ಮುಗ್ಧ ನಗುವಿನ ಸೆಲೆ
ಮಗುವು ನಗುವ ನಿಷ್ಕಲ್ಮಶ
ನಗುವಿಗೆ ಬೇರೆ ಸಾಟಿ ಎಲ್ಲಿದೆ!
ಕಗ್ಗಂಟಿನಲಿ ನಿತ್ಯ ಸಾಗುವ..
ಬಾಳಿನ ಸಂತಸವೇ ಅದರಲಿದೆ!!
ಮನದಲಿಣುಕಿ ನೋಡುವ
ನೋವುಗಳು ನಿತ್ಯ ನೂರಿದೆ!
ಎಲ್ಲ ಸಂಕಟವ ಮರೆಸುವ..
ಮನವ ನಗಿಸುವ ಶಕ್ತಿ ಅದರಲಡಗಿದೆ!!
ಕಿಲಕಿಲ ನಗುವಿನ ಕಂದನ
ಮುಗ್ಧತೆಯಲಿ ಸುಳಿಮಿಂಚಿದೆ!
ಆ ಮಿಂಚಿನ ನಗುವ ಬೆಳಕಲಿ..
ತಾಯ್ತಂದೆಯರ ಸಂತಸವು ಅರಳಿದೆ!!
ಜಗದ ಆಗುಹೋಗುಗಳರಿವಿರದ
ಮೊಗದಿ ಸ್ಪಟಿಕದ ತಿಳಿನಗುವಿದೆ!
ಮುಗ್ಧತೆಯಲಿ ನಲಿವ ಮಗುವಿನ..
ಸಿಹಿನಗುವಲಿ ಸವಿ ಜೇನಿದೆ!!
ಸುಮನಾ ರಮಾನಂದ