ಲಕ್ಷ್ಮಿವಿಲಾಸ ಅರಮನೆ – ಬರೋಡ

ಸೌಂದರ್ಯದ ಖನಿ ಬೆಡಗಿನ ಬರೋಡ ಲಕ್ಷ್ಮಿವಿಲಾಸ ಅರಮನೆ

ಗುಜಾರಾತಿನಲ್ಲಿ ಅನೇಕ ಪ್ರೇಕ್ಷಣೀಯ ಪ್ರವಾಸಿ ಸ್ಥಳಗಳಿವೆ. ಅವುಗಳಲ್ಲಿ ಮುಖ್ಯವಾಗಿ ತನ್ನ ಕಲಾತ್ಮಕತೆಯಿಂದ ಗಮನ ಸೆಳೆಯುವುದು ಬರೋಡ ಅಥವಾ ವಡೋದರಾ ದಲ್ಲಿರುವ ಲಕ್ಷ್ಮಿವಿಲಾಸ ಅರಮನೆ. ತನ್ನ ಅಂದ ಚೆಂದದ ಕಲಾತ್ಮಕತೆಯಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆಯಲ್ಲದೆ ಬರೋಡಾದ ಗಾಯಕ್ವಾಡ್ ಮನೆತನದವರು ನೆಡೆಸಿದ ಅತಿ ಭೋಗದ ವಿಲಾಸಿ ಜೀವನ ಹೇಗಿತ್ತೆಂದು ನೋಡಬೇಕೆಂದರೆ ಲಕ್ಷ್ಮೀವಿಲಾಸ್ ಅರಮನೆಯನ್ನೊಮ್ಮೆ ನೋಡಲೇಬೇಕು. ವಡೋದರ ಎಂದರೆ ಸಾಕು ಕಣ್ಮುಂದೆ ಬರುವುದು ಕಲೆ. ಈ ಊರಿನಲ್ಲಿ ಅನೇಕ ಕಲಾತ್ಮಕ ಕಟ್ಟಡಗಳು ನಿಮ್ಮ ಗಮನ ಸೆಳೆಯುತ್ತದೆ. ಅವುಗಳಲ್ಲಿ ಪ್ರಮುಖವಾದವು ‘ಸಯ್ಯಾಜಿಗಂಜ’ ನಲ್ಲಿರುವ ‘ಸೂರ್ಯ ಪ್ಯಾಲೆಸ್’ ಹಾಗೂ ಲಕ್ಷ್ಮಿವಿಲಾಸ್ ಪ್ಯಾಲೆಸ್.

ಲಕ್ಷ್ಮಿವಿಲಾಸ ಅರಮನೆ

1890ರಲ್ಲಿ ಗಾಯಕ್ವಾಡ್ ಮನೆತನದ “ಸಯ್ಯಾಜಿರಾವ್ ಗಾಯಕ್ ವಾಡ್” ಎಂಬುವವರು ಈ ಅರಮನೆಯನ್ನು ಯತ್ತೇಚ್ಛವಾಗಿ ಹಣ ಖರ್ಚು ಮಾಡಿ ಕಟ್ಟಿದ್ದಾನೆ. ಬರೋಡದಾ ಗಾಯಕ್ವಾಡ್ ಮನೆತನ ಇದೇ ಮನೆಯಲ್ಲಿ ವಾಸವಾಗಿದ್ದರು. ಕಣ್ಣು ಹಾಯಿಸಿದಷ್ಟುದ್ದಕ್ಕೂ ಮುಗಿಯದ ಹಸಿರು ಹುಲ್ಲುರಾಶಿಯ ನಡುವೆ ನಿಂತಿರುವ ಈ ಅರಮನೆ ಅಂದವನ್ನು ನೋಡಲು ಎರಡು ಕಣ್ಣು ಸಾಲದು. ಮೂಲತಃ ಮರಾಠಿಗನಾದ ಒಂದು ಕಾಲದಲ್ಲಿ ಬರೋಡಾವನ್ನು ಆಳಿದ್ದ ಸಯ್ಯಾಜಿರಾವ್ ಕಟ್ಟಿಕೊಂಡ ಖಾಸಗಿ ಅರಮನೆ ಇದು. ಇಂಡೋ ಸೆರೆಸಾನಿಕ್ ಶೈಲಿಯಲ್ಲಿ ಕಟ್ಟಿರುವ ಈ ಅರಮನೆ ಬಕಿಂಗ್ ಹ್ಯಾಮ್ ಅರಮನೆಯ ನಾಲ್ಕರಷ್ಟಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೊರಗಿನಿಂದ ನೋಡಲು ಯೂರೋಪಿನ ಯಾವುದೇ ಅರಮನೆಯಂತೆ ಕಾಣುತ್ತದೆಯಲ್ಲದೇ ರೋಮನ್ ವಾಸ್ತು ಶಿಲ್ಪವೂ ಸ್ವಲ್ಪ ಮೈಳೈಸಿಕೊಂಡಿದೆ. ಇಲ್ಲಿರುವ ಸಾಲಂಕೃತ ದರ್ಭಾರ್ ಹಾಲ್‍ನ ಅಂದವನ್ನು ಅಲ್ಲಿ ನಿಂತೇ ಕಣ್ತುಂಬಿಕೊಳ್ಳಬೇಕು. ಈ ದರ್ಬಾರ್ ಹಾಲ್ ನಲ್ಲಿ ಅನೇಕ ಸಂಗೀತ ಕಛೇರಿಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆಯುತ್ತಿದ್ದವಂತೆ. ಈ ಅರಮನೆಯ ಕಿಟಕಿಗಳೂ ಹಾಗೂ ಗುಮ್ಮಟಗಳನ್ನು ಅಂದವಾಗಿ ಕಟ್ಟಿರುವುದನ್ನು ನೋಡಿದರೆ ಸಯ್ಯಾಜಿರಾವ್ ಅವರಿಗೆ ಕಲೆಯ ಮೇಲಿದ್ದ ಆಸಕ್ತಿ ಎಷ್ಟೆಂದು ತಿಳಿಯುತ್ತದೆ. ಕಲಾರಾಧಕರಾಗಿದ್ದ ಗಾಯಕ್ವಾಡ್ ಮನೆತನ ಕಲೆಯನ್ನು ಬೆಳೆಸಲು ತುಂಬಾ ಶ್ರಮವಹಿಸುತ್ತಿದ್ದರಂತೆ. ಸಯ್ಯಾಜಿರಾವ್ ಕುಟುಂಬ ಉಪಯೋಗಿಸುತ್ತಿದ್ದ ಪ್ರತಿಯೊಂದು ವಸ್ತುಗಳು ಇಲ್ಲಿದ್ದು ಅದೆಲ್ಲವನ್ನು ಮ್ಯೂಸಿಯಂನಲ್ಲಿ ಇಡಲಾಗಿದೆ.

ದರ್ಭಾರ್ ಹಾಲ್‍

ಇವರು ಕಲೆಗೆ ಎಷ್ಟು ಬೆಲೆ ಕೊಡುತ್ತಿದ್ದರು ಎಂದರೆ ತಾವು ಯುದ್ದಕ್ಕಾಗಿ ಬಳಸುತ್ತಿದ್ದ ಕತ್ತಿ, ಗುರಾಣಿ ಬರ್ಜಿ ಮುಂತಾದ ಆಯುಧಗಳ ಮೇಲೂ ಸಹಾ ಕಲಾತ್ಮಕ ಕುಸುರಿ ಕೆಲಸವನ್ನು ಕಾಣಬಹುದಲ್ಲದೇ ಇವೆಲ್ಲವೂ ಇಲ್ಲಿನ ಮ್ಯೂಸಿಯಂನಲ್ಲಿಡಲಾಗಿದೆ. ಇನ್ನು ಅವರು ಹಾಕುತ್ತಿದ್ದ ವೇಷ ಭೂಷಣಗಳ ಬಗ್ಗೆ ಹೇಳುವುದೇ ಬೇಡ. ಕಲೆ ಎಂಬುದು ಈ ಅರಮನೆಯಲ್ಲಿ ತುಂಬಿ ತುಳುಕುತ್ತಿದೆ ಎಂದರೆ ತಪ್ಪಾಗಲಾರದು. ದರ್ಬಾರ್ ಹಾಲ್‍ನ ಹೊರಗಡೆ ಅನೇಕ ಕಲಾತ್ಮಕ ಕಾರಂಜಿಗಳಿದ್ದು ಇಟಾಲಿಯನ್ ಶೈಲಿಯಲ್ಲಿ ಕಟ್ಟಿರುವ ಇವು ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಅರಮನೆಯ ಒಂದು ಭಾಗವಾಗಿರುವ ಮ್ಯೂಸಿಯಂನಲ್ಲಿ ಕಲಾತ್ಮಕ ಕೆತ್ತೆನೆಗಳಿರುವ ಯುದ್ಧ ಸಾಮಗ್ರಿಗಳು, ಪಾತ್ರೆಗಳು, ಶಿಲ್ಪಗಳು ಬಟ್ಟೆಗಳು ಇನ್ನು ಮುಂತಾದ ಅನೇಕ ಕಲಾತ್ಮಕ ವಸ್ತುಗಳನ್ನು ನೋಡಬಹುದು. ಸುಮಾರು ಐನೂರು ಎಕರೆ ಪ್ರದೇಶದಲ್ಲಿ ಹರಡಿರುವ ಈ ಅರಮನೆಯಲ್ಲಿ ಮೋತಿ ಭಾಗ್ ಪ್ಯಾಲೆಸ್, ಮಹರಾಜಾ ಫತೇಸಿಂಗ್ ಮ್ಯೂಸಿಯಂ ಅಲ್ಲದೇ ಅನೇಕ ಕಟ್ಟಡಗಳು ಈ ಅರಮನೆಯ ಆವರಣದಲ್ಲಿದೆ.

ಮಹರಾಜಾ ಫತೇಸಿಂಗ್ ಮ್ಯೂಸಿಯಂ

ಮೋತಿ ಭಾಗ್ ಅರಮನೆ ಪಕ್ಕದಲ್ಲೇ ಮೋತಿ ಭಾಗ್ ಕ್ರಿಕೆಟ್ ಮೈದಾನ ಕೂಡ ಇದೆ. ಇಲ್ಲೇ ಬೀಟೆ ಮರದ ನೆಲಹಾಸು ಇರುವ ಟೆನ್ನಿಸ್ ಹಾಗೂ ಬ್ಯಾಡ್‍ಮಿಂಟನ್ ಆಟದಂಗಳವೂ ಇದ್ದು ಇಲ್ಲೇ ಅನೇಕ ರಾಷ್ಟ್ರೀಯ ಪಂದ್ಯಗಳು ಸಹ ನೆಡೆದಿದೆ. ಫತೇಸಿಂಗ್ ವಸ್ತು ಸಂಗ್ರಾಹಾಲಯವಿರುವ ಕಟ್ಟಡ ಗಾಯಕ್ವಾಡ್ ಕುಟುಂಬದ ಮಕ್ಕಳಿಗಾಗೇ ಕಟ್ಟಿದ ಶಾಲೆಯ ಕಟ್ಟಡ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಈ ಫತೇಸಿಂಗ್ ಮ್ಯೂಸಿಯಂನಲ್ಲೇ ಗಾಯಕ್ವಾಡ್ ಕುಟುಂಬಕ್ಕೆ ಸೇರಿದ ಅನೇಕ ಬೆಲೆಬಾಳುವ ಹಾಗೂ ಕಲಾತ್ಮಕವಾದ ಕೃತಿಗಳನ್ನು ಸಂಗ್ರಹಿಸಲಾಗಿದೆಯಲ್ಲದೇ ಅದರಲ್ಲಿ ಮುಖ್ಯವಾಗಿ ಗಮನಸೆಳೆಯುವುದು ರಾಜ ರವಿವರ್ಮ ಬರೆದಿರುವ ವರ್ಣಚಿತ್ರಗಳು. ಬರಿ ಪುರಾಣಕ್ಕೆ ಸಂಭಂದಿಸಿದ ಮೋಹಕ ವರ್ಣಚಿತ್ರಗಳಲ್ಲದೇ ರಾಜಮನೆತನಕ್ಕೆ ಸೇರಿದವರ ಅನೇಕ ವರ್ಣಚಿತ್ರಗಳು ಇಲ್ಲಿ ನೋಡಲು ಲಭ್ಯ. ತನ್ನ ಮಕ್ಕಳನ್ನು ಶಾಲೆಯಿಂದ ಲಕ್ಷ್ಮೀ ವಿಲಾಸ್ ಅರಮನೆಗೆ ಕರೆತರಲು ಸಯ್ಯಾಜಿರಾವ್ ಸಣ್ಣ ರೈಲ್ವೆ ಹಳಿಗಳನ್ನು ಹಾಕಿಸಿದ್ದನೆಂದರೆ ಅವನ ವೈಭೋವೊಪೇತ ಜೀವನ ಹೇಗಿತ್ತೆಂದು ನೀವೆ ಊಹಿಸಿಕೊಳ್ಳಿ. ಆ ರೈಲಿಗೆ ಉಪಯೋಗಿಸಿದ್ದ ರೈಲು ಇಂಜಿನ್‍ನ್ನು ಇತ್ತೀಚೆಗೆ ದುರಸ್ತಿ ಗೊಳಿಸಿದ್ದು ಅದನ್ನು ಅರಮನೆಯ ಮುಂದುಗಡೆ ಈಗ ಪ್ರದರ್ಶನಕ್ಕಿಡಲಾಗಿದೆ. ಅರಮನೆಯ ಆವರಣದಲ್ಲಿ ಸಣ್ಣ ಪ್ರಾಣಿ ಸಂಗ್ರಹಾಲಯವೂ ಇತ್ತು, ಅದರೆ ಇಗ ಇಲ್ಲಿರುವ ಕೊಳದಲ್ಲಿ ಮೊಸಳೆಗಳನ್ನು ಮಾತ್ರ ನೋಡಬಹುದು.

ರಾಜ ರವಿವರ್ಮ

ಅರಮನೆಯಿಂದ ಐವತ್ತು ಮೀಟರ್ ದೂರದಲ್ಲಿ “ನವಲಾಕಿ” ಎಂಬ ಹೆಸರಿನ ಆಳವಾದ ಪುಷ್ಕರಣಿಯೂ ಸಹ ಇದೆ. 1930ರಲ್ಲಿ ಮಹಾರಾಜ ಪ್ರತಾಪ್ ಸಿಂಗ್ ತನ್ನ ಯೂರೋಪಿನ್ ಸ್ನೇಹಿತರು ಬಂದಾಗ ಆಡಲೆಂದು ಈ ಅರಮನೆ ಆವರಣದಲೇ ಗಾಲ್ಫ್ ಮೈದಾನವನ್ನು ಸಹ ನಿರ್ಮಿಸಿದ್ದಾನೆ. 1990 ರಲ್ಲಿ ಪ್ರತಾಪ್ ಸಿಂಗನ ಮೊಮ್ಮಗ ಹಾಗೂ ಮಾಜಿ ರಣಜಿ ಕ್ರಿಕೆಟ್ ಆಟಗಾರ ‘ಸಮರ್‍ಜಿತ್’ ಈ ಗಾಲ್ಫ್ ಮೈದಾನವನ್ನು ನವೀಕರಿಸಿದ್ದಾನಲ್ಲದೇ ಸಾರ್ವಜನಿಕರಿಗೆ ಮುಕ್ತವಾಗಿದೆ. ಫತೇಸಿಂಗ್ ಮ್ಯೂಸಿಯಂನಲ್ಲಿರುವಷ್ಟು ಕಲಾಕೃತಿಗಳು ಹಾಗೂ ರಾಜ ರವಿವರ್ಮನು ಗಾಯಕ್ವಾಡ್ ರಾಜಮನೆತನಕ್ಕೆ ಬರೆದುಕೊಟ್ಟಿರುವ ಅಮ್ಯೂಲ್ಯ ವರ್ಣಚಿತ್ರಗಳು ನಿಮಗೆ ಬೇರೆಲ್ಲೂ ಕಾಣಸಿಗುವುದಿಲ್ಲ. ಇಲ್ಲಿ ಚೈನಾ ಹಾಗೂ ಜಪಾನಿನ ಅಪೂರ್ವ ಪಿಂಗಾಣಿ ಹಾಗೂ ಕಂಚಿನ ಕಲಾಕೃತಿಗಳು, ಗ್ರೀಕ್ ಹಾಗೂ ರೋಮನ್ ಕಾಲದ ಅಪೂರ್ವ ಕಲಾಕೃತಿಗಳು, ಯೂರೋಪಿನ ತೈಲವರ್ಣ ಚಿತ್ರಗಳು ಹಾಗೂ 18ನೇ ಶತಮಾನಕ್ಕೆ ಸೇರಿದ ಫ್ರೆಂಚ್ ಪೀಠೋಪಕರಣಗಳನ್ನು ಇಲ್ಲಿ ನೋಡಬಹುದು. ಇಲ್ಲಿರುವ ರಾಜ ರವಿವರ್ಮ ಬರೆದಿರುವಷ್ಟು ಚಿತ್ರಗಳು ನಿಮಗೆ ಬೇರೆಲ್ಲೂ ನೋಡ ಸಿಗುವುದಿಲ್ಲ! ರಾಜ ರವಿವರ್ಮ ತನ್ನ ಬಹಳಷ್ಟು ಸಮಯವನ್ನು ಚಿತ್ರಿ ಬರೆಯುವುದಕ್ಕೋಸ್ಕರ ಈ ಅರಮನೆಯಲ್ಲೇ ಕಳೆದಿದ್ದಾನೆ ಹಾಗಾಗಿ ಇಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಅಗಾಗ ರವಿವರ್ಮ ಬರೆದ ಚಿತ್ರ ಪ್ರದರ್ಶನವನ್ನು ಏರ್ಪಡಿಸುತ್ತಾರೆ. ಅರಮನೆಯ ಇಂಚಿಂಚು ಮಾಹಿತಿ ಪಡೆಯಲು ಪ್ರತಿಯೊಬ್ಬರಿಗೂ ಆಡಿಯೋ ಗೈಡ್ ಕೊಡಲಾಗುತ್ತದೆ, ಅದನ್ನು ಕಿವಿಗೆ ಹಾಕಿ ಅದನ್ನು ಹಿಂಬಾಲಿಸಿದರೆ ನಿಮಗೆ ಅರಮನೆಯ ಪೂರ್ಣ ಮಾಹಿತಿ ಲಭ್ಯ.

ಅರಮನೆಯ ಹೊರಾಂಗಣ

ಇಲ್ಲಿಂದ 47 ಕೀ ಮಿ ದೂರದಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಹೆಸರಿಸಲಾದ ಚಂಪನೇರ್ ಪಾವಗಡ್ ಪುರಾತತ್ವ ಇಲಾಖೆಯ ಉದ್ಯಾನವನವಿದ್ದು ಇದು ಸಹ ನೋಡಲು ಯೋಗ್ಯವಾಗಿದೆ. 8 ನೇ ಶತಮಾನದಲ್ಲಿ ಚಾವ್ಡಾ ರಾಜಮನೆತನದ ಚಾವ್ಡಾ ಕಟ್ಟಿದ ಕೋಟೆ, ಬುರುಜು ನೋಡಲು ಯೋಗ್ಯವಾದ ದೇವಸ್ಥಾನ ಹಾಗೂ ವಾಸದ ಮನೆಗಳು ಹಾಗೂ ಅಂದಿನ ಕಾಲದಲ್ಲಿದ ನೀರು ಸರಬರಾಜು ವ್ಯವಸ್ಥೆಯನ್ನು ಇಲ್ಲಿ ನೋಡಬಹುದು. ಬರೋಡಕ್ಕೆ ಬೆಂಗಳೂರು ಮೂಲಕ ನೇರ ವಿಮಾನ ಸಂಪರ್ಕವಿದೆಯಲ್ಲದೆ ರೈಲುಗಳೂ ಇವೆ. ಇಲ್ಲೂ ಅನೇಕ ದಕ್ಷಿಣ ಭಾರತದ ಹೋಟೆಲ್ ಗಳಿದ್ದರೂ ಗುಜರಾತಿ ಥಾಲಿಯೂಟವನ್ನು ಮಾಡುವುದನ್ನು ಮಾತ್ರ ಮರೆಯಬಾರದು. ವಿಶಾಲ ಪರಿಸರದಲ್ಲಿ ಕಣ್ಣು ಹಾಯಿಸಿದಷ್ಟುದ್ದಕ್ಕೂ ಹರಡಿರುವ ಹಸಿರ ಹುಲ್ಲಿನ ನಡುವೆ ಇರುವ ಸುಂದರ ಪರಿಸರ ಹಾಗೂ ಆಗಾಗ ಕಣ್ಣಿಗೆ ಬಿಳುವ ನವಿಲುಗಳೂ ಹಾಗೂ ಅವುಗಳ ಕೂಗಾಟ ಹಾಗೂ ಪ್ರಶಾಂತವಾದ ಪರಿಸರ ಎಂಥವರನ್ನು ಮಂತ್ರಮುಗ್ಧರನ್ನಾಗಿಸುತ್ತದೆಯಲ್ಲದೇ ರಾತ್ರಿಯ ಹೊತ್ತಿನಲ್ಲಿ ದೀಪಾಲಂಕಾರದಿಂದ ಜಗಮಗಿಸುವ ಇದನ್ನು ಎಲ್ಲರೂ ಒಮ್ಮೆ ನೋಡಲೇ ಬೇಕಾದ ಅರಮನೆ ಇದು.

ಪ್ರಕಾಶ್ ಕೆ ನಾಡಿಗ್

ತುಮಕೂರು

Related post

Leave a Reply

Your email address will not be published. Required fields are marked *