ರಾಧಾಮಾಧವರ ದಿವ್ಯಪ್ರೀತಿ
ಕೃಷ್ಣರಾಧೆಯರ ಒಲವಧಾರೆಯ
ಕಂಡು ಲೋಕದಿ ಏನೊ ಪುಳಕ..!
ರಾಧಾಮಾಧವನೆಂಬ ಜಗ ನೀಡಿದ
ಹೆಸರಲಿ ಇಹದಲ್ಲ ಯಾವ ಕಳಂಕ..!!
ಮುಕುಂದನ ನೀಲಿ ಕಂಗಳಲಿ
ಕಂಡಿಹಳು ರಾಧೆ ಅನಂತಪ್ರೀತಿ..!
ಬಲ್ಲವಳಿವಳು ಮಾತ್ರವೇ ಅದರಲಡಗಿಹ
ಭವ್ಯ ಅನುರಾಗದ ದಿವ್ಯನೀತಿ!!
ಮುರಾರಿಗೋ ಅವಳೆಂದರೆ
ಆತ್ಮ,ಜೀವಗಳ ಸವಿಭಾವದೊರತೆ..!
ಬಾಳಲಿ ಅವನಿಗಿಲ್ಲ ಅವಳ
ಎದಿರು ಯಾವುದಕೂ ಕೊರತೆ!!
ಗೋಪಿಕೆಯರು ಸಾವಿರಾರಿದ್ದರೂ
ಮೋಹನನಿಗೆ ರಾಧೆಯೇ ಪ್ರಾಧಾನ್ಯ..!
ನೀಡಿಹನು ತನ್ನ ಹೃದಯದಂತರಾಳವ
ಅವಳ ಒಲವೇ ಅವನಿಗೆ ಅನನ್ಯ!!
ಕಳೆದ ಜನ್ಮಜನ್ಮಗಳಲಿ ಆಗಿದೆ
ಇವರೀರ್ವರ ಆತ್ಮಾನುಸಂಧಾನ..!
ಲೋಕಕಿಂದಿಗೂ ಮಾದರಿ
ರಾಧೆಗೋವಿಂದರ ಪ್ರೀತಿಯ ಕಥನ!!
ಸುಮನಾ ರಮಾನಂದ