ಮೊಸಳೆಗಳು – ಅಳಿವಿನಂಚಿನಲ್ಲಿರುವ ಸರೀಸೃಪ

ಮೊಸಳೆಗಳು – Crocodile

ಸರೀಸೃಪ ವರ್ಗಕ್ಕೆ ಸೇರಿದ ಮೊಸಳೆಗಳು ಶೀತ ರಕ್ತ ಪ್ರಾಣಿಗಳು, ಪ್ರಸ್ತುತ ಭೂಮಿ ಮೇಲಿನ ಅತಿ ದೊಡ್ಡ ಸರೀಸೃಪ ಜುರಾಸಿಕ್ ಯುಗದಲ್ಲಿ ಭೂಮಿಯನ್ನು ಆಳಿದ ಡೈನೋಸಾರ್ ಗಳ ಸಂಬಂಧಿಗಳು, ಸುಮಾರು ೧೭೦ ಮಿಲಿಯನ್ ವರ್ಷಗಳಿಂದ ಅಷ್ಟೊಂದು ಬದಲಾವಣೆ ಹೊಂದದೆ ಭೂಮಿಯ ಬೆಚ್ಚಗಿನ ಮತ್ತು ಉಷ್ಣ ಹವಾಮಾನದ ವಲಯಗಳಲ್ಲಿ ವಿತರಣೆಗೊಂಡಿವೆ.

ಜಲವಾಸಿಗಳಾದ ಇವು ಆಹಾರದ ವೇಳೆಯನ್ನು ಬಿಟ್ಟು ಇನ್ನುಳಿದ ಸಮಯದಲ್ಲಿ ಬಿಸಿಲು ಕಾಯಿಸಲು ಭೂಮಿಗೆ ಬರುತ್ತವೆ, ಜಾಲ ಪಾದಗಳನ್ನು ಹೊಂದಿ ಶರೀರ ಈಜುವುದಕ್ಕೆ ಮಾರ್ಪಾಡಾಗಿದೆ, ಬಾಲವು ಮುಖ್ಯ ಚಲನಾಂಗವಾಗಿ ಈಜುವ ದಿಕ್ಕನ್ನು ಚುಕ್ಕಾಣಿಯಾಗಿ ನಿಯಂತ್ರಿಸುತ್ತದೆ. ಬಾಯಿ ಮತ್ತು ಬಾಲ ಆತ್ಮರಕ್ಷಣೆ ಹಾಗು ಬೇಟೆಯಾಡುವ ಅಂಗಗಳು,ಬಾಲಕ್ಕೆ ಬಲವಾದ ಶಕ್ತಿ ಇದ್ದು ಕೆಲ ಅಡಿಗಳಷ್ಟು ದೂರದ ಪ್ರಾಣಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳಬಲ್ಲದು. ಮುಸುಡಿಯುದ್ಧಕ್ಕೂ ಇರುವ ಟೊಳ್ಳಾದ ಹಲ್ಲುಗಳು ಬಿದ್ದು ಹೋದರೂ ಮತ್ತೆ ಹುಟ್ಟಿ ಬರುತ್ತವೆ. ಇವು ಸೋಮಾರಿಗಳಂತೆ ಕಂಡರೂ ಕೆಲವು ಸಲ ಭೂಮಿಯ ಮೇಲೆ ವೇಗವಾಗಿ ಓಡಬಲ್ಲವು.

ಮೊಸಳೆಗಳ ಕೆಳ ದವಡೆಯು ಚಲಿಸುವುದಿಲ್ಲ, ಮೇಲಿನ ದವಡೆ ಮಾತ್ರ ಮೇಲೆ ಕೆಳಗೆ ಆಡುತ್ತದೆ, ಇವುಗಳ ಅಗಲ ನಾಲಿಗೆ ಹೊರಚಾಚುವುದೇ ಇಲ್ಲ,ಹಲ್ಲುಗಳು ಬೇಟೆಯನ್ನು ಹಿಡಿಯುವುದಕ್ಕೆ ವಿನಹಃ ಆಹಾರವನ್ನು ಜಗಿಯುವುದಕ್ಕೆ ಅಲ್ಲ, ಇವುಗಳ ನಾಲಿಗೆ ಚಲಿಸುವುದಿಲ್ಲ, ಮುಚ್ಚಿ ತೆರೆಯುವ ಮೂಗಿನ ಹೊಳ್ಳೆ ಹಾಗು ಚಲಿಸುವ ಪಾರದರ್ಶಕ ಕಣ್ಣಿನ ಪೊರೆ ಜಲವಾಸಕ್ಕೆ ಯೋಗ್ಯವಾಗಿದೆ. ನೀರಿನಲ್ಲಿ ಮುಳುಗಿದಾಗ ತಲೆಯ ಮೇಲಿನ ಉಬ್ಬಿನಲ್ಲಿರುವ ಕಣ್ಣು ಹಾಗು ಮೂಗಿನ ಹೊರಳೆ ಮಾತ್ರ ಕಾಣಿಸುವುದರಿಂದ ಗುರುತಿಸುವುದು ಕಷ್ಟ.

ಇವು ಅಪ್ಪಟ ಮಾಂಸಾಹಾರಿಗಳು ಮಾಂಸವನ್ನು ಇಡಿಯಾಗಿ ನುಂಗುವ ಇವು ಹಸಿ ಮಾಂಸಕ್ಕಿಂತ ಕೊಳೆತ ಮಾಂಸವನ್ನು ಹೆಚ್ಚು ಇಷ್ಟಪಡುತ್ತವೆ. ಮೀನು, ಆಮೆ, ನೀರು ಹಾವು, ಆಡು ಕುರಿ, ದನ ಕರುಗಳನ್ನು ತಿನ್ನುತ್ತವೆ. ಇವುಗಳ ಜೀರ್ಣ ಕ್ರಿಯೆಯ ರಸಗಳು ಸತ್ವಯುತವಾಗಿರುವುದರಿಂದ ಗಟ್ಟಿ ಎಲುಬು ಚಿಪ್ಪುಗಳು ಸುಲಭವಾಗಿ ಜೀರ್ಣವಾಗುತ್ತದೆ, ಆಹಾರ ಇಲ್ಲದೆ ಅನೇಕ ದಿನ ಇರಬಲ್ಲವು.ಶರೀರದ ಉಷ್ಣತೆ ಮಿತಿಯಲ್ಲಿ ಇರಿಸಲು ಬಿಸಿಲಿನಲ್ಲಿ ಮಲಗುತ್ತವೆ.

ಮೊಸಳೆಗಳು ಸಾಮಾನ್ಯವಾಗಿ ಸಂಘ ಜೀವಿಗಳು, ಎಲ್ಲಾ ಮೊಸಳೆಗಳಿಗೆ ಲೈಂಗಿಕ ಗ್ರಂಥಿಗಳಿದ್ದು, ಬೆದೆಯ ಕಾಲದಲ್ಲಿ ಈ ಗ್ರಂಥಿಗಳಿಂದ ಕಾಮೋತ್ತೇಜಕ ದ್ರವ ಒಸರುತ್ತದೆ, ಮಿಲನ ಕಾಲದಲ್ಲಿ ಗಂಡು ಮತ್ತು ಹೆಣ್ಣು ನೀರಿನಲ್ಲಿ ಸುತ್ತುತ್ತವೆ, ನಂತರ ಗಂಡು ಹೆಣ್ಣಿನ ಮೇಲೆ ಏರಿ ಲೈಂಗಿಕ ಕ್ರಿಯೆ ಮಾಡುತ್ತದೆ.

ಹೆಣ್ಣು, ಗುಂಡಿಯನ್ನು ತೋಡಿ ಮೊಟ್ಟೆ ಇಟ್ಟ ನಂತರ ಗೂಡು ಸಾಕಷ್ಟು ಎತ್ತರವಾಗುವಂತೆ ಕಸ ಕಡ್ಡಿಗಳಿಂದ ಮುಚ್ಚುತ್ತದೆ, ಗೂಡು ನೀರಿನಿಂದ ಸಾಕಷ್ಟು ದೂರ ಇರುವಂತೆ ಅಂದಾಜಿಸಿ ಗಟ್ಟಿ ಕವಚದ ಬಿಳಿ ಬಣ್ಣದ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳ ರಕ್ಷಣೆಗಾಗಿ ಗೂಡಿನ ಅಕ್ಕ ಪಕ್ಕದಲ್ಲೇ ತಾಯಿ ಇರುತ್ತದೆ, ನೈಸರ್ಗಿಕ ಉಷ್ಣತೆಗೆ ಹೊರಬರುವ ಮರಿಗಳು ವಿಶೇಷ ಶಬ್ದ ಹೊರಡಿಸಿ ತಾಯಿಯ ಗಮನ ಸೆಳೆಯುತ್ತವೆ. ತಾಯಿಯು ಮರಿಗಳನ್ನು ಬಾಯಿಯೊಳಗೆ ಇಟ್ಟು ಸುರಕ್ಷಿತವಾಗಿ ನೀರಿನ ಮೂಲಕ್ಕೆ ಕೊಂಡೊಯ್ದು ಬಿಡುತ್ತದೆ. ಜಾಗತಿಕ ಹವಾಮಾನ ವೈಪರಿತ್ಯವು ಇವುಗಳ ಲಿಂಗಾನುಪಾತವನ್ನು ವ್ಯತ್ಯಾಸ ಮಾಡುತ್ತಿದೆ.

ಮೊಸಳೆಗಳ ಮೊಟ್ಟೆಗಳನ್ನು ಉಡ, ಮುಂಗುಸಿ, ನರಿ, ಕಾಡು ಹಂದಿಗಳು ಕದಿಯುತ್ತವೆ, ಬೆಳೆದ ಮೇಲೆ ಮನುಷ್ಯನನ್ನು ಬಿಟ್ಟರೆ ಹೆಚ್ಚಿನ ನೈಸರ್ಗಿಕ ಶತ್ರುಗಳು ಇಲ್ಲದ್ದಿದ್ದರೂ ಮರಿಗಳಿದ್ದಾಗ ವಿವಿಧ ಪಕ್ಷಿ, ಮೀನು, ನೀರು ನಾಯಿಗಳು ಬೇಟೆಯಾಡುತ್ತವೆ. ದಕ್ಷಿಣ ಅಮೆರಿಕಾದ ಅಮೆಜಾನ್ ನದಿಯ ಮೊಸಳೆಗಳನ್ನು ಜಾಗ್ವಾರ್ ಸುಲಭವಾಗಿ ಬೇಟೆಯಾಡಬಲ್ಲದು.

ಮೊಸಳೆಗಳಲ್ಲಿ ಸುಮಾರು 24 ಜಾತಿಗಳನ್ನು ಗುರುತಿಸಿದ್ದಾರೆ, ನಮ್ಮ ದೇಶದಲ್ಲಿ ಮೂರು ಜಾತಿ ಮೊಸಳೆಗಳು ಇವೆ.

ಮೊಸಳೆಗಳಲ್ಲಿ ಸುಮಾರು 24 ಜಾತಿಗಳನ್ನು ಗುರುತಿಸಿದ್ದಾರೆ, ನಮ್ಮ ದೇಶದಲ್ಲಿ ಮೂರು ಜಾತಿ ಮೊಸಳೆಗಳು ಇವೆ.

1) ಮಗ್ಗರ್ ಅಥವಾ ಜವುಗು ಮೊಸಳೆ (Muggar or Marsh Crocodile)
ಮಗ್ಗರ್ ಮೊಸಳೆಗಳು ನದಿ, ಸರೋವರ ಕೆರೆ ಸಿಹಿ ನೀರಲ್ಲಿ ವಾಸಿಸುತ್ತವೆ.
2) ಉಪ್ಪು ನೀರಿನ ಮೊಸಳೆ(Estuarine or Salt water Crocodile)
ಉಪ್ಪು ನೀರಿನ ಮೊಸಳೆಗಳು ಸಾಗರ ಸಮುದ್ರದಲ್ಲಿ ಕಂಡು ಬರುತ್ತವೆ, ಈ ಉಪ್ಪು ನೀರಿನ ಮೊಸಳೆಗಳ ದೇಹದಲ್ಲಿ ಹೆಚ್ಚಾದ ಉಪ್ಪು ಕಣ್ಣಿನ ಸಮೀಪದ ಗ್ರಂಥಿಗಳಿಂದ ನೀರಾಗಿ ಹೊರಬರುತ್ತದೆ. ಈ ಕ್ರಿಯೆಗೆ ಮೊಸಳೆ ಕಣ್ಣೀರು ಎಂದು ಕರೆದಿರಬೇಕು. ಇವು ಮೊಟ್ಟೆ ಇಡಲು ನದಿ ಸಮುದ್ರ ಕೂಡುವ ಕಾಂಡ್ಲಾ ಕಾಡಿಗೆ ಬರುತ್ತವೆ.

3) ಘರಿಯಾಲ ಅಥವಾ ಗವಿಯಾಲ ಮೊಸಳೆ(Gharial or Long Snouted Crocodile)
ಘರಿಯಾಲ ಮೊಸಳೆಗಳು ಕೇವಲ ಉತ್ತರ ಭಾರತ ಹಾಗು ನೇಪಾಳಕ್ಕೆ ಸೀಮಿತವಾಗಿವೆ. ಉತ್ತರ ಭಾರತದ ಕೆಲವು ವೇಗವಾಗಿ ಹರಿಯುವ ನದಿಗಳ ಆಳವಾದ ಹೊಂಡಗಳಲ್ಲಿ ನೆಲೆಸಿವೆ,
Madras Crocodile Bank Trust ತಮಿಳುನಾಡಿನಲ್ಲಿರುವ ಈ ಸಂಸ್ಥೆ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಕೆಲವು ಸರೀಸೃಪಗಳನ್ನು ಬಂಧನದಲ್ಲಿಟ್ಟು ಸಂತಾನೋತ್ಪತ್ತಿ ಮಾಡುತ್ತಿದೆ, ಅದರಲ್ಲಿ Gharial ಮೊಸಳೆಯೂ ಒಂದಾಗಿದೆ.

ಮೊಸಳೆಗಳು ನೋಡಲು ಒಂದೇ ತರನಾಗಿದ್ದರೂ ಪ್ರಪಂಚದಾದ್ಯಂತ ಕೆಲವು ವಿಭಿನ್ನ ಹೆಸರಿನಿಂದ ಕರೆಯುತ್ತಾರೆ.

ಅಲಿಗೇಟರ್(Alligator) : ಇವು ಅಮೆರಿಕಾ ಹಾಗು ಚೀನಾದ ಕೆಲವೆಡೆ ಕಂಡುಬರುವ ಸಿಹಿನೀರಿನ ಮೊಸಳೆಗಳು,ಇವುಗಳ ಮುಸುಡಿ ಮೊಸಳೆಗಳಂತೆ (Crocodile) ಚೂಪಾಗಿರದೆ U ಆಕಾರದಲ್ಲಿರುತ್ತವೆ.

ಅಲಿಗೇಟರ್

ದಕ್ಷಿಣ ಅಮೆರಿಕಾದ ಅಮೆಜಾನ್ ನದಿಯ ಮೊಸಳೆಗಳಿಗೆ ಕೇಮನ್ (Caiman) ಎನ್ನುತ್ತಾರೆ.

ಉಪ್ಪು ನೀರಿನ ಮೊಸಳೆಗಳು ಗಾತ್ರದಲ್ಲಿ ದೊಡ್ಡವು, ಪಿಲಿಪೈನ್ಸ್ ದೇಶದಲ್ಲಿ ಮನುಷ್ಯರಿಗೆ ತೊಂದರೆ ಕೊಡುತ್ತಿದ್ದ ಲೊಲೊಂಗ್ ಹೆಸರಿನ ಮೊಸಳೆಯನ್ನು ಸೆರೆ ಹಿಡಿದು ತೂಕ ಮಾಡಿದಾಗ ಬರೊಬ್ಬರಿ 20 ಅಡಿ 3 ಇಂಚು ಉದ್ದವಿದ್ದು 1075 ಕೆ. ಜಿ. ತೂಗುತ್ತಿತ್ತು. ಬಂಧನದಲ್ಲಿಟ್ಟಿದ್ದ ಈ ಮೊಸಳೆ ಇತ್ತೀಚಿಗೆ (2013) ಮೃತಪಟ್ಟಿತು.

ನೀರಿನಲ್ಲಿ ಇದ್ದಾಗ ಮೊಸಳೆಗಳಿಗೆ ಅಗಾಧ ಶಕ್ತಿ ಗಜೇಂದ್ರ ಮೋಕ್ಷದ ಕಥೆಯನ್ನು ಇಲ್ಲಿ ಸ್ಮರಿಸಬಹುದು, ಬಹಳ ಬಿಗಿ ಹಿಡಿತದಿಂದ ದೊಡ್ಡ ದೊಡ್ಡ ಪ್ರಾಣಿಗಳನ್ನೇ ಬಲಿ ಹಾಕುವ ಮೊಸಳೆಗಳ ಕಣ್ಣುಗಳು ಬಲು ಸೂಕ್ಷ್ಮ, ಕೇವಲ ನಮ್ಮ ಕೈ ಬೆರಳುಗಳಿಂದ ಅವುಗಳ ಕಣ್ಣುಗಳನ್ನು ತಿವಿದರೂ ಸಾಕು ಎಂತಹ ಬಿಗಿ ಹಿಡಿತವನ್ನು ಸಹ ಸಡಿಲಗೊಳಿಸುತ್ತದೆ. ಬಹಳಷ್ಟು ಪರಿಣಿತರು ಈ ತಂತ್ರ ಬಳಸಿ ಮೊಸಳೆ ಬಾಯಿಂದ ಬಚಾವಾಗಿದ್ದಾರೆ.

ಮೊಸಳೆಗಳನ್ನು ಚರ್ಮ, ಮಾಂಸ, ಸಾಕು ಪ್ರಾಣಿಗಳನ್ನು ಬೇಟೆಯಾಡುತ್ತವೆ ಎಂಬ ಕಾರಣಗಳಿಗಾಗಿ ಕೊಲ್ಲಲಾಗುತ್ತಿದೆ, ಇವುಗಳ ಮೊಟ್ಟೆಗಳನ್ನು ಆಹಾರವಾಗಿ ಉಪಯೋಗಿಸುವುದರಿಂದ ಇವುಗಳ ಸಂತತಿ ಕುಸಿಯುತ್ತಿದೆ. ಇವುಗಳು ಜನವಸತಿಯತ್ತ ಕಂಡು ಬಂದರೆ ಅರಣ್ಯ ಇಲಾಖೆಗೆ ಮಾಹಿತಿ ಕೊಡಬೇಕು, ಮೊಸಳೆಗಳು ವನ್ಯಜೀವಿ ಕಾಯ್ದೆಯಡಿ ಸಂರಕ್ಷಣೆಗೆ ಒಳಪಟ್ಟಿವೆ.

ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಜರ್ವೇಶನ್ ಟ್ರಸ್ಟ್

ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ

Related post

Leave a Reply

Your email address will not be published. Required fields are marked *