ಮುಂಗುಸಿಗಳು

ಮುಂಗುಸಿಗಳು

ಮುಂಗುಸಿಗಳು ಮೊನಚಾದ ಮೂಗುಗಳುಳ್ಳ, ಸಣ್ಣ ಕಿವಿಗಳು ಮತ್ತು ಉದ್ದವಾದ ತುಪ್ಪುಳದಂತಿರುವ ಬಾಲವನ್ನು ಹೊಂದಿರುವ ಪ್ರಾಣಿ. ಮುಂಗುಸಿಗಳನ್ನು ಮೊದಲು (Civet) ಸಿವೆಟ್ ಗಳ ವಿವಿರಿಡೀ ಕುಟುಂಬಕ್ಕೆ ಸೇರಿಸಲಾಗಿತ್ತು. ಆದರೆ ಅವುಗಳ ವಿಭಿನ್ನ ಅಂಗರಚನೆ ಮತ್ತು ಇನ್ನುಳಿದ ಲಕ್ಷಣಗಳಿಂದ ಹರ್ಪೆಸ್ಟಿಡೆ – Herpestidae ಕುಟುಂಬಕ್ಕೆ ಸೇರಿಸಲಾಗಿದೆ. ಅರ್ಧ ವರ್ತುಳದ ಚಿಕ್ಕ ಕಿವಿಗಳು, ಉದ್ದವಾದ ಬೆರಳು ಹಾಗು ಉಗುರುಗಳಿರುವ ಗಿಡ್ಡ ಕಾಲು ಮೊನಚು ಮುಸುಡಿ ಇವುಗಳ ಲಕ್ಷಣಗಳಾಗಿವೆ.

Stripe necked Mongoose

ಮಾಂಸಹಾರಿಗಳಾದರೂ ಕೆಲವು ಸಲ ಹಣ್ಣು ಹಂಪಲನ್ನು ತಿನ್ನುತ್ತವೆ. ಹೆಚ್ಚಿನವರು ಮುಂಗುಸಿಗಳು ಮರ ಏರುವುದಿಲ್ಲ ಎಂದೇ ತಿಳಿದಿದ್ದಾರೆ ಆದರೆ ನಮ್ಮಲ್ಲಿರುವ ಬೂದು ಬಣ್ಣದ (Grey Mongoose) ಮುಂಗುಸಿ ಅಪರೂಪವಾಗಿ ಮರ ಏರಿದ ದಾಖಲೆಗಳಿವೆ.
ನಮ್ಮ ದೇಶದಲ್ಲಿ 6 ಜಾತಿಗಳಿದ್ದರೆ ನಮ್ಮ ರಾಜ್ಯದಲ್ಲಿಯೇ 4 ಜಾತಿಯ ಮುಂಗುಸಿಗಳನ್ನು ನೋಡಬಹುದು.

ನಮ್ಮಲ್ಲಿ ಕಂಡುಬರುವ ನಾಲ್ಕು ಮುಂಗುಸಿ ಜಾತಿಗಳಲ್ಲಿ 3 ಅರಣ್ಯ ಬೆಟ್ಟಗುಡ್ಡಗಳ ವಾಸಿಯಾದರೆ, ಕಾಮನ್ ಅಥವಾ ಗ್ರೇ ಮುಂಗುಸಿ ಅಥವಾ ಬೂದು ಮುಂಗುಸಿ ಕಾಡು ಹೊಲ ಗದ್ದೆ ಜನವಸತಿ ಅಕ್ಕ ಪಕ್ಕದಲ್ಲೇ ವಾಸಿಸುತ್ತದೆ. ಇಲಿ ಹೆಗ್ಗಣ ಕಪ್ಪೆ ಹಕ್ಕಿಗಳನ್ನು ಬೇಟೆಯಾಡುವುದಲ್ಲದೆ ಸಾಕಿದ ಕೋಳಿಗಳನ್ನು ಎತ್ತುತ್ತವೆ. ಇದು ನಾಗರ ಹಾವನ್ನು ಎದುರಿಸಿ ಕೊಲ್ಲಬಲ್ಲದು.

ನಾಗರಹಾವಿನ ವಿಷವು ಮುಂಗುಸಿಯ ಪ್ರಾಣಕ್ಕೆ ಅಪಾಯಕಾರಿಯಲ್ಲ ಎಂಬ ನಂಬಿಕೆಯಿದೆ ಆದರೆ ವಾಸ್ತವದಲ್ಲಿ ನಾಗರಹಾವಿನೊಂದಿಗೆ ಬಹಳ ನಾಜೂಕಾಗಿ ಹೋರಾಡುವ ಇದು ಅಲ್ಪ ಸ್ವಲ್ಪ ವಿಷ ನಾಟಿದರೆ ಮಾತ್ರ ತಡೆಯುವ ಶಕ್ತಿ ಹೊಂದಿದೆ, ಹೆಚ್ಚಿನ ವಿಷ ಮುಂಗುಸಿ ದೇಹಕ್ಕೆ ಸೇರಿದರೆ ಅವಕ್ಕೂ ಸಾವು ಖಚಿತ. ಮುಂಗುಸಿ, ಹಾವಿನ ವಿಷವನ್ನು ತಟಸ್ಥಗೊಳಿಸಲು ಯಾವುದೋ ಕಡ್ಡಿಯನ್ನು ತಿನ್ನುತ್ತದೆ ಎಂಬ ಮೂಢನಂಬಿಕೆ ನಮ್ಮಲ್ಲಿ ಇದೆ.

ಇನ್ನು Brown Mongoose, Ruddy Mongoose ಕಾಡಿನ ವಾಸಿಗಳಾದರೆ Stripe necked Mongoose ಕೂಡ ಕಾಡಿನ ವಾಸಿಯಾಗಿದ್ದು ಪಶ್ಚಿಮ ಘಟ್ಟಗಳ ದಟ್ಟ ಕಾಡು ಮತ್ತು ಎಲೆಯುದುರುವ ಕಾಡುಗಳಲ್ಲಿ ಕಂಡುಬರುವ ಇದು ಮೊಲ, ಬರ್ಕ,ಏಡಿ, ಬಸವನ ಹುಳುಗಳನ್ನು ಬೇಟೆಯಾಡುತ್ತದೆ. ಈ Stripe necked Mongoose ಏಷಿಯಾದ ದೊಡ್ಡ ಮುಂಗುಸಿಯಾಗಿದೆ.

ನಾಗರಾಜ್ ಬೆಳ್ಳೂರ್
ನಿಸರ್ಗ ಕನ್ಸರ್ವೇಷನ್ ಟ್ರಸ್ಟ್

Related post

Leave a Reply

Your email address will not be published. Required fields are marked *