ರೌದ್ರಾವರಣಂ – ಒಂದು ಓದು

ಲೇಖಕರು: ಅನಂತ್ ಕುಣಿಗಲ್
ಮುದ್ರಣ: ಅವ್ವ ಪುಸ್ತಕಾಲಯ

ಬೇಟೆ – ಬೇಟೆಗಾರ – ಕಾನನ – ಹಳ್ಳಿಯ ವ್ಯವಸ್ಥೆ- ಹಾದರ – ಶೋಷಣೆ – ನಂಬಿಕೆ.

ಇವಿಷ್ಟು ರೌದ್ರಾವರಣಂ ಕೃತಿಯ ಕುರಿತು ಒಂದು ಸಾಲಿನ ಮಾತು.

ಲೇಖಕರ ಪರಿಚಯ: ತುಮುಕೂರು ಜಿಲ್ಲೆ ಕುಣಿಗಲ್ ತಾಲೂಕು ಕೆಂಚನಹಳ್ಳಿ ಗ್ರಾಮದವರಾದ ಶ್ರೀ ಅನಂತ್ ಕುಣಿಗಲ್ ತಮ್ಮ ಸಾಹಿತ್ಯ ಚಟುವಟಿಕೆಗಳಿಗೆ ಹೆಸರುವಾಸಿ.

ಸ್ವತಃ ಯುವಬರಹಗಾರರಾದ ಇವರು ತಮ್ಮ ಅನೇಕ ಸಮವಯಸ್ಕರನ್ನು ಹಾಗು ಅನೇಕ ಬರಹಗಾರರನ್ನು ಉತ್ತೇಜಿಸಲು ಅವ್ವ ಪುಸ್ತಕಾಲಯದ ಉದಯಕ್ಕೆ ಕಾರಣರಾಗಿರುತ್ತಾರೆ. ಸದಾ ಕ್ಲಬ್ ಹೌಸ್ ನಲ್ಲಿ ತಮ್ಮ ವಾರದ ಸಾಹಿತ್ಯಾಸಕ್ತರ ಸಮಾಗಮ ಕಾರ್ಯಕ್ರಮವನ್ನು ನೆಡೆಸುತ್ತಾ ಬರಹಗಾರರನ್ನು ಕೂಡಿಸಿ ಚರ್ಚೆಯನ್ನು ನೆಡಿಸುತ್ತಾ ತಮ್ಮ ಸಾಹಿತ್ಯಸೇವೆಯನ್ನು ತಪ್ಪದೆ ಮಾಡುತ್ತಾ ಬಂದಿರುತ್ತಾರೆ. ಅನಂತ್ “ಋಣಭಾರ” ಎಂಬ ಕಥಾಸಂಕಲವನ್ನು ಹಾಗು “ಮೂರನೆಯವಳು” ಎಂಬ ಕವನ ಸಂಕಲವನ್ನು ತಮ್ಮದೇ ಆದ ಅವ್ವ ಪುಸ್ತಕಾಲಯದಿಂದ ಪ್ರಕಟಿಸಿರುತ್ತಾರೆ. ಇದೀಗ ಅವರ ಚೊಚ್ಚಲ ಕಾದಂಬರಿ “ರೌದ್ರಾವರಣಂ” ಬಿಡುಗಡೆಯಾಗಿದೆ.

ಲೇಖಕರಾದ ಶ್ರೀ ಅನಂತ್ ಕುಣಿಗಲ್ ತಮ್ಮ “ಋಣಭಾರ (ಕಥಾಸಂಕಲನ) ಹಾಗು ಮೂರನೆಯವಳು (ಕವನ ಸಂಕಲನ)” ಪುಸ್ತಕಗಳ ನಂತರ ಒಂದು ಒಳ್ಳೆಯ ಕಥೆಯ ಮೂಲಕ “ರೌದ್ರಾವರಣಂ” ಎಂಬ ಕಾದಂಬರಿಯನ್ನು ಕನ್ನಡದ ಓದುಗರಿಗಾಗಿ ಹೊರತಂದು ಅಚ್ಚರಿ ಮೂಡಿಸಿದ್ದಾರೆ.

ಮೊದಲಿಗೆ ಈ ಕಾದಂಬರಿಯನ್ನು ಓದುತ್ತ ನಿಜಕ್ಕೂ ಈ ಕಾಲದಲ್ಲೂ ಇಂಥ ದಲಿತ ಶೋಷಣೆಗಳು ಇವೆಯೇ ಎಂದು ಕೆಲ ಓದುಗರಿಗೆ ಅನಿಸಿದರೂ ಅವರೇ ಹೇಳಿಕೊಂಡಂತೆ ತಮ್ಮ ಊರಲ್ಲಿ ಹಿಂದೆ ನೆಡೆದ ಕಂಡಂತಹ ಶೋಷಣೆಗಳ ದೃಶ್ಯಗಳು ಇಲ್ಲಿ ಕಥೆಯಾಗಿವೆ.

ಒಂದೂರು ಊರಾಚೆ ಬದುಕುತ್ತಿರುವ ಬಾಬಣ್ಣ ಅವನ ಕುಲುಮೆ ಸಿಕ್ಕ ಬಂದೂಕು ಎಂದು ಶುರುವಾಗುವ ಕಥೆ ಎಲ್ಲೂ ನಿಲ್ಲದೆ ಒಂದೊಂದು ಅಧ್ಯಾಯಕ್ಕೂ ಪಾತ್ರಗಳನ್ನೂ ಪರಿಚಯಿಸುತ್ತ ಓಡುತ್ತದೆ.
ಬಾಬಣ್ಣನ ಮುಂಚಿನ ಬೇಟೆಗಳು ಹಾಗು ಪ್ರೀತಿಯ ಮಡದಿಯ ನೆನಪುಗಳನ್ನು ಅನಂತ್ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ತನ್ನ ಹಟ್ಟಿಯಲ್ಲೇ ಹುಟ್ಟಿ ತಾಯನ್ನು ಕಳೆದುಕೊಂಡ ಚಂದ್ರನಿಗೆ ಬಾಬಣ್ಣನೆ ತಾಯಾಗುವ ಮಮತೆಯನ್ನು ಓದುತ್ತ ನಮ್ಮ ಮನೆಯಲ್ಲಿ ಕೂಡ ಒಂದು ನಾಯಿಯನ್ನು ಸಾಕೋಣವೆ ಎಂದೆನಿಸಿದರೆ ಅಚ್ಚರಿಯೇನಲ್ಲ. ಚಂದ್ರ ಮರಿಯಾಗಿದ್ದಾಗ ಅದನ್ನು ಬೇಟೆಗೆ ತಯಾರು ಮಾಡುವುದನ್ನು ಬಹಳ ಸ್ವಾರಸ್ಯಕರವಾಗಿ ಬರೆದಿದ್ದಾರೆ. ಚಂದ್ರನ ಜೊತೆಗಿನ ಬಾಬಣ್ಣನ ಬದುಕಿನ ಪಯಣ ಹಾಗು ಅಗಸ್ತ್ಯನ ಆಗಮನ ಚಂದ್ರನ ಕಾಳಜಿ ಎಲ್ಲವು ಕಾವ್ಯಮಯ.

ಗ್ರಾಮೀಣ ಹಿನ್ನಲೆಯಿಂದ ನಗರಗಳಿಗೆ ಬಂದವರಿಗೆ ಓದುತ್ತ ವಾಪಸ್ಸು ತಮ್ಮ ಹಳ್ಳಿಗೆ ಒಂದು ಸುತ್ತು ಹಾಕಿ ಬಂದ ಹಾಗೆಯೇ ಭಾವ. ಪಾತ್ರ ಪೋಷಣೆಗಳ ಮೂಲಕವೇ ಅನಂತ್ ಕಥೆಯನ್ನು ಬೆಳೆಸುತ್ತ ಹೋಗಿದ್ದಾರೆ. ಒಂದು ಪಾರ್ಶ್ವಕ್ಕೆ ಬಾಬಣ್ಣ, ಅಗಸ್ತ್ಯ, ಅಗಸ್ತ್ಯನ ತಾಯಿ, ಐನೋರ ಹೆಂಡತಿ ಹಾಗು ಚಂದ್ರ, ವ್ಯವಸ್ಥೆ ಹಾಗು ಶೋಷಣೆಯ ವಿರುದ್ಧ ನಿಂತರೆ ಐನೋರು, ಊರ ಗೌಡರು, ಬೇಸ್ತು ಬೀಳುವ ಮೇಸ್ಟ್ರು ಸಂಕಷ್ಟಕ್ಕೆ ಸಿಕ್ಕುವ ರಮೆ, ಸೈಕಲ್ ಬೆನ್ನಿಗೊರೆಸಿಕೊಂಡು ಮೂತ್ರ ಮಾಡುವ ಸಯ್ಯದ್ದ್ ಕಾಕಾ, ಇನ್ನು ಮುಂತಾದ ಪಾತ್ರಗಳ ಮೂಲಕ ಓದುಗರು ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದುವಂತೆ ಅನಂತ್ ತಮ್ಮ ಕಥಾ ನಿರೂಪಣೆಯಿಂದ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅನಂತ್ ರಿಗೆ ಇದ್ದು ಚೊಚ್ಚಲ ಕಾದಂಬರಿಯಾದ್ದರಿಂದ ಇಲ್ಲಿ ಪಾತ್ರಗಳ ಅಂತರಂಗದ ತುಮುಲಗಳು ಹೊರಬಂದಿರುವುದು ಕಡಿಮೆ ಆದರೂ ಸುಮ್ಮನೆ ಕೂರದೆ ಸದಾ ಸಾಹಿತ್ಯಾಸಕ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅನಂತ್ ರಿಗೆ ತಮ್ಮ ಮುಂದಿನ ಕೃತಿಯಲ್ಲಿ ಬಿಟ್ಟು ಹೋದವನ್ನು ಪ್ರಯೋಗಿಸುವುದು ಅಂತಹ ಕಷ್ಟವೇನಲ್ಲ.
ಅನಂತ್ ತಮ್ಮ ಸಾಹಿತ್ಯ ಚಟುವಟಿಕೆಗಳ ಜೊತೆ ಚಲನಚಿತ್ರರಂಗದ ಕೆಲಸಗಳಲ್ಲೂ ಕೂಡ ತೊಡಗಿಸಿಕೊಂಡಿರುವುದರಿಂದ ಈಗಿನ ಸಿನಿಮಾಗಳ ವರ್ಷನ್ 2 ಪ್ಯಾಶನ್ ನಂತೆ ತಮ್ಮ ರೌದ್ರಾವರಣಂ ಕೃತಿಯ ಕೊನೆಯಲ್ಲಿ ಒಂದು ರುದ್ರ ಮೌನವನ್ನು ಕೊಟ್ಟು ವರ್ಷನ್ 2 ಓದಲು ಓದುಗರಲ್ಲಿ ಕೊತುಹಲವನ್ನು ಮೂಡಿಸಿದ್ದಾರೆ.

ಈ ಕೃತಿಯು ಹೊರ ಬಂದ ನಂತರ ನಾನು ಕೂಡ ಅನಂತ್ ರವರ ಸಂತಸದಲ್ಲಿ ಬಾಗಿಯಾಗಿದ್ದೇನೆ ಕಾರಣ ಪುಸ್ತಕ ಅಚ್ಚಿಗೆ ಹೋಗುವ ಮುನ್ನ ಗೆಳೆಯನ ಕರಡು ಪ್ರತಿಯನ್ನು ನನ್ನ ಕೈಲಾದ ಮಟ್ಟಿಗೆ ಓದಿ ನನಗೆ ತಿಳಿದಂತಹ ಚಿಕ್ಕ ಪುಟ್ಟ ಸಲಹೆ ನೀಡಿರುವುದು ಹಾಗು ನನ್ನ ಆಫೀಸಿನ ಕೆಲಸದೊತ್ತಡದಿಂದ ಅನಂತ್ ರಿಗೆ ಅಭಿಪ್ರಾಯ ಕೊಡಲು ತಡವಾಗಿದ್ದಕ್ಕೆ ಅನಂತ್ ರವರ ಕ್ಷಮೆ ಇದೆಯೆಂದು ಭಾವಿಸಿದ್ದೇನೆ. ಈ ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ತೊಡಗಿಸಿಕೊಂಡಿದ್ದು ನಿಜಕ್ಕೂ ಖುಷಿಯ ಸಂಗತಿ.

ಯುವ ಬರಹಗಾರರಾದ ಅನಂತ್ ಮುಂದೆ ತಮ್ಮ ಅನುಭವಗಳ ಹಾಗು ಸದಭಿರುಚಿಯ ಬರಹಗಳ ಮೂಲಕ ಇನ್ನು ಹೆಚ್ಚೆಚ್ಚು ಓದುಗರನ್ನು ಸಂಪಾದಿಸಲಿ ಎಂದು ನಮ್ಮ ಸಾಹಿತ್ಯಮೈತ್ರಿ ತಂಡದಿಂದ ಅಭಿನಂದನೆಗಳನ್ನು ಕೋರುತ್ತಿದ್ದೇವೆ.

ಪುಸ್ತಕ ಕೊಂಡು ಓದಲು ಇಚ್ಛಿಸುವವರು 8548948660 ಮೊಬೈಲ್ ನಂಬರಿಗೆ ಸಂಪರ್ಕಿಸಿ ಅಂಚೆ ಮೂಲಕ ತರಿಸಿಕೊಳ್ಳಬಹುದು.

ಕು ಶಿ ಚಂದ್ರಶೇಖರ್

Related post

Leave a Reply

Your email address will not be published. Required fields are marked *