ಮಿತ್ರ ನಿನಗೊಂದು ಪತ್ರ!

ಮಿತ್ರ ನಿನಗೊಂದು ಪತ್ರ!

ಮಿತ್ರ
ಮತ್ತೊಮ್ಮೆ ಜಗವನಾಚ್ಛಾದಿಸಿದೆ
ಶತಮಾನದಿತಿಹಾಸ ಅಗೆದೆದ್ದಿದೆ
ಹೊಸ ಹೊಸ ಹೊದಿಕೆ ಹೊದ್ದ
ಕರೋನ ವೈರಸ್ ಕರಿ ಛಾಯೆ!

ಅಲ್ಲಿದೆ ಇಲ್ಲಿಲ್ಲ
ಇಲ್ಲಿದೆ ಅಲ್ಲಿಲ್ಲ
ಎಂದಲ್ಲವೇ ಅಲ್ಲ
ದೇಶದೇಶಗಳ ಮೂಲೆಮೂಲೆ
ಜಾಗರೂಕ ತಡಕಿದೆ
ಭೀಷಣ ಬಲಿ ಕೆಡವಿದೆ!
ಬರಿಗಣ್ಣಿಗೆ ನಿಷ್ಕಪಟ ಅಗೋಚರ
ಈ ಶಿಕಾರಿ ದೈತ್ಯಶಿಖರ!

ಯಾವಯಾವ ಘಳಿಗೆಗೆ
ಯಾರುಯಾರೋ ಎಷ್ಟೆಷ್ಟೋ
ಅರಿವಿರದ ಅಂಕೆ ಸಂಖ್ಯೆ!

ನಾ ನಿನ್ನ
ನೀ ನನ್ನ
ಎದಿರು ಬದಿರು ದೈಹಿಕ ಮತ್ತೊಮ್ಮೆ
ನಿಲ್ಲುವೆವೋ
ಅಥವ ಎಂದೆಂದೂ ಇಲ್ಲವೋ
ಹಾಗಾಗಿ ನಿನ್ನ ದಾಖಲೆಗೊಂದು
ಗುಂಡಿಗೆ ಹಿಂಡುವ
ಪದಪುಂಜ ಪತ್ರಧಾರೆ!

ಪ್ರಿಯ ಗೆಳೆಯ
ನೀ ಹೇಗಿರುವೆ
ಹಾಗೂ ನಿನ್ನೆದೆ ನಂಬಿದವರು
ನಂಬಿಕಸ್ತರು

ಈಗ ಪ್ರತಿಕ್ಷಣ
ಕ್ಷಣಕ್ಷಣ ಸಹ ಅತಿ ಪ್ರಮುಖ
ಪರಸ್ಪರ ವಿಚಾರವಿನಿಮಯ
ಹಾಗೂ ಇರವಿನ ಅರಿಯಲು
ಅಗತ್ಯ ಇರುವ
ಉದ್ವಿಗ್ನ ಸಮಯ!

ಯಾರೋ ಕಾಣದ
ಸಂಚಿನ ಹೊಂಚುಗಾರ
ಕಾಲಕೂಟ ಸುಂಟರಗಾಳಿ
ಊದಿಹನು
ಆ ವಿಷ ಆಪೋಷಿಸುವ
ಶಿವ ಈಗಿಲ್ಲ
ಗಂಟಲಲಿ ತಡೆಹಿಡಿವ
ಶಿವೆ ಮಾತೆ ಸಹ ಇಲ್ಲ

ಬಂದದ್ದೆಲ್ಲ ಬಂದೇ ಬರಲಿ
ಮಸಣದ ಹಾದಿ ಸದಾ ತೆರೆದಿರಲಿ!
ಎಂಥಾ ಹೇಯ ಘೋಷಣೆ!
ಆ ಲೋಕವೇನು ಖಾಲಿಖಾಲಿ
ಭಣಗುಡುತಿಹುದೋ
ಅಥವ ಇಲ್ಲಿ ಹೊರಲಾರದ
ಮನುಜ ಸಂಪತ್ತಿನ ಹೊರೆಯೋ!

ಪತ್ರಿಕಾ ಮೃತ್ಯು ಕಾಲಮ್ಮಿಗೀಗ
ಫೋಟೋ ರಾಶಾರಾಶಿ
ಬಿಡುವಿರದ ಅಚ್ಚು ಕಲಸ!

ಏನಾದರಿರಲಿ
ಎದೆ ಕೆಚ್ಚು ಕುಂದದಿರಲಿ
ನಮಗೆಲ್ಲ ನಾವು ನಾವೆ

ನನ್ನೆಲ್ಲ ಪ್ರಿಯರಲಿ ಬಿನ್ನಹ
ನಿಮ್ಮ ನಿಮ್ಮ ಸುಂದರ ಮುಖ
ಮುಚ್ಚಿ ಬದುಕಿ
ದೂರ ದೂರ ಇದ್ದು ಬದುಕಿ
ಒಳಗಿನ ನೆಮ್ಮದಿಯಲಿ ಬದುಕಿ
ಬದುಕಿದ್ದು
ಬದುಕ ಗೆದ್ದು
ಮತ್ತೆ ಹೊಸ ಬದುಕ ಬದುಕಿ!

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

2 Comments

  • ಕವನ ಚೆನ್ನಾಗಿದೆ. ಅಭಿನಂದನೆಗಳು

  • Very good poem Sir Thanks

Leave a Reply

Your email address will not be published. Required fields are marked *