ಮಹಾಕವಿಯ ಚೇತನಕ್ಕೊಂದು ಮಂತ್ರ! – ಕುಟುರ

ಮಹಾಕವಿಯ ಚೇತನಕ್ಕೊಂದು ಮಂತ್ರ! – ಕುಟುರ

Barbet – Psilopogon viridis

ಕುಟುರ್…ಕುಟುರ್‍….ಕುಟುರ್… ಕೇಳಿದೊಡನೆಯೇ ಕುವೆಂಪು ಭಾವಪರವಶರಾಗುತ್ತಿದ್ದರಂತೆ. ಅವರ ಸುಪುತ್ರ ಏಕೆಂದು ಕೇಳಿದರೆ, “ಕುಟುರನ ಹಕ್ಕಿಯ ಕೂಗು ಕೇಳಿದೊಡನೆಯೇ ನನ್ನ ಚೇತನ ಈ ಊರಿನ ಸದ್ದು ಗೊಂದಲಗಳಿಂದ ಪಾರಾಗಿ ಮಲೆನಾಡಿನ ವಿಸ್ತಾರವಾದ ಕಾಡಿಗೆ ಸ್ಥಳಾಂತರಗೊಳ್ಳುತ್ತದೆ. ನಿಮಗೆಲ್ಲ ಅದೊಂದು ಹಕ್ಕಿಯ ಕೂಗಾದರೆ, ನನಗೆ ಅದೊಂದು ಮಂತ್ರ!” ಎಂದರಂತೆ. ಆ ಹಕ್ಕಿಯೇ ಬಿಳಿ ಕೆನ್ನೆಯ ಕುಟುರ. ಸೊಪ್ಪುಕುಟಿರ, ಕುಟಿರ ಎಂದೆಲ್ಲ ಕರೆಸಿಕೊಳ್ಳುವ ಹಕ್ಕಿ ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಒಂದು. ಇಂಗ್ಲಿಷಿನಲ್ಲಿ ಇದನ್ನು ವೈಟ್‍ ಚೀಕ್ಡ್‍ ಬಾರ್ಬೆಟ್ (White-cheeked Barbet (Small Green Barbet) Psilopogon viridis) ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿ ಸಿಲೋಪೋಗನ್ ವಿರಿಡಿಸ್ ಎನ್ನಲಾಗುತ್ತದೆ. ಬೆಂಗಳೂರಿನಲ್ಲಂತೂ ಇದು ಅತಿ ಸಾಮಾನ್ಯವಾದ ಹಕ್ಕಿ. ನೀವು ಕೇಳುವ ಕುಟುರ್…ಕುಟುರ್‍…ಕುಟುರ್‍… ಧ್ವನಿ ಇದರದ್ದೇ! ಪ್ರಧಾನವಾಗಿ ಹಸಿರು ಬಣ್ಣದ ಹಕ್ಕಿಯಾದ್ದರಿಂದ ಇದು ಕಾಣಿಸುವುದಕ್ಕಿಂತ ಕೇಳಿಸುವುದು ಹೆಚ್ಚು. ಕೊಕ್ಕು ತೆರೆಯದೇ ಕೂಗುವುದರಿಂದ ಕಾಣಿಸುವುದು ಇನ್ನೂ ಕಷ್ಟ.

ಈ ಬಾರ್ಬೆಟ್‍ ಅಥವಾ ಕುಟುರಗಳು ಕೊಕ್ಕುಗಟ್ಟಿಯಿರುವ ಹಾಗೂ ಕೊಕ್ಕಿನ ಸುತ್ತ ಬಿರುಗೂದಲಿರುವ ಹಕ್ಕಿಗಳು. ಈ ಬಿರುಗೂದಲೇ ಅವಕ್ಕೆ ಬಾರ್ಬೆಟ್‍ ಎಂಬ ಹೆಸರು ಬಂದಿರುವುದು (Barb ಎಂದರೆ ಬಿರುಗೂದಲು). ದಕ್ಷಿಣ ಏಷ್ಯಾದಲ್ಲಿ ಸುಮಾರು ಹನ್ನೊಂದು ಪ್ರಭೇದಗಳು ಸಾಮಾನ್ಯವಾಗಿ ಕಂಡುಬರುತ್ತವೆ ಮತ್ತು ಒಟ್ಟಾರೆ ಜಗತ್ತಿನಲ್ಲಿ 26 ಪ್ರಭೇದಗಳ ಕುಟುರಗಳು ಅದರ ಮೆಗಲೈನಿಡೇ (Megalaimidae) ಉಪ ಕುಟುಂಬದಲ್ಲಿ ಕಂಡುಬರುತ್ತವೆ. ಮುಖ್ಯವಾಗಿ ಫಲಾಹಾರಿ ಹಕ್ಕಿಗಳಾದರೂ ಕೀಟಗಳು ಮತ್ತು ಒಮ್ಮೊಮ್ಮೆ ಹಲ್ಲಿಗಳನ್ನೂ ತಿನ್ನುತ್ತವೆ. ಹಣ್ಣಿರುವ ಮರಗಳಲ್ಲಿ ಸಾಮಾನ್ಯವಾಗಿ ಹಲವಾರು ಹಕ್ಕಿಗಳು ಸೇರಿಕೊಂಡು ಹಣ್ಣು ತಿನ್ನುವುದನ್ನು ಕಾಣುತ್ತೇವೆ. ಆಲ, ಆಶ್ವತ್ಥಗಳಂತಹ ಫಿಗ್‍ ಜಾತಿಯ ಮರಗಳಲ್ಲಿ, ಅದೂ ಅವು ಹಣ್ಣುಬಿಟ್ಟಾಗ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.

White Cheeked Barbet

ಬಲಿಷ್ಠ ಕೊಕ್ಕನ್ನು ಹೊಂದಿರುವ ಇವು ಮರಗಳಲ್ಲಿ ಗುಂಡಾದ ರಂದ್ರವನ್ನು ಮಾಡಿ ಅದರಲ್ಲಿ ಮೊಟ್ಟೆಯಿಟ್ಟು ಮರಿಮಾಡುತ್ತವೆ. ಈ ಹಕ್ಕಿಗಳು ಮರಿಮಾಡಿಕೊಂಡು ಹೋದನಂತರ ಕೆಲವು ಇತರೆ ಹಕ್ಕಿಗಳು ಈ ರಂದ್ರದಲ್ಲಿ ಮೊಟ್ಟೆಯಿಟ್ಟು ಮರಿಮಾಡಲು ಬಳಸುವುದೂ ಉಂಟು. ಕೆಲವು ಪ್ರಭೇದಗಳು ವರ್ಷದಲ್ಲಿ ಎರಡು ಬಾರಿ ಮರಿಮಾಡುವುದೂ ಉಂಟು.

ಇವುಗಳ ಆಹಾರದಲ್ಲಿ ಕೀಟಗಳು ಮತ್ತು ಹಲ್ಲಿಯೂ ಇರುವುದರಿಂದ ಅವುಗಳ ನಿಯಂತ್ರಣದಲ್ಲಿ ಈ ಹಕ್ಕಿಗಳದ್ದು  ಪಾತ್ರವಿದೆ. ಪ್ರಮುಖವಾಗಿ ಫಲಾಹಾರಿಗಳಾದ ಇವುಗಳು ಆ ಮರಗಳ ಬೀಜಪ್ರಸರದಲ್ಲಿ ಬಹುದೊಡ್ಡ ಪಾತ್ರವಹಿಸುತ್ತದೆ. ನಾವು ನೆನಪಿನಲ್ಲಿಡಬೇಕಾಗಿರುವುದು ಕಾಡು ಬೆಳೆಯುವುದೇ ಹಕ್ಕಿಗಳಿಂದ. ಕಾಡು ಎಷ್ಟು ಮುಖ್ಯವೆಂದು ನಮಗೆ ತಿಳಿದಿದೆ. ಕಾಡುಗಳ ಬೆಳವಣಿಗೆಗೆ ಈ ಹಕ್ಕಿಗಳ ಕೊಡುಗೆ ದೊಡ್ಡದು.

ಸೂರತ್‍ನಿಂದ ಕೆಳಗೆ ಪಶ್ಚಿಮಘಟ್ಟಗಳನ್ನು ಸೇರಿದಂತೆ ಕಂಡುಬರುತ್ತದೆ. ಪೂರ್ವಘಟ್ಟದ ಕೆಲಭಾಗಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಇವುಗಳು ಕಾಣುವುದು ಒಂದು ವಿಶೇಷ. ಈ ಹಿಂದೆ ಬೆಂಗಳೂರಿನಲ್ಲಿ ಕಾಣುತ್ತಿದ್ದ ಕಂದು ಕುಟುರಗಳು ಸ್ಥಾನಪಲ್ಲಟವಾಗಿ ಇವು ಕಾಣಿಸುವತ್ತಿವೆ ಎಂಬ ಸಿದ್ಧಾಂತವೂ ಇದೆ. ಇರಲಿ, ನಮಗೆ ಅಷ್ಟೆಲ್ಲ ವಿವರ ಬೇಡ. ನಿಮ್ಮೂರಿನ ತೋಟಗಳಲ್ಲಿ (ಅಥವಾ ಮನೆಯ ಸಮೀಪದ ಮರಗಳಲ್ಲಿಯೂ ಸಹ) ಇವು ಕಾಣುತ್ತವೆ. ಅದಕ್ಕಿಂತ ಹೆಚ್ಚಾಗಿ ಕೂಗುವುದು ನಿಮಗೆ ಕೇಳುತ್ತದೆ. ಹಾಗೆ ಕಂಡರೆ ಅಥವಾ ಕೇಳಿದರೆ ನಮಗೂ ತಿಳಿಸಿ! ಹ್ಞಾ ಹಾಗೆಯೇ, ನಮ್ಮಲ್ಲಿ ಚೊಂಬು ಕುಟ್ಟಿದರೆ ಬರುವ ಸದ್ದು ಹೊರಡಿಸುವ ಇದೇ ಪ್ರಭೇದದ ಚೊಂಬು ಕುಟಿಕವೂ ಇದೆ. ಅದನ್ನು ಕುರಿತು ಮುಂದೆ ತಿಳಿಯೋಣ.  ಹಾಗೆಯೇ, ಪಶ್ಚಿಮಘಟ್ಟದ ಕಾಡುಗಳಲ್ಲಿ ಮಾತ್ರ ಕಾಣುವ ಕುಟುರವೂ ಇದೆ. ಹುಡುಕಾಟ ಆರಂಭವಾಗಲಿ!

ಕಲ್ಗುಂಡಿ ನವೀನ್

ಚಿತ್ರಗಳು ಶ್ರೀ ಜಿ ಎಸ್‌ ಶ್ರೀನಾಥ ಹಾಗು pinterest.com

Related post