಗೆ ಬೃಹತ್ ಸಂಖ್ಯೆಯಲ್ಲಿಭಕ್ತಾದಿಗಳು ಆಗಮಿಸಿ ಭಗವಾನ್ ಶಿವನಿಗೆ ವಿಶೇಷವಾಗಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಒಳಿತಾಗಲೆಂದು ಪ್ರಾರ್ಥನೆಯನ್ನು, ಪೂಜೆಯನ್ನು ಹಾಗೂ ಸೇವೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ. ತುಳುನಾಡಿನಲ್ಲಿ ಈ ದಿನವು ಅತ್ಯಂತ ವಿಶೇಷ ದಿನವಾಗಿದ್ದು ಕಾಡಿನಲ್ಲಿ ದೊರೆಯುವ ಹಾಳೆ ಮರದ (ಔಷಧೀಯ ಮರ) ಕಹಿಯಾದ ಕಷಾಯವನ್ನು ಕುಡಿಯುವ ವಿಶಿಷ್ಟ ಸಂಪ್ರದಾಯವಿದೆ. ಈ ದೇವಾಲಯದಲ್ಲೂ ಆಗಮಿಸುವ ಭಕ್ತಾದಿಗಳಿಗೆ ಹಾಳೆ ಮರದ ಕಷಾಯವನ್ನು ಪ್ರಸಾದವಾಗಿ ನೀಡುವ ಸಂಪ್ರದಾಯವೂ ಇದೆ. (ಈ ದಿನದಂದು ಈ ಮರಕ್ಕೆ 10-15 ವಿಧದ ಔಷಧೀಯ ಅಂಶಗಳ ಬಲ ಬರುವುದಾಗಿ ನಂಬಿಕೆಯಿದ್ದು, ಮುನ್ನಾ ದಿನವೇ ರಾತ್ರಿ ಈ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತಂದು ಹುಳಿ ಮಜ್ಜಿಗೆಯಲ್ಲಿ ಬೆರೆಸಿಟ್ಟು ಬೆಳಗ್ಗಿನ ಜಾವದಲ್ಲಿ ಕುಡಿದರೆ ಸಪ್ತರೋಗ ನಿವಾರಣಾ ಶಕ್ತಿಯು ದೊರೆಯುತ್ತದೆ ಎಂಬ ನಂಬಿಕೆಯಿದೆ) ಈ ದಿನದಂದು ಇಲ್ಲಿನ ಗಧಾ ತೀರ್ಥದಲ್ಲಿ ಚರ್ಮ ವ್ಯಾಧಿಯಿರುವವರು ತೀರ್ಥ ಸ್ನಾನ ಮಾಡಿದಲ್ಲಿ ತಮ್ಮ ಚರ್ಮ ವ್ಯಾಧಿಯು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದ್ದು,ಅತೀ ಹೆಚ್ಚಿನ ಸಂಖ್ಯೆಯಲ್ಲಿಈ ದಿನದಂದು ಇಲ್ಲಿ ತೀರ್ಥಸ್ನಾನ ಮಾಡುತ್ತಾರೆ. ಮಕ್ಕಳಿಲ್ಲದವರೂ ಈ ದಿನದಂದು ಇಲ್ಲಿ ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.

ಕಾರಿಂಜೇಶ್ವರ ದೇವಾಲಯದಲ್ಲಿ ಸೌರ ಯುಗಾದಿ, ವೃಷಭ ಸಂಕ್ರಮಣ, ಸಿಂಹ ಸಂಕ್ರಮಣ, ನಾಗರ ಪಂಚಮಿ, ಗಣೇಶ ಚತುರ್ಥಿ, ಕಡೀರು ಉತ್ಸವ, ನವರಾತ್ರಿ, ಮಹಾನವಮಿ, ವಿಜಯದಶಮಿ, ದೀಪಾವಳಿ,ಕಾರ್ತಿಕ ಪೂಜೆ, ಚಂಪಾ ಷಷ್ಟಿ, ಲಕ್ಷದೀಪೋತ್ಸವ, ಕೊಡಮಣಿತ್ತಾಯ ದೈವದ ನೇಮೋತ್ಸವ ಇವೇ ಮೊದಲಾದ ವಿಶೆಷ ಆಚರಣೆಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತೀ ಸೋಮವಾರ ಹಾಗೂ ಶುಕ್ರವಾರದಂದು ಇಲ್ಲಿ ಶಿವನಿಗೆ ವಿಶೇಷ ಪೂಜೆಯನ್ನು ನೆರೆವೇರಿಸಲಾಗುತ್ತದೆ. ಪಾರ್ವತಿ ದೇವಸ್ಥಾನದ ಪಕ್ಕದಲ್ಲಿ ಅರಣ್ಯ ಇಲಾಖೆಯು ನಿರ್ಮಿಸಿರುವ ಕಾರಿಂಜೇಶ್ವರ ದೈವೀವನವಿದ್ದು, ಇದರೊಳಗೆ ಔಷಧೀಯ ಸಸ್ಯಗಳಿರುವ ರಾಶಿವನವಿದೆ. ಇದರಲ್ಲಿ ಬೃಹತ್ ಗಾತ್ರದ ಕಪ್ಪುಕಲ್ಲಿನಿಂದ ನಿರ್ಮಿಸಲಾದ ಧ್ಯಾನಸ್ಥ ಸ್ಥಿತಿಯಲ್ಲಿರುವ ಶಿವನ ವಿಗ್ರಹವಿದೆ. ಇದರೊಳಗಡೆ ಪ್ರಕೃತಿಯ ಮಡಿಲ್ಲಿ ಕಪ್ಪು ಕಲ್ಲಿನಿಂದಲೇ ನಿರ್ಮಿಸಲಾದ ವಿಶಿಷ್ಟವಾದ ಧ್ಯಾನ ಮಂಟಪವಿದ್ದು ಇದರ ಪಕ್ಕದಲ್ಲೇ ನಾಗದೇವತೆಯ ಶಿಲ್ಪವನ್ನೂ ಪ್ರತಿಷ್ಠಾಪಿಸಲಾಗಿದೆ. ಒಟ್ಟಿಲ್ಲಿ ಬೃಹತ್ ಕಲ್ಲಿನ ಮೇಲೆನೆಲೆ ನಿಂತಿರುವ ಈ ಶಿವ ಮತ್ತು ಪಾರ್ವತಿಯರ ದೇವಾಲಯಗಳು ಇಲ್ಲಿನ ಪ್ರಮುಖ ಅಂಶವಾಗಿದ್ದು, ಈ ಬೆಟ್ಟವು ಪ್ರಕೃತಿಯ ಮಡಿಲಲ್ಲಿರುವ ವಿಶಿಷ್ಟ
ದೇವಾಲಯವಾಗಿಯೂ ಗುರುತಿಸಲ್ಪಟ್ಟು ಚಾರಣದ ಸ್ಥಳವಾಗಿಯೂ,ಪ್ರವಾಸೀ ತಾಣವಾಗಿಯೂ ಗುರುತಿಸಿಕೊಂಡಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋಧ್ಯಮ ಇಲಾಖೆಗಳು ಜಂಟಿಯಾಗಿ ಇಲ್ಲಿ ವಿವಿಧ ಸ್ಥರಗಳಲ್ಲಿ ಎತ್ತರವಾದ ವೀಕ್ಷಣಾ ಗೋಪುರಗಳನ್ನು ಹಾಗೂ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಬಹುದಾಗಿದೆ.

ದೇವಾಲಯದ ವಿಳಾಸ:
ಶ್ರೀ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನ
ಕಾವಳಮೂಡೂರು ಗ್ರಾಮ, ಕಾರಿಂಜ ಪೋಸ್ಟ್
ಬಂಟ್ವಾಳ ತಾಲೂಕು, ದ.ಕ ಜಿಲ್ಲೆ
ದೂ: 08255-285255
ಇಮೈಲ್: karinjeshwaratemple@gmail.com

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ 574198
ದೂ: 9742884160

Related post

Leave a Reply

Your email address will not be published. Required fields are marked *