ಹಂಸರಾಗಕ್ಕೆ ಡಾ|| ರಾಜ್ ಗಾಯನ
ಏಪ್ರಿಲ್ 24 ಡಾ|| ರಾಜ್ ಜನ್ಮದಿನದ ಸವಿನೆನಪು. ಕನ್ನಡ ನಾಡಿಗೆ ಮತ್ತು ಅಭಿಮಾನಿ ದೇವರುಗಳಿಗೆ ಈ ದಿವಸ ಮತ್ತೊಂದು ಹಬ್ಬ.
ಡಾ|| ರಾಜ್ ಕನ್ನಡ ನಾಡಿನ ಜನಮಾನಸದಲ್ಲಿ ನೆಲೆಯಾಗಿರುವುದು ನಟನೆಯಿಂದಷ್ಟೇ ಅಲ್ಲದೆ ತಮ್ಮ ಸರಳ ವ್ಯಕ್ತಿತ್ವದಿಂದಲೂ ಕೂಡ, ಹಾಗೆಯೇ ಇನ್ನೊಂದು ರೂಪ ಅವರ ಗಾಯನ ಶಕ್ತಿ. ಅಸಂಖ್ಯ ಚಿತ್ರಗೀತೆಗಳಲ್ಲದೆ ಅವರು ಹಾಡಿದ ಅನೇಕ ಭಕ್ತಿಗೀತೆಗಳು ಕೂಡ ಇಂದಿಗೂ ಮುಂದೆಂದಿಗೂ ಡಾ|| ರಾಜ್ ರ ಧ್ವನಿ ಜನಮಾನಸಕ್ಕೆ ಮರೆಯಲಾರದಂತದ್ದು, ಹಾಗೆಯೇ ಅವರ ಧ್ವನಿಗೆ ಸಂಗೀತ ನಿರ್ದೇಶನ ಮಾಡಿದ ಸಂಗೀತ ದಿಗ್ಗಜರಲ್ಲಿ ಡಾ|| ಹಂಸಲೇಖ ರವರು ಕೊನೆಯ ಸಂಗೀತ ನಿರ್ದೇಶಕರೆಂದೇ ಹೇಳಬಹುದು.
ಡಾ|| ರಾಜ್ 1988 ರವರೆಗೂ ತಮ್ಮ ಚಿತ್ರದ ಹಾಡುಗಳಿಗಷ್ಟೇ ಧ್ವನಿಯಾಗುತಿದದ್ದು. ತಮ್ಮಿಬ್ಬರ ಪುತ್ರರಾದ ಶಿವರಾಜಕುಮಾರ್ ಹಾಗು ರಾಘವೇಂದ್ರ ರಾಜಕುಮಾರ್ ರವರ ಆರಂಭಿಕ ಚಿತ್ರಗಳಿಗೂ ಕೂಡ ಗಾಯನ ನೀಡಿರಲಿಲ್ಲ. ಆದರೆ ಡಾ|| ರಾಜ್ ರನ್ನು ತಮ್ಮದಲ್ಲದ ಚಿತ್ರಗಳಲ್ಲಿ ಹಾಡಲು ಪ್ರೇರೇಪಿಸಿದ್ದು ಹಂಸಲೇಖ ರವರೇ. ಹಂಸ್ ರ ಸಂಗೀತ ನಿರ್ದೇಶನದ “ರಣರಂಗ” ಚಿತ್ರದಲ್ಲಿ ಅಣ್ಣಾವ್ರು “ಜಗವೇ ಒಂದು ರಣರಂಗ” ಹಾಡನ್ನು ಹಾಡುವ ಮೂಲಕ ತಮ್ಮ ಗಾಯನ ಶಕ್ತಿಯ ಇನ್ನೊಂದು ಮಜಲನ್ನು ಆರಂಭಿಸಿದರು. ಹೆಚ್ಚು ಕಡಿಮೆ ಆಗಿನ ಎಲ್ಲಾ ಯುವ ನಟರ ಹಾಡುಗಳಿಗೆ ಡಾ|| ರಾಜ್ ಧ್ವನಿಯಾದರು. ಈ ಸಂಗೀತ ಗಾಯನದ ನಾವೆಯಲ್ಲಿ ಡಾ|| ರಾಜ್ ರನ್ನು ತಮ್ಮ ಸಂಗೀತ ಹಾಗು ಸಾಹಿತ್ಯಕ್ಕೆ ಪರಿಣಾಮಕಾರಿಯಾಗಿ ಧ್ವನಿಯಾಗಿಸಿದ್ದು ಬೇರೆಲ್ಲರಿಗಿಂತ ಹೆಚ್ಚು ಹಂಸಲೇಖ ರವರು.
ಇವರಿಬ್ಬರ ಜೋಡಿಯಲ್ಲಿ ಹೊರಬಂದ ಎಲ್ಲಾ ಹಾಡುಗಳು ಇಂದಿಗೂ ಜನಪ್ರಿಯ. ಅವುಗಳಲ್ಲಿ ಎಲ್ಲಾ ತರಹದ ಹಾಡುಗಳು ಒಳಗೊಂಡಿದ್ದು ವಿಶೇಷ. ಹಂಸಲೇಖಾರವರಿಗೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ “ಗಾನಯೋಗಿ ಪಂಚಾಕ್ಷರಿ ಗವಾಯಿ” ಯಲ್ಲಿನ “ಸಾವಿರದ ಶರಣು” ಹಾಡು ಇಂದಿಗೂ ಕೇಳಿದರೆ ಎಂತವರಿಗೂ ಭಕ್ತಿ ಭಾವ ಒಸರುವುದು. “ಮಣ್ಣಿನ ದೋಣಿ” ಯಲ್ಲಿನ “ಮೇಘ ಬಂತು ಮೇಘ” “ಹೂವು ಹಣ್ಣು” ಚಿತ್ರದ “ತಾಯಿ ತಾಯಿ” ಮೇಘಮಾಲೆ ಚಿತ್ರದ ಟೈಟಲ್ ಹಾಡು ಎಲ್ಲರು ಕೇಳಿರುವಂತಹ ಇನ್ನೂ ಅದೆಷ್ಟೋ ಹಾಡುಗಳು ಇವರಿಬ್ಬರ ಜೋಡಿಯ ಜನಪ್ರಿಯತೆಯನ್ನು ನೆನಪಿಸುತ್ತದೆ.
“ಓಂ” ಚಿತ್ರದಲ್ಲಿನ ಹೇ ದಿನಕರ ಹಾಡಿನ ಸಾಲುಗಳಾದ,
“ನೊಂದ ಎಲ್ಲಾ ಜೀವ,
ನನ್ನದೆಂಬ ಭಾವ,
ಬಾಳಿನಲ್ಲಿ ತುಂಬೋ
ವಿದ್ಯೆ ವಿನಯ ಕರುಣಿಸು“
ಕೇಳುತಿದ್ದರೆ ಎಂತಹ ಕಲ್ಲು ಮನಸ್ಸು ಕೂಡ ಕರಗುತ್ತದೆ.
ಪುರುಷೋತ್ತಮ ಚಿತ್ರದ “ಶಿವಾ ಶಿವಾ” ಗೆಲುವಿನ ಸರದಾರ ಚಿತ್ರದ “ಟೊಪ್ಪಿ ಟೊಪ್ಪಿ” ಹಾಡುಗಳು ಡಾ|| ರಾಜ್ ಈ ತರಹದ ಹಾಡುಗಳನ್ನು ಕೂಡ ಹಾಡುತ್ತಾರೆ ಎಂದು ಗೊತ್ತಾದದ್ದೇ ಹಂಸಲೇಖ ರವರಿಂದ. ಅಣ್ಣಾವ್ರು ಹಾಡಲು ಸ್ಟುಡಿಯೋ ಗೆ ಎಂದಿನ ತಮ್ಮ ಚೈತನ್ಯ ಹಾಗು ಉತ್ಸಾಹದಿಂದ ಬಂದರೆ ಹಾಗೆಯೇ ಹಂಸಲೇಖ ರವರ ಹಾಡಿನ ರಚನೆ ಅಷ್ಟೇ ಚುರುಕಿನ ಸಾಹಿತ್ಯದೊಂದಿಗೆ ಸಿದ್ಧವಾಗಿರುತಿತ್ತು.
ಆಕಸ್ಮಿಕ ಚಿತ್ರದ “ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು” ಹಾಡು ಅದೆಷ್ಟು ಜನಪ್ರಿಯವೆಂದರೆ ಚಿತ್ರ ತೆರೆಕಂಡಾಗ ಥೀಯೇಟರ್ ನಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಎರಡೆರಡು ಸಲ ಪ್ರಸಾರವಾಗಿತ್ತು. ಅದೇ ಚಿತ್ರದಲ್ಲಿನ “ಬಾಳುವಂತ ಹೂವೆ ಬಾಡುವಾಸೆ ಏಕೆ ?” ಹಾಡಿನ ಸಾಹಿತ್ಯ ಹಾಗು ರಾಜ್ ರ ಗಾಯನ ಅದೆಷ್ಟೋ ಖಿನ್ನತೆಗೊಳಗಾದವರ ಮನಸಿನ್ನಲ್ಲಿ ಚೈತನ್ಯ ಈಗಲೂ ತುಂಬುತ್ತಿದೆ.
ದೊರೆ ಚಿತ್ರದಲ್ಲಿನ “ರೈತ ರೈತ” ಹಾಡು ಬಂಡಾಯದ ಕಿಚ್ಚನ್ನು ಹಚ್ಚಿಸಿದರೆ ಹೃದಯ ಹೃದಯ ಚಿತ್ರದ “ಓ ಪ್ರೇಮದಾ ಗಂಗೆಯೇ ಇಳಿದು ಬಾ” ಹಾಡನ್ನು ಪ್ರೇಮಿಗಳು ಖುಷಿಯಿಂದ ಕೇಳಬಹುದಾದ ಹಾಡು, ಅದೇ ಚಿತ್ರದ “ಹೋಗಿ ಬಾ ಹೋಗಿ ಬಾ” ಹಾಡು ಪ್ರೇಮಿಗಳ ವಿರಹವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ರಾಜ್- ಹಂಸ್ ಎಷ್ಟೋ ಯುವ ನಟರ ಚಿತ್ರಗಳಿಗೆ ಅಂದು ಗಾಯನ, ಸಂಗೀತ ಹಾಗು ಸಾಹಿತ್ಯದ ಮೂಲಕ ಜೊತೆಯಾಗಿದ್ದಾರೆ ಆದರೆ ಈಗಿನ ನಟರುಗಳಿಗೆ ನೀಡುವ ಬಿಲ್ಡ್ ಅಪ್ ಸಂಗೀತ ಸಾಹಿತ್ಯವಂತೂ ಅಲ್ಲವೇ ಅಲ್ಲ ಬದಲಿಗೆ ಚಿತ್ರಕ್ಕೆ ಅಥವಾ ಸನ್ನಿವೇಶಕ್ಕೆ ಪೂರಕವಾಗಿ ಇವರಿಬ್ಬರ ಜೋಡಿ ಹಾಡುಗಳನ್ನು ಗೆಲ್ಲಿಸುತಿತ್ತು ಎಂದರೆ ತಪ್ಪಿಲ್ಲ!
ಲೇಖನದಲ್ಲಿ ಬರೆದು ಕಟ್ಟಿಹಾಕಲಾಗದ ಇವರಿಬ್ಬರ ಗಾಯನ – ಸಾಹಿತ್ಯ – ಸಂಗೀತವು ಕೇಳಿ ಮಾತ್ರ ಆನಂದಿಸಬಹುದು…
ಕು ಶಿ ಚಂದ್ರಶೇಖರ್