ಮುನಿಯಾ – ರಾಟವಾಳಗಳು

ಬೆಳಗಿನ ಆರು ಗಂಟೆಯ ಸಮಯದಲ್ಲಿ ಊರಿನ ತುಸುವೇ ಆಚೆ ಕುರುಚಲು ಪ್ರದೇಶಕ್ಕೆ ಬಂದರೆ, ಅಲ್ಲಿನ ಪೊದೆಯ ಭಾಗಗಳು ಕುಣಿಯುತ್ತಿರುವಂತೆ ಕಾಣುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ, ಅಲ್ಲಿ ಕುಣಿಯುತ್ತಿರುವಂತೆ ಕಾಣುತ್ತಿರುವುದು ನಮ್ಮ ಮುನಿಯ ಹಕ್ಕಿಗಳ  ಹಾರಾಟ ಎಂಬುದು.  ಇವುಗಳ ಹಾರಾಟ ಅಲೆಅಲೆಯಾಗಿದ್ದು, ವೇಗಭರಿತವಾಗಿದ್ದು ಸುರುಳಿಯಾಕಾರದಲ್ಲಿರುತ್ತದೆ. ಬೆಳಗಿನ ಹೊತ್ತು ಇವನ್ನು ನೋಡುವುದು ಒಂದು ಚೇತೋಹಾರಿ ಅನುಭವ.

ಮುಖ್ಯವಾಗಿ ಕಾಳುಗಳನ್ನು ತಿನ್ನಲು ವಿಕಾಸವಾಗಿರುವ ಕೊಕ್ಕುಗಳಿರುವ ಹಕ್ಕಿಗಳದ್ದೇ ಒಂದು ಅಧ್ಯಾಯ, ವಿಕಾಶವಾದದಲ್ಲಿ. ಮುನಿಯ, ಫಿಂಚ್‍ಗಳು, ವ್ಯಾಕ್ಸ್‍ಬಿಲ್‍ ಇತ್ಯಾದಿ ಹಕ್ಕಿಗಳು ಕುತೂಹಲಕಾರಿ ಹಕ್ಕಿಗಳು.  ಅದರಲ್ಲಿಯೂ ಫಿಂಚ್‍ ಹಕ್ಕಿಯ ಕೊಕ್ಕಂತೂ ಕಾಳುಗಳು ಹೆಚ್ಚು ಗಟ್ಟಿಯಾಗುವ ಬರಗಾಲದ ವರ್ಷಗಳಲ್ಲಿ ಹೆಚ್ಚು ಆಳವಾಗುತ್ತದೆ. ಹಾಗೆಯೇ, ಮುನಿಯಾಗಳಲ್ಲಿ ಉಪಪ್ರಭೇದಗಳೂ ಹೆಚ್ಚು. ಚುಕ್ಕೆ ಮುನಿಯಾಗಳಲ್ಲೇ ಹನ್ನೊಂದು ಉಪಪ್ರಭೇದಗಳಿವೆ. ಇರಲಿ, ಇನ್ನೂ ಹೆಚ್ಚಿನ ವಿವರಗಳು ಬರೆಹವನ್ನು ತಾಂತ್ರಿಕವಾಗಿಸಿಬಿಡುತ್ತದೆ. ಒಟ್ಟಾರೆ, ಪ್ರತಿ ಜೀವಿಗಳೂ ಮುಖ್ಯವಾದರೂ ಮುನಿಯಾಗಳು ವಿಕಾಸದ ದೃಷ್ಟಿಯಿಂದಲೂ ಗಂಭೀರವಾಗಿ ನೋಡಬೇಕಾದ ಒಂದು ಪ್ರಭೇದ ಎಂಬುದು ಮುಖ್ಯ.

ಬೀಜಗಳು, ಕಾಳುಗಳು ಮುನಿಯಾಗಳ ಅತಿಮುಖ್ಯವಾದ ಆಹಾರ. ಕೀಟಗಳನ್ನು ತಿನ್ನುವುದೂ ಉಂಟು. ಕೆಲವು ಪ್ರೊಟೀನುಗಳ ಅವಶ್ಯಕತೆಗಾಗಿ ಪಾಚಿಯನ್ನು ತಿನ್ನುತ್ತವೆ. ಮುನಿಯಾಗಳ ಕೊಕ್ಕು ತ್ರಿಬುಜಾಕೃತಿಯಲ್ಲಿರುತ್ತದೆ. (ಚಿತ್ರ ನೋಡಿ).

ಕರ್ನಾಟಕದಲ್ಲಿ ಐದು ಬಗೆಯ ಮುನಿಯಾಗಳು ಕಂಡುಬರುತ್ತವೆ  ಬಿಳಿ ಗಂಟಲಿನ ಮುನಿಯಾ (Indian Silverbill (White-throated Munia) Euodice malabarica), ಬಿಳಿಪೃಷ್ಠದ ಮುನಿಯಾ (White-rumped Munia Lonchura striata), ಕರಿಕತ್ತಿನ ಮುನಿಯಾ (Black-throated Munia Lonchura kelaarti), ಚುಕ್ಕೆ ಮುನಿಯಾ (Scaly-breasted Munia (Spotted Munia) Lonchura punctulata), ಮೂರುಬಣ್ಣದ ಮುನಿಯಾ (Tricolored Munia (Black-headed Munia) Lonchura malacca). ಇದರೊಟ್ಟಿಗೆ ಕೆಂಪು ಮುನಿಯಾ ಇದೆ (Red Avadavat Amandava amandava). ಮುನಿಯಾಗೆ ರಾಟವಾಳ ಎಂಬ ಹೆಸರು ಕೆಲವೆಡೆ ಇದೆ. ದಕ್ಷಿಣ ಏಷ್ಯಾದಲ್ಲಿ ಎಂಟು ಸಾಮಾನ್ಯವಾಗಿ ಕಂಡುಬರುವ ಪ್ರಭೇದಗಳಿವೆ. ಒಂದು ಹೊರಗಿನಿಂದ ಪರಿಚಯಿಸಿದ್ದು. ಜಗತ್ತಿನಾದ್ಯಂತ ಸುಮಾರು 140 ಬಗೆಯ ಮುನಿಯಾಗಳಿವೆ.

ಇವು ನಿಮ್ಮ ಮನೆಯಂಗಳಕ್ಕೂ ಬರಬೇಕೆ? ಒಂದಷ್ಟು ಗಿಡ ನೆಡಿ. ಇಷ್ಟು ಸಾಕೆ? ಖಂಡಿತಾ ಸಾಲದು! ಅದಕ್ಕೆ ಯಾವ ಗೊಬ್ಬರ ರಾಸಾಯನಿಕವನ್ನೂ ಹಾಕಬೇಡಿ. ತಾನಾಗೆ ಬೆಳೆದುಕೊದುಕೊಳ್ಳುವ ಹಲ್ಲು ಇತ್ಯಾದಿ ನಾವೇನು ಕಳೆಗಿಡ ಎಂದು ಕರೆಯುತ್ತೇವೆಯೋ ಅವನ್ನು ಕೀಳ ಬೇಡಿ. ಕಾಯಿರಿ. ಮುನಿಯಾ ತಾನಾಗೆ ಬರುತ್ತದೆ.

ಸುಲಭವಾಗಿ ಕಾಣಸಿಗುವ, ವಿಜ್ಞಾನದಲ್ಲಿ ಒಂದು ವಿಶೇಷ ಸ್ಥಾನವಿರುವ ಈ ಹಕ್ಕಿಯನ್ನು ನೋಡಿ, ಕಂಡಾಗ ನಮಗೆ kalgundi.naveen@yahoo.com ಗೆ ಬರೆದು ತಿಳಿಸಿ.

  • ಕಲ್ಗುಂಡಿ ನವೀನ್
  • ಚಿತ್ರಗಳು ಶ್ರೀ ಜಿ ಎಸ್ ಶ್ರೀನಾಥ

Related post