ಮುನಿಸೇಕೆ

ಮುನಿಸೇಕೆ

ಮೊದಲಿರುಳ ಆರತಿಯ
ಹಸಿಯಿನ್ನು ಆರಿಲ್ಲ
ನಿಮಗೆ ಮುನಿಸೇಕೆಂದು
ನನಗೆ ಅರಿವಾಗದು!

ಕಟ್ಟಿದಾ ಕಂಕಣದ
ಗಂಟಿನ್ನೂ ಬಿಚ್ಚಿಲ್ಲ
ಚಪ್ಪರದ ಹೂವುಗಳ
ಘಮವು ಮಾಸಿಲ್ಲ;

ಹೊರಗೆ ಹೋಗೋಣವೇ?
ಎಂದು ಕೇಳಿದ ನಿಮಗೆ
ನಾ ಬೇಡವೆಂದುದಕೆ
ನೊಂದಿರುವಿರೇ?

ಅಳಿಯನಾ ಮಾತನ್ನು
ಮಾವನೊಪ್ಪದೆ ಇಹರೆ,
ಒಪ್ಪಿಸುವೆ ಅಪ್ಪನನು
ಮುನಿಯದಿರಿ ನೀವು;

ತಮ್ಮ-ತಂಗಿಯರಿನ್ನು
ನಿಮ್ಮ ಕಾಡುವುದಿಲ್ಲ,
ನಾ ಬರುವೆ ನಿಮ್ಮೊಡನೆ
ಗೊಡವೆ ಬೇಡಿನ್ನು;

ನನ್ನ ಗೆಳತಿಯರೆಲ್ಲ
ನನ್ನಂತೆ ಅತಿಸಾಧು,
ಕೊಂಕು ಮಾತುಗಳನ್ನು
ಆಡರವರೆಂದೂ ;

ನನ್ನ ಅಮ್ಮನ ಕಂಡು
ನೀವೊಮ್ಮೆ ಹೇಳಿಬಿಡಿ,
ಅವಳೊಪ್ಪಿದರೆ ಸಾಕು
ಬರುವೆ ನಿಮ್ಮೊಡನೆ!!

ಶ್ರೀವಲ್ಲಿ ಮಂಜುನಾಥ
ಬೆಂಗಳೂರು

Related post

Leave a Reply

Your email address will not be published. Required fields are marked *