ಸೀತೆ ಕಾಯುತ್ತಾಳೆ
ಅಶೋಕ ವನದಲ್ಲಿ
ಬಂದರು ಬರಬಹುದು
ರಾಮ
ಇಂದಲ್ಲ ನಾಳೆ
ಸಾಗರವ ದಾಟಿ
ಲಂಕೇಶನನ್ನು ನಿವಾರಿಸಿ
ಕರೆದೊಯ್ಯಲುಬಹುದು
ಬೆಂಕಿಗೆ ಬಿದ್ದರು
ಎದ್ದು ಬರಲು ಬಹುದು
ಸೀತೆಯರು ಕಾಯುತ್ತಾರೆ
ಮಿಥಿಲೆಯಲ್ಲಿ
ಆದರೆ
ರಾಮರು ಬರುವುದಿಲ್ಲ
ಸಂಪ್ರದಾಯಗಳ ದಾಟಿ
ಶಿವಧನುವ ಮುರಿದು
ಹೂ ಮಾಲೆಗೆ
ಗೋಣು ಚಾಚುವುದಿಲ್ಲ
ಹಾಗೊಮ್ಮೆ ಬಂದರು
ಶಿವಧನುವನೆತ್ತಿ
ಎದೆ ಏರಿಸುವುದು
ಬಲು ಕಷ್ಟ
ಧನುಸ್ಸು ಮುರಿದರೂ
ಬೆಂಕಿಗೆ ಬಿದ್ದು
ಎದ್ದು ಬರುವುದಸಾದ್ಯ
ಹಾಗಾಗಿ
ಮಿಥಿಲೆಯ ಸೀತೆಯರಿಗೆ
ಮಾಂಗಲ್ಯ ಯೋಗ
ಬಂಗಾರದ ಜಿಂಕೆಯ ಹಾಗೆ
ಮರೀಚಿಕೆ

ಡಿ. ಎನ್. ಸುರೇಶ್
ಹವ್ಯಾಸಿ ಪತ್ರಕರ್ತರು