ಮುಸ್ಸಂಜೆಯ ನೋಟ
ಅಂದದ ವರ್ಷಧಾರೆ ಬರುತಿದೆ
ಚೆಂದದ ಈ ಮುಸ್ಸಂಜೆಯಲಿ!
ನೊಂದ ಬುವಿಯದನಪ್ಪಿ..
ಮಿಂದಂತಿದೆ ಮಣ್ಣ ಘಮಲಿನಲಿ!!
ಬಂಗಾರ ಬಣ್ಣದ ಬೆಳಕಿಂದ
ರಂಗಾಗಿದೆ ಧರೆ ಹಸಿರಿನಲಿ!
ಹಿಂಗಾರಿನ ಮುಸಲಧಾರೆಯ..
ಗುಂಗಿನಲಿದೆ ಇಳೆ ಹರುಷದಲಿ!!
ತೆಂಗಿನ ಗರಿಗಳ ಓಲಾಟದಿ
ರಂಗಿನ ಚಿತ್ತಾರ ಗಗನದಲಿ!
ಭೃಂಗವದು ಹೂವನ್ನು ಕಾಡುವಂತೆ..
ತಂಗಾಳಿ ತೀಡಿದೆ ಸಂಜೆಯಲಿ!!
ಬೆರಗಿನ ಚಟಪಟ ಮಳೆಹನಿಯು
ಮೆರುಗಿನಿಂದಾಗಮಿಸಿ ಅವನಿಯಲಿ!
ಮೂಡಿಸಿ ಚಿತ್ತಾರವನಾಗಸದಿ..
ಸೊಬಗು ತಂದಿದೆ ಬೈಗಿನಲಿ!!
ಸುಮನಾ ರಮಾನಂದ