ಚಿಕ್ಕವರಿದ್ದಾಗ ಮಧ್ಯೆ ಬೈತಲೆ ತೆಗೆದು
ಬಿಗಿಯಾಗಿ ಎರಡು ಜಡೆ ಹೆಣೆದು
ನಮ್ಮಜ್ಜಿ ಮುದ್ದು ಗೌರಿ ಅಂದು
ನೆಟ್ಟಿಗೆ ತೆಗೆದಾಗ, ಬಿಟ್ಟರೆ
ಗೌರಿಗೂ ನಮ್ಮಜ್ಜಿ ಹೀಗೆ ಬಿಗಿಯಾಗಿ
ಜಡೆ ಹೆಣೀತಾರೆ ಅನ್ನಿಸೋದು
ಅಜ್ಜಿ, ಅಮ್ಮ , ಸೋದರತ್ತೆ ಒಟ್ನಲ್ಲಿ
ಮನೆಯ ಹೆಂಗಸೆರೆಲ್ಲಾ ಪೈಪೋಟಿ
ಮೇಲೆ ಮೊಗ್ಗಿನ ಜಡೆ ಹಾಕಿ, ಅಲಂಕರಿಸಿ
ಆಹಾ! ಒಳ್ಳೆ ಮುದ್ದು ಗೌರಿ ಕಂಡಂಗೆ
ಕಾಣ್ತಾಳೆ ಅಂತ ಕೊಂಡಾಡುವಾಗ
ಗೌರಿ ಯಾವಾಗಲೂ ಜಡೆ ಹಾಕ್ಕೋತಾಳಾ?
ತಲೆಯಲ್ಲೊಂದು ಪ್ರಶ್ನೆ ಮೂಡುತ್ತಿತ್ತು
ಪರೀಕ್ಷಿಸಲು ನೋಡಿದ ಎಲ್ಲಾ ಗೌರಿಯರು
ಒಂದೋ ಕೂದಲು ಬಿಟ್ಟಿರ್ತಾರೆ
ಇಲ್ಲವೇ ಸಡಿಲವಾಗಿ ಜಡೆ ಹೆಣೆದು
ತಲೆತುಂಬಾ ಹೂ ಮುಡಿದಿರ್ತಾರೆ
ಬಾಲ್ಯದಲ್ಲಿ ಗೌರಿ ಎಂದರೆ ಸುಂದರಿ
ಶಿವನ ಇಬ್ಬರು ಹೆಂಡತಿಯರಲ್ಲಿ ಒಬ್ಬಾಕೆ
ಬುದ್ಧಿವಂತ ಸುಬ್ರಹ್ಮಣ್ಯನ ತಾಯಿ
ಮುದ್ದು ಗಣೇಶನ ಅಮ್ಮ ಹೀಗೆ…..
ಹರೆಯಕ್ಕೆ ಬಂದಮೇಲೆ ಚಿತ್ರ ಬೇರೆಯೇ ಆಯ್ತು
ಯಾಕೋ ಗೌರಿ ಅಬಲೆ
ಅನಿಸೋಕೆ ಶುರುವಾಯ್ತು
ಗಂಡನಿಗೆ, ಅಪ್ಪ ಮರ್ಯಾದೆ
ಕೊಡಲಿಲ್ಲ ಅಂತ ಸಾಯಬೇಕಿತ್ತಾ….
ಇಷ್ಟು ದಿನ ಮುದ್ದು ಗೌರಿ ಆಗಿದ್ದವಳು
ಈಗ ನಮ್ಮ ದೃಷ್ಟಿಯಲ್ಲಿ ಮೊದ್ದು ಗೌರಿ
ಗೌರಿ, ಗೌರಮ್ಮ ಆಗಿದ್ದಳು
ಸ್ನೇಹಿತರ ಅಣಕಕ್ಕೂ ಅವಳ ಹೆಸರು ಸಾಕು
ಏನು ಒಳ್ಳೇ ಗೌರಮ್ಮ ಆಡಿದ ಹಾಗೆ ಆಡ್ತೀಯ…..
ಈಗ ಮಧ್ಯ ವಯಸ್ಸು
‘ಗಂಗೆಗೇನು ಗೊತ್ತು ಗೌರಿಯ ಕಷ್ಟ’
ಎಂದೋ ಕೇಳಿದ ಈ ಮಾತು
ಈಗೀಗ ಸ್ವಲ್ಪ ಅರ್ಥ ಆಗುತ್ತೆ
ಶಿವನ ಅರ್ಧಾಂಗಿ
ಜಗದ ಲಯಕಾರನ ಪ್ರಿಯ ಮಡದಿ
ಜವಾಬ್ದಾರಿಗಳು ಕಡಿಮೇನಾ
ಗಂಡನ ತಪ್ಪು ಒಪ್ಪುಗಳನ್ನು
ಮಕ್ಕಳ ತರಲೆ ತಾಪತ್ರಯಗಳನ್ನೂ
ನಿಭಾಯಿಸಿ ಮಧ್ಯದಲ್ಲಿ ಆಗಾಗ
ರಾಕ್ಷಸರ ಸಂಹಾರ ಬೇರೆ
ಒಮ್ಮೆ ಚಂಡಿಯಾದರೆ
ಮಗದೊಮ್ಮೆ ಚಾಮುಂಡಿ
ಒಬ್ಬರ ಕಣ್ಣಿಗೆ ಅವಳು ಗೌರಮ್ಮ ಮಾತ್ರ
ಇನ್ನೊಬ್ಬರ ಕಣ್ಣಿಗೆ ಅವಳು ಭದ್ರಕಾಳಿ
ನಮ್ಮ ದೇವ ದೇವತೆಯರೇ ಹಾಗಲ್ಲವೇ
ನಮ್ಮ ನಮ್ಮ ಯೋಗ್ಯತೆಗೆ ತಕ್ಕಷ್ಟೇ ದಕ್ಕುತ್ತಾರೆ
ನಮ್ಮ ನಮ್ಮ ಭಾವಕ್ಕೆ ತಕ್ಕಷ್ಟು ನಿಲುಕುತ್ತಾರೆ
ಸೌಜನ್ಯ ದತ್ತರಾಜ