ಮುಸ್ಸಂಜೆಯ ಸೊಬಗಲಿ..
ಬಾನಲಿ ಮೂಡಿದ ರಂಗಿನೋಕುಳಿಗೆ
ಮನದುಂಬಿ ನಕ್ಕಂತಿದೆ ವಸುಂಧರೆ!
ಮೇಘಗಳು ಚಲಿಸುವ ಆ ಪರಿಗೆ..
ಸುರಿಸಲಿವೆ ಚಟಪಟನೆ ವರ್ಷಧಾರೆ!!
ನಿಗಿನಿಗಿ ಕೆಂಡದಂತಹ ಬಿಸಿಯ
ಉಡಿಯಲಿರಿಸಿ ಬಂದಿಹ ನೇಸರ!
ಮುಸ್ಸಂಜೆಯ ವೇಳೆಗೆ ನೆಲ ತಂಪಾಗಿಸಿ..
ಕೂಗಿ ಕರೆದಂತಿದೆ ಧರಣಿಯ ಹೆಸರ!!
ಮಾನಿನಿಯ ನೊಸಲ ಬಿಂದಿಯಂತೆ
ಕೆಂಪಾಗಿ ಮೂಡುವನವ ಬೆಳಗಿನಲಿ!
ತಾ ಪಶ್ಚಿಮಕೆ ನಡೆದಿರಲು ಮುಗ್ಧನಂತೆ..
ಅರಿತು ಸೊಂಪಾಗಿದೆ ಅವನಿ ಬೈಗಿನಲಿ!!
ದುಡಿದ ಜನರು ದಣಿದು ವಿರಮಿಸಲು
ಹೊರಟಿರಲು ತಮ್ಮ ನೆಚ್ಚಿನ ಗೂಡಿಗೆ!
ನಿಶೆ ಅಳಿದು ಮರುದಿನವು ಮೂಡಲು…
ಮತ್ತೆ ಲೋಕಕೆ ಆ ದಿನಕರನೇ ದೀವಿಗೆ!!
ಸುಮನಾ ರಮಾನಂದ