ಕಾದಂಬರಿ : ಮಾಯೆ
ಲೇಖಕಿ : ಆಶಾ ರಘು
ಪ್ರಕಟಣೆ : ಸಾಹಿತ್ಯಲೋಕ ಪಬ್ಲಿಕೇಷನ್ಸ್
ಬೆಲೆ : 250/-
“ಆವರ್ತ” ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಐತಿಹಾಸಿಕ ಕಲ್ಪನೆಯ ಕೃತಿಗಳ ಮರು ಹುಟ್ಟನ್ನು ಕೊಟ್ಟ ಲೇಖಕಿ ಶ್ರೀಮತಿ “ಆಶಾ ರಘು” ರವರು ಮತ್ತೊಮ್ಮೆ ತಮ್ಮ ಕನಸಿನ ಕೃತಿಯಾದ “ಮಾಯೆ” ಎಂಬ ಕಾದಂಬರಿಯನ್ನು ರಚಿಸಿದ್ದಾರೆ.
ಕೃತಿಯು ಅಕ್ಟೋಬರ್ 2 ರಂದು ಬೆಂಗಳೂರಿನ ಗಾಂಧೀ ಸಾಹಿತ್ಯ ಸಂಘ ಸಭಾಂಗಣದಲ್ಲಿ (ಮಲ್ಲೇಶ್ವರಂ) ಲೋಕಾರ್ಪಣೆಯಾಗಲಿದೆ. ಕೃತಿಯನ್ನು ಖ್ಯಾತ ಜನಪ್ರಿಯ ಲೇಖಕರಾದ ಶ್ರೀ “ಗಣೇಶಯ್ಯ” ನವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕರ ಸಂಘದ ಅಧ್ಯಕ್ಷರಾದ ಶ್ರೀಮತಿ ವನಮಾಲಾ ಸಂಪನ್ನಕುಮಾರ್ ವಹಿಸಲಿದ್ದಾರೆ.
ತಮ್ಮ ಚೊಚ್ಚಲ ಕಾದಂಬರಿ “ಆವರ್ತ” ದಲ್ಲಿ ಚಕ್ರವರ್ತಿ “ಪ್ರತೀಪ” ನ ಏಳು ಬೀಳುಗಳನ್ನು ಹರಿಷಡ್ವರ್ಗಗಳ ಮೂಲಕ ಹೇಳುತ್ತಾ ಬರವಣಿಗೆಯ ಹೊಸ ಪ್ರಯೋಗದಲ್ಲಿ ಯಶಸ್ವಿಯಾದ ಶ್ರೀಮತಿ ಆಶಾ ರಘು ರವರು “ಗತ” ಕಾದಂಬರಿಯಲ್ಲಿ ಪುನರ್ಜನ್ಮದ ಕಲ್ಪನೆಯ ಮೂಲಕ ನಾಯಕಿಯ ಅಂತರಾಳವನ್ನು ಓದುಗರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದರು. “ಗತ” ಕಾದಂಬರಿಯನ್ನು ಮೆಚ್ಚಿದ ಶ್ರೀಯುತ ಎಸ್ ಎಲ್ ಭೈರಪ್ಪನವರು ಕೃತಿಯನ್ನು ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದ್ದರು.
“ಮಾಯೆ” ಕೃತಿಗೆ ಶ್ರೀಯುತ ಗಣೇಶಯ್ಯನವರು ತಮ್ಮ ಬೆನ್ನುಡಿಯನ್ನು ಬರೆದಿದ್ದು ಈ ಕೃತಿಯನ್ನು ಸಧಭಿರುಚಿ ಕೃತಿಗಳನ್ನು ಈವರೆಗೂ ಕನ್ನಡ ಓದುಗರಿಗೆ ನೀಡುತ್ತಾ ಬಂದಿರುವ “ಸಾಹಿತ್ಯಲೋಕ ಪಬ್ಲಿಕೇಷನ್ಸ್” ಅಂದವಾಗಿ ಮುದ್ರಿಸಿ ಹೊರತಂದಿದೆ.
ಈ ಕೃತಿಯನ್ನು ಓದುಗರು ಶ್ರೀ ರಘುವೀರ್ ರವರನ್ನು 9945939436 ಮೂಲಕ ಸಂಪರ್ಕಿಸಿ ತರಿಸಿಕೊಳ್ಳಬಹುದು.
ನಿಧಿ ಶೋಧನೆಯ ರೋಚಕ ಕಥಾ ಎಳೆಯಿಂದ ಚಾರಿತ್ರಿಕ ಹಿನ್ನಲೆ ಇರುವ “ಮಾಯೆ’ ಕೃತಿಯ ಆಯ್ದ ಭಾಗ ನಿಮಗಾಗಿ.
‘ನಿಮಗೆ ಬೇಕಾಗಿರೋ ನಿಧಿ ರಹಸ್ಯ ಅಡಗಿರೋ ಹಾಡು ನಂಗೆ ಗೊತ್ತದೆ’
‘ಏನು!? ನಿನಗೆ ಗೊತ್ತಿದೆಯಾ..!? ಹೆಂಗೆ?’
‘ಕೆಲ ದಿನಗಳ ಹಿಂದೆ, ನಮ್ಮತೆ ನನ್ನ ಹೆಂಡ್ರಿಗೆ ಯಾಳಿಕೊಡ್ತಾ ಇದ್ಲು.. ಆಗ ಕೇಳಿಸ್ಕೊಂಡು ಕಲ್ತುಕಂಡೆ’
‘ನಿನ್ನ ಹೆಂಡ್ತೀಗೆ ಯಾಕೆ ಹೇಳಿಕೊಡ್ತಾ ಇದ್ದಳು?’
‘ಇದೇನು ಹಿಂಗ್ ಕೇಳ್ತೀರ..? ವಂಶಪಾರಂಪರ್ಯವಾಗಿ ಆ ಹಾಡು ತಾಯಿಂದ ಮಗಳಿಗೆ, ಮಗಳಿಂದ ಅವಳ ಮಕ್ಕಳಿಗೆ ಹರಿದು ಬರಬೇಕಲ್ಲವ್ರ? ನಮ್ಮತ್ತೆ ತನಗೆ ಗೊತ್ತಿರೋ ರಾಜವಂಶಸ್ಥರಿಗೆ ಸೇರಿದ ಎಲ್ಲಾ ಹಾಡುಗಳನ್ನೂ ತನ್ನ ಮಗಳಿಗೆ ಕಲಿಸವ್ಳೆ. ಆ ಹಾಡುಗಳೆಲ್ಲಾ ನಮ್ಮ ಉಪ್ಪಾರಿ ಕೇರೀಲಿ ಬಹಳ ಜನಕ್ಕೆ ಬರ್ತದೆ. ಅವರಲ್ಲಿ ನಾನೂ ಒಬ್ಬ. ಆದ್ರೆ ಈ ನಿಧಿ ರಹಸ್ಯ ಅಡಗಿರೋ ಹಾಡು ಕೇವಲ ತನ್ನ ಮಗಳಿಗೆ ಮಾತ್ರ ಹೇಳಿಕೊಟ್ಟಿದಾಳೆ. ಅದೂ ಈಚೆಗೆ. ಏನೋ ನಿಧಿ ಗಿದಿ ಅಂತ ಮಾತಾಡ್ತಾ ಇದ್ದಿದ್ರಂದ ನಂಗೂ ಕುತೂಹಲ ಆಯ್ತು. ಗೋಡೆ ಮರೇಲಿ ಕುಂತ್ಕೊಂಡು ನಾನೂ ಕಲ್ತುಕೊಂಡೆ.’
ಅವನು ಹಾಡು ತನಗೂ ತಿಳಿದಿದೆ ಎಂದು ಹೇಳಿದ ಒಡನೆಯೇ ಹಾಡಿಸಿ ಕೇಳಿಬಿಡುವ ಉದ್ವಿಗ್ನತೆಯನ್ನು ತಡೆದುಕೊಂಡು ಅಥವಾ ತೋರಿಸಿಕೊಳ್ಳದೆ ಕೇಳಿದೆ, ‘ಜಕ್ಕಮ್ಮನಿಗೇಕು ಅಷ್ಟು ಚಿಕ್ಕ ವಯಸ್ಸಿನ ಮಗಳು..?’
‘ಓ ಅದಾ..? ನಮ್ಮತ್ತೇಗೆ ಮೊದಲನೆ ಗಂಡ., ಮೊದಲನೆ ಗಂಡನ ಮಗ ಇಬ್ಬರೂ ಯಾವುದೋ ಅಂಟುರೋಗ ತಗುಲಿ ವಾರದ ವ್ಯತ್ಯಾಸದಲ್ಲಿ ತೀರ್ಕೊಂಡುಬಿಟ್ಟರು.. ಆಮೇಲೆ ವಂಶ ಬೆಳೆಸೋಕೋಸ್ಕರ ನಡುವಯಸ್ಸಿನಲ್ಲಿ ಇನ್ನೊಂದು ಲಗ್ನ ಮಾಡ್ಕೊಂಡ್ಲು.. ಆ ಎರಡನೆ ಗಂಡನಿಗೆ ಹುಟ್ಟಿದ ಮಗಳೇ ಕೆಂಪಮ್ಮ.. ನನ್ನ ಹೆಂಡ್ರು..’
‘ಆ ಎರಡನೇ ಗಂಡ ಇನ್ನೂ ಇದಾನ?’
‘ಏ ಎಲ್ಲೀ..? ಅವನು ಸತ್ತು ಆಗ್ಲೇ ಎಂಟು ವರ್ಸ ಆತು..’
‘ನೀ ಹೇಗೆ ಸಂಬಂಧ ಜಕ್ಕಮ್ಮಂತೆ?’
‘ಹೇಳಿದ್ನಲ್ಲ..? ನಾನು ಜಕ್ಕಮ್ಮನ ಸೋದರಳಿಯ ಅಂತ..? ಸ್ವಂತ ತಮ್ಮನ ಮಗ’
‘ಸರಿ., ಈಗ ಆ ಹಾಡನ್ನ ಹಾಡು’
‘ಹಾಡಿದ್ರೆ ನಂಗೇನು ಕೊಡ್ತೀರ..?’
‘ಐದು ಗದ್ಯಾಣಕ ಕೊಡ್ತೀನಿ’
‘ಮೋಸ..’
‘ಯಾಕೆ?’
‘ನಮ್ಮ ಸೋದರತ್ತೆಗೆ ಹತ್ತು ಗದ್ಯಾಣಕ ಕೊಡ್ತೀನಿ ಅಂತ ಹೇಳ್ತಿದ್ರಿ?’
‘ಓ ಹಾಗಾ!? ಸರಿ., ನಿಂಗೂ ಅಷ್ಟೇ ಕೊಡ್ತೀನಿ. ಹಾಡು..’
‘ನಂಗೆ ಅದು ಸಾಲದು’
‘ಮತ್ತೆ!?’
ನಿಮ್ಗೆ ಸಿಗೋ ನಿಧೀಲಿ ಪಾಲು ಕೊಡ್ಬೇಕು’
‘ನಿಂಗ್ಯಾಕೆ ಕೊಡಬೇಕು? ನಿಧಿ ಪೂರ್ತಿಯಾಗಿ ನಂದು..! ನನ್ನ ಹಕ್ಕು..’
‘ಪೂರ್ತಿ ನಿಮ್ದಾಗಕ್ಕೆ ನೀವೇನು ನಿಜವಾದ ರಾಜಕುಮಾರಾನ? ಬಿಡಿ.. ಸ್ವಲ್ಪ ಬಿಟ್ಟು ಕೊಡಿ’
ನನಗೆ ಕೋಪ ಬಂತು. ಆದರೆ ಯಾವ ಮಾತಿನಲ್ಲೂ ಅದನ್ನು ಹೊರ ಹಾಕಲು ತೋಚಲಿಲ್ಲ. ಬರಿದು, ‘ಹುಂ.. ಹಾಡು..’ ಎಂದೆ.
‘ಬರಿ ‘ಹುಂ’ ಅನ್ನೋದಲ್ಲ., ನನ್ನನ್ನೂ ನಿನ್ನ ಜೊತೆ ಕರ್ಕೊಂಡು ಹೋಗಬೇಕು.. ನೋಡಿ, ಕೈಚೀಲದ ಸಮೇತ ಬಂದಿದೀನಿ’
‘ನೀನು ಕೈಚೀಲದ ಸಮೇತ ಬಂದುಬಿಟ್ಟರೆ ಕರಕೊಂಡು ಹೊರಟುಹೋಗೋಕ್ಕೆ ಆಗುತ್ತಾ..? ಸಾಹಸ ಪ್ರವೃತ್ತಿ ಇರಬೇಕು..!’
‘ನಂಗೇನು ಸಾಹಸ ಬುದ್ಧಿ ಇಲ್ಲ ಅಂದುಕೊಂಡಿರಾ? ನಾನು ಇದುವರೆಗೂ ಮಾಡಿರೋ ಸಾಹಸ ಕೆಲಸಗಳನ್ನ ಹಾಡಿನಲ್ಲಿ ಕಟ್ಟಿ ಹೇಳಬಹುದು ಬೇಕಾದರೆ!’
‘ಆಗಲಿ.. ನನ್ನ ಕರ್ಮ.. ಕರ್ಕೊಂಡು ಹೋಗ್ತೀನಿ. ನೀನು ನಿಧಿ ರಹಸ್ಯದ ಹಾಡನ್ನ ಹಾಡು..’
‘ಇದೇ ಮಾತಾ?’
‘ಹೂಂ.. ಇದೇ ಮಾತು..’
‘ಪ್ರಮಾಣವಾಗಲೂ..?’ ಎಂದು ಅಂಗೈ ಮುಂದೆ ಮಾಡಿದ.
‘ಹುಂ.. ಪ್ರಮಾಣವಾಗಲೂ’ ಎಂದು ನಾನು ಅವನ ಅಂಗೈ ಮುಟ್ಟಿದೆ.
‘ಸರಿ ಹಂಗಾರೆ., ನಾನು ಈಗ ಹಾಡ್ತೀನಿ..’ ಎಂದು ಗಂಟಲು ಸರಿಪಡಿಸಿಕೊಂಡ.
‘ನಂಜುಂಡಿ., ಸ್ವಲ್ಪ ಇರು.. ನಾನು ತಾಳೆಗರಿ, ಶಾಯಿ ತೊಗೋತೀನಿ’ ಎಂದೆ ನಾನು.
ಅವನು ಕಾದ. ನಾನು ಗಾಡಿಯಲ್ಲಿದ್ದ ನನ್ನ ಮೂಟೆಯಿಂದ ಬರೆದುಕೊಳ್ಳಲು ತಾಳೆಗರಿ ಮತ್ತೆ ಶಾಯಿ ಕೈಗೆ ತೊಗೊಂಡು ಒಂದೆಡೆ ಕುಳಿತ ಮೇಲೆ, ಹಾಡಲು ಶುರು ಮಾಡಿದ.
ದಿನ ದಿನಕ್ಕೆ ಕನ್ನಡ ಓದುಗರಿಗೆ ತಮ್ಮ ಕೃತಿಗಳ ಮೂಲಕ ಹತ್ತಿರವಾಗುತ್ತಿರುವ ಶ್ರೀಮತಿ ಆಶಾ ರಘು ರವರ “ಮಾಯೆ” ಕೃತಿಯು ಜನಪ್ರಿಯವಾಗಲಿ ಎಂದು ಸಾಹಿತ್ಯಮೈತ್ರಿ ತಂಡ ಹಾರೈಸುತ್ತದೆ.
ಸಾಹಿತ್ಯಮೈತ್ರಿ ತಂಡ