ಯಹೂದಿಗಳ ಪಾಲಿನ ರಾಜಕುಮಾರಿ – ‘ಸೋಫ್ಕ’

ಎಲ್ಲಾ ರಾಜಕುಮಾರಿಯಂತಲ್ಲ ಈ ಸೋಫ್ಕ ಎಂಬ ರಾಜಮನೆತನದ ಹುಡುಗಿ. ಎರಡು ಮಹಾಯುದ್ಧದ ಕಾಲದಲ್ಲಿ ಬೆಳೆದು ನರಳಿ ಯಹೂದಿಗಳ ಪಾಲಿಗೆ ಹೂ ಆದವಳು.

ಸೋಫ್ಕ ಸ್ಕಿಪ್ವಿಥ್” (Sofka Skipwith) 1907 ರಲ್ಲಿ ರಷ್ಯಾದ ಪ್ರಖ್ಯಾತ ರಾಜಮನೆತನದಲ್ಲಿ ಹುಟ್ಟಿದವಳು. ತಂದೆ “ಪೀಟರ್ ಅಲೆಕ್ಸಾಂಡ್ರೊವಿಚ್ ಡಾಲ್ಗೊರೊಕಿ“. ತಾತ “ಡಾಲ್ಗೊರೊಕಿ” ಸಾಮ್ರಾಜ್ಯಶಾಯಿ ನ್ಯಾಯಾಲಯದ ಗ್ರಾಂಡ್ ಮಾರ್ಷಲ್ ಮತ್ತು ಅವರ ವಂಶಸ್ಥರು ಮಾಸ್ಕೋ ನಗರ ಸ್ಥಾಪನೆಗೆ ಕಾರಣರಾದವರು. ಸೋಫ್ಕ ತಂದೆ ತಾಯಿಯ ಮದುವೆ ಆಗಿನ ಕಾಲಕ್ಕೆ ರಷ್ಯಾ ಸಾಮ್ರಾಜ್ಯದಲ್ಲಿ ಆದ ಅದ್ದೂರಿ ಮದುವೆ ಎಂದು ಗುರುತಿಸಲ್ಪಟ್ಟಿತ್ತು. ಇಂಥ ರಾಜಮನೆತನದಲ್ಲಿ ಹುಟ್ಟಿದ ಸೋಫ್ಕ ಚಿಕ್ಕ ಹುಡುಗಿಯಾಗಿದ್ದಾಗ ರಷ್ಯಾದಲ್ಲಿನ ರೈತರ ಕಷ್ಟಗಳಿಗೆ ಮರುಗುತಿದ್ದಳು. ಬಡ ಸೇವಕರಿಂದ ತನ್ನನ್ನು ದೂರ ಇರಿಸುತ್ತಿದ್ದ ತನ್ನ ತಂದೆ ತಾಯಿಯ ದೋರಣೆಯಿಂದ ಬೇಸತ್ತಿದ್ದಳು. ತನಗಾಗಿ ಇಟ್ಟಿದ್ದ ಊಟದ ಪಾಲಲ್ಲಿ ಸೇವಕರಿಗೂ ಕದ್ದು ಮುಚ್ಚಿ ಕೊಡುತ್ತಿದ್ದಳು.

ಸೋಫ್ಕ ಹತ್ತು ವರ್ಷದವಳಾಗಿದ್ದಾಗ ರಷ್ಯಾದಲ್ಲಿ ಕಮ್ಯುನಿಸ್ಟರ ಕ್ರಾಂತಿಕಾರಿ ಬೆಳವಣಿಗೆಗಳು ಶುರುವಾಗಿ ರಾಜಮನೆತನಗಳ ಅಧಪತನವಾಗುತ್ತದೆ. ರಷ್ಯಾದ ಕ್ರಾಂತಿಕಾರಿ “ವ್ಲಾಡಿಮಿರ್ ಲೆನಿನ್” ಇವರ ರಾಜಮನೆತನದ ಅಧಿಕಾರವನ್ನು ಅಮಾನ್ಯಗೊಳಿಸಿ ಎಲ್ಲರನ್ನು ಸೆರೆಯಿಡಿಯಲು ಪ್ರಯತ್ನಿಸುತ್ತಿರುವಾಗ ಸೋಫ್ಕ ತನ್ನ ಅಜ್ಜಿಯ ಜೊತೆ ಇಂಗ್ಲೆಂಡಿಗೆ ಹೋಗಿ ತಪ್ಪಿಸಿಕೊಳ್ಳುತ್ತಾಳೆ. ಇಂಗ್ಲೆಂಡಿನಲ್ಲಿ ಬೆಳೆದ ಸೋಫ್ಕ ಪದವೀಧರಳಾಗಿ ಉದ್ಯೋಗ ಮಾಡುತ್ತಿರುವಾಗ ತನ್ನ ತಾಯಿಯು ಇನ್ನು ಬದುಕಿರುವ ವಿಷಯ ತಿಳಿದು ಅವಳನ್ನು ಕಾಣಲು ಸಂತಸದಿಂದ ಪ್ಯಾರಿಸ್ ಗೆ ಬರುತ್ತಾಳೆ. ಎರಡನೇ ಮಹಾಯುದ್ಧ ನೆಡೆಯುತ್ತಿರುವ ಸಂದರ್ಭವದು. ಫ್ರೆಂಚರು ಯುದ್ಧದಲ್ಲಿ ಸೋತು ಜರ್ಮನ್ ಸೇನೆಯು ಆಗಷ್ಟೇ ಪ್ಯಾರಿಸ್ ಅನ್ನು ಆಕ್ರಮಿಸಿಕೊಂಡಿರುತ್ತಾರೆ. ತಾಯಿ ಸಿಕ್ಕ ಖುಷಿ ಬಹಳ ದಿನ ಇರದೇ ಜರ್ಮನ್ ಸೇನೆಯು ಸೋಫ್ಕಾಳನ್ನು ಬಂಧಿಸಿ ಸೆರೆ ಶಿಬಿರಕ್ಕೆ ತಳ್ಳುತ್ತಾರೆ. ನಾಜಿಗಳು ಯಹೂದಿಗಳ ಮಾರಣ ಹೋಮಕ್ಕೆ ಅನೇಕ ಶಿಬಿರಗಳನ್ನು (ಕಾನ್ಸಂಟ್ರೇಶನ್ ಕ್ಯಾಂಪ್) ಸ್ಥಾಪಿಸಿರುತ್ತಾರೆ ಅವುಗಳಲ್ಲಿ ಕೆಲವೊಂದು ಕ್ಯಾಂಪ್ಗಳು ಸೆರೆಯಾಳುಗಳನ್ನು ಕೇವಲ ಶಿಕ್ಷೆ ರೂಪದಲ್ಲಿ ಕೆಲಸ ತೆಗೆದರೆ ಇನ್ನು ಆಶ್ವಿಟ್ಜ್ ನಂತಹ ಕ್ಯಾಂಪ್ಗಳಲ್ಲಿ ಕಠಿಣ ಕೆಲಸದ ಜೊತೆಗೆ ಯಹೂದಿ ಹಾಗು ಇತರೆ ಸೆರೆಯಾಳುಗಳನ್ನು ದಿನಕ್ಕೆ ಇಂತಿಷ್ಟು ಎಂದು ಸಾಮೂಹಿಕವಾಗಿ ಗ್ಯಾಸ್ ಚೇಂಬರ್ ಗೆ ತಳ್ಳಿ ಸಾಯಿಸುತ್ತಿದ್ದರು.

ಹೀಗಿದ್ದಾಗ ಒಂದು ದಿನ 280 ಪೋಲಿಷ್ ಯಹೂದಿಗಳನ್ನು ಸೆರೆಯಿಡಿದು ಸೋಫ್ಕಾಳಿದ್ದ ಕ್ಯಾಂಪಿಗೆ ಕರೆತರುತ್ತಾರೆ. ಇವರ ಕಥೆ ಕೇಳಿ ಸೋಫ್ಕ ತುಂಬಾ ದುಃಖ ಪಡುತ್ತಾಳೆ. ವಾಸ್ತವವಾಗಿ ಇಷ್ಟೂ ಜನರ ಪಾಸ್ ಪೋರ್ಟ್ ಗಳು ಲ್ಯಾಟಿನ್ ಅಮೆರಿಕನ್ ಸರಕಾರದಿಂದ ಮಾನ್ಯವಾಗಿರದೆ ಸ್ವಿಟ್ಜರ್ಲ್ಯಾಂಡ್ ಮತ್ತು ಇನ್ನಿತರ ದೇಶಗಳಿಂದ ಇವರನ್ನು ರಕ್ಷಿಸುವ ಉದ್ದೇಶದಿಂದ ನೀಡಲ್ಪಟ್ಟಿರುತ್ತದೆ. ಅವರುಗಳು ಸ್ಥಿತಿಯು ನಿಜಕ್ಕೂ ದಾರುಣವಾಗಿರುತ್ತದೆ ತಮಗೊದಗಿದ ಬಂಧನದಿಂದ ಭಯಭೀತರಾಗಿ ಮುಖದಲ್ಲಿನ ನಗೆಯು ಮತ್ತೆಂದೂ ಮರಳುವುದಿಲ್ಲವೇನೋ ಎಂದು ತೀರ್ಮಾನಿಸಿದಂತಿರುತ್ತಾರೆ. ಇವರುಗಳನ್ನು ಆಶ್ವಿಟ್ಜ್ ಕ್ಯಾಂಪ್ ಗೆ ಕಳುಹಿಸಲು ನಾಜಿಗಳು ತೀರ್ಮಾನಿಸಿದಾಗ ಸೋಫ್ಕಾ ಏನಾದರೂ ಮಾಡಿ ಇದನ್ನು ತಡೆಯಲು ನಿರ್ಧರಿಸುತ್ತಾಳೆ.

ಸೋಫ್ಕಾಳಿದ್ದ ಕ್ಯಾಂಪ್ ಆಂತರಿಕ ಶಿಬಿರವಾದ್ದರಿಂದ ಸ್ವಲ್ಪ ಮಟ್ಟಿಗೆ ಅಲ್ಲಿನ ಸೆರೆಯಾಳುಗಳಿಗೆ ಸ್ವತಂತ್ರವಿರುತ್ತದೆ. ಇದನ್ನು ಉಪಯೋಗಿಸಿಕೊಂಡ ಸೋಫ್ಕಾ ಅಲ್ಲಿ ದೊರೆಯುತ್ತಿದ್ದ ಸಿಗರೇಟ್ ಹಾಗು ಟೂತ್ ಪೇಸ್ಟ್ ಟ್ಯೂಬುಗಳಲ್ಲಿ ಸಣ್ಣದಾಗಿ ಅಷ್ಟೂ ಜನರ ಹೆಸರನ್ನು ಬರೆದು ಜಿನೀವಾ ಮಾನವೀಯ ಆಯೋಗಕ್ಕೆ ಕಳುಹಿಸಿ ಆದಷ್ಟು ಬೇಗ ಬಿಡಿಸಲು ಸಹಾಯ ಮಾಡಿ ಎಂದು ಇಲ್ಲದಿದ್ದರೆ ಇವರನ್ನೆಲ್ಲ ಆಶ್ವಿಟ್ಜ್ ಕ್ಯಾಂಪಿಗೆ ಸಾಗಿಸುತ್ತಾರೆಂದು ವಿನಂತಿಸುತ್ತಾಳೆ. ವಾರಗಳಾದರು ಅಲ್ಲಿಂದ ಉತ್ತರ ಬರುವುದಿಲ್ಲ ಹಾಗು ಈ ಯಹೂದಿಗಳನ್ನು ಆಶ್ವಿಟ್ಜ್ ಕ್ಯಾಂಪಿಗೆ ಸಾಗಿಸಲು ಶುರುಮಾಡುತ್ತಾರೆ. ಒಬ್ಬ ಹೆಣ್ಮಗಳ ಪುಟ್ಟ ಕಂದಮ್ಮನನ್ನು ಅದು ಹೇಗೋ ಮಾಡಿ ನಾಜಿಗಳ ಕಣ್ತಪ್ಪಿಸಿ ಆಶ್ವಿಟ್ಜ್ ಕ್ಯಾಂಪಿಗೆ ಸಾಗಿಸುವುದನ್ನು ಸ್ವಲ್ಪದರಲ್ಲೇ ತಪ್ಪಿಸುತ್ತಾಳೆ ಸೋಫ್ಕ ಹಾಗು ಆ ಮಗುವನ್ನು ಬಚ್ಚಿಟ್ಟು ಮತ್ತೆ ಜಿನೀವಾ ಆಯೋಗಕ್ಕೆ ಬರೆದು ಬಿಡಿಸುವಂತೆ ವಿನಂತಿಸುತ್ತಾಳೆ.

1944 ರಲ್ಲಿ ಜರ್ಮನಿ ಹಾಗು ಇಂಗ್ಲೆಂಡ್ ಮದ್ಯೆ ಕೈದಿಗಳ ವಿನಿಮಯದಿಂದ ಸೋಫ್ಕ ಬಿಡುಗಡೆಗೊಳ್ಳುತ್ತಾಳೆ ಮತ್ತು 1945 ರಲ್ಲಿ ಜರ್ಮನಿ ಸೋತು ಯುದ್ಧ ಕೊನೆಗೊಳ್ಳುತ್ತದೆ. ಸೋಫ್ಕ ತನ್ನ ಜೀವಿತಾವಧಿಯಲ್ಲಿ ಒಂದು ಮಗುವನ್ನಷ್ಟೇ ಉಳಿಸಲು ಸಾಧ್ಯವಾಯಿತು ಎಂದು ತಿಳಿದಿರುತ್ತಾಳೆ ಆದರೆ ಕ್ಯಾಂಪಿನಲ್ಲಿದ್ದಾಗ ಇವಳು ನಿರಂತರವಾಗಿ ಕಳುಹಿಸಿದ ವಿನಂತಿಗಳನ್ನು ಜಿನೀವಾ ಆಯೋಗ ಗಣನೆಗೆ ತೆಗೆದುಕೊಂಡು 50 ಜರ್ಮನ್ ಹಾಗು ಸೋಫ್ಕ ಕಳುಹಿಸಿದ ಪಟ್ಟಿಯಲ್ಲಿದ್ದ 50 ಯಹೂದಿಗಳನ್ನು ವಿನಿಮಯ ಮಾಡಿ ಮರಣ ಕೂಪದಿಂದ ಬಿಡಿಸಿರುತ್ತಾರೆ.

ಮುಂದೆ ಸೋಫ್ಕ ತನ್ನದೊಂದು ಆತ್ಮಕಥೆಯನ್ನು ಸಹ ಬರೆಯುತ್ತಾಳೆ ಹಾಗು 1994 ರಲ್ಲಿ ತೀರಿಕೊಳ್ಳುತ್ತಾಳೆ. ರಾಜಮನೆತನದಲ್ಲಿ ಹುಟ್ಟಿ ಯಹೂದಿಗಳ ಸ್ಥಿತಿಗೆ ಮರುಗಿ ಅವರನ್ನು ಬಿಡಿಸಲು ತನ್ನ ಕೈಲಿ ಸಾದ್ಯವಾದ ಹೋರಾಟ ಮಾಡಿದ ಇವಳ ಪ್ರಯತ್ನವನ್ನು ವಿಶ್ವ ಹತ್ಯಾಕಾಂಡದ ನೆನಪಿನ ಕೇಂದ್ರವು (World Holocaust Remembrance Center) ಗುರುತಿಸಿ “ವಿಶ್ವದಲ್ಲೇ ನೀತಿವಂತ ಪ್ರಜೆ(Righteous Among the Nations) ಎಂದು ಗೌರವಿಸುತ್ತದೆ. ಸೋಫ್ಕ ರಾಜಕುಮಾರಿಯಾಗಿ ಜನಿಸಿದರು ಸಾಮಾನ್ಯ ವ್ಯಕ್ತಿಯಂತೆ ಜೀವಿಸಿ ಮಾನವೀಯತೆಗೆ ಮಾದರಿಯಾದಳು.

ಕು ಶಿ ಚಂದ್ರಶೇಖರ್

ಮಾಹಿತಿ ಹಾಗು ಚಿತ್ರಗಳು : https://www.yadvashem.org/

Related post