ಅಂದು1917 ಅಕ್ಟೋಬರ್ 15 ರ ಮುಂಜಾನೆ ತನ್ನ ಕಗ್ಗತ್ತಲ ಜೈಲಿನ ಕೋಣೆಯಲ್ಲಿ ಎಚ್ಚರಗೊಂಡ ಮಾರ್ಗರೇತಾ ಳಿಗೆ ಚರ್ಚಿನ ಪಾದ್ರಿಯೊಬ್ಬರು ಬಂದು “ಇಂದು ನಿನ್ನ ಅಂತಿಮ ದಿನ” ಎಂದು ಘೋಷಿಸಿದಾಗ ಆಕೆಗೆ ಯಾವ ಭಯವೂ ಕಾಡಲಿಲ್ಲ!.
‘ಮಾತಾಹರಿ‘ ಈ ಹೆಸರು ಮೊದಲನೇ ಮಹಾಯುದ್ಧದ ಸಮಗ್ರ ಮಾಹಿತಿಗಳಲ್ಲಿ ಎದ್ದು ಕಾಣುವಂತದ್ದು. 20 ನೇ ಶತಮಾನದ ನೃತ್ಯಗಾರ್ತಿ ಹಾಗು ಕುಖ್ಯಾತ! ಗೂಢಚಾರಿಣಿಯಾದ ಈಕೆಯ ಹುಟ್ಟು ಹೆಸರು “ಮಾರ್ಗರೆಟ್ ಗೆರ್ಟ್ರುಡ್ ಝೆಲ್ಲೆ” ಎಂದು. ಡಚ್ ಮೂಲದ ಆಡಮ್ ಝೆಲ್ಲೆ ದಂಪತಿಗಳಿಗೆ 1876 ಆಗಸ್ಟ್ 7 ರಂದು ಹುಟ್ಟಿದ ಮಾರ್ಗರೇತಾ ತನ್ನ ತಂದೆ ತಾಯಿಯ ವಿಚ್ಛೇದನದಿಂದಾಗಿ ‘ವಿಸರ್‘ ಎಂಬ ಪೋಷಕನೊಟ್ಟಿಗೆ ಬೆಳೆಯುತ್ತಾಳೆ. ತನ್ನ ಪ್ರೌಢವಸ್ತೆಯ ಒಂದು ದಿನ ದಿನಪತ್ರಿಕೆಯೊಂದರಲ್ಲಿ “ರುಡಾಲ್ಫ್ ಮ್ಯಾಕ್ಲಿಯೋಡ್” ಎಂಬ ಡಚ್ ಸೈನ್ಯಾಧಿಕಾರಿ ಮದುವೆಗಾಗಿ ಜಾಹಿರಾತನ್ನು ನೀಡಿರುವುದನ್ನು ನೋಡಿ ತನ್ನದೊಂದು ಅರ್ಜಿಯನ್ನು ಹಾಕುತ್ತಾಳೆ.
ಅಪ್ರತಿಮ ರೂಪರಾಶಿಯಿಂದ ಕೂಡಿದ ಮಾರ್ಗರೇತಾಳ ಭಾವ ಚಿತ್ರವನ್ನು ನೋಡಿ ಮ್ಯಾಕ್ಲಿಯೋಡ್ ಒಪ್ಪಿ ಮದುವೆಯಾಗುತ್ತಾನೆ. ಮದುವೆಯ ನಂತರ ಮಾರ್ಗರೇತಾ ಗಂಡನೊಡನೆ ಡಚ್ ಈಸ್ಟ್ ಇಂಡೀಸ್ ನ (ಈಗಿನ ಇಂಡೋನೇಷ್ಯಾ) ಮಲಾಂಗ್ ಎಂಬ ನಗರದಲ್ಲಿ ವೈವಾಹಿಕ ಜೀವನವನ್ನು ನೆಡೆಸುತ್ತಾಳೆ. ಇಷ್ಟಾದರೆ ಎಲ್ಲವೂ ಸರಿ ಇರುತಿತ್ತೋ ಏನೋ ? ಎರಡು ಮಕ್ಕಳನ್ನು ಮ್ಯಾಕ್ಲಿಯೋಡ್ ಗೆ ಹೆತ್ತು ಕೊಟ್ಟ ಮಾರ್ಗರೇತಾಳ ಬದುಕು ಇಲ್ಲಿಂದ ಮಹತ್ತರ ತಿರುವನ್ನು ಪಡೆಯಿತು.
ಗಂಡ ಮ್ಯಾಕ್ಲಿಯೋಡ್ ನ ಕುಡಿತ ಮಿತಿ ಮೀರಿ ದಿನ ಮಾರ್ಗರೇತಾ ಳನ್ನು ಹಿಂಸಿಸಲು ಶುರುಮಾಡಿದ. ಇವಳ ಮುಂದೆಯೇ ಇನ್ನೊಬ್ಬ ಹೆಂಗಸಿನೊಟ್ಟಿಗೆ ಸಂಬಂಧ ಶುರುಮಾಡಿದ ಕ್ರಮೇಣ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಬೇಸರಗೊಂಡು ನೊಂದು ಮಾರ್ಗರೇತಾ ಮ್ಯಾಕ್ಲಿಯೋಡ್ ನನ್ನ ತೊರೆದು ವ್ಯಾನ್ ರೀಡೀಸ್ ಎಂಬ ಇನ್ನೊಬ್ಬ ಡಚ್ ಸೈನ್ಯಾಧಿಕಾರಿಯೊಂದಿಗೆ ಜೀವಿಸತೊಡಗುತ್ತಾಳೆ. ತಾತ್ಕಾಲಿಕವಾಗಿ ಸರ್ಕಸ್ ಕಂಪನಿಯೊಂದರ ಕುದುರೆ ಸವಾರಿಯ ಪ್ರದರ್ಶನದಲ್ಲಿ ತೊಡಗಿಸಿಕೊಂಡು ತನ್ನ ಹೆಸರನ್ನು “ಲೇಡಿ ಮ್ಯಾಕ್ಲಿಯೋಡ್” ಎಂದಿಟ್ಟುಕೊಂಡು ತನ್ನ ಗಂಡನ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳುತ್ತಾಳೆ.
ಹಲವು ತಿಂಗಳು ಇಂಡೋನೇಷ್ಯಾ ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಮಾರ್ಗರೇತಾ ಸ್ಥಳೀಯ ನೃತ್ಯ ಸಂಸ್ಥೆಗೆ ಸೇರಿ ನೃತ್ಯ ಕಲಿತುಕೊಳ್ಳುತ್ತಾಳೆ. ತನ್ನ ಕುಣಿತದಲ್ಲಿ ಇಂಡೋನೇಶಿಯಾ ಜಾನಪದ ಸಂಸ್ಕೃತಿಯನ್ನು ಭಾರತೀಯ ನೃತ್ಯ ಪದ್ಧತಿಯೊಂದಿಗೆ ಬೆರಸಿಕೊಂಡು ತನ್ನ ಹೆಸರನ್ನು “ಮಾತಾಹರಿ” ಎಂದು ಎಲ್ಲಾ ನೃತ್ಯ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಾಳೆ. ಇದರಿಂದ ಮಾರ್ಗರೇತಾ ಬಹು ಬೇಗ ಪ್ರವರ್ಧಮಾನಕ್ಕೆ ಬಂದು ಕೆಲವು ವರ್ಷಗಳ ಕಾಲ ಯುರೋಪ್ ನ ಎಷ್ಟೋ ಮುಖ್ಯನಗರಗಳಲ್ಲಿ ಕಾರ್ಯಕ್ರಮವನ್ನು ಕೊಡುತ್ತಾಳೆ. ತಾನು ಭಾರತದ ದೇವಾಲಯವೊಂದರಲ್ಲಿ ಹುಟ್ಟಿದೆ ಮತ್ತು ಅಲ್ಲಿನ ನೃತ್ಯ ವಿದ್ವಾಂಸರಿಂದ ನೃತ್ಯವನ್ನು ಕಲಿತೆ ಎಂದು ಹೋದಕಡೆಯಲೆಲ್ಲ ಕಥೆಯೊಂದನ್ನು ಹುಟ್ಟುಹಾಕಿ ಹೇಳತೊಡಗುತ್ತಾಳೆ. ಇವಳ ತಂಡದ ನೃತ್ಯಕ್ಕೆ ಬೇಡಿಕೆ ಇನಿಲ್ಲದಂತೆ ಬಂದು ಬಿಡುವಿಲ್ಲದ ನೃತ್ಯಗಾರ್ತಿಯಾಗುತ್ತಾಳೆ ಮಾರ್ಗರೇತಾ.
ಕಲೆಯ ಉತ್ತುಂಗಕ್ಕೆ ಏರಿದ ಮಾರ್ಗರೇತಾಳನ್ನು ಗಂಡ ಮ್ಯಾಕ್ಲಿಯೋಡ್ ವಾಪಸ್ಸು ಜೊತೆಗೆ ಬಂದಿರಲು ಹಿಂದೆ ಬೀಳುತ್ತಾನೆ. ಆಕೆಗೂ ಮಕ್ಕಳ ನೆಪದಲ್ಲಿ ಪುನಃ ಗಂಡನೊಡನೆ ವೈವಾಹಿಕ ಜೀವನಕ್ಕೆ ಮರಳುತ್ತಾಳೆ. ಆದರೂ ಮ್ಯಾಕ್ಲಿಯೋಡ್ ಕುಡಿದು ಹಿಂಸಿಸುವ ತನ್ನ ಹಳೇ ಚಾಳಿಯನ್ನು ಬಿಡಲಿಲ್ಲಾ. ಈ ಮದ್ಯೆ ಮ್ಯಾಕ್ಲಿಯೋಡ್ ನ ಶತ್ರುಗಳು ಸೇವಕರ ಕೈಲಿ ಮಕ್ಕಳಿಗೆ ವಿಷಪ್ರಾಶನ ಮಾಡಿಬಿಡುತ್ತಾರೆ. ಅಲ್ಲಿನ ಸ್ಥಳೀಯ ವೈದ್ಯರ ಸಹಾಯದಿಂದ ಮಾರ್ಗರೇತಾ ಒಬ್ಬ ಮಗನನ್ನು ಉಳಿಸಿಕೊಳ್ಳುತ್ತಾಳಾದರು ಇನ್ನೊಬ್ಬ ಮಗನು ಸತ್ತು ಹೋಗುತ್ತಾನೆ. ಮ್ಯಾಕ್ಲಿಯೋಡ್ ಮಾರ್ಗರೇತಾಳಿಂದ ವಿಚ್ಛೇದನವನ್ನು ಪಡೆದುಕೊಂಡು ಕೋರ್ಟಿನ ಆದೇಶವಿದ್ದು ಕೂಡ ಅವಳಿಗೆ ಪರಿಹಾರವನ್ನು ಕೊಡದೆ ಮಗುವನ್ನು ಸಹ ನೋಡಲು ಬಿಡುವುದಿಲ್ಲ. ಇದರಿಂದ ಬಹಳ ನೊಂದುಕೊಂಡ ಮಾರ್ಗರೇತಾ ಪುನಃ ತನ್ನ ನೃತ್ಯಕ್ಕೆ ಮರಳುತ್ತಾಳೆ.
ಆದರೆ ಈ ಸಾರಿ ಮಾರ್ಗರೇತಾ ನೃತ್ಯ ಕಾರ್ಯಕ್ರಮಗಳಲ್ಲಿ ಹೊಸದೊಂದು ವಿಲಕ್ಷಣ ಪ್ರಯೋಗ ಶುರು ಮಾಡುತ್ತಾಳೆ ಅದು ಏನು? ತನ್ನ ಮೊನಚು ಕಣ್ಣುಗಳ ಪ್ರಲೋಭಕ ಶಕ್ತಿ ಹಾಗು ನೀಲಿ ಮಿಶ್ರಿತ ಕಪ್ಪು ನೀಳ ಕೂದಲುಗಳುಳ್ಳ ಮಾರ್ಗರೇತಾ ನೃತ್ಯದ ಮದ್ಯೆ ತನ್ನ ನೃತ್ಯ ಪೋಷಾಕುಗಳನ್ನು ಒಂದೊಂದೇ ಬಟ್ಟೆಗಳನ್ನು ಕಿತ್ತೊಗೆದು ಅಲ್ಲಿ ನೆರೆದಿದ್ದ ಅಸ್ಟೂ ಸಬೀಕರು ಹುಬ್ಬೇರಿಸುವಂತೆ ಮಾಡುತ್ತಾಳೆ. ಈ ಪ್ರಯೋಗ ಇಡೀ ಯುರೋಪ್ ಖಂಡದಲ್ಲಿ ಮುಂಚೆ ಇರದಿದ್ದುದ್ದರಿಂದ ಆಕೆಯ ನೃತ್ಯ ಕಾರ್ಯಕ್ರಮ ಎಂದರೆ ಸಾಕು ಜನಗಳು ಬಾಯಿ ಬಾಯಿ ಬಿಡಲು ಶುರು ಮಾಡಿದರು.
ಈ ಹೊಸ ತರಹದ ವಿಲಕ್ಷಣ ನೃತ್ಯವು ಮಾರ್ಗರೇತಾ ಳನ್ನು ತನ್ನ ವೃತ್ತಿಯ ಉತ್ತುಂಗದ ಸ್ಥಿತಿಗೆ ತಲುಪಿಸಿತು. ಇವಳು ಕೊಡುತಿದ್ದ ಪ್ರಚೋದನಕಾರಿ ಬಂಗಿಗಳಿಗೆ ಆಗಿನ ಪ್ರಸಿದ್ಧ ಪತ್ರಿಕೆಗಳು ಮುಗಿಬೀಳುತಿದ್ದವು.ಇವಳ ಸಹವಾಸವೂ ಕೂಡ ಸಿರಿವಂತರ ಕೂಡ ಮಾತ್ರ ಇರುತಿತ್ತು. ಕ್ರಮೇಣ ಮಾರ್ಗರೇತಾ ಉನ್ನತ ದರ್ಜೆಯ ಮಿಲಿಟರಿ ಆಫೀಸರ್ಗಳೊಂದಿಗೆ, ಪ್ರಸಿದ್ಧ ರಾಜಕೀಯ ವ್ಯಕ್ತಿಗಳೊಂದಿಗೆ, ಕಾಣಿಸಿಕೊಳ್ಳಲು ಶುರು ಮಾಡಿದಳು. ಅವಳ ಸಂಬಂಧಗಳು ದೇಶ ದೇಶಗಳಾಚೆಯ ವ್ಯಕ್ತಿಗಳೊಂದಿಗೆ ಶುರು ಆದವು.
1914 ಮೊದಲನೇ ಮಹಾಯುಧ್ದ ಶುರುವಾದ ಸಂದರ್ಭದಲ್ಲಿ ನೆದರ್ಲ್ಯಾಂಡ್ (ಹಾಲೆಂಡ್) ತಟಸ್ಥವಾಗಿತ್ತು. ಇದರ ಉಪಯೋಗ ಪಡೆದ ಮಾರ್ಗರೇತಾ ಫ್ರಾನ್ಸ್ ನಿಂದ ನೆದರ್ಲ್ಯಾಂಡ್ ಮೂಲಕ ಸ್ಪೇನ್ ಹಾಗು ಬ್ರಿಟನ್ ದೇಶಗಳ ನಗರಗಳಿಗೆ ಸಲೀಲವಾಗಿ ಓಡಾಡತೊಡಗಿದಳು. ಆಗ ಪರಿಚಯವಾದವನೇ ಫ್ರಾನ್ಸ್ ನ ಪೈಲಟ್ ಹಾಗು ಕ್ಯಾಪ್ಟನ್ “ಮ್ಯಾಸ್ಲೊವ್“. ಈತನನ್ನು ಮಾರ್ಗರೇತಾ ಇನಿಲ್ಲದಂತೆ ಪ್ರೀತಿಸತೊಡಗಿದಳು. ಯುದ್ಧದ ವೇಳೆಯಲ್ಲಿ ಕ್ಯಾಪ್ಟನ್ “ಮ್ಯಾಸ್ಲೊವ್” ತೀವ್ರವಾಗಿ ಗಾಯಗೊಂಡಾಗ ಅವನನ್ನು ನೋಡಲು ಮಾರ್ಗರೇತಾ ಪ್ರಯತ್ನಪಡುತ್ತಾಳೆ ಆದರೆ ಇವಳ ಯಾಚನೆಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಇವಳ ಅಂತರ್ರಾಷ್ಟ್ರೀಯ ಸಂಬಂಧಗಳನ್ನು ತಿಳಿದಿದ್ದ ಸೈನ್ಯದ ಅಧಿಕಾರಿಗಳು ಫ್ರಾನ್ಸ್ ಗಾಗಿ ಗೂಢಚಾರಿಕೆ ಕೆಲಸ ಮಾಡಿದರೆ ಮಾತ್ರ ಮ್ಯಾಸ್ಲೊವ್ ನನ್ನು ನೋಡಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ ಮಾರ್ಗರೇತಾ ಇಷ್ಟವಿಲ್ಲದಿದ್ದರು ಒಪ್ಪಿಕೊಳ್ಳುತ್ತಾಳೆ.
ಮೊದಲಿಗೆ ಆಗಿನ ಜರ್ಮನಿಯ ಕೊನೆಯ ರಾಜ “ವಿಲ್ ಹೆಲ್ಮ್” ನನ್ನು ಪ್ರಚೋದಿಸಿ ರಹಸ್ಯಗಳನ್ನು ತಿಳಿದುಕೊಳ್ಳಲು ಅಧಿಕಾರಿಗಳು ತಾಕೀತು ಮಾಡುತ್ತಾರೆ ಹಾಗು ಒಂದು ಮಿಲಿಯನ್ ಫ್ರಾನ್ಸ್ ಮೊತ್ತವನ್ನು ಆಮಿಷ ಒಡ್ಡುತ್ತಾರೆ. ಜರ್ಮನಿಗೆ ಪ್ರಯಾಣಿಸಿದ ಮಾರ್ಗರೇತಾ ಅಲ್ಲಿನ ಅರ್ನಾಲ್ಡ್ ಕಲ್ಲೇ ಎಂಬ ಮೇಜರ್ ನನ್ನು ಸಂಪರ್ಕಿಸಿ ಏನಾದರೂ ಮಾಡಿ ರಾಜಕುಮಾರ ವಿಲ್ ಹೆಲ್ಮ್ ನನ್ನು ಭೇಟಿ ಮಾಡಿಸಲು ಕೇಳಿಕೊಳ್ಳುತ್ತಾಳೆ. ಆಗ ಮೇಜರ್ ಕಲ್ಲೇ ಇವಳಿಗೆ ಜರ್ಮನ್ ಪರ ಗೂಢಚಾರಿಕೆ ಮಾಡಲು ಕೇಳಿಕೊಂಡು ಆಕೆಗೆ ಎಚ್-೨೧ ಎಂಬ ರಹಸ್ಯ ಸಂಖ್ಯೆಯನ್ನು ಕೊಟ್ಟು ಬರ್ಲಿನ್ ನಗರಕ್ಕೆ ರೇಡಿಯೋ ಮೆಸೇಜ್ ಕೂಡ ಕಳುಹಿಸುತ್ತಾನೆ. ಇಂತಹ ವಿಚಿತ್ರ ಸಂದರ್ಭ ಹಾಗು ಆಮಿಷಗಳಿಗೆ ಮಾರ್ಗರೇತಾ ಸಿಲುಕಿ ಫ್ರಾನ್ಸ್ ಅಧಿಕಾರಿಗಳೊಡನೆ ಒಪ್ಪಿಕೊಂಡಂತೆ ರಾಜಕುಮಾರನ ಬೇಟಿಯಾದಲ್ಲಿ ರಹಸ್ಯಗಳನ್ನು ತಿಳಿಯಲು ಸಹಾಯವಾಗುತ್ತದೆ ಎಂದು ಒಂದೇ ಉದ್ದೇಶದಿಂದ ಮೇಜರ್ ಕಲ್ಲೇ ಕೋರಿಕೆಯನ್ನು ಒಪ್ಪಿ ಜರ್ಮನಿಯ ಪರವಾಗಿ ಗೂಢಚಾರಿಕೆ ಮಾಡುತ್ತೇನೆ ಎಂದು ನಂಬಿಸುತ್ತಾಳೆ. ಆದರೆ ಬಹು ಬೇಗ ಎಚ್-೨೧ ಗುಪ್ತ ಸಂಕೇತಗಳನ್ನು ಫ್ರಾನ್ಸ್ ಸೈನ್ಯ ಪಡೆಗೆ ತಿಳಿದುಬಿಡುತ್ತದೆ. ಇಲ್ಲಿ ಮಾರ್ಗರೇತಾ ಯಾರ ಪರ ಗೂಢಚಾರಿಕೆ ಮಾಡಿದಳು? ಹಾಗು ಅದರಿಂದ ಯಾವ ಸೈನ್ಯಕ್ಕೆ ಲಾಭ ನಷ್ಟಗಳು ಉಂಟಾಯಿತು ಎಂದು ಈಗಲೂ ಸಹ ಇತಿಹಾಸ ತಜ್ಞರಿಂದ ಸರಿಯಾದ ಮಾಹಿತಿಯಿಲ್ಲ. 1917 ರ ಫೆಬ್ರವರಿಯ ಒಂದು ದಿನ ಮಾರ್ಗರೇತಾಳನ್ನು ಫ್ರಾನ್ಸ್ ಸೈನ್ಯ ಪಡೆ ಬಂದಿಸುತ್ತದೆ.
ಮಾರ್ಗರೇತಾಳನ್ನು ಫ್ರೆಂಚ್ ಸೈನ್ಯ ಪಡೆ ಬಂಧಿಸಿ ಸೈನ್ಟ್ ಲಾಜರೇ ಎಂಬ ಸ್ಥಳದಲ್ಲಿ ಇಲಿಗಳಿಂದ ಕೂಡಿದ ಬಂದಿಕಾನೆಯಲ್ಲಿ ಕೂಡಿಹಾಕು ತ್ತದೆ. ಆಕೆ ಐದು ತಿಂಗಳು ಈ ಕಾರಾಗೃಹದಲ್ಲೇ ಕಳೆಯುತ್ತಾಳೆ ಹಾಗು ಅವಳನ್ನು ನೋಡಲು ವಕೀಲರ ಹೊರತು ಯಾರಿಗೂ ಪ್ರವೇಶ ನೀಡುವುದಿಲ್ಲ.
ಜೈಲಿನಲ್ಲಿ ಮಾರ್ಗರೇತಾ ಪ್ಯಾರಿಸ್ ನಲ್ಲಿನ ಡಚ್ ರಾಯಭಾರಿ ಕಚೇರಿಗೆ ಪಾತ್ರ ಬರೆದು ನನ್ನ ಅಂತರ್ರಾಷ್ಟ್ರೀಯ ಪ್ರಯಾಣ ಹಾಗು ಸಂಪರ್ಕವು ಕೇವಲ ನನ್ನ ನೃತ್ಯದ ಕಾರ್ಯಕ್ರಮಗಳಿಗೆ ಮಾತ್ರ ಆಗಿತ್ತು ಬೇರೆ ಸಂಚಿನಲ್ಲಿ ನಾನು ಪಾಲುದಾರಳಲ್ಲ ಎಂದು ಕೇಳಿಕೊಳ್ಳುತ್ತಾಳೆ. ಆದರೆ ಅದರಿಂದ ಏನು ಉಪಯೋಗ ಆಗುವುದಿಲ್ಲ. ಆಗ ಮಾರ್ಗರೇತಾಳು ತನ್ನ ಪ್ರಿಯಕರ ಪೈಲಟ್ ‘ಮ್ಯಾಸ್ಲೊವ್’ ನಿಗೆ ಸಹಾಯ ಕೋರಿ ಪಾತ್ರ ಬರೆಯುತ್ತಾಳೆ. ದುರಂತವೆಂದರೆ ಅವಳ ಪ್ರಿಯಕರ ‘ಮ್ಯಾಸ್ಲೊವ್’ ಇವಳನ್ನು ಅನುಮಾನಿಸಿ ಸಹಾಯಕ್ಕೆ ಬರುವುದಿಲ್ಲ. ಇದರಿಂದ ಮಾರ್ಗರೇತಾಳಿಗೆ ಕೊನೆಯ ಆಸೆಯೂ ಕಮರಿ ಹೋಗುತ್ತದೆ.
ಅಂತಾರಾಷ್ಟ್ರೀಯ ನೃತ್ಯಗಾರ್ತಿ ಎಂದು ಮನ್ನಣೆ ಪಡೆದಿದ್ದರಿಂದ ಮಾರ್ಗರೇತಾಳ ಬಂಧನವು ಆ ವೇಳೆಯಲ್ಲಿ ಬಹು ಚರ್ಚಿತ ಸುದ್ದಿಯಾಗುತ್ತದೆ ಹಾಗು ಪತ್ರಿಕೆಗಳು ಇವಳ ಬಂಧನದ ಕುರಿತು ಇನ್ನಿಲ್ಲದಂತೆ ಸುದ್ದಿಯನ್ನು ಪ್ರಕಟಿಸುತ್ತವೆ. ಡಬಲ್ ಸೀಕ್ರೆಟ್ ಏಜೆಂಟ್ ಎಂದೇ ಮಾರ್ಗರೇತಾ ಸುದ್ದಿಯಾಗುತ್ತಾಳೆ. ಫ್ರೆಂಚ್ ಮಿಲಿಟರಿ ನ್ಯಾಯಾಲಯದಲ್ಲಿ ಮಾರ್ಗರೇತಾ ವಿರುದ್ಧ ಬೇಹುಗಾರಿಕೆ, ಎರಡು ಬದಿಯಲ್ಲೂ ಮಾಹಿತಿ ನೀಡುವಿಕೆ (ಜರ್ಮನಿ ಮತ್ತು ಫ್ರಾನ್ಸ್, ಎರಡಕ್ಕೂ ಮಾಹಿತಿ ರವಾನೆ) ಹಾಗೂ ವಿಶ್ವದ ಮೊದಲನೇ ಮಹಾ ಯುದ್ಧದಲ್ಲಿ ಸಾವಿರಾರು ಸಿಪಾಯಿಗಳ ಸಾವಿಗೆ ಕಾರಣರಾದ ಆರೋಪಕ್ಕೆ ಗುರಿ ಪಡಿಸಲಾಯಿತು. ನ್ಯಾಯಾಲಯದ ವಿಚಾರಣೆಯುದ್ದಕ್ಕೂ ಮಾರ್ಗರೇತಾ ತಾನು ಫ್ರಾನ್ಸ್ ಅಲ್ಲದೆ ಇನ್ಯಾವ ದೇಶದ ಪರವೂ ಗೂಡಾಚಾರಿಕೆ ಮಾಡಿಲ್ಲ ಎಂದೇ ವಾದಿಸುತ್ತಾಳಾದರು ಮೇಜರ್ ಕಲ್ಲೇ ಕುರಿತು ವಿಚಾರಿಸಿದಾಗ ತಾನು ಫ್ರಾನ್ಸ್ ದೇಶಕ್ಕೆ ಏನಾದರೂ ರಹಸ್ಯಗಳನ್ನು ಸಂಪಾದಿಸಲಷ್ಟೇ ಗೂಡಾಚಾರಿಕೆಯನ್ನು ಒಪ್ಪಿಕೊಂಡೆ ಆದರೆ ಫ್ರಾನ್ಸ್ ನ ರಹಸ್ಯಗಳನ್ನು ಎಳ್ಳಷ್ಟೂ ಹೇಳಿಲ್ಲ ಎಂದು ಪ್ರತಿವಾದಿಸುತ್ತಾಳೆ.
ಜರ್ಮನಿಯ ಮೇಜರ್ ಜನರಲ್ “ವಾಲ್ಟರ್ ನಿಕೋಲೈ” ಮಾರ್ಗರೇತಾ ನಮಗೆ ಕೊಟ್ಟದ್ದು ಫ್ರಾನ್ಸ್ ವ್ಯಕ್ತಿಗಳ ಗಾಸಿಪ್ಗಳು ಅವರ ಸೆಕ್ಸ್ ಜೀವನದ ಘಟನೆಗಳಷ್ಟೇ ಹೊರತು ಇನ್ನೇನು ಇಲ್ಲ ಅದರಿಂದ ನಾವು ಅವಳ ರಹಸ್ಯ ಗೂಢಚಾರಿಕೆಯನ್ನು ಕೊನೆಗೊಳಿಸಿದೆವು ಎಂದು ಹೇಳಿಕೆ ಕೊಡ್ಡುತ್ತಾನೆ. ಮಾರ್ಗರೇತಾಳ ವಿರುದ್ಧ ಯಾವುದೇ ಬಲವಾದ ಸಾಕ್ಷಿ ಇಲ್ಲದಿದ್ದರೂ ಸಹ ಮಿಲಿಟರಿ ನ್ಯಾಯಾಲಯವು ಅವಳು ತಪ್ಪಿತಸ್ಥೆ ಎಂದು ತೀರ್ಮಾನಿಸಿ ಕೇವಲ ಒಂದೇ ಒಂದು ಗಂಟೆಯಲ್ಲಿ ಮರಣದಂಡನೆಯ ತೀರ್ಪನ್ನು ನೀಡುತ್ತದೆ.
1917 ರ ನವೆಂಬರ್ ತಿಂಗಳ 17 ರಂದು ಮಾರ್ಗರೇತಾಳನ್ನು ಪ್ಯಾರಿಸ್ ನಗರದ ಹೊರವಲಯಕ್ಕೆ ಕರೆದೊಯ್ದು 12 ಸೈನಿಕರ ‘ಫೈರಿಂಗ್ ಪಡೆ’ ಅವಳನ್ನು ಶೂಟ್ ಮಾಡಿ ಸಾಯಿಸುತ್ತಾರೆ. ಫ್ರಾನ್ಸ್ ಯುದ್ಧದಲ್ಲಿ ಆದ ನಷ್ಟಕ್ಕೆ ಮಾರ್ಗರೇತಾ ಉರುಫ್ ಮಾತಾಹರಿಯನ್ನು ಯುದ್ಧ ಪಶುವನ್ನಾಗಿಸಿತು. ಫೈರಿಂಗ್ ಪಡೆಯು ಮಾತಾಹರಿಯನ್ನು ಶೂಟ್ ಮಾಡುವ ಮುನ್ನ ಆಕೆ ಅವರೆಲ್ಲರಿಗೂ ತನ್ನ ಕೈಯಿಂದ ಮುತ್ತನ್ನೊಂದು ಚುಂಬಿಸಿ ಗಾಳಿಯಲ್ಲಿ ಹಾರಿಬಿಡುತ್ತಾಳೆ ಅದು ಮಾತಾಹರಿಯ ಬಿಚ್ಚು ಮನಸಿನ ಸ್ಟೈಲ್ ಆಗಿತ್ತು.
1985 ರಲ್ಲಿ ‘ಮಾತಾಹರಿ’ ಜೀವನ ಚರಿತ್ರೆಯ ಚಲನ ಚಿತ್ರ ಫ್ರೆಂಚ್ ಹಾಗು ಆಂಗ್ಲ ಭಾಷೆಯಲ್ಲಿ ಲಭ್ಯವಿದ್ದು ಆಸಕ್ತರು ನೋಡಬಹುದು.
ಕು ಶಿ ಚಂದ್ರಶೇಖರ್
ಮಾಹಿತಿ ಹಾಗು ಚಿತ್ರ ಸಂಗ್ರಹ : medium.com ಹಾಗು ವಿಕಿಪೀಡಿಯ
2 Comments
ಸರ್ ಕಥೆ ತುಂಬಾ ಚೆನ್ನಾಗಿದೆ… ಬರವಣಿಗೆ ಚೆನ್ನಾಗಿ ಮೂಡಿ ಬಂದಿದೆ…👍👏😊
ರಾಘವೇಂದ್ರ ಇದು ಕಥೆಯಲ್ಲ ನೈಜ ಘಟನೆ
ಧನ್ಯವಾದಗಳು