ಮೌನದ ಚಿಪ್ಪಿನೊಳಗೆ – ಪುಸ್ತಕ ಪರಿಚಯ
ಲೇಖಕರು:ಧಾರಿಣಿ ಮಾಯಾ
ಪ್ರಕಾಶಕರು:ಸಾಹಿತ್ಯಲೋಕ ಪಬ್ಲಿಕೇಶನ್ಸ್
ಬೆಲೆ:180 ರೂಪಾಯಿ
📞99459 39436
ಮನುಷ್ಯನ ಬದುಕಿನ ವಿವಿಧ ಮಜುಲುಗಳಲ್ಲಿ ನಗು, ಅಳು, ಕೋಪ, ಆವೇಶಗಳು ಹಾಸುಹೊಕ್ಕಾಗಿ ಇರುವಂತೆ ಮಾತು ಮತ್ತು ಮೌನಕ್ಕೂ ಬಹಳ ಪ್ರಾಮುಖ್ಯತೆ ಇದೆ.
ಎಷ್ಟೋ ಸಂದರ್ಭಗಳಲ್ಲಿ ಮಾತು ಮೌನಕ್ಕೆ ಶರಣಾದರೆ, ಮೌನ ಮಾತಿಗಾಗಿ ಹಾತೊರೆಯುತ್ತದೆ.
ಮೌನದ ಚಿಪ್ಪಿನೊಳಗೆ ಅಡಗಿ ಕುಳಿತ ಭಾವಗಳ ಪ್ರಸವವಾದಾಗ ಮನಸು ನಿರಾಳವಾಗುತ್ತದೆ.
ಹೀಗೆ ತಮ್ಮ ಮೌನದ ಚಿಪ್ಪಿನೊಳಗೆ ಅಡಗಿ ಕುಳಿತಿದ್ದ ಭಾವಗಳಿಗೆ ಪ್ರೀತಿ,ಸಾಂತ್ವನಗಳ ಧಾರೆ ಎರೆದು ಜೊತೆಗೆ ಪ್ರತಿಭಟಿಸುವ ಎದೆಗಾರಿಕೆಯನ್ನೂ ತುಂಬಿ ಬದುಕು ಕಟ್ಟಿಕೊಳ್ಳಲು ಹಪಹಪಿಸುವ ಮನಗಳಿಗೆ ಧಾರಿಣಿ ಮಾಯಾ ಅವರ ಮೌನದ ಚಿಪ್ಪಿನೊಳಗೆ ಕೃತಿ ಮರುಭೂಮಿಯ ಓಯಸಿಸ್ ನಂತೆ .
ವ್ಯಸನಕಾರಣವೊಂದು ಹಸನಕಾರಣವೊಂದು ।
ರಸಗಳೀಯೆರಡಕಿಂತಾಳವಿನ್ನೊಂದು ।।
ಭ್ರುಶವಿಶ್ವಜೀವಿತಗಭೀರತೆಯ ದರ್ಶನದ ।
ರಸವದದ್ಭುತಮೌನ – ಮಂಕುತಿಮ್ಮ
(ಹಸನ=ನಗುವು, ಭ್ರುಶ=ವಿಚಿತ್ರ, ಗಭೀರತೆ=ಗಂಭೀರತೆ),
ಈ ಜಗತ್ತಿನ ಸೌಂದರ್ಯಗಳು, ಕೆಲವರಿಗೆ ವ್ಯಸನಕ್ಕೆ ಕಾರಣವಾದರೆ,ಮತ್ತೆ ಕೆಲವು ಹರುಷಕ್ಕೆ ಕಾರಣವಾಗುತ್ತವೆ. ಆದರೆ ಈ ಎರಡೂ ರಸಗಳಿಗಿಂತ ಆಳವಾದ ಇನ್ನೊಂದು ಅನುಭವವಿದೆ. ಈ ವಿಶ್ವದ ಗಂಭೀರತೆಯ ವಿಚಿತ್ರವನ್ನು ನೋಡಿದರೆ ಮನದಲ್ಲಿ ಒಂದು ಗಾಢ ಮೌನ ಆವರಿಸುತ್ತದೆ. ಈ ಮೌನ ರಸದ ಅನುಭವ ಬಹಳ ಅದ್ಭುತ
ಮುತ್ತು ತಯಾರಾಗುವುದೇ ಚಿಪ್ಪಿನಲ್ಲಿ…ಜೀವನೋತ್ಪತ್ತಿಯೂ ತತ್ತಿಯಿಂದಲೇ ಮೊದಲಾಗುವುದು. ಇವೆರಡರ ಹಿಂದಿರುವುದು ಮೌನ.
ಲೇಖಕಿಯ ಮೌನದ ಚಿಪ್ಪಿನೊಳಗಿಂದ ಹೊರಬಂದ ವಿಚಾರಧಾರೆಗಳು ಈ ಕೃತಿಯಲ್ಲಿ ಲೇಖನಗಳಾಗಿ ಮೈದಳೆದು ಮಹಿಳೆ ಮತ್ತು ಅವಳ ಸುತ್ತಲೂ ನಿರ್ಮಿತವಾದ ಬದುಕಿನ ವಿವಿಧ ಆಯಾಮಗಳ ಪರಿಚಯ ಮಾಡಿಕೊಡುತ್ತಲೇ … ಎಚ್ಚೆತ್ತುಕೊಳ್ಳುವಂತೆ ಪ್ರೇರೇಪಿಸುತ್ತದೆ.
ಈ ಕೃತಿಯ ಒಂದೊಂದು ಲೇಖನವೂ ನಮ್ಮೊಳಗಿನ ನಾವು ಎಚ್ಚೆತ್ತುಕೊಳ್ಳುವಂತೆ ಮಾಡುತ್ತದೆ.
ಸುನೀಲ್ ಹಳೆಯೂರು
1 Comment
Excellent review of Dharini Maya’s book. I liked this book very much. It’s a book for everyone to read about our lives and lives of others.