ಮೌನರಾಗ
ಕರಿಮೋಡದಂಚಿನಲಿ
ಮೂಡಿದಾ ಕಿರಿದೊಂದು
ಬಿಳಿಗೆರೆಯ ನಗೆಯಲ್ಲಿ
ಇಣುಕಿಕ್ಕುತಿಹುದೊಂದು
ಮೌನರಾಗ!
ಗಿಡುಗನನು ಕಂಡೊಡನೆ,
ಹಸಿರೆಲೆಗಳ ನಡುವೆ
ಬಚ್ಚಿ ಕುಳಿತ ಮರಿಗುಬ್ಬಿಯ
ಎದೆಮಿಡಿತದ ಸದ್ದಲಿದೆ
ಮೌನ ರಾಗ !
ಬೇಲಿಯಂಚಿನ ಪುಟ್ಟ
ಹೂವ ಮಡಿಲಲಿ ಕುಳಿತ
ಬಣ್ಣದಾ ಚಿಟ್ಟೆಯ
ಕಣ್ಣಿನಲ್ಲವಿತಿಹುದೊಂದು
ಮೌನರಾಗ!
ತನ್ನ ತಬ್ಬಿದಿಬ್ಬನಿಯ
ಹಿಡಿದಿಟ್ಟ ಹಸಿ ಹುಲ್ಲ
ಹಸಿರಲ್ಲಿ ಉಸಿರಾಗಿ
ಜೀವಂತವಾಗಿಹುದು
ಮೌನರಾಗ!
ಕಣ್ಣು ಜಾರಿಸೋ ಎಲ್ಲ
ಹನಿಗಳೂ ಒತ್ತಾಗಿ,
ನಿಶ್ಯಬ್ದದಲಿ ಮುತ್ತಾಗಿ
ಉರುಳುರುಳುವುದೇ
ಮೌನರಾಗ!!
ಶ್ರೀವಲ್ಲಿ ಮಂಜುನಾಥ