ರೂಪದ ಬಯಲು – ಕಲಾಕೃತಿಗಳ ಪ್ರದರ್ಶನ

ರೂಪದ ಬಯಲು – ಕಲಾಕೃತಿಗಳ ಪ್ರದರ್ಶನ

ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‍ನ ಆವರಣದಲ್ಲಿ ‘ರೂಪದ ಬಯಲು ಮಾಡುವ ಕಲಾಕೃತಿಗಳು‘ ಎಂಬ ಶೀರ್ಷಿಕೆಯಡಿ ಇದೇ ನವೆಂಬರ್ 21 ರಿಂದ 27 ರವರೆಗೆ ನಡೆಯುತ್ತಿದೆ. ಬೆಂಗಳೂರಿನ ಹೆಸರಾಂತ ಯುವ ಕಲಾವಿದ ಮಂಜುನಾಥ್ ಹೊನ್ನಾಪುರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇದಾಗಿದೆ. ಇಂದಿಗೆ ಈ ಪ್ರದರ್ಶನವು ಮುಕ್ತಯಗೊಳ್ಳಲಿದೆ. ಮಿಕ್ಸ್ ಮೀಡಿಯಾದ ವೈವಿಧ್ಯಮಯ ಈ ಪೇಂಟಿಂಗ್ ಪ್ರದರ್ಶನವು ವಿಭಿನ್ನ ಪ್ರಯೋಗವಾಗಿದೆ. ನೋಡಲಾಗದವರು ಇಂದು ಹೋಗಿ ನೋಡಬಹುದು. ಕಲಾ ಪ್ರದರ್ಶನದ ಸಮಯ: ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 7-00 ರ ವರೆಗೆ

ಈ ಕಲಾ ಪ್ರದರ್ಶನವನ್ನು ಪ್ರಖ್ಯಾತ ಕಲಾವಿದರೂ, ಕಲಾವಿಮರ್ಶಕರೂ ಆದ ಚಿ.ಸು. ಕೃಷ್ಣ ಸೆಟ್ಟಿ ಅವರು ಉದ್ಘಾಟಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟೆರಿಯನ್ ಡಾ. ಮುನಿರಾಜು ಅವರೂ, ಅತಿಥಿಗಳಾಗಿ ಎನರ್‍ಸೇವ್ ಲೈಟಿಂಗ್ ಪ್ರೈವೇಟ್ ಲಿಮಿಟಿಡ್‍ನ ಪ್ರಭು ಆಕ್ಷಂತಾಲ, ಖ್ಯಾತ ಸಾಹಿತಿಗಳಾದ ಡಾ. ನಟರಾಜ ಬೂದಾಳು, ಪ್ರಖ್ಯಾತ ಕಲಾವಿದರೂ, ರಾಷ್ಟ್ರಪ್ರಶಸ್ತಿ ವಿಜೇತರೂ ಆದ ಪ್ರಭು ಹರಸೂರ್ ಅವರುಗಳು ಭಾಗವಹಿಸಿ ಪ್ರದರ್ಶನದ ಉದ್ಘಾಟನೆಗೆ ಸಾಕ್ಷಿಯಾಗಿದ್ದಾರೆ.

ಈ ಯುವ ಕಲಾವಿದ ಮಂಜುನಾಥ್ ಹೊನ್ನಾಪುರ ಅವರು ಪರಿಸರದ ಮೇಲಿನ ಪ್ರೇಮವನ್ನು ತಮ್ಮದೇ ಆದ ರೀತಿಯಲ್ಲಿ ಸಂಕೇತಗಳನ್ನು ಬಳಸಿ ಸರಣಿಯ ಚಿತ್ರಗಳನ್ನಾಸಿದ್ದಾರೆ. ದೊಡ್ಡ ಚಿತ್ರಗಳಲ್ಲಿ ಅತಿ ಸಣ್ಣ ಸಣ್ಣ ವಿಷಯಗಳನ್ನು ಅತಿ ಸೂಕ್ಷ್ಮವಾಗಿ ಚಿತ್ರಿಸಿ ನೋಡುಗರನ್ನು ಆಲೋಚಿಸುವಂತೆ ಮಾಡಿದ್ದಾರೆ. ಈಗ ಅಪರೂಪವಾಗಿರುವ ಅಳತೆಯ ಕ್ಯಾನ್, ಪೇಪರ್ ರಾಕೆಟ್‍ಗಳಂತಹ ಅತಿ ಸಾಮಾನ್ಯ ವಸ್ತುಗಳನ್ನು ವಿಶೇಷವಾಗಿ ಬಳಸಿ ವಿಭಿನ್ನ ಪ್ರಯೋಗವಾಗಿಸಿದ್ದಾರೆ. ರೇಖೆಗಳ ಮೂಲಕ ಅಭಿವ್ಯಕ್ತ ಪಡಿಸಿ ನೋಡುಗರಿಗೆ ಒಂದಷ್ಟು ಸಂದೇಶಗಳನ್ನು ಕೊಟ್ಟಿದ್ದಾರೆ. ರಿಲೀಫ್‍ಗಳಂತಹ ಉಬ್ಬು-ತಗ್ಗುಗಳನ್ನು ಈ ಕೃತಿಗಳಲ್ಲಿ ಬಳಸಿಕೊಂಡು ಚಿತ್ರ-ಶಿಲ್ಪಗಳ ಮೂಲಕ ಹೊಸ ಪ್ರಯೋಗ ಮಾಡಿದ್ದಾರೆ. ಇಲ್ಲಿ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ ಕಲಾಕೃತಿಗಳು ಇವೆ ಎನ್ನುವುದು ಕೂಡ ಇಲ್ಲಿ ವಿಶೇಷ!

ಮಂಜುನಾಥ್ ಹೊನ್ನಾಪುರ ಅವರು ಸುಮಾರು 20ಕ್ಕೂ ಹೆಚ್ಚು ವರ್ಷಗಳಿಂದ ಚಿತ್ರಕಲಾ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರತರಾಗಿದ್ದಾರೆ. ಈ ಸಾಲಿನ ಕೇಂದ್ರ ಲಲಿತ ಕಲಾ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಕನ್ನಡದ ಹಾಗೂ ತುಮಕೂರಿನ ಪ್ರತಿಭೆ ಈ ಮಂಜುನಾಥ್. ರಾಜ್ಯಮಟ್ಟದ ಹಲವು ಪ್ರಶಸ್ತಿಗಳಲ್ಲದೇ ಕ್ಯಾಮಲಿನ್, ಕರ್ನಾಟಕ ಲಲಿತಕಲಾ ಅಕಾಡೆಮಿ ಇನ್ನಿತರ ಪ್ರಶಸ್ತಿಗಳು ಇವರನ್ನು ಹುಡುಕಿ ಬಂದಿದೆ.

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಾಕೃತಿಗಳ ಪ್ರದರ್ಶನಗಳಲ್ಲೂ, ಪ್ರಾತ್ಯಕ್ಷಿಕೆ ಹಾಗೂ ಸಂವಾದಗಳಲ್ಲೂ ಭಾಗವಹಿಸಿದ್ದಾರೆ. ವಿಶ್ವಬ್ಯಾಂಕ್‍ನ ಪ್ರಾಯೋಜಕತ್ವದಲ್ಲಿ ಬಾಂಗ್ಲಾ, ಅಮೇರಿಕಾಗಳಿಗೆ ಪ್ರವಾಸ ಕೈಗೊಂಡಿದ್ದು ಇವರ ಪ್ರೌಢಿಮೆಗೆ ಸಾಕ್ಷಿಯಾಗಿದೆ.

ಬರೋಡದಲ್ಲಿ ಕೆಲವು ವರ್ಷ ನೆಲೆಸಿದ್ದ ಈ ಮಂಜುನಾಥ್ ಅವರು ಸಧ್ಯದಲ್ಲಿ ಸಿಲಿಕಾನ್ ಸಿಟಿಯ ನಾಗರಬಾವಿಯಲ್ಲಿ “ವಾಸ್ತವ್ ದಿ ಸ್ಟುಡಿಯೋ ಫಾರ್ ಆರ್ಟ್” ನಲ್ಲಿ ತಮ್ಮ ಕಲಾ ಚಟುವಟಿಕೆಯನ್ನು ಮುಂದುವರಿಸಿದ್ದಾರೆ.

ನಾಡಿನ ಲೇಖಕರೂ, ಪ್ರಗತಿ ಪರ ಚಿಂತಕರೂ ಆದ ಡಾ. ಎಸ್ ನಟರಾಜ ಬೂದಾಳು ಅವರು ಕಲಾವಿದ ಮಂಜುನಾಥ್ ಅವರ ಈ ಕಲಾಕೃತಿಗಳ ಪ್ರದರ್ಶನದ ಬಗ್ಗೆ ಹೀಗೆ ಅಭಿವ್ಯಕ್ತ ಪಡಿಸಿದ್ದಾರೆ:
ಕೆಲವೇ ಕಲಾವಿದರ ಕಲಾಕೃತಿಗಳು ಗಂಭೀರವಾದ ಕಲಾಮೀಮಾಂಸೆಯ ತಾತ್ವಿಕತೆಯ ಕಡೆಗೆ ಕೈ ಮಾಡುತ್ತವೆ. ಕಲಾ ಮೀಮಾಂಸೆಯ ಗಂಭೀರ ಅನುಸಂಧಾನ ಎಲ್ಲರ ಕೈ ತುತ್ತಲ್ಲ. ಅದರ ಹಿಂದೆ ಲೋಕಾನುಸಂಧಾನದ ದೃಷ್ಟಿಕೋನವೊಂದು ಕ್ರಿಯಾಶೀಲವಾಗಿರುತ್ತದೆ. ಕಲಾವಿನೊಬ್ಬನ ದಾರಿಯ ನಿರ್ಣಾಯಕ ಸೂತ್ರಗಳಲ್ಲಿ ಇದು ಮುಖ್ಯವಾದುದು“.

ಮಂಜುನಾಥ್ ಹೊನ್ನಾಪುರ ಅವರ ಇತ್ತೀಚಿನ ಕಲಾಕೃತಿಗಳು ನೋಡುಗರನ್ನು ತಮ್ಮ ನೋಟಕ್ರಮವನ್ನು ಮರು ವ್ಯಾಖ್ಯಾನಿಸಲು ಒತ್ತಾಯಿಸುತ್ತವೆ. ಅತ್ಯಂತ ಮಿತವಾದ ಬಣ್ಣಗಳ ಬಳಕೆ, ಸ್ಪಷ್ಟತೆ ಮತ್ತು ಅಸ್ಪಷ್ಟತೆಗಳ ನಡುವಿನ ಸಂಧಾನೋಟಕ್ರಮ, ಅಸಂಬಂಧವನ್ನು ಸಂಬಂಧವನ್ನಾಗಿಸಿ ತೋರುವ ನಾಟಕೀಯತೆ, ಸ್ಥೂಲ ಮತ್ತು ಸೂಕ್ಷ್ಮಗಳೆರಡನ್ನೂ ಒಳಗು ಮಾಡಿಕೊಳ್ಳುವ ದೃಶ್ಯಗಳ ಸಂಯೋಜನೆ ನೋಡುಗನ್ನೂ ಕಲಾಕೃತಿಯ ಭಾಗವನ್ನಾಗಿಸಿಕೊಳ್ಳುವ ಒಳಗೊಳ್ಳುವಿಕೆ ಮುಂತಾದ ಅಂಶಗಳು ಈ ಕಲಾವಿನ ಸಾಮಥ್ರ್ಯವನ್ನು ದುಡಿಸಿಕೊಂಡಿವೆ. ಹೊಸ ಅನುಭವಕ್ಕೆ ದಾರಿ ಮಾಡಿಕೊಡುವ ಈ ಕಲಾಕೃತಿಗಳು ನಮ್ಮನ್ನು ಕರೆದು ಮಾತನಾಡಿಸುತ್ತವೆ.

ಕಲಾ ಪ್ರದರ್ಶನದ ಸಮಯ: ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 7-00 ರ ವರೆಗೆ

ತುಂಕೂರು ಸಂಕೇತ್

Related post

Leave a Reply

Your email address will not be published. Required fields are marked *