ಯುಕ್ತಿ
ಒಂದು ದಟ್ಟಾರಣ್ಯದಲ್ಲಿ ವಾಸವಾಗಿದ್ದ ಹುಲಿಯೊಂದು ಕಾಡಿನಲ್ಲಿ ತಾನೇ ಅತ್ಯಂತ ಬಲಶಾಲಿಯಾದ ಪ್ರಾಣಿಯೆಂದು ಅಹಂಕಾರದಿಂದ ಬೀಗುತ್ತಾ ತನಗೆದುರಾಗಿ ಸಿಕ್ಕ ಪ್ರಾಣಿಗಳನ್ನು ತನ್ನೊಂದಿಗೆ ಹೋರಾಟದ ಪಂದ್ಯಕ್ಕೆ ಆಹ್ವಾನಿಸಿ ಅವುಗಳನ್ನು ಸೋಲಿಸಿ ಕೊಂದು ತಿನ್ನುತ್ತಾ ಮೆರೆಯುತ್ತಿತ್ತು. ಇದಕ್ಕಾಗಿ ಹುಲಿಯು ಮೊದಲು ತಾನು ಎದುರಾಳಿಯ ಮೇಲೆ ಮೂರು ಬಾರಿ ದಾಳಿ ಮಾಡಿ ನಂತರ ಎದುರಾಳಿ ಪ್ರಾಣಿಯು ತನ್ನ ಮೇಲೆ ಮೂರು ಬಾರಿ ದಾಳಿ ಮಾಡುವ ನಿಯಮ ವಿಧಿಸಿತ್ತು.
ಒಮ್ಮೆ ಹುಲಿಯು ಇಂದು ಯಾವ ಪ್ರಾಣಿಯನ್ನು ಪಂದ್ಯದಲ್ಲಿ ಸೋಲಿಸಿ ಕೊಂದು ತಿನ್ನುವುದೆಂದು ಯೋಚಿಸುತ್ತಿದ್ದಾಗ ಪೊದೆಯೊಳಗೆ ಮಲಗಿದ್ದ ಕೋರೆ ಹಲ್ಲಿನ ಹಂದಿಯು ಅದಕ್ಕೆ ಕಾಣಿಸಿತು. ಹುಲಿಯ ಬಗ್ಗೆ ತಿಳಿದಿದ್ದ ಹಂದಿ ಮೊದಲು ಭಯಗೊಂಡರೂ ಧೈರ್ಯದಿಂದ,
“ಹುಲಿಯಣ್ಣಾ ನಮಸ್ಕಾರ ಹೇಗಿದ್ದಿಯಾ?” ಎಂದು ಕೇಳಿದಾಗ,
“ನೀನು ನನ್ನೊಂದಿಗಿನ ಹೋರಾಟದ ಪಂದ್ಯಕ್ಕೆ ಬಾ” ಎಂದು ಹುಲಿಯು ಹೇಳಿತು.
ಹುಲಿಯಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿದ ಹಂದಿಯು,
“ಹುಲಿಯಣ್ಣಾ ನನಗಿಂದು ಮೈ ಹುಶಾರಿಲ್ಲ, ನಾಳೆ ನಾನೇ ನಿನ್ನೊಂದಿಗಿನ ಪಂದ್ಯಕ್ಕೆ ಅಂಕಣಕ್ಕೆ ಬರುತ್ತೇನೆ” ಎಂದಾಗ ಹುಲಿಯೂ ಒಪ್ಪಿ ಅಲ್ಲಿಂದ ಹೊರಟು ಹೋಯಿತು.
ಆ ಕ್ಷಣ ಹುಲಿಯಿಂದ ತಪ್ಪಿಸಿಕೊಂಡ ಕಾಡು ಹಂದಿಯು, ನಾಳೆಯ ಪಂದ್ಯದಲ್ಲಿ ಹೇಗೆ ಕ್ರೂರಿ ಮತ್ತು ಅಹಂಕಾರಿ ಹುಲಿಯನ್ನು ಸೋಲಿಸುವುದೆಂದು ಯೋಚಿಸತೊಡಗಿತು. ಕೊನೆಗೊಂದು ಉಪಾಯವನ್ನು ಮಾಡಿ ರಾತ್ರಿ ಕಾಡಿನ ಹೊರಗಿದ್ದ ಕೃಷಿ ಜಮೀನ ಕೆಸರಿನಲ್ಲಿ ಚೆನ್ನಾಗಿ ಹೊರಲಾಡಿ ಮೈಯೆಲ್ಲಾ 4-5 ಇಂಚು ಕೆಸರನ್ನು ಮೆತ್ತಿಕೊಂಡು ಬೆಳಗಾಗುತ್ತಿದ್ದಂತೆ ಗದ್ದೆಯಿಂದ ಹೊರ ಬಂದು ಪಂದ್ಯದ ಅಖಾಡದಲ್ಲಿ ನಿಂತು ಹುಲಿಯನ್ನು ಪಂದ್ಯಕ್ಕೆ ಕರೆಯಿತು. ಹಂದಿಯು ಇಂದು ನನ್ನ ಆಹಾರವಾಗುವುದು ಖಚಿತವೆಂಬ ಖುಷಿಯಿಂದ ಹುಲಿಯು ಅಖಾಡಕ್ಕಿಳಿದು ಮೊದಲು ಹುಲಿಯು ಹಂದಿಯ ಮೇಲೆ ದಾಳಿ ಮಾಡಿ ಹಂದಿಯ ಹೊಟ್ಟೆಗೆ ಬಾಯಿ ಹಾಕಿದಾಗ ಹುಲಿಯ ಬಾಯಿಗೆ ಬರೇ ಕೆಸರು ಮಣ್ಣಿನ ಮುದ್ದೆಯೇ ಸಿಕ್ಕಿತು. ಹೀಗೆ ಎರಡು ಮತ್ತು ಮೂರನೇ ಬಾರಿ ದಾಳಿ ಮಾಡಿದಾಗಲೂ ಮೈಯೆಲ್ಲಾ ತುಂಬಿಕೊಂಡಿದ್ದ ಮಣ್ಣೇ ಹುಲಿಯ ಬಾಯಲ್ಲಿ ತುಂಬಿಕೊಂಡಿತ್ತೇ ವಿನಃ ಹಂದಿಗೆ ಒಂದಿನಿತೂ ಗಾಯವಾಗಲಿಲ್ಲ.
ಈಗ ಹಂದಿಯ ಸರದಿಯಂತೆ ತನ್ನ ಚೂಪಾದ ಕೋರೆ ಹಲ್ಲಿನಿಂದ ಮೊದಲು ಹುಲಿಯ ಕತ್ತಿಗೆ ದಾಳಿ ಮಾಡಿ ಕತ್ತಿನ ಮಾಂಸವನ್ನೇ ಕಿತ್ತು ಹಾಕಿತು.
ಎರಡನೇ ಬಾರಿಗೆ ಹಂದಿಯು ಹುಲಿಯ ಹೊಟ್ಟೆಯ ಮೇಲೆ ದಾಳಿ ಮಾಡಿ ಹೊಟ್ಟೆಯನ್ನು ಬಗೆದು ಕರುಳನ್ನೇ ಹೊರತೆಗೆಯಿತು. ಮೂರನೇ ದಾಳಿಗೆ ಹುಲಿರಾಯನ ತಲೆ ಬುರುಡೆಯನ್ನೇ ಒಡೆದು ಪ್ರಾಣವನ್ನು ತೆಗೆದು ಕಾಡಿನ ಪ್ರಾಣಿಗಳನ್ನು ಕ್ರೂರಿ ಹುಲಿಯ ಕಪಿಮುಷ್ಟಿಯಿಂದ ಬಿಡಿಸಿತು.
ಕಾಡಿನ ಪ್ರಾಣಿಗಳೆಲ್ಲಾ ಸಂತೋಷಪಟ್ಟು ನೆಮ್ಮದಿಯಿಂದ ಜೀವನ ಸಾಗಿಸಿದವು.
ಪಂದ್ಯ ಅಥವಾ ಬದುಕನ್ನು ಗೆಲ್ಲಲು ಕೇವಲ ದೈಹಿಕ ಶಕ್ತಿಯಷ್ಟೇ ಇದ್ದರೆ ಸಾಲದು, ಜೊತೆಗೆ ಸಾಂದರ್ಭಿಕವಾದ ಯುಕ್ತಿಯೂ (ಬುದ್ಧಿಯೂ) ಪಂದ್ಯವನ್ನು ಗೆಲ್ಲಿಸುತ್ತದೆ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160
4 Comments
good one santosh
Super sir very good information 🙏
ಯುಕ್ತಿ ಬಹಳ ಉಪಯುಕ್ತ ಕಥೆ
ಉತ್ತಮ ಲೇಖನ ಸರ್