ಮಾತು ಬೆಳ್ಳಿ ಮೌನ ಬಂಗಾರ
ಮಾತು ಮತ್ತು ಮೌನದ ಬಗ್ಗೆ ನಾವು ಹೆಚ್ಚು ವಿಚಾರ ಮಂಥನ ಮಾಡಿದಾಗ ಪ್ರತಿ ಬಾರಿಯೂ ಮೌನ ಎಂಬುದು ಮಾತಿನ ಅಭಾವದ ಸ್ಥಿತಿ ಮತ್ತು ಮಾತು ಎನ್ನುವುದು ವಿಚಾರಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಸರಿಯಾಗಿ ವರ್ಗಾಯಿಸುವಲ್ಲಿ ಸರ್ವಶಕ್ತ ಎನ್ನುವುದು ಅರ್ಧಸತ್ಯವಷ್ಟೇ ಎಂದು ತಿಳಿದು ಬರುತ್ತದೆ. ಕೆಲವು ವಿಚಾರಗಳನ್ನು ಮಾತಿಗಿಂತ ಮೌನವೇ ಹೆಚ್ಚು ಶಕ್ತವಾಗಿ ಮತ್ತು ಸಮಗ್ರವಾಗಿ ಸಂವಹಿಸುತ್ತದೆ ಎನ್ನುವುದನ್ನು ನಾವು ಮರೆತೇ ಬಿಟ್ಟಿದ್ದೇವೆ.
![](https://sahityamaithri.com/wp-content/uploads/2023/09/Gold_Silver_coins-1024x724-1.jpg)
‘ಮಾತು ಬೆಳ್ಳಿ ಮೌನ ಬಂಗಾರ’ ಎನ್ನುವ ಗಾದೆ ಮಾತು ಅತ್ಯಂತ ಹಳೆಯದಾಯಿತು ಎನಿಸುತ್ತದೆ, ಇಂದು ‘ಮಾತು ಯಶಸ್ಸು ಮೌನ ಅಪಯಶಸ್ಸು’ ಆಗಿರುವುದು ದೌರ್ಭಾಗ್ಯವೇ ಸರಿ. ಕೆಲವೊಮ್ಮೆ ಅದ್ಬುತ ಮಾತುಗಾರರು ತಮ್ಮಲ್ಲಿ ವಿಶೇಷ ಅರ್ಹತೆ ಇಲ್ಲದೇ ಇದ್ದರೂ ಯಶಸ್ಸಿನ ಪರ್ವತವನ್ನು ಅಲ್ಪಾವಧಿಯಲ್ಲೇ ಏರಿಬಿಡುತ್ತಾರೆ. ಹಾಗೂ ಸದಾ ಮೌನವಾಗಿ ಇರುವ ಮತ್ತು ಹೆಚ್ಚು ಅರ್ಹತೆ ಇದ್ದರೂ ಎಲ್ಲೂ ಗುರುತಿಸಲ್ಪಡುವುದೇ ಇಲ್ಲ. ಹಿಂದಿನ ದಿನಗಳಲ್ಲೆಲ್ಲಾ ವ್ಯಕ್ತಿಯು ಮೌನವಾಗಿ ಇದಷ್ಟು ‘ತುಂಬಿದ ಕೊಡ ತುಳುಕುವುದಿಲ್ಲ’ ಎನ್ನುವ ಮಾತಿನಂತೆ ಅವರ ಅರ್ಹತೆ ಮತ್ತು ಘನತೆಯು ಹೆಚ್ಚುತ್ತಿತ್ತು, ಹೆಚ್ಚು ವಿಚಾರಗಳನ್ನು ತಿಳಿದುಕೊಂಡಿರುವ ವ್ಯಕ್ತಿಗಳು ಹೆಚ್ಚು ಮಾತನಾಡುತ್ತಾ ಇರಲಿಲ್ಲ. ಅದೇ ಕಾರಣಕ್ಕೆ ಹಿರಿಯರು ಮಾತು ಬೆಳ್ಳಿಯಾದರೆ ಮೌನವು ಅದಕ್ಕಿಂತಲೂ ಹೆಚ್ಚು ಬೆಲೆಬಾಳುವ ಬಂಗಾರವೆAದು ಹೇಳುತ್ತಿದ್ದರು. ಆದರೆ ಕಾಲ ಬದಲಾಗಿದ್ದು, ಇಂದು ಸಾಮಾಜಿಕ ಮಾದ್ಯಮಗಳ ಕ್ರಾಂತಿಯ ಯುಗ. ಎಲ್ಲರೂ ಮಾತನಾಡುತ್ತಾ, ಇತರರನ್ನು ಮಾತನಾಡಿಸಿ ಆರ್ಭಟಿಸುವವರೇ.
ಹೆಚ್ಚು ಗುರುತಿಸಿಕೊಂಡು ಶೀಘ್ರವಾಗಿ ಯಶಸ್ಸನ್ನು ಗಳಿಸಬೇಕಿದ್ದರೆ ಉತ್ತಮ ರೀತಿಯಲ್ಲಿ ಮಾತನಾಡಬೇಕು, ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಇನ್ನೊಬ್ಬರ ಕಾಲೆಳೆಯುವ ಕೆಲಸ ಮಾಡಬೇಕು, ಈ ರೀತಿಯಾಗಿ ನಮ್ಮ ಅರಿವಿಗೇ ಬರದಂತೆ ಮಾತುಗಾರರು ಆಗಿದ್ದೇವೆ. ಮಾತಿನ ಕಲೆ ಎಲ್ಲರಿಗೂ ಸುಲಭವಾಗಿ ದಕ್ಕಲಾರದು. ಪ್ರತಿಯೊಬ್ಬರೂ ತಮ್ಮದೇ ಆದ ವ್ಯಕ್ತಿತ್ವವನ್ನು ಮತ್ತು ಮಾತಿನ ಶೈಲಿಯನ್ನು ಹೊಂದಿರುತ್ತಾರೆ. ಆದ್ದರಿಂದ ಮಾತು ಕೇವಲ ಬೆಳ್ಳಿಯಾಗಿರುವ ಬದಲು ಮಾತು ಮತ್ತು ಮೌನ ಇವೆರಡನ್ನೂ ಬಂಗಾರವನ್ನಾಗಿ ಮಾಡಿಕೊಳ್ಳುವ ಶಕ್ತಿ ನಮ್ಮಲಿರಬೇಕು. ಈ ಜಗತ್ತಿನಲ್ಲಿ ಮಾತಾಡುವ ವಿಶಿಷ್ಟವಾದ ಶಕ್ತಿ ಇರುವುದು ಮನುಷ್ಯನಿಗಷ್ಟೇ. ಇತರ ಯಾವ ಜೀವಿಗಳಿಗೂ ಮಾತಾಡುವ ಮತ್ತು ಯೋಚಿಸುವ ಶಕ್ತಿಯಿಲ್ಲ. ಅಂತೆಯೇ ಮಾತಾಡುವ ಶಕ್ತಿ ಕೇವಲ ಮನುಷ್ಯರಿಗೆ ಮಾತ್ರ ಇದೆ. ಯೋಚಿಸಿ ಆಡುವ ಒಂದು ಮಾತಿನಿಂದ ಅದೆಷ್ಟೋ ಸಂಬಂಧಗಳನ್ನು ಉಳಿಸಬಹುದು. ಅದೇ ರೀತಿ ಒಂದು ಮಾತಿನಿಂದ ಎಷ್ಟೋ ಸಂಬಂಧಗಳನ್ನು ಹಾಳು ಮಾಡಬಹುದು. ಇತ್ತೀಚೆಗಂತೂ ಮಾತು ಒಂದು ಉದ್ಯೋಗವೇ ಆಗಿದೆ. ಎಷ್ಟೋ ಜನರು ಮಾತಿನಲ್ಲೇ ಎಲ್ಲರನ್ನೂ
ಮರುಳು ಮಾಡಿಬಿಡುತ್ತಾರೆ. ಕೆಲವರು ಮನಸ್ಸಿಗೆ ತೋಚಿದ್ದನ್ನು ತೋಚಿದ ಹಾಗೆ ಹೇಳಿಬಿಡುತ್ತಾರೆ. ಇದರಿಂದ ಆಗುವ ಪರಿಣಾಮವನ್ನು ಎಂದೂ ಅವರು ಯೋಚಿಸುವುದೂ ಇಲ್ಲ ಯಾವತ್ತೂ ನಾನು ಹೇಳಿದ್ದೇ ಸರಿಯೆಂದು ಯಾವತ್ತೂ ಅಂದುಕೊಳ್ಳಬಾರದು. ಕೆಲವರಿಗೆ ಕೆಲವರ ಮಾತನ್ನು ಕೇಳಿದಾಗ ಮತ್ತಷ್ಟು ಕೇಳೋಣ, ಕೇಳುತ್ತಲೇ ಇರೋಣ ಎಂದು ಅನಿಸುತ್ತದೆ ಮತ್ತು ಅಂತವರ ಸ್ನೇಹವನ್ನು ಎಲ್ಲರೂ ಬೇಗನೇ ಮಾಡಿಕೊಳ್ಳುತ್ತಾರೆ.
ಇನ್ನು ಕೆಲವರಿಗೆ ಕೆಲವರ ಮಾತುಗಳನ್ನು ಕೇಳಿದಾಗ ಅಯ್ಯೋ ಇವರು ಒಮ್ಮೆ ಮಾತನ್ನು ಮುಗಿಸಿದರೆ ಸಾಕಪ್ಪಾ ಎಂದೆನಿಸುತ್ತದೆ. ನಮ್ಮ ಮಾತಿನಲ್ಲಿ ಹಿಡಿತ ಇರಬೇಕು ಯೋಚಿಸಿ ಮಾತಾಡಿದರೆ ತಾನು ಗೆಲುವನ್ನು ಸಾಧಿಸಬಹುದು.
![](https://sahityamaithri.com/wp-content/uploads/2023/09/09b48bce243437a61466b060272e0b51.jpg)
ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತು ಹೆಚ್ಚು ಪ್ರಚಲಿತದಲ್ಲಿದೆ. ಆಡಿದ ಮಾತನ್ನು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ. ಗುಂಪಿನಲ್ಲಿ ಮಾತನ್ನು ಆಡುವಾಗ ಅಥವಾ ತಮಾಷೆ ಮಾಡುವಾಗ ಅದು ಬೇರೆಯವರಿಗೆ ಚುಚ್ಚುವಂತೆ ಇರಬಾರದು.ಅತಿಯಾದರೆ ಅಮೃತವೂ ವಿಷ ಎನ್ನುವಂತೆ ನಮ್ಮ ಮಾತು ನಿಯಂತ್ರಣ ತಪ್ಪಿದರೆ ನಮ್ಮ ವ್ಯಕ್ತಿತ್ವಕ್ಕೇ ಮುಳುವಾಗಬಹುದು. ಇದಕ್ಕಾಗಿಯೇ ಹಿರಿಯರು ಗಾದೆ ಮಾತನ್ನು ರಚಿಸಿದ್ದು, ಮಾತು ಬೆಳ್ಳಿ ಮೌನ ಬಂಗಾರ ಕೆಲವು ಸಂದರ್ಭದಲ್ಲಿ ಮಾತು ಎಷ್ಟು ಒಳ್ಳೆಯದೋ ಅಷ್ಟೇ ಮೌನವೂ ಒಳ್ಳೆಯದು. ಅದೇ ರೀತಿ ಮೌನಕ್ಕೆ ಅದೆಷ್ಟೋ ಸಂಬಂಧಗಳನ್ನು ಉಳಿಸುವ ಸಾಮರ್ಥ್ಯವಿದೆ.
ಮೌನವೂ ಬಂಗಾರ
ಹಿಂದಿನಿಂದಲೂ ಮೌನಕ್ಕೆ ಬಂಗಾರದ ಮೌಲ್ಯವಿದೆ ಎಂದ ಮಾತ್ರಕ್ಕೆ ಪ್ರತಿಯೊಂದಕ್ಕೂ ಮೌನವೇ ಉತ್ತರ ಆಗಬಾರದು ಮತ್ತು ಅದು ಜಾಣತನವೂ ಅಲ್ಲ. ಮೌನ ಎಂಬ ಮಹಾ ಆಯುಧವನ್ನು ಎಂದು, ಯಾವ ಸನ್ನಿವೇಶದಲ್ಲಿ ಉಪಯೋಗಿಸಬೇಕು ಎನ್ನುವ ಅರಿವು ನಮ್ಮಲ್ಲಿ ಇರಬೇಕು. ಕೆಲವೊಮ್ಮೆ ಯಾವುದೋ ಒಂದು ಪರಿಸ್ಥಿತಿಯು ವಿಕೋಪಕ್ಕೆ ತಿರುಗುವ ಲಕ್ಷಣ ಇದ್ದಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಮೌನಕ್ಕೆ ಶರಣಾಗುವುದು ಜಾಣರ ಲಕ್ಷಣ.
![](https://sahityamaithri.com/wp-content/uploads/2023/09/best-ways-to-respond-to-silent-treatment.png)
ಇಬ್ಬರು ವ್ಯಕ್ತಿಗಳ ನಡುವೆ ಅಚಾನಕ್ಕಾಗಿ ಆರಂಭವಾಗುವ ವಾಗ್ವಾದವನ್ನು ಕೂಡಲೇ ಹತೋಟಿಗೆ ತರಲು ಅಗತ್ಯವಿರುವುದು ಜಾಣ ಮೌನವೇ. ವಾಗ್ವಾದ ಪ್ರಾರಂಭ ಆದಾಗ ನಾಲಿಗೆಯು ನಿಯಂತ್ರಣ ಕಳೆದುಕೊಂಡು ಮಾತಿಗೆ ಮಾತು ಬೆಳೆಸಿ ಕಾದಾಟದ ಮಟ್ಟಕ್ಕೆ ಹೋಗಬಹುದು. ಇಂತಹ ಸಂದರ್ಭದಲ್ಲಿ ನನಗೆ, ನನ್ನ ತಂದೆ ಮಾಡುತ್ತಿದ್ದ ರೀತಿ ನೆನಪಿನಂಚಿಗೆ ಬರುತ್ತಿದೆ. ಅವರು ಸದಾ ತಪ್ಪು ನಡೆಯುವ ಸನ್ನಿವೇಶ ಬರುವ ಮೊದಲು ತಪ್ಪಿನ ದಾರಿಯನ್ನೇ ಮೊದಲು ತಪ್ಪಿಸಿ ಬಿಡಬೇಕು ಎಂದು. ಅವರಿಗೆ ತಪ್ಪುಗಳು ಘಟಿಸಿದಾಗ ಬಹಳಷ್ಟು ಸಿಟ್ಟು ಬರುತ್ತಿದ್ದರೂ, ತಕ್ಶಣ ಸಿಟ್ಟಿನಿಂದ ನಾಲಿಗೆಯನ್ನು ಉದ್ದನೇ ಹರಿಯಲು ಬಿಡುತ್ತಿರಲಿಲ್ಲ. ಸಿಟ್ಟು ಬಂದಾಕ್ಷಣ ಅವರು ಮೌನಕ್ಕೆ ಜಾರಿ, ಕೋಣೆಯಲ್ಲಿ ಕುಳಿತು ನಡೆದ ಸನ್ನಿವೇಶದ ಬಗ್ಗೆ ಅಥವಾ ತಪ್ಪಿನ ಬಗ್ಗೆ ವಿಮರ್ಷೆ ತಾವೇ ನಡೆಸುತಿದ್ದರು. ಏನನ್ನು ಮತ್ತು ಹೇಗೆ ಮಾತನಾಡಬೇಕು ಎನ್ನುವುದನ್ನು ಯೋಚಿಸಿ ನಂತರ ಕರೆದು ಮಾತನಾಡುತ್ತಿದ್ದರು. ಯಾವುದೇ ವಿಚಾರವನ್ನು ಅವರಿಗೆ ಯಾರಾದರೂ ದೂರವಾಣಿ ಕರೆ ಮಾಡಿ ವಿಚಾರಿಸಿದಾಗಲೂ ಅವರು ಐದು ನಿಮಿಷ ಬಿಟ್ಟು ಕರೆ ಮಾಡುತ್ತೇನೆ ಎನ್ನುತಿದ್ದರೇ ವಿನಃ ತಕ್ಶಣ ತಮ್ಮ ಅಬಿಪ್ರಾಯವನ್ನು ಎಂದೂ ವ್ಯಕ್ತಪಡಿಸಿದವರಲ್ಲ. ಇದುವೇ ಅವರು ಕೆಟ್ಟ ಸನ್ನಿವೇಶವನ್ನು ನಿರ್ವಹಿಸುತ್ತಿದ್ದ ರೀತಿ.
ಕುಟುಂಬದ ಸದಸ್ಯರ ನಡುವೆ ಆಗಾಗ ಮನಸ್ತಾಪ ಉಂಟಾಗಿ ಮಾತಿಗೆ ಮಾತು ಬೆಳೆಯಲು ಆರಂಭಿಸಿದಾಗ ಕನಿಷ್ಟ ಒಬ್ಬರಾದರೂ ಆ ಕ್ಷಣ ಮೌನಕ್ಕೆ ಜಾರಿದರೆ ಪರಿಸ್ಥಿತ ಸಹವಾಗಿ ಹತೋಟಿಗೆ ಬರುತ್ತದೆ. ಜಗಳ ಮತ್ತು ಮನಸ್ತಾಪದ ಪರಿಸ್ಥಿತಿಯನ್ನು ನಿಬಾಯಿಸುವಲ್ಲಿ ಮೌನಕ್ಕಿಂತ ಪ್ರಭಲವಾದ ಅಸ್ತ್ರ ಮತ್ತೊಂದಿಲ್ಲ. ನಮ್ಮ ನಾಲಿಗೆಯು ನಮ್ಮ ಹತೋಟಿ ತಪ್ಪುತ್ತಿದೆ ಎಂದೆನಿಸಿದ ಕೂಡಲೇ ಮೌನಕ್ಕೆ ಶರಣಾಗಿ ಬಿಡಬೇಕು. ಹಾಗೆಂದು ಎಲ್ಲಾ ಸಂದರ್ಭದಲ್ಲೂ ಮೌನವಾಗಿದ್ದರೆ ಜನ ನಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಮೌನಂ ಸಮ್ಮತಿ ಲಕ್ಶಣಂ ಎನ್ನುವ ಮಾತನ್ನು ನಾವೆಲ್ಲರೂ ಕೇಳಿದ್ದೇವೆ, ನಮ್ಮ ಅಬಿಪ್ರಾಯವನ್ನು ವ್ಯಕ್ತಪಡಿಸುವ
ಸಂದರ್ಭದಲ್ಲಿ ಎಂದೂ ಮೌನವಾಗಿ ಇರುವುದು ತರವಲ್ಲ.
ಮಾತು ಮತ್ತು ಮೌನ ಎರಡೂ ಶ್ರೇಷ್ಠವೇ
ಒಟ್ಟಾರೆಯಾಗಿ ಮಾತು ಮತ್ತು ಮೌನ ಎರಡನ್ನೂ ಬಹಳ ಜತನದಿಂದ ನಿರ್ವಹಿಸಿದರೆ ಬದುಕು ಅತ್ಯಂತ ಸುಂದರ ಮತ್ತು ಸುಲಲಿತವಾಗಿ ಸಾಗುತ್ತದೆ. ಈ ರೀತಿ ಆದಾಗಷ್ಟೇ ನಮ್ಮ ಮಾತು ಮತ್ತು ಮೌನ ಇವೆರಡೂ ನಮ್ಮ ವ್ಯಕ್ತಿತ್ವಕ್ಕೆ ಅಂದವನ್ನು ತರುತ್ತದೆ. ಮಾತು ಮತ್ತು ಮೌನ ಇವೆರಡನ್ನು ಯಾವಾಗ ಮತ್ತು ಹೇಗೆ ಬಳಸಬೇಕು ಎನ್ನುವ ವಿವೇಚನೆ ಇದ್ದರೆ ಬದುಕು ಮತ್ತುಷ್ಟು ಸುಗಮವಾಗುತ್ತದೆ.
![](https://sahityamaithri.com/wp-content/uploads/2023/09/Santosh-New-1.jpg)
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160