ರಾಮನೊಳಗಿನ ಅಳಲು
ರಾಮನಿಗೆ ಸೀತೆಯೋ
ಮನವ ಮೆಚ್ಚಿದ ಮಡದಿ
ಅಯೋಧ್ಯೆಯ ಕಿರೀಟವು
ಅವನ ಕಾಲಿನ ಬುಡದಿ.
ಕೈಕೆಯಿಂ ದಶರಥನ
ಅಹಮಿಕೆಯು ಅಡಗಡಗಿ
ವೃದ್ಧರಾ ಮುನಿಗಳಾ
ಶಾಪಕ್ಕೆ ಎರವಾಗಿ.
ಬಂದುದೈ ಬೇಸಗೆಯು
ವಸಂತದ ಮಾಸದಲಿ
ತಂದೆ ಮಾತನು ತಪ್ಪೆ-
ನೆಂಬ ಅಭಿ ಮಾನದಲಿ.
ಹೊರಟ್ಟಿದ್ದು ನೆನಪಾಯ್ತು
ಸೀತೆಯಾ ಪತಿಗಿಂದು
ದುಷ್ಟ ಸಂಹಾರದಲಿ
ಅದೆ ಮೊದಲ ಜಲಬಿಂದು.
ನೆಪಮಾತ್ರ ವನವಾಸ
ಎಲ್ಲವೂ ವಿಧಿಲಿಖಿತ
ಗರುಡನಿಗು ಗುರಿಬೇಕು
ಇಲ್ಲದಿರೆ ನಿರ್ವಾತ.
ರಾವಣನ ಗೆದ್ದುದೇನ್
ಬಹುದೊಡ್ಡ ಕತೆಯಲ್ಲ.
ಸೀತೆಯನು ಕೆಂಡದಲಿ
ನಾನೆ ಕಳುಹಿದೆನಲ್ಲ.
ಗೆದ್ದು ಬಂದಳು ಅವಳು
ಅಗ್ನಿಯ ಪರೀಕ್ಷೆಯಲಿ
ಸಾಕೇತದಲಿ ಇಂದು
ಸಾಕಾಗದಾಯ್ತಲ್ಲ.
ಜನರ ಮನವನು ನಾನು
ಹೇಗೆ ಹೇಳಲಿ ಹೇಳು
ರಾಮನಿಗು ಬಿಡಲಿಲ್ಲ
ಜನಮಾನಸದ ಗೋಳು
ಅನುಮಾನ ಜನರದ್ದು
ನಿಜಕು ರಾಮನದಲ್ಲ
ಆದರೂ ಅವನೊಳಗೆ
ಚಿಂತೆ ಬಿಡಲೇ ಇಲ್ಲ.
ರಾಮ ಮನವದು ನೋಡು
ಸೀತೆಯಿಂ ಹೊರತಲ್ಲ
ಅವನ ಮನದಲಿ ಜನರು
ಎಂದಿಗೂ ಬೆರೆತಿಲ್ಲ.
ನೂರು ರಾಮಾಯಣವು
ಬಂದು ಹೋದರು ಸರಿಯೆ
ಸೀತೆಯನೆ ಅನುಮಾನಿ-
ಸುವುದು ಈ ಜಗವರಿಯೆ
ರಾಮನರ್ಧಾಂಗಿಯನು
ಅನುಮಾನಿಸಲು ನಾವು
ರಾಮನಿಗೆ ಅಲ್ಲವೇ
ಅದರೊಳಗಿನಾ ನೋವು.
ತ ನಾ ಶಿವಕುಮಾರ್
ಮಂಡ್ಯ