ಮಿ. ಬೋಗೀಸ್ – ನಾಟಕ

ನಾಟಕ : ಮಿ. ಬೋಗೀಸ್
ತಂಡ : ರಂಗಾಯಣದ ಹಿರಿಯ ಕಲಾವಿದರು ಮೈಸೂರು.
ವಿನ್ಯಾಸ, ನಿರ್ದೇಶನ : ಹೆಚ್.ಕೆ. ದ್ವಾರಕಾನಾಥ್
ಅವಧಿ: ೧. ೪೦

ಮೌಲ್ಯ ಅಪಮೌಲ್ಯಗಳ ನಡುವೆ ಮಿಸ್ಟರ್ ಬೋಗೀಸ್!

ನಾಟಕದ ಕತೆಯೇ ವಿಭಿನ್ನ, ರಂಗವನ್ನು ದುಡಿಸಿಕೊಳ್ಳಲು ತಕ್ಕುದಾಗಿದೆ.

ತನ್ನ ಸ್ವಾರ್ಥಕ್ಕಾಗಿ ಮಾಡುವ ಕೆಲಸಗಳನ್ನು, ಅಗತ್ಯಕ್ಕೆ ತಕ್ಕಂತೆ ರೂಪಾಂತರ ಹೊಂದುವ ತತ್ವಗಳು, ಕಾರಣಗಳು ಮತ್ತು ಸಮರ್ಥನೆಗಳ ಮೂಲಕ, ಅದಕ್ಕೊಂದು ಅನಿವಾರ್ಯತೆಯನ್ನು ಆರೋಪಿಸುವುದು ಮನುಷ್ಯನ ಮೂಲ ಸ್ವಭಾವದಲ್ಲೇ ಇದೆ. ಅದನ್ನು ಇಲ್ಲಿ ಹೇಳಲಾಗಿದೆ.

ಹರಾಜು ಚಕ್ರವರ್ತಿ ಎಂಬ ಅನ್ವರ್ಥ ನಾಮವನ್ನು ಸಂಪಾದಿಸಿರುವ ಮಿಸ್ಟರ್ ಬೋಗೀಸ್ ಒಬ್ಬ ಪುರಾತನ ವಸ್ತುಗಳ ವ್ಯಾಪಾರಿ. ಬೇರೆಲ್ಲಾ ಹರಾಜುದಾರರೂ ಈರ್ಷ್ಯೆ ಪಡುವಷ್ಟು ಯಶಸ್ವಿ ವ್ಯಾಪಾರಿ. ಅವನ ಮಾತಲ್ಲೇ ಹೇಳುವುದಾದರೆ ‘ಮಾರುವವರನ್ನು ಮೂರ್ಖರನ್ನಾಗಿಸಿ ಚೌಕಾಸಿ ಮಾಡಿಕೊಳ್ಳುವುದು. ಕೊಳ್ಳುವವರನ್ನು ಮೂರ್ಖರನ್ನಾಗಿಸಿ ಚೌಕಾಸಿ ಮಾಡಿ ಮಾರುವುದು. ಮಾತೇ ಬಂಡವಾಳ. ಮಾರುವವರು ಹಾಗೂ ಕೊಳ್ಳುವವರು ಇಬ್ಬರೂ ಮೂರ್ಖರೇ’.

ಅವನ ತಾತ್ಪರ್ಯದಲ್ಲಿ ತನ್ನೊಬ್ಬನನ್ನು ಬಿಟ್ಟು ಮಿಕ್ಕವರೆಲ್ಲರೂ ಮೂರ್ಖರೇ!

ಇಷ್ಟು ಬುದ್ಧಿವಂತನಾದ ಮಿಸ್ಟರ್ ಬೋಗೀಸ್, ತನ್ನ ಜೀವಮಾನದ ಮೊದಲ ವ್ಯಾಪಾರಕ್ಕಾಗಿ ಮೂರ್ಖಳನ್ನಾಗಿ ಮಾಡುವುದು ಅವನ ಸ್ವಂತ ತಾಯಿಯನ್ನೇ!

ಬೋಗೀಸನಿಗೆ ಹಳೆಯ ಕಾಲದ ವಸ್ತುಗಳೆಲ್ಲಾ ಅಮೂಲ್ಯ, ಬೆಲೆ ಕಟ್ಟಲಾಗದಂತಹವು ಮತ್ತು ಹರಾಜಿಗೆ ತಕ್ಕುದಾದುವು. ವಸ್ತು ಹಳೆಯದಾದಷ್ಟೂ ಬೆಲೆ ಹೆಚ್ಚು. ಹಳೆಯ ಕಾಲದ ವಸ್ತುಗಳೆಂದರೆ ಬೇರೇನಲ್ಲ; ಕುರ್ಚಿ, ಮೇಜು, ಕಪಾಟು, ಕಿಟಕಿ, ಬಾಗಿಲು, ಮಂಚ ಮತ್ತು ಎಲ್ಲಾ ಥರದ ಮರದ ವಸ್ತುಗಳು ಹಾಗೂ ಇನ್ನಿತರೆ!
ಮಾನ, ಮರ್ಯಾದೆ, ನಾಚಿಕೆ, ಪ್ರೀತಿ, ಪ್ರೇಮ, ಸ್ನೇಹ, ಸಂಬಂಧ, ಮಾನವತೆ, ಅಂತಃಕರಣ. ಆತ್ಮ ಕೂಡ. ಎಲ್ಲಾ ಹರಾಜ್!

ವ್ಯವಹಾರದ ಅನುಭವದಿಂದ ಪಾಠ ಕಲಿತು, ಇದರ ಮರ್ಮ ಅರಿತು, ಲಾಭದ ಆಸೆಯನ್ನು ತಲೆಗೆ ತುಂಬಿ ಹೊಸ ಹೊಸ ತಂತ್ರಗಳನ್ನು ಉಪಯೋಗಿಸಿ ಮಿಸ್ಟರ್ ಬೋಗೀಸ್ ವ್ಯಾಪಾರದಲ್ಲಿ ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಏರಿದಂತೆಲ್ಲಾ ನೈತಿಕತೆಯಲ್ಲಿ ಒಂದೊಂದೇ ಮೆಟ್ಟಿಲನ್ನು ಇಳಿಯತೊಡಗುತ್ತಾನೆ.

ವ್ಯಾವಹಾರಿಕ ಚತುರತೆಯನ್ನೇ ಗುತ್ತಿಗೆಗೆ ತೆಗೆದುಕೊಂಡವನಂತೆ, ವ್ಯವಹಾರದಿಂದ ವ್ಯವಹಾರಕ್ಕೆ ಬುದ್ಧಿವಂತನಾಗುತ್ತಾ ಹೋಗುವ ಮಿಸ್ಟರ್ ಬೋಗೀಸ್ನ ಪಾತ್ರ! ವ್ಯಾಪಾರದ ತಂತ್ರಗಾರಿಕೆಯಲ್ಲಿ ಬುದ್ಧಿವಂತಿಕೆಯ ಎಲ್ಲೆ ಕಟ್ಟನ್ನು ಮೀರಿ ಅತೀ ಬುದ್ಧಿವಂತನಾಗಿ ಹೋಗುತ್ತಾನೆ ಹಾಗೂ ಅದರ ಫಲವನ್ನೂ ಕಣ್ಣಾರೆ ಕಂಡು ಅನುಭವಿಸುತ್ತಾನೆ.

ನಾಟಕದ ಕುರಿತು:

ರಂಗಸಜ್ಜಿಕೆಯೇ ನಾಟಕದ ವಿನ್ಯಾಸದ ಆಧಾರಸ್ತಂಭವಾಗಿ, ಹಂತದಿಂದ ಹಂತಕ್ಕೆ ರೂಪಾಂತರಗೊಳ್ಳುತ್ತ ಅಂತ್ಯದಲ್ಲಿ ಭಗ್ನಾವಶೇಷವಾಗುವುದು, ಪರಿಣಾಮಕಾರಿ ರೂಪಕವಾಗಿ ಮೂಡಿಬಂದಿದೆ. ನಿರ್ಜೀವ ವಸ್ತುಗಳನ್ನು ಅಮೂಲ್ಯವಾಗಿಸುವ ಕತೆಯಲ್ಲಿ, ನಿರ್ಜೀವ ರಂಗಸಜ್ಜಿಕೆ ತನ್ನ ರೂಪಾಂತರಗಳ ಮೂಲಕ ಸಜೀವಗೊಳ್ಳುವುದರಿಂದ, ಅದೇ ನಾಟಕದ ಮುಖ್ಯ ಪಾತ್ರಧಾರಿಯಾಗಿ ಅನ್ವಯವಾಗುವ ರೀತಿ ಅನನ್ಯ. ಇದಕ್ಕೆ ಮುಖ್ಯ ಕಾರಣ, ನಾಟಕದ ನಿರ್ದೇಶಕರಾದ ರಂಗಾಯಣದ ಖ್ಯಾತ ವಿನ್ಯಾಸಕಾರರಾದ ದ್ವಾರಕಾನಾಥ್ ಅವರು. ಕತೆಯನ್ನು ನಾಟಕವಾಗಿಸುವ ಕ್ರಿಯೆಯಲ್ಲಿ ಅದನ್ನು ಪರಿಭಾವಿಸಿರುವ ರೀತಿಯಲ್ಲಿ ವಿಶಿಷ್ಟತೆ ಅಡಗಿದೆ. ಸಂತೋಷ್ ಕೌಲಗಿಯವರು ಕನ್ನಡಕ್ಕೆ ಅನುವಾದಿಸಿರುವ ಕತೆಗೆ ದ್ವಾರಕಾನಾಥ್ ಅವರೇ ರಂಗರೂಪ ನೀಡಿದ್ದಾರೆ.

ಪ್ರತಿಯೊಂದು ಸನ್ನಿವೇಶಕ್ಕೂ ಒಂದೇ ರಂಗಸಜ್ಜಿಕೆಯ ವಿನ್ಯಾಸವನ್ನು ಬದಲಾಯಿಸಿ ಅನೇಕ ಧ್ವನ್ಯಾರ್ಥಗಳನ್ನು ಹೊರಡಿಸಿ, ಪಾತ್ರಧಾರಿಗಳು ತಮ್ಮ ಪಾತ್ರಗಳ ಸಂದರ್ಭಕ್ಕೆ ಮತ್ತು ಅಸ್ತಿತ್ವಕ್ಕೆ ಆಸರೆ ಪಡೆಯುತ್ತಾರೆ. ಆದರೆ ರಂಗಸಜ್ಜಿಕೆ, ನಾಟಕದ ಆರಂಭದಲ್ಲಿ ಒಂದೇ ಘಟಕವಾಗಿ ಕಂಡು ಬಂದು ‘ಅರ್ಥಪೂರ್ಣ’ವನ್ನು ಪ್ರತಿನಿಧಿಸುತ್ತದೆ. ಅಂತ್ಯದಲ್ಲಿ ವಿಘಟನೆಗೊಂಡು ಛಿದ್ರ ಛಿದ್ರವಾಗಿ ‘ಅರ್ಥವಿಹೀನ’ ಸ್ಥಿತಿಯನ್ನು ತಲುಪಿ, ಪಾತ್ರಗಳ ಅಸ್ತಿತ್ವಕ್ಕೆ ವೇದಿಕೆಯೇ ಇಲ್ಲದಂತಾಗುತ್ತದೆ.

ಈ ರಂಗಸಜ್ಜಿಕೆ, ಸಂಘಟನೆಯಿಂದ ಅಕ್ಷರಶಃ ವಿಘಟನೆಯೆಡೆಗೆ ರೂಪಾಂತರಗೊಳ್ಳುತ್ತಾ ಹೋಗುವ ಪ್ರಕ್ರಿಯೆಯು ಕತೆಯ ವಸ್ತು ಭಾಗವಾದ ಮೌಲ್ಯ ಅಪಮೌಲ್ಯಗಳ ಸಂಘರ್ಷದಲ್ಲಿ ನಾವು ನಿಜವಾಗಿಯೂ ಕಳೆದುಕೊಳ್ಳುವ ಅನೇಕ ಮೌಲಿಕ ಅಂಶಗಳನ್ನು ಪ್ರತಿನಿಧಿಸುತ್ತದೆ. ಅದರ ಆಸರೆ ತಪ್ಪಿದಾಗ ನಾವು ತಲುಪುವ ಅತಂತ್ರ ಸ್ಥಿತಿಯನ್ನೂ ಪ್ರತಿಧ್ವನಿಸುತ್ತದೆ. ನಾಟಕದ ಅಂತ್ಯದಲ್ಲಿ ಛಿದ್ರವಾಗುವುದರ ಮೂಲಕ ತನ್ನ ಮೌಲ್ಯವನ್ನು ಕಳೆದುಕೊಂಡ ಪುರಾತನ ಮರದ ವಸ್ತುವಿನ ಬಿಡಿ ಭಾಗಗಳನ್ನು ಪ್ರೇಕ್ಷಕರೆಡೆಗೆ ಎತ್ತಿ ಹಿಡಿದಾಗ, ಅವುಗಳನ್ನು ಮತ್ತೆ ಹರಾಜಿಗೆ ಕೂಗಿದಂತೆ ಭಾಸವಾಗುತ್ತದೆ.

ಕತೆಯಲ್ಲಿ ಬರುವ ಮುಖ್ಯ ಪಾತ್ರ ಬೋಗೀಸ್ ಇಬ್ಬರು ನಟರ ಮೂಲಕ ಅಭಿವ್ಯಕ್ತಿಗೊಂಡು, ಅಂತರಂಗ ಬಹಿರಂಗವಾಗಿ ಅನಾವರಣಗೊಳ್ಳುತ್ತಾನೆ. ನಾಟಕದ ಅನುಷ್ಠಾನದ ದೃಷ್ಟಿಯಿಂದ ಈ ತಂತ್ರಗಾರಿಕೆ ಹಲವಾರು ಸನ್ನಿವೇಶಗಳಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಿದೆ. ಇದಕ್ಕೊಂದು ಉದಾಹರಣೆ ಹೇಳಬಹುದಾದರೆ, ಬೋಗೀಸನ ಬಹಿರಂಗ, ಮನೆ ಯಜಮಾನರೊಡನೆ ಮಾತನಾಡುವಾಗ, ಅವನ ಅಂತರಂಗ ಆ ಮನೆಯ ಒಳಗೆಲ್ಲಾ ಸಂಚರಿಸಿ ಅಲ್ಲಿನ ವಿವಿಧ ವಸ್ತುಗಳನ್ನು ಅವಲೋಕಿಸುತ್ತಾ, ಯಾವುದಾದರೂ ಪುರಾತನ ಮರದ ವಸ್ತು ಸಿಕ್ಕಿದರೆ, ವ್ಯಾಪಾರ ಕುದುರಿಸಲು ಬೇಕಾಗುವ ಮಾರ್ಗೋಪಾಯವನ್ನು ಕಂಡುಕೊಳ್ಳುತ್ತದೆ. ಏಕಕಾಲದಲ್ಲಿ ನಡೆಯುವ ಈ ಕ್ರಿಯೆ ಇಬ್ಬರು ಪಾತ್ರಧಾರಿಗಳನ್ನು ಬಳಸುವುದರ ಮೂಲಕ ಸಮರ್ಥವಾಗಿ ವಸ್ತು ವಿಷಯ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ಮುಟ್ಟುವಂತೆ ನೋಡಿಕೊಳ್ಳಲಾಗಿದೆ.

ರಂಗಾಯಣದ ಹಿರಿಯ ಕಲಾವಿದರ ಅಭಿನಯ ಸಾಮರ್ಥ್ಯಕ್ಕೊಂದು ತಕ್ಕ ಕತೆ. ಪಾತ್ರಗಳು, ವಿನ್ಯಾಸ ಮತ್ತು ನಿರ್ದೇಶನ ಹಾಗೂ ಮಿಕ್ಕೆಲ್ಲಾ ವಿಭಾಗಗಳ ಸಂಯೋಗ ಒಟ್ಟಿಗೆ ಒದಗಿ ಬಂದು ಅವರೆಲ್ಲರ ಪರಿಶ್ರಮದ ಮೂಲಕ ಅದ್ಭುತ ರಂಗರೂಪಕವಾಗಿ ಮೂಡಿಬಂದಿದೆ.

ನಾಟಕದ ಮೂಲಕ ಕತೆಯನ್ನು ಹೇಳುವಾಗ, ರಂಗಪ್ರಸ್ತುತಿಯಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಪ್ರಯತ್ನಿಸುವ ಹಾಗೂ ನಾಟಕರಂಗದಲ್ಲಿ ಬಳಕೆಯಲ್ಲಿರುವ ರಂಗಪರಿಕರವಾದ ಅಮೂರ್ತ ವ್ಯಕ್ತೀಕರಣವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಾಟಕಗಳ ಪಟ್ಟಿಗೆ ಮಿಸ್ಟರ್ ಬೋಗೀಸ್ ನಾಟಕವೂ ಸೇರ್ಪಡೆಯಾಗುತ್ತದೆ.

  • ಅರುಣ್, ಮೈಸೂರು.

Related post

Leave a Reply

Your email address will not be published. Required fields are marked *