ರೀಲ್ಗಷ್ಟೇ ಸೀಮಿತವಲ್ಲದ ರಿಯಲ್ ಹೀರೋ ಅಪ್ಪು

ಇಂದು ಪ್ರೀತಿಯ ಅಪ್ಪುವಿನ ಜನ್ಮ ದಿನ…

‘ಅಪ್ಪು’ ಎಂಬುದು ನಾಮ ಪದವೋ? ಕ್ರಿಯಾ ಪದವೋ? ಇವೆರಡನ್ನೂ ಮೀರಿದ ಕ್ರಿಯಾಶೀಲತೆಯ ನಾಮಾಂಕಿತ!

ಇತ್ತೀಚಿಗೆ ಅಪ್ಪು, ಪುನೀತ್, ಲೋಹಿತ್ ಎಂಬ ಪದಗಳು ಕನ್ನಡಿಗರ ಮನದಲ್ಲಷ್ಟೇ ಮಾರ್ನುಡಿಯುತ್ತಿಲ್ಲ, ಕನ್ನಡೇತರರ ಮನದಲ್ಲೂ ನೆಲೆ ಕಂಡು ಮನ ಕಲಕಿದೆ.

ಚಿತ್ರಪ್ರೇಮಿಗಳಲ್ಲದೇ , ಚಿತ್ರಗಳನ್ನು ನೋಡುವ ಅಭ್ಯಾಸವಿಲ್ಲದವರಲ್ಲೂ ‘ಅಪ್ಪು’ ಸ್ಥಾನ ಪಡೆದಿದ್ದಾನೆ ಎಂಬುದೀಗ ಜನಜನಿತ ಮಾತು.

ಆಬಾಲವೃದ್ಧರಾಗಿ ಲಿಂಗಭೇದವಿಲ್ಲದೇ ನಿಷ್ಕಳಂಕ ಭಾವದಿ ಪುನೀತನನ್ನು ಪ್ರೀತಿಸುತ್ತಿದ್ದಾರೆಂದರೆ ಅದರ ಹಿಂದಿನ ಮರ್ಮ ಆ ಮುಗ್ಧ ನಗುವೇ ಆಗಿದೆ!

ಜಗದ ಎಲ್ಲರೂ ನೋವಿಲ್ಲದೇ ನಗು ನಗುತ್ತಾ ಬಾಳಲಿ ಎಂಬ ಅಪ್ಪುವಿನ ವಿಶಾಲ ಮನೋಧರ್ಮವೇ ಈಗ ಎಲ್ಲಾ ಧರ್ಮ-ಪಂಥಗಳನ್ನು ದಾಟಿ, ಮೀಟಿ ಮುಗಿಲೆತ್ತರಕೆ ‘ಮತ್ತೆ ಹುಟ್ಟಿ ಬಾ’ ಎಂಬ ಉದ್ಘೋಷ ಮೊಳಗಲು ಕಾರಣವಾಗಿದೆ. ಎಲ್ಲರ ನೋವು ಅಶ್ರುಧಾರೆಯ ಮಳೆಗರಿದಿದೆ, ಎಲ್ಲರ ಹೃದಯವ ಆದ್ರಗೊಳಿಸಿವೆ.

ಪುಟ್ಟ ಕಂದಮ್ಮನಾಗಿದ್ದಾಗಲೇ ‘ಪ್ರೇಮದ ಕಾಣಿಕೆ’ ಮೂಲಕ ಕ್ಯಾಮೆರಾ ಮುಂದೆ ಬಂದ ಕನ್ನಡದ ಕಂದ ಬಾಲ ನಟನಾಗಿ, ಯುವರತ್ನನಾಗಿ ಹಮ್ಮೀರನಾಗಿ, ಹಮ್ಮು-ಬಿಮ್ಮುಗಳಿಂದ ಹೊರತಾಗಿ, ಅಜಾತಶತ್ರುವಾಗಿ, ‘ರಾಜಕುಮಾರ್’ ಎಂಬ ಹೆಸರಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಅಭಿಮಾನಗಳ ಮನದಲ್ಲಿ ಸಾಮ್ರಾಟನ ಸ್ಥಾನ ಪಡೆದದ್ದು ಸಾಮಾನ್ಯ ಸಂಗತಿ ಏನೂ ಅಲ್ಲಾ?

ಬಾಲನಟನಾಗಿದ್ದಾಗಲೇ ‘ಬೆಟ್ಟದ ಹೂ’ ತಂದು ರಾಷ್ಟ್ರಪ್ರಶಸ್ತಿ ಗಳಿಸಿದ್ದು ಪ್ರತಿಭೆಯ ಪ್ರಭೆಯ ದ್ಯೋತಕ.

ಲೋಹಿತ್ ‘ಭೂಮಿಗೆ ಬಂದ ಭಗವಂತ’ ಎಂಬ ಚಿತ್ರದಲ್ಲಿ ನಟಿಸಿದ್ದು ಇತಿಹಾಸ. ಆದರೆ ಅಪ್ಪುವಿನಿಂದ ಸಹಾಯ ಪಡೆದ ಎಲ್ಲರಿಗೂ ಅಪ್ಪು ಅಕ್ಷರಶಃ ‘ಭೂಮಿಗೆ ಬಂದ ಭಗವಂತ’ನೇ ಆದರು!

ನಟಸಾರ್ವಭೌಮ ಬಿರುದಾಂಕಿತ ಅಪ್ಪನ ಜೊತೆ ನಟಿಸಿ ‘ಸೈ’ ಎನಿಸಿಕೊಂಡದ್ದಲ್ಲದೇ ಬಾಲ ನಟನೆಗೆ ರಾಜ್ಯಪ್ರಶಸ್ತಿಯನ್ನೂ, ಎರಡು ನಕ್ಷತ್ರಗಳು ಚಿತ್ರದಲ್ಲಿನ ದ್ವಿಪಾತ್ರಕ್ಕೆ ಎರಡನೇ ಬಾರಿ ಪ್ರಶಸ್ತಿಯನ್ನೂ ಪಡೆದು ಅಭಿಮಾನಿಗಳ ಮನದಾಗಸದಿ ನಕ್ಷತ್ರದಂತೆ ಹೊಳೆದದ್ದಲ್ಲದೇ ಚಿರಸ್ಥಾಯಿಯಾಗಿ ಸ್ಟಾರ್ ಗಿರಿ ಪಡೆಯಲು ಅನುವಾಯ್ತು.

‘ರಾಜಕುಮಾರ’ ನಾಗಿ ನಟಿಸದಷ್ಟೇ ಅಲ್ಲದೇ ಕನ್ನಡಿಗರ ಮನದಿ ಸಿಂಹಾಸನವನ್ನು ಗಳಿಸಿ ಆಸೀನನಾಗಿ ರಾಜಕುಮಾರನೇ ಆದ ಅಪ್ಪು!

‘ಯುವರತ್ನ’ ಎಂಬ ಚಿತ್ರದಲ್ಲಿ ನಟಿಸಿದ ಪುನೀತ್ ಮುತ್ತುರತ್ನದಷ್ಟು ಬೆಲೆ ಕಟ್ಟಲಾಗದ ಕಾರ್ಯಗಳನ್ನು ಮಾಡುತ್ತಾ ನಿಜ ಜೀವನದಿ ಹೀರೋ ಪಟ್ಟವನ್ನು ಗಳಿಸಿದ್ದಾಯ್ತು.

ಶೋಚನೀಯ ಸಂಗತಿ ಎಂದರೆ ಬದುಕಿ ಬಾಳಿದ ದಿನಗಳಲ್ಲಿ ಯಾರ ಸುಳಿವಿಗೂ ಬಾರದೇ ಕೈಗೊಂಡ ಅಕ್ಷರ ದಾಸೋಹ, ಮಹಿಳಾ ಸಬಲೀಕರ್ಣ ಹಾಗೂ ಹಲವಾರು ಸತ್ಕಾರ್ಯಗಳು ನಿರ್ಗಮಿಸಿದ ಮೇಲೆ ರೀಲಂತೆ ಬಿಚ್ಚಿಕೊಂಡಿದ್ದು!

ರೀಲ್ನಲ್ಲಿ ಹೀರೋ ಆಗುವುದು, ತೆರೆಯ ಮೇಲೆ ಸ್ಟಾರ್ ಆಗುವುದು ಮಾಮೂಲು ಆದರೆ ಅಪ್ಪು ರಿಯಲ್ ಹೀರೋ ಆಗಿದ್ದ ವಿಷಯ ಎಲ್ಲರಿಗೂ ಅರಿವಿಗೆ ಬಂದದ್ದು ಅಪ್ಪು ಆಗಸದಿ ಸ್ಟಾರ್ ಆದ ಮೇಲೆ!

ನಕ್ಷತ್ರದಂತೆ ಹೊಳೆದ ಪುನೀತ್ ದ್ರುವ ನಕ್ಷತ್ರದಂತೆ ಆಗಸದಿ, ಅಭಿಮಾನಿಗಳ ಮನದಾಗಸದಿ ಅಪ್ಪಿ ಕೂತು ನಕ್ಷತ್ರವೇ ಆಗಿದ್ದಾನೆ!

ಅಪ್ಪ-ಅಮ್ಮರ ಮುದ್ದಿನ ಮಗ ಅಪ್ಪು ಅವರ ಜೋಲಲ್ಲೇ ಜಾಗ ಪಡೆದಿದ್ದಾನೆ.

ಕಾಲ ಸರಿದಂತೆ ನೋವು ದೂರಾಗುತ್ತೆ, ಹೊಸ ಹೊಸ ವಿಚಾರಗಳತ್ತ ಮನಸು ತಿರುವು ಪಡೆಯುತ್ತೆ ಎನ್ನುವುದು ಸಾಮಾನ್ಯ ಸಂಗತಿ. ಆದರೆ ಅಪ್ಪುವಿನ ವಿಷಯದಲ್ಲಿ ಅದು ಹಾಗಾಗಲೇ ಇಲ್ಲಾ ಮತ್ತಷ್ಟು ಕಾಡುವ ಸುದ್ದಿಗಳೇ ಎಲ್ಲೆಡೆ ಹರಿದಾಡಿ ಮತ್ತಷ್ಟು ಘಾಸಿಗೊಳಿಸುತ್ತಿವೆ.

ಓದುವ, ಕೇಳಿಸಿಕೊಳ್ಳುವ, ನೋಡುವ ವ್ಯವದಾನವು ಹೆಚ್ಚಾದ ಈ ಕಾಲಘಟ್ಟದಲ್ಲಿ ಅದನ್ನು ಅರಿತವರು ಅಪ್ಪುವಿನ ಎಲ್ಲ ವಿಷಯಗಳನ್ನೂ ಎಲ್ಲಾ ರೀತಿಯಲ್ಲಿ ಜನರ ಮುಂದೆ ತರುತ್ತಿರುವ ಕ್ರಮ ಇಲ್ಲಿಯವರೆಗಿನ ಎಲ್ಲಾ ದಾಖಲೆಗಳನ್ನು ಮುರಿಯುವ ಹಂತಕ್ಕೆ ತಲುಪಿದೆ.

ಸಾಮಾಜಿಕ ಜಾಲತಾಣಗಳು ತಮ್ಮ ವ್ಯಾಪ್ತಿಯನ್ನು ಮೀರಿ ಅಪ್ಪುವನ್ನು ಅಪ್ಪಿವೆ. ಈ ಮೂಲಕ ಅಪ್ಪುವಿನ ಬಗ್ಗೆ ಇದ್ದ ನೋವು ಮರೆಯಲಾಗದಂತಾಗಿ ಮತ್ತಷ್ಟು ಆಳಕ್ಕೆ ಇಳಿಯುತ್ತಿದೆ.

ಕೆಲವು ಮೂಲಗಳ ಪ್ರಕಾರ ಗಾಂಧೀಜಿಯ ಮರಣ ಕಾಲದಲ್ಲೂ ಸಹ ಅಪ್ಪುವನ್ನು ನೋಡಲು ಬಂದಷ್ಟು ಜನರು ಬಂದಿರಲಿಲ್ಲಾ ಎಂಬ ಮಾತಿದೆ! ಅದರ ಲೆಕ್ಕಾಚಾರಕ್ಕಿಂತ ಅಂತಹ ತುಲನೆಯೇ ಅಮೋಘ!

ಈ ದಾಖಲೆಯೂ ಹೌದೆಂದಾದರೆ ಅಪ್ಪುವನ್ನು ಪ್ರೀತಿಸುವವರ ಸಂಖ್ಯೆಯು ಅದರ ದುಪ್ಪಟ್ಟೂ, ಮುಪ್ಪಟ್ಟೂ ಆಗಿರುವ ಸಾಧ್ಯತೆಯಿದೆ! ಕಾರಣವೂ ಇಲ್ಲದಿಲ್ಲಾ! ಆಗ ತಾನೆ ಕರೋನಾ ಇಳಿಮುಖವಾಗುತ್ತಿತ್ತು. ಹಾಗಾಗಿ ಎಲ್ಲ ಅಭಿಮಾನಿಗಳು ಬರಲಾಗದೆಯೂ ಇದ್ದಿರಬಹುದು.!

ಹೀಗಿದ್ದೂ ಲಕ್ಷ-ಲಕ್ಷ ಜನರು ಸಾಗರೋಪಾದಿಯಲ್ಲಿ ಹರಿದು ಬಂದರು, ಮುಗಿಬಿದ್ದು ಸಾಗಿದರು. ಆದರೂ ಕರೋನಾ ಎಂಬ ಈ ಮಹಾಮಾರಿಯು ತನ್ನ ಆಟೋಟವನ್ನು ತೋರಲಿಲ್ಲಾ! ಅದೂ ಕೂಡ ನಮ್ಮ ಅಪ್ಪುಗಾಗಿ, ಅಪ್ಪುವಿನ ಅಭಿಮಾನಿಗಳಿಗಾಗಿ ಈ ಜೀವ ಭಕ್ಷಕ ಕರೋನಾವು ತಾನಾಯ್ತು ತನ್ನ ಪಾಡಾಯ್ತು ಎಂಬಂತೆ ತೆಪ್ಪಗೆ ಮೂಲೆ ಸೇರಿ ಸಂರಕ್ಷಕನಂತೆ ವರ್ತಿಸಿದ್ದು ಸೂಜಿಗವೇ ಸರಿ! ಅಲ್ವೇ!?

ಮಣ್ಣಲ್ಲಿ ಮಣ್ಣಾಗಿ ಈ ಜೀವನವು ಕ್ಷಣಿಕ, ಕೊಟ್ಟದ್ದೇ ಶಾಶ್ವತ ಎಂದು ನುಡಿಯದೇ ಕಾರ್ಯರೂಪದಿ ಮಾಡಿ ತೋರಿಸಿದ, ಸಮಾನತೆಯ ತತ್ವವನ್ನು ಮನಗಾಣಿಸಿದ ಯುವರತ್ನನ ಸಮಾಧಿಯ ಬಳಿ ಇನ್ನೂ ನಿಲ್ಲದ ಸರದಿ ಇದೆಯಂತೆ!

ತಮ್ಮ ಪ್ರೀತಿಯ ಅಪ್ಪುವಿಗಾಗಿ ದೇವಾಲಯ ಕಟ್ಟುವವರು‌ ಕೆಲರು, ಸಕಲ ಮತ-ಧರ್ಮಗಳ ದೇವರ ಪಟದಲ್ಲಿ ಅಪ್ಪುವನ್ನೂ ಸೇರಿಸಿ ದೇವರಾಗಿಸಿದ್ದಾರೆ ಕೆಲರು. ಕಟ್ಟಾ ಅಭಿಮಾನವು ಇದಾದರೆ.

ಗೂಗಲ್ ಅಂತಹ ಮೇರು ತಂತ್ರಾಂಶದ ಪ್ರಕಾರ ಅಪ್ಪುವಿನ ಮಾಹಿತಿಗಾಗಿ ಹುಡುಕಿದವರ ಸಂಖ್ಯೆ ಕೂಡ ದಾಖಲೆಯತ್ತ ಹೆಜ್ಜೆ ಹಾಕಿದೆ ಎಂದಿದ್ದಾರೆ.

ಹಾಗಾಗಿ ಅಕ್ಷರಸ್ಥರೂ, ಅನಕ್ಷಸ್ಥರೂ, ಬಡವ-ಬಲ್ಲಿದ ಎಂಬ ಬೇಧವಿಲ್ಲದೇ ಎಲ್ಲರ ಹೃದಯದಲ್ಲಿ ಅಪ್ಪು ಚಿರಸ್ಥಾನ ಗಳಿಸಿದ್ದಾನೆ ಎಂದಾಯ್ತು.

ಇಲ್ಲವಾದ ಮೇಲೆ ಇದ್ದಾಗ ಮಾಡಿದ್ದ ಮಹತ್ ಸತ್ಕಾರ್ಯಗಳು ಹೊರ ಬರುತ್ತಿದ್ದು ಅ ಕಾರ್ಯಶೀಲತೆಯನ್ನು ಪ್ರೋತ್ಸಾಹಿಸುವ, ಅದನ್ನು ಒಪ್ಪುವ ಜೀವಿಗಳು ಇಲ್ಲವಾದ ಮೇಲೆ ಅಭಿಮಾನಿಗಳಾಗಿದ್ದಾರೆ.

ಹೀಗೆ ಕಾಲವಾದ ನಂತರ ಅಭಿಮಾನಿಗಳು ಹುಟ್ಟಿಕೊಳ್ಳುವುದರಲ್ಲೂ ಅಪ್ಪುವೇ ಅಗ್ರ ಸ್ಥಾನದತ್ತ ಸಾಗಿದ್ದಾರೆ. ಇದ್ದಾಗ ಅಪ್ಪು ಮಾಡಿದ್ದ ದಾಖಲೆಗಳಂತೇ ಇಲ್ಲವಾದ ಮೇಲೂ ದಾಖಲೆಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ ನಮ್ಮ ಪ್ರೀತಿಯ ಈ ಅಪ್ಪು!

ಅಪ್ಪುವಿನ ಇಚ್ಛೆಯಂತೆ ಅವರ ಕೊನೆಯ ಚಲನಚಿತ್ರ “ಜೇಮ್ಸ್” ಈ ದಿನ ಬಿಡುಗಡೆಗೊಂಡಿದೆ. ಅಭಿಮಾನಿಗಳ ಸಂತಸ ಎಷ್ಟಿದೆಯೆಂದರೆ ಬಿಡುಗಡೆಗೊಳ್ಳುತ್ತಿರುವ ಎಲ್ಲಾ ಚಿತ್ರಮಂದಿರದಲ್ಲೂ ಅಪ್ಪುವಿನ ಕಟ್ ಔಟ್ ಗಳಲ್ಲದೆ ಅಣ್ಣಾವ್ರು, ಪಾರ್ವತಮ್ಮ, ಶಿವ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಕಟ್ ಔಟ್ ಗಳೂ ಕೂಡ ಎದ್ದು ನಿಂತಿವೆ. ಇಂದು ಬೆಳಿಗ್ಗೆ 4.30 ಕ್ಕೆ ಮೊದಲ ಷೋ ಶುರುವಾಗಿ ಅಭಿಮಾನಿಗಳು ನೋಡಿ ಅತ್ತು, ಕರೆದು, ಖುಷಿಯಿಂದ ಚಿತ್ರವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಜೇಮ್ಸ್ ಚಿತ್ರವು ಅಪ್ಪು ಅಭಿಮಾನಿಗಳ ಮಾನಸದಲ್ಲಿ ಎಂದೆಂದಿಗೂ ರಾರಾಜಿಸಲಿ ಎಂದು ಅಭಿನಂದಿಸೋಣ.

ತುಂಕೂರ್ ಸಂಕೇತ್

Related post

4 Comments

  • He will never be forgotten , that’s for sure♥♥

  • ✊👏👏👏👏👏✨

  • 😀🙌🏽🖤

  • ತುಂಬಾ
    ಒಳ್ಳೆ ಬರಹ ಅಪ್ಪು ಬಗ್ಗೆ ತಿಳಿದವರಿಗೆ ಕೂಡ ಮತ್ತೊಮ್ಮೆ ಮೆಲುಕು ಮಾಡುವ ಹಾಗಿದೆ.

Leave a Reply

Your email address will not be published. Required fields are marked *