ಮೈಸೂರಿನ ಶೂಟಿಂಗ್ ಪ್ರತಿಭೆ – ರಕ್ಷಿತ್ ಶಾಸ್ತ್ರಿ

ಮೈಸೂರಿನ ಶೂಟಿಂಗ್ ಪ್ರತಿಭೆ – ರಕ್ಷಿತ್ ಶಾಸ್ತ್ರಿ

ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ಕನಸಿರುತ್ತದೆ. ಅದರಲ್ಲೂ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಯಸ್ಸಲ್ಲಂತೂ ಏನೇನೋ ಅದ್ಭುತ ಸಾಧನೆಗಳನ್ನು ಮಾಡುವ ಕನಸು ಮೊಳೆಯುವ ಸಮಯ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಗಾದೆಯೇ ಇಲ್ಲಿ ಬಹಳ ಸೂಕ್ತವಾದದ್ದು. ಮಕ್ಕಳಿಗೆ ಕ್ರೀಡೆ ಹೆಚ್ಚು ಮೌಲ್ಯವನ್ನು ಒದಗಿಸುವುದರೊಂದಿಗೆ ಶಿಸ್ತು ತಾಳ್ಮೆ ಮತ್ತು ಸಂಯಮವನ್ನು ಹಾಗೂ ಜೀವನಕ್ಕೆ ಹೆಚ್ಚು ಮಹತ್ವವನ್ನು ನೀಡುವಂತೆ ಈ ಕನಸುಗಳು ಮಾಡುತ್ತದೆ. ತಾನು ದೊಡ್ಡ ರಾಜಕಾರಣಿ, ಸೈನಿಕ, ಕ್ರೀಡಾಪಟು, ಇಂಜಿನಿಯರ್, ವಕೀಲ, ಪೈಲಟ್, ಪೋಲೀಸ್ ಅಧಿಕಾರಿ ಮತ್ತು ಡಾಕ್ಟರ್ ಹೀಗೆ ಏನೇನೋ ಆಗಬೇಕೆಂಬ ಕನಸುಗಳನ್ನು ಕಾಣುವುದು ಸಹಜ. ಕೇವಲ ಇಂದು ವಿದ್ಯಾರ್ಥಿಗಳಷ್ಟೇ ಕನಸನ್ನು ಕಾಣುವುದಿಲ್ಲ. ಬದಲಿಗೆ ನಾವೆಲ್ಲರೂ ಒಂದಲ್ಲ ಒಂದು ರೀತಿಯ ಕನಸುಗಳನ್ನು ಕಾಣುತ್ತಲೇ ಇರುತ್ತೇವೆ. ವಿದ್ಯಾಭ್ಯಾಸ ಮುಗಿದ ನಂತರ ಜವಾಬ್ದಾರಿಯೆಡೆಗಿನ ತುಡಿತದಿಂದಾಗಿ ಜೀವನ ನಿರ್ವಹಣೆಗೆ ಉದ್ಯೋಗವೊಂದು ದೊರೆತರೆ ಸಾಕಪ್ಪಾ ಎನ್ನುವ ಸ್ಥಿತಿಗೆ ತಲುಪಿ ನಮ್ಮ ಬಾಲ್ಯದ ಕನಸನ್ನು ಸಂಪೂರ್ಣವಾಗಿ ಮರೆತೇ ಬಿಡುತ್ತೇವೆ. ಇಲ್ಲಿಂದ ಬದುಕಿನ ಹೊಸ ಕನಸು ಪ್ರಾರಂಭವಾಗಿ ಅದನ್ನು ಸಾಧಿಸುವುದರಲ್ಲೇ ಸಂಪೂರ್ಣವಾಗಿ ಮುಳುಗಿಬಿಡುತ್ತೇವೆ.

ಇವರೆಲ್ಲರ ಪೈಕಿ ಕೆಲವೇ ಕೆಲವು ಮಂದಿ ಮಾತ್ರ ತಮ್ಮ ಬಾಲ್ಯದ ಅದಮ್ಯ ಕನಸಿನ ಬೆನ್ನೇರಿ ತಮ್ಮ ಗುರಿಯನ್ನು ಛಲ ಬಿಡದ ತ್ರಿವಿಕ್ರಮನಂತೆ ಸಾಧಿಸಿ ಯಶಸ್ವಿಯಾಗುತ್ತಾರೆ. ಅಂತಹ ಬಾಲ್ಯದ ಕನಸಿನ ಸಾಧಕರನ್ನು ನಾವುಗಳು ಆಳವಾಗಿ ಅಧ್ಯಯನ ಮಾಡಿದಾಗ ಛೇ ನಾವೂ ನಮ್ಮ ಕನಸನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಸಾಧಿಸಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುವುದು ಸಹಜ. ಅಂತಹ ಒಬ್ಬ ವಿಶೇಷ ಸಾಧಕರಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವವರು ಮೈಸೂರಿನ ರಕ್ಷಿತ್ ಶಾಸ್ತ್ರಿ. ಈತ ಏರ್ ರೈಫಲ್ ಶೂಟಿಂಗ್‌ನಲ್ಲಿ ಅಪ್ರತಿಮ ಸಾಧನೆ ಮಾಡಿದ ಮೈಸೂರಿನ ಪ್ರಥಮ ಅಂತರಾಷ್ಟ್ರೀಯ ಪದಕ ವಿಜೇತ.

1991 ನೇ ಇಸವಿಯಲ್ಲಿ ಜನಿಸಿದ ರಕ್ಷಿತ್ ಶಾಸ್ತ್ರಿ ವಾಸವಿರುವುದು ಮೈಸೂರಿನ ಬೋಗಾದಿಯಲ್ಲಿ. ಇವರ ತಾಯಿ ರಾಜಲಕ್ಷ್ಮೀ. ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ರಕ್ಷಿತ್ ಪ್ರಸ್ತುತ ಮೈಸೂರಿನ ಎನ್.ರಂಗರಾವ್ ಆ್ಯಂಡ್ ಸನ್ಸ್ನ ಅಂಗಸಂಸ್ಥೆಯಾದ ವ್ಯೋದಾ (ಪ್ರೈ.) ಲಿಮಿಟೆಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ರಕ್ಷಿತ್‌ಗೆ ಚಿಕ್ಕ ವಯಸ್ಸಿನಿಂದಲೂ ಈಜು, ಟೆನ್ನಿಸ್, ಕರಾಟೆ, ಕಟಾ ಇನ್ನಿತರ ಕ್ರೀಡೆಗಳೆಂದರೆ ಅತೀವ ಆಸಕ್ತಿ. ಶಾಲಾ ದಿನಗಳಲ್ಲೇ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್, ಕಿರಿಯರ ಗುಂಪಿನ ‘ಕಟಾ’ ಪಂದ್ಯದಲ್ಲಿ ರಾಷ್ಟ್ರೀಯ ಚಿನ್ನದ ಪದಕ, ಕುಮಿತೆಯಲ್ಲಿ ಬೆಳ್ಳಿ ಪದಕ, ರಾಜ್ಯಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆ 4 x 1000 ಫ್ರೀ ಸ್ಟೈಲ್ ಮೆಡ್ಲಿ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಸಣ್ಣ ವಯಸ್ಸಿನಲ್ಲೇ ಈತ ಮಾಡಿದ ಈ ಸಾಧನೆಗಳು ರಕ್ಷಿತ್ ಎಷ್ಟು ಪ್ರತಿಭಾವಂತ ಕ್ರೀಡಾಪಟು ಎನ್ನುವುದಕ್ಕೆ ಸಾಕ್ಷಿ.

ಶೂಟಿಂಗ್‌ಗೆ ಗುರಿಯಿಟ್ಟ ರಕ್ಷಿತ್

ರಕ್ಷಿತ್ ಶಾಸ್ತ್ರಿ ತಮ್ಮ ಸ್ನೇಹಿತ ವಿಫುಲ್ ಎಂಬುವವರ ಪ್ರೋತ್ಸಾಹದ ಮೇರೆಗೆ ೨೦೧೫ರಲ್ಲಿ ತಾವು ಒಃಂ ಓದುತ್ತಿರುವಾಗಲೇ ರೈಫಲ್ ಶೂಟಿಂಗ್ ತರಬೇತಿ ಪಡೆಯಲಾರಂಭಿಸುತ್ತಾರೆ. ಭಾರತೀಯ ಸೇನೆಯ ಆರ್ಮಿ ಮಾರ್ಕ್ಸ್ಮ್ಯಾನ್‌ಶಿಪ್ ಯೂನಿಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಾಗೂ ಮೈಸೂರು ಜಿಲ್ಲಾ ರೈಫಲ್ ಅಸೋಸಿಯೇಷನ್ (ಒಆಖಂ) ಸಂಸ್ಥಾಪಕರಾದ ಶ್ರೀ ಸುರೇಶ್ ಎಂ.ಎಸ್ ಇವರ ಗರಡಿಯಲ್ಲಿ ತರಬೇತಿ ಪಡೆಯಲಾರಂಭಿಸುತ್ತಾರೆ. ತರಬೇತಿ ಪ್ರಾರಂಭಿಸಿದ ಕೇವಲ ದಿನಾಲ್ಕೇ ದಿನಗಳಲ್ಲಿ ಶೂಟಿಂಗ್ ಏರ್ ರೈಫಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಒಆಖಂಗೆ ಬೆಳ್ಳಿ ಪದಕ ತಂದುಕೊಡುತ್ತಾರೆ. ತಮ್ಮ ತರಬೇತುದಾರರಾದ ಸುರೇಶ್‌ರವರು ೧೯೯೧ರಲ್ಲಿ ಶೂಟಿಂಗ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದ ವಿಚಾರವನ್ನು ತಿಳಿದು ಅದರಿಂದ ಸ್ಫೂರ್ತಿಯಾಗಿ ಕಠಿಣ ಪಿಸ್ತೂಲ್ ತರಬೇತಿಯಲ್ಲಿ ತೊಡಗುತ್ತಾರೆ. ಇದರ ಪರಿಣಾಮವಾಗಿ ೭ನೇ ದಕ್ಷಿಣ ವಲಯದ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ‘ಎ’ ತಂಡ ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನದ ಪದಕ ಗಳಿಸುತ್ತದೆ. ಇಲ್ಲಿಂದ ರಕ್ಷಿತ್ ಜೀವನದ ಚಿತ್ರಣವೇ ಬದಲಾಯ್ತು. ಅವರು ಮಾಡಿದ ಸಾಧನೆಗಳೆಲ್ಲಾ ದಾಖಲೆಗಳಾಗುತ್ತಾ ಹೋಯಿತು.

ಪ್ರಮುಖ ಸಾಧನೆಗಳು:

ರಕ್ಷಿತ್ ಶೂಟಿಂಗ್‌ನಲ್ಲಿ ಸರಿಸುಮಾರು 50ಕ್ಕೂ ಹೆಚ್ಚು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳು, ರಾಷ್ಟ್ರೀಯ ಮತ್ತು ಫೆಡರೇಷನ್ ಕಪ್ ದಾಖಲೆಗಳನ್ನು ಬರೆದು 35 ರಾಷ್ಟ್ರೀಯ ಪದಕಗಳನ್ನು ಗಳಿಸಿದ್ದಾರೆ. ಜರ್ಮನಿಯ ಹ್ಯಾನೋವರ್ ನಲ್ಲಿ 9ನೇ ಮೇ 2019 ರಂದು ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಸಿ.ಡಿ.ಆರ್.ಎ ತಂಡವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕ ಗೆದ್ದ ಪ್ರಥಮ ಹಾಗೂ ಏಕೈಕ ಮೈಸೂರಿಗ. 2016 ರಲ್ಲಿ ಮುಂಬೈನಲ್ಲಿ ನಡೆದ 26ನೇ ಜಿ.ವಿ.ಮಾವಲಂಕರ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 3ನೇ ಸ್ಥಾನ ಹಾಗೂ ಆ ಸ್ಪರ್ಧೆಯ ಎಲ್ಲಾ ವಿಭಾಗಗಳೂ ಸೇರಿ ಕರ್ನಾಟಕಕ್ಕೆ ಬಂದ ಏಕೈಕ ಪದಕವಿದು. ತಿರುವನಂತಪುರಂನಲ್ಲಿ ನಡೆದ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 28ನೇ ಶ್ರೇಯಾಂಕ ಗಳಿಕೆ. ಶೂಟಿಂಗ್‌ನಲ್ಲಿ ಅಂತರಾಷ್ಟ್ರೀಯ ಪದಕ ಗೆದ್ದ ಮೈಸೂರಿನ ಪ್ರಥಮ ಕ್ರೀಡಾಪಟುವೆಂಬ ಹೆಗ್ಗಳಿಕೆಯೊಂದಿಗೆ ಪ್ರಸ್ತುತ ಭಾರತ ತಂಡಕ್ಕೆ ಆಯ್ಕೆ ಟ್ರಯಲ್ಸ್ ನೀಡುತ್ತಿರುವ ಹೆಮ್ಮೆಯ ಗುರಿಕಾರ.

ಹವ್ಯಾಸಗಳು

ಸರ್ಕಾರಿ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ರಕ್ಷಿತ್ ತಮ್ಮ ಬಿಡುವಿನ ಸಮಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಹೇಳಿಕೊಡುವುದು, ಪುಸ್ತಕಗಳನ್ನು ಕೊಡುಗೆಯಾಗಿ ನೀಡುವಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಬಿಡುವಿನ ಅವಧಿಯನ್ನು ಸಂಪೂರ್ಣವಾಗಿ ಶೂಟಿಂಗ್ ತರಬೇತಿಗಾಗಿ ಮೀಸಲಿಡುತ್ತಾರೆ.
ಭಾರತದಲ್ಲಿ ಕ್ರಿಕೆಟ್ ಮತ್ತಿತರ ಕ್ರೀಡೆಗಳನ್ನು ಹೊರತುಪಡಿಸಿ ಶೂಟಿಂಗ್, ಹಾಕಿ, ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಬೆಳಕಿಗೆ ಬರುವುದು ಬಹಳ ಕಡಿಮೆ. ಕ್ರಿಕೆಟ್‌ಗೆ ಇದ್ದಷ್ಟು ಪ್ರೋತ್ಸಾಹ ನಮ್ಮಲ್ಲಿ ಶೂಟಿಂಗ್‌ಗೆ ಇಲ್ಲ. ರಾಜ್ಯವರ್ಧನ್ ಸಿಂಗ್ ರಾಥೋಡ್, ಅಭಿನವ್ ಬಿಂದ್ರಾ, ಗಗನ್ ನಾರಂಗ್, ವಿಜಯ್ ಕುಮಾರ್ ಎಲ್ಲರೂ ಸಹ ಶೂಟಿಂಗ್‌ನಲ್ಲಿ ಒಲಂಪಿಕ್ ಪದಕ ವಿಜೇತರು. ಇವರೆಲ್ಲ ಕ್ರಿಕೆಟ್ ತಾರೆಯರಷ್ಟು ಪ್ರಸಿದ್ಧಿಯಾಗಿಲ್ಲ. ಈ ಕುರಿತು ರಕ್ಷಿತ್ ಅವರನ್ನು ಕೇಳಿದರೆ, ನಮ್ಮ ಕೆಲಸ ನಾವು ಮಾಡುತ್ತಾ ಹೋಗಬೇಕು, ಹೊಗಳಿಕೆ ಸನ್ಮಾನಗಳು ಮುಖ್ಯವಲ್ಲ ಎನ್ನುತ್ತಾರೆ.

ಇಷ್ಟಕ್ಕೆ ಸೀಮಿತವಾಗದ ಇವರ ಪ್ರತಿಭೆಯು ಈಜು ಕ್ಷೇತ್ರಕ್ಕೂ ವಿಸ್ತರಿಸಿದ್ದು ರಾಜ್ಯಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆಯ 4×100 ಫ್ರೀಸ್ಟೈಲ್ ಮೆಡ್ಲಿ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸದ್ಯ ಇವರು ಈಜು ಪಂದ್ಯಾವಳಿಗಳಲ್ಲೂ ವೈಯಕ್ತಿಕ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ಇಂಜಿನಿಯರಿಂಗ್ ವಿದ್ಯಾಭ್ಯಾಸದ ಸಂದರ್ಭದಲ್ಲಿ ಟೆಬಲ್ ಟೆನ್ನಿಸ್ ಮತ್ತು ಬ್ಯಾಡ್‌ಮಿಂಟನ್ ಆಟದೆಡೆಗೆ ಆಕರ್ಷಿತರಾಗಿ ಅಂತರ್ ಕಾಲೇಜು ಮಟ್ಟದಲ್ಲಿ ತನ್ನ ಕಾಲೇಜನ್ನು ಪ್ರತಿನಿಧಿಸಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ವೃತ್ತಿಪರ ಟೆಬಲ್ ಟೆನ್ನಿಸ್ ಮತ್ತು ಬ್ಯಾಡ್ ಮಿಟನ್ ಆಟಗಾರನಾಗಿರುವ ಇವರು ವಿವಿಧ ಪಂದ್ಯಾವಳಿಗಳಲ್ಲಿ ಪ್ರತಿಷ್ಟಿತ ತಂಡಗಳನ್ನು ಪ್ರತಿನಿಧಿಸುತ್ತಾರೆ. ಟ್ರೆಕ್ಕಿಂಗ್, ಬೈಕ್ ರೈಡಿಂಗ್, ಓದು ಮತ್ತು ಸಮಾಜ ಸೇವೆ ಹಾಗೂ ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಸಹಕಾರ ನೀಡುವುದು ಇವರ ವಿವಿಧ ಹವ್ಯಾಸಗಳು.

ರಕ್ಷಿತ್ ಶಾಸ್ತ್ರಿ ಮೂಲತಃ ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ತಮ್ಮ ಇಂಟರ್ನ್ಶಿಪ್‌ನ್ನು ದೇಶದ ಪ್ರತಿಷ್ಟಿತ ಸಂಸ್ಥೆಯಾದ ಮಹೇಂದ್ರಾ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಬೆಂಟ್ಲೀ ಮತ್ತು ಓಕ್ಸ್ ವ್ಯಾಗನ್ ಕಾರ್ ವಿಭಾಗದಲ್ಲಿ ಮಾಡಿದ್ದಾರೆ. ತನ್ನ 5ನೇ ತರಗತಿಯಿಂದಲೇ ಕರಾಟೆಪಟುವಾಗಿ ಗುರುತಿಸಿಕೊಂಡಿದ್ದು, ತನ್ನ ನಿರಂತರ ಅಭ್ಯಾಸ ಹಾಗೂ ಬದ್ಧತೆಯಿಂದಾಗಿ ರಾಷ್ಟ್ರೀಯ ಜ್ಯೂನಿಯರ್ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ. ಕೇರಳದ ಕಣ್ಣೂರಿನಲ್ಲಿ ನಡೆದ ರಾಷ್ಟ್ರೀಯ ಜ್ಯೂನಿಯರ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಎರಡು ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ರಾಷ್ಟ್ರಮಟ್ಟದ ಕಿರಿಯರ ಕರಾಟೆ ಸ್ಪರ್ದೆಯ ಕಟಾ ವಿಭಾಗದ ಪಂದ್ಯದಲ್ಲಿ ಚಿನ್ನದ ಪದಕ ಹಾಗೂ ಕುಮಿತೆಯಲ್ಲಿ ಬೆಳ್ಳಿ ಪದಕಗಳಿಸಿದ ವೈವಿಧ್ಯವಾದ ಪ್ರತಿಭೆಯಿರುವ ಯುವಕ.

ಇಂದಿನ ದಿನದಲ್ಲಿ ವಿದ್ಯಾರ್ಥಿಗಳು ಕೇವಲ ವಿದ್ಯಾರ್ಜನೆಯಷ್ಟೇ ತಮ್ಮ ಜೀವನದ ಪರಮ ಗುರಿಯೆಂದು ಭಾವಿಸಿ ಅಷ್ಟಕ್ಕೇ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಆದರೆ ಕೆಲವೇ ಕೆಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆ ಮತ್ತಿತರ ಕ್ಷೇತ್ರಕ್ಕೂ ಸಮಾನವಾದ ಪ್ರಾತಿನಿಧ್ಯವನ್ನು ನೀಡಿ ಸಾಧಕರಾಗಿ ಮೂಡಿಬರುತ್ತಾರೆ. ಅಂತಹ ವಿಶೇಷ ಸಾಧಕರ ಸಾಲಿಗೆ ರಕ್ಷಿತ್ ಶಾಸ್ತಿçಯೂ ಸೇರುತ್ತಾರೆ. ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪಡೆದು ಹೆಸರಾಂತ ಇಂಜಿನಿಯರ್ ಆಗುವ ಕನಸಿನ ಮಧ್ಯೆ ವೈವಿಧ್ಯಮಯ ಕ್ರೀಡಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಠಿಣ ಪರಿಶ್ರಮ, ಬದ್ಧತೆ, ನಿರಂತರ ಅಭ್ಯಾಸ ಹಾಗೂ ಛಲದಿಂದ ಏರ್‌ಪಿಸ್ತೂಲ್ ಶೂಟಿಂಗ್, ಈಜು, ಕರಾಟೆ, ಟೇಬಲ್ ಟೆನ್ನಿಸ್ ಮತ್ತು ಬ್ಯಾಡ್‌ಮಿಂಟನ್ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದು, ಸಧ್ಯ ಶೂಟಿಂಗ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವ ಇವರಿಗೆ ಗುರುಗಳು ಗುರಿಕಾರಿಕೆಯಲ್ಲಿ ಹೇಳಿಕೊಟ್ಟಿರುವ ತಂತ್ರಗಳನ್ನು ಅನುಸರಿಸಿಕೊಂಡು ದೇಶಕ್ಕೆ ಪದಕ ಗೆದ್ದುಕೊಡಬೇಕೆಂಬ ಮಹದಾಸೆಯನ್ನು ಹೊಂದಿದ್ದಾರೆ.

ರಕ್ಷಿತ್ ಶಾಸ್ತ್ರಿಯ ಈ ಸಾಧನೆಯ ಹಿಂದೆ ನೈತಿಕವಾಗಿ ಮತ್ತು ಮಾನಸಿಕವಾಗಿ ಪ್ರಾರಂಭಿಕ ಹಂತದಿಂದಲೇ ಬೆಂಬಲವನ್ನು ಕೊಟ್ಟು ಪ್ರೋತ್ಸಾಹಿಸಿದ ರಂಗರಾವ್ ಅಂಡ್ ಸನ್ಸ್ ಸಂಸ್ಥೆಯ ಶ್ರೀ ಅರ್ಜುನ್ ರಂಗ ಇವರನ್ನು ಬಹುವಾಗಿ ಸ್ಮರಿಸುತ್ತಾರೆ. ಇಂದಿಗೂ ಇವರು ನನ್ನ ಸಾಧನೆಗಳಿಗೆ ಬೆನ್ನೆಲುಬಾಗಿ ನಿಂತು ಸದಾ ಸಹಕಾರವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ತನ್ನ ತಾಯಿ ಮತ್ತು ತನ್ನ ಕುಟುಂಬಸ್ಥರು ಮತ್ತು ಬಂಧುಗಳು, ಆಪ್ತ ಗೆಳೆಯರು ಇವರ ಸಾಧನೆಗೆ ನೀಡಿದ ಪ್ರೋತ್ಸಾಹ ಅವಿಸ್ಮರಣೀಯವಾದದ್ದು ಎನ್ನುತ್ತಾರೆ. ಏರ್ ರೈಫಲ್ ಶೂಟಿಂಗ್ ಕ್ಷೇತ್ರದಲ್ಲಿ ಕರ್ನಾಟಕದಿಂದ ಹೊಸದಾಗಿ ಉದಯಿಸಿರುವ ನಕ್ಷತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಲಿ ಎಂಬುದೇ ಎಲ್ಲರ ಹಾರೈಕೆ.

ಸಂತೋಷ್ ರಾವ್ ಪೆರ್ಮುಡ
‘ಪೆರ್ಮುಡ ಮನೆ’, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ೫೭೪೧೯೮
ದೂ: 9742884160

Related post

2 Comments

  • ಪಾಠದ ಜೋತೆ ಆಟ ಚನ್ನಾಗಿ ಬೆಳೆದಿದೆ ಸರ್

  • Super

Leave a Reply

Your email address will not be published. Required fields are marked *