ರಕ್ಕಸ ನಿದ್ದೆ

ರಕ್ಕಸ ನಿದ್ದೆ

ಹಲವು ಜನರಿಗೆ ಮರೀಚಿಕೆಯಾದೆ
ಕೆಲವರ ಪಾಲಿಗೆ ಬೇಡದ ವರವಾದೆ
ನಿನಗಾಗಿ ಅಸುರನೊಬ್ಬನ ಸಾಂಗತ್ಯವಿದೆ

ನಿನ್ನಯ ಶಾಪಕೆ ಅವನಿಗೂ ಕೆಟ್ಟಹೆಸರು
ಅವನಿಂದ ಈಗಲೂ ಹಲವರಿಗೆ ಅದೇ ಹೆಸರು
ಬೇಡುವರು ಕೆಲವರು ನಿನ್ನಯ ಉಸಿರು

ಸಂತೆಯಾದರೂ ಚಿಂತೆಯಿಲ್ಲದಿದ್ದರೂ ಸಹ
ನಿನಗಿಲ್ಲ ಚಿಂತೆ ಬದುಕಲ್ಲಿ ನಿನದೇ ಸಂತೆ
ನಿನ್ನಯ ಆಗಮನವ ಕಂಡು ಕರುಬುವ ಜನ

ತುತ್ತಿನ ಚೀಲಕ್ಕೆ ನಿನ್ನನ್ನು ಮರೆತ ಜನ
ಮರಕ್ಕಂಟಿದ ಬಾವಲಿಗಳಂತೆ ನಿಶಾಚರಿಯಾಗಿ
ನಿನದೇ ಧ್ಯಾನದಲಿ ಕೊರಗುತಿಹರು ಅನುದಿನ

ಊಟದಷ್ಟೇ ಮಹತ್ವ ನಿನಗೂ ಇರಲಿ
ನಿನ್ನಯ ಕೃಪೆಯು ಎಲ್ಲರ ಮೇಲಿರಲಿ
ಕಾವಳದ ರಾತ್ರಿಯಲಿ ಸುಂದರ ಸ್ವಪ್ನಗಳಿರಲಿ

ಮರೀಚಿಕೆಯಾಗದಿರು ನೀನು ನಿದಿರೆ
ಕುಂಭಕರ್ಣನಿಗೆ ನೀನಾದೆ ಆಸರೆ
ನಿನ್ನ ಕೃಪೆಯು ನನಗೂ ದೊರಕುತಿರೆ

ನಿದ್ರೆ ಸವಿನಿದ್ರೆ ಸುಖನಿದ್ರೆ ಗಾಢನಿದ್ರೆ…

ಸಿ. ಎನ್. ಮಹೇಶ್

Related post

Leave a Reply

Your email address will not be published. Required fields are marked *