ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-6

ಶಬೆಲ್ಲಿ ವಾಸ್ತವ್ಯ

ಹೋಟೆಲ್ ರೂಮಿನಲ್ಲಿ ಒಬ್ಬನೇ ಕೂತು ಏನು ಮಾಡುವುದು; ಒಂದೇ ಒಂದು ಪುಸ್ತಕ ಇಲ್ಲ. ಈ ಊರಲ್ಲಿ ಸದ್ಯ ಯಾರೂ ಪರಿಚಯವೂ ಇಲ್ಲ. ಎಲ್ಲಕ್ಕಿಂತ ಮೊದಲು ಊಟ ಮಾಡಿ ಬರೋಣ ಅನ್ನಿಸಿ, ಅಂತಿಮ ಮಹಡಿಯಲ್ಲಿದ್ದ ಉಪಾಹಾರಸ್ಥಳಕ್ಕೆ ಹೋಗಿ ಕೂತೆ. ಸರ್ವ್ ಮಾಡಲು ಬಂದವನಿಗೆ ತಿಳಿಯುವ ಹಾಗೆ ಅರ್ಧಂಬರ್ಧ ಇಂಗ್ಲೀಷ್ ಭಾಷೆಯಲ್ಲಿ ಏನಿದೆ ಊಟಕ್ಕೆಂದು ಕೇಳಿದೆ. ಆತ “ಬ್ರೆಡ್ ಬಟರ್, ರೈಸ್ ಅಂಡ್ ಮೀಟ್” ಎಂದ. ಎಂಥ ‘ಮೀಟ್’ ಅಂತ ಕೇಳಿದ್ದಕ್ಕೆ ಬೀಫ್ ಅಂದ. ಚಿಕನ್ ಕೇಳಿದರೆ ಖಾಲಿ ಆಗಿದೆ ಅಂತ ಉತ್ತರ ಬಂತು. ಕೊನೆಗೆ, ರೈಸ್, ಆಮ್ಲೆಟ್ ಅಂಡ್ ಟೋಸ್ಟ್ ಹೇಳಿದೆ. ಬಹುಶಃ ಕುಸುಬಲಕ್ಕಿಯಿಂದ ಮಾಡಿದ್ದ ಅನ್ನ ಅದು, ನನಗೆ ತಿಂದು ಅಭ್ಯಾಸ ಇಲ್ಲ; ಮೇಲಾಗಿ ಸಾಂಬಾರ್ ಥರದ್ದು ಇಲ್ಲದೆ ತುತ್ತೆತ್ತಲಾಗದು. ಮೊಸರು ಮಜ್ಜಿಗೆ ಬಗ್ಗೆ ಹೇಗೆ ಕೇಳುವುದು; ಸುತ್ತ ಕಣ್ಣಾಡಿಸಿದರೆ ಇದ್ದಂತಹ ಸುಳಿವು ಎಲ್ಲೂ ಕಾಣಲಿಲ್ಲ. ಕಷ್ಟದಿಂದ ತಿಂದೆ; ಅನ್ನ ಬಿಟ್ಟು ಏಳುವ ಕೆಟ್ಟ ಅಭ್ಯಾಸ ನನಗೆಂದೂ ಇಲ್ಲ. ಅದೇ ಕೊನೆ, ಮತ್ತೆ ಅಲ್ಲಿ ಇರುವತನಕ ಅನ್ನಕ್ಕಾಗಿ ಆರ್ಡರ್ ಮಾಡಲಿಲ್ಲ. ಇಲ್ಲಿಯ ಚಿಕನ್ ಯಾವ ತೀರೋ ಏನೋ ಆ ದೇವರೇ ಬಲ್ಲ. ಹಾಗಾಗಿ, ಅಲ್ಲಿ ಇರುವಷ್ಟೂ ದಿನ ಮೂರು ಹೊತ್ತೂ ಬ್ರೆಡ್ ಮತ್ತು ಆಮ್ಲೆಟ್ ತಿಂದೇ ಬದುಕಿದೆ – ವಿಧಿ ಇಲ್ಲ.

ಆ ಹೋಟೆಲ್ ಹೆಸರು ‘ಶಬೆಲ್ಲಿ’ ಅಥವ ‘ಶೆಬೆಲ್ಲಿ’ – ಸೋಮಾಲಿ ಜನ ಉಚ್ಛಾರ ಮಾಡುವ ರೀತಿ. ಆದರೆ, ಅಂತರ್ಜಾಲದ ಪ್ರಕಾರ ‘ಶೀ ಬೆಲ್’ ಸರಿಯಾದ ಉಚ್ಛಾರ. ಇಲ್ಲಿ ಅದು ಮುಖ್ಯ ಅಲ್ಲ. ಆದರೆ ಅನುಕೂಲಕ್ಕೆ ಸೋಮಾಲಿ ಉಚ್ಛಾರವನ್ನೇ ನಾನು ಅನುಸರಿಸುವೆ.

ಶಬೆಲ್ಲಿ ಅನ್ನುವುದು ಅಲ್ಲಿಯ ಒಂದು ನದಿಯ ಹೆಸರು. ಸೋಮಾಲಿ ದೇಶದಲ್ಲಿ, ಒಟ್ಟು ಐದಾರು ನದಿಗಳು ಹರಿಯುತ್ತವೆ. ಆದರೆ ಅವುಗಳಲ್ಲಿ ಪ್ರಮುಖವಾದವು ಎರಡು: ಶಬೆಲ್ಲಿ (1130 ಕಿ.ಮೀ) ಮತ್ತು ಜೂಬ್ಬ (1004 ಕಿ.ಮಿ). ಈ ಎರಡೂ ನದಿಗಳ ಹೆಸರಿನ, ವಸತಿ ಸಹ ಇರುವ ದೊಡ್ಡ ಹೋಟೆಲುಗಳು ಮೊಗದಿಶುವಲ್ಲಿ ಇವೆ. ನಾವು ಅಲ್ಲಿದ್ದ ಕೆಲವು ವರ್ಷದ ನಂತರ ಇವೆರಡಕ್ಕಿಂತಲೂ ಉತ್ತಮ ಅನ್ನಿಸುವ ಮತ್ತೊಂದು ಹೋಟೆಲ್, ‘ಅಲ್ ಅರುಬ’ ಎಂಬುದು ಎದ್ದು ನಿಂತಿತು. ಹಾಗಂತ ಯಾವೊಂದಕ್ಕೂ ತಾರಾ ಕಿಮ್ಮತ್ತು ಇತ್ತು ಅಂತೇನೂ ಖಂಡಿತ ಇಲ್ಲ. ಇನ್ನುಳಿದ ನದಿಗಳಲ್ಲಿ, ನೀವು ತಿಳಿಯಲೇಬೇಕಾದುದು ‘ತೋಗ್ಧೀರ್’ ( ಸೋಮಾಲಿ: ‘ವೇಬಿ ತೋಗ್ಧೀರ್’ – ವೇಬಿ ಅಂದರೆ ನದಿ) ಎಂಬ ನೀರಿಲ್ಲದ ‘ಒಣನದಿ’ಯ ಬಗ್ಗೆ. ಇದು ದೊಡ್ಡ ಮಳೆ ಸುರಿದಾಗ ಮಾತ್ರ, ತುಂಬಿ ನೆರೆ ಬಂದಂತೆ, ಮತ್ತೆ ಬರಿದಾಗುವವರೆಗೆ ಹರಿಯುತ್ತದೆ! ಈ ಒಣ ನದಿಯನ್ನು ನಾವೂ ಕಂಡು ತೃಪ್ತರಾಗಿದ್ದೇವೆ.

ಸಂಜೆ ಕೊಠಡಿ ಬೇಸರವಾಗಿ, ಹೊರಗೆ ಹೊಸ ಊರು ಪರಿಸರ ಮುಂತಾಗಿ ಕಣ್ತುಂಬಿಕೊಳ್ಳುವ ಇಚ್ಛೆಯಿಂದ ಆಚೆ ಬಂದು, ಹಾದಿ ತಪ್ಪದ ರೀತಿ ಸುತ್ತ ವಿಹಂಗಮದೃಷ್ಟಿ ಹರಿಸಿ, ಗುರುತುಗಳನ್ನು ಮನದಟ್ಟು ಮಾಡಿಕೊಂಡು, ಮೆಲ್ಲ ಮೆಲ್ಲ ನಡೆಯತೊಡಗಿದೆ. ಬಹಳ ಮುಖ್ಯ ಅಂದರೆ, ಭಿಕ್ಷುಕರು ಕಣ್ಣಿಗೆ ಬೀಳಲಿಲ್ಲ. ನಮ್ಮ ದೇಶದ ಥರ! ಮೇಲಾಗಿ, ಅಲ್ಲಿಯ ಕಾರುಗಳ ವೈವಿಧ್ಯ ಕಂಡ ನನಗೆ ಅಚ್ಚರಿ! ಅಂದಿನ ನಮ್ಮ ಭಾರತದಲ್ಲಿ ಅಂಬಾಸಿಡರ್ ಮತ್ತು ಫಿಯೆಟ್ ಬಿಟ್ಟರೆ, ಊಹುಂ! ಬೇರೆ ಕಂಡು ಕೇಳರಿಯದ ನಮ್ಮ ಜನ. ಆದರೆ, ಈ ಇಂಥ ಬಡನಾಡಿನಲ್ಲಿ ಏನೆಲ್ಲ ಥರದ ಆಮದಾದ ಕಾರುಗಳು! ಅಲ್ಲಿಗೆ ಅಂತಹ ಹಣಕಾಸುಳ್ಳ ದಢೂತಿ ಮಂದಿ ಸಹ ಅಲ್ಲಿ ಸಾಕಷ್ಟು ಇದ್ದಾರೆ,ಅಂದುಕೊಂಡು ಮುಂದೆ ಸಾಗಿದೆ. ನಗರದಲ್ಲಿ ದೊಡ್ಡ ಬಸ್ಸುಗಳ ಬದಲು ಮಿನಿ ಬಸ್ಸುಗಳ (ನಮ್ಮ ಇಂದಿನ ಟೆಂಪೋ ಟ್ರಾವಲರ್ ಮಾದರಿ) ಓಡಾಟವೇ ಹೆಚ್ಚು – ಅವೂ ಸಹ ಆಮದಾದ ನಿಸಾನ್, ಮಜ್ಡ ಇತ್ಯಾದಿ. ಅವು ಅಲ್ಲಲ್ಲಿ ನಿಂತು ಪ್ರಯಾಣಿಕರನ್ನು ಇಳಿಸಿ, ಹತ್ತಿಸಿ ಸಾಗುತ್ತಿದ್ದುದರಿಂದ ಇವೇ ಇಲ್ಲಿಯ ಅಂತರನಗರ ಸಾರಿಗೆ ಎಂದು ತೀರ್ಮಾನಿಸಿದೆ. ಮುಂದೆ ನಾನು ಅರಿತದ್ದು, ಅವುಗಳಲ್ಲಿ ಅರ್ಧ ಶಿಲ್ಲಿಂಗ್ (ಸೋಮಾಲಿ ಹಣ) ದರ ಒಬ್ಬರಿಗೆ ಎಂದು. ಅರ್ಧ ಶಿಲ್ಲಿಂಗನ್ನು ಅವರ ಭಾಷೆಯಲ್ಲಿ ‘ಸುಮ್ನಿ’ ಎನ್ನುತ್ತಿದ್ದರಿಂದ, ನಮ್ಮ ಭಾರತೀಯರ ನಾಲಗೆಗಳಲ್ಲಿ, ಅದು ‘ಸುಮ್ನಿಬಸ್’ ಎಂಬ ಹೆಸರು ಖ್ಯಾತಿ ಪಡೆದು ಹರಿದಾಡಿತ್ತು.

ಅಂಗಡಿಮುಂಗಟ್ಟುಗಳ ಮುಂದಿನ ದೊಡ್ಡ ಫಲಕಗಳಲ್ಲಿ ಅಥವ ಇತರೆ ಜಾಹಿರಾತುಗಳಲ್ಲಿ ಬರೆದದ್ದು ಆಂಗ್ಲ ಲಿಪಿ ಆದರೂ, ಓದಲು ಉಕ್ಕಿನ ಕಡಲೆ. ದಿನ ಕಳೆದಂತೆ ಅವುಗಳಲ್ಲಿ ಕೆಲವು ಸೋಮಾಲಿ ಮತ್ತು ಹಲವು ಇಟಾಲಿಯನ್ ಭಾಷೆಯಲ್ಲಿದ್ದವು ಎಂದು ತಿಳಿದೆ. ಓದಲು ಪ್ರಯತ್ನಿಸಿ ಸೋತು ತೆಪ್ಪಗೆ ಹೆಜ್ಜೆ ಹಾಕಿದೆ. ಆದರೆ ಆಗಾಗ ನನ್ನ ಗುರುತುಗಳನ್ನು (ಲ್ಯಾಂಡ್ ಮಾರ್ಕ್ಸ್) ನೋಡುತ್ತಲೇ ಇದ್ದೆ. ದಾರಿ ತಪ್ಪಿದರೆ, ಭಾಷೆ ಬೇರೆ ಗೊತ್ತಿಲ್ಲ. ನಾನು ಕೇಳಿದ್ದು ಅವರಿಗೆ ಅಕಸ್ಮಾತ್ ಅರ್ಥ ಆದರೂ, ಅವರು ಹೇಳಿದ್ದು ನನಗೆ ಅರ್ಥ ಆಗುವುದೇ? ಇಷ್ಟೊಂದು ಕಷ್ಟದಲ್ಲಿ ಈ ನಡಿಗೆ ಬೇಡ ಅನ್ನಿಸಿ, ತಕ್ಷಣ ಮೊಟಕುಗೊಳಿಸಿ, ವಾಪಸ್ಸು ಶಬೆಲ್ಲಿ ದಿಕ್ಕಿಗೆ ನನ್ನ ಕಾಲ್ಗಳ ರಥ ತಿರುಗಿಸಿದೆ. ಮೇಲಾಗಿ, ಸಮಯ ರಾತ್ರಿ ಎಂಟರ ಆಸುಪಾಸಲ್ಲಿತ್ತು. ಊಟ ಎಂಬ ನಿರ್ವಿಶೇಷದ ಆಮ್ಲೆಟ್, ಬ್ರೆಡ್ ಇಳಿಸಿ, ಬಿದ್ದುಕೊಂಡಿದ್ದಷ್ಟೆ ಅರಿವು. ಬೆಳಿಗ್ಗೆ ಮೊದಲ ದಿನದ ಕೆಲಸದ ಹುರುಪಿನಿಂದಲೋ ಅಥವ ಹೊಸ ಜಾಗದ ಕರಾಮತ್ತೋ ಕಾಣೆ, ಐದು ಗಂಟೆಗೆ ಎಚ್ಚರವಾಗಿ ಮತ್ತೆ ನಿದ್ದೆ ಹತ್ತಲಿಲ್ಲ. ಡ್ರೈವರ್ ಎಂಟಕ್ಕೆ ಎಂದು ಹೇಳಿದ್ದು ನೆನಪಾಗಿ, ನಿಧಾನವಾಗಿ ತಯಾರಾಗಿ, ಬ್ರೆಡ್ಡಾಮ್ಲೆಟ್ ಎಂಬ ತಿಂಡಿ ಗಬಗಬ ತಿಂದು, ಕೆಳಗಿನ ಅಂತಸ್ತಿಗೆ ಬರುವ ಹೊತ್ತಿಗೆ ಆತನೂ ಬಂದಿದ್ದ.

ಸರಸರನೆ ನಡೆದ ಅವನ ಹಿಂದೆ ನಾನೂ ಓಡಿದ ಹಾಗೆ ಕ್ರಮಿಸಿ ಗಾಡಿ ಹತ್ತಿದೆ. ಬಹುಶಃ ಸಾಕಷ್ಟು ದೂರ ಪ್ರಯಾಣ ಅಂದುಕೊಂಡು, ಅತ್ತಿತ್ತ ಈ ಹೊಸ ನಗರದ ದೃಷ್ಯಾವಳಿ ಆಪೋಶಿಸುವ ಆಸೆಯಲ್ಲಿ ಕೂತೆ. ಆದರೆ, ಕೆಲವೇ ನಿಮಿಷಗಳಲ್ಲಿ ಎರಡಂತಸ್ತಿನ ಸೌಧದ ಮಂದೆ ಗಾಡಿ ನಿಲ್ಲಿಸಿ, “ದತೋರೆ, ಬ್ಲೀಸ್ ಡೌನ್” ಅಂದ (‘ದತೋರೆ’ ಅಂದರೆ ಇಟಾಲಿಯನ್ ಭಾಷೆಯಲ್ಲಿ ಡಾಕ್ಟರ್ ಎಂದು. ಅದೇ ಲೇಡಿ ಡಾಕ್ಟರರಿಗೆ, ‘ದತೋರೆಸ್ಸಾ’ ಎಂದು. ಸೋಮಾಲಿ ಭಾಷೆಯಲ್ಲಿ ಪಿ ಅಕ್ಷರ ಇಲ್ಲ; ಹಾಗಾಗಿ ‘ಪ’ಕಾರ ಬರುವ ಕಡೆಯೆಲ್ಲ ಅವರು ‘ಬ’ಕಾರ ಉಪಯೋಗಿಸುತ್ತಾರೆ – ಆದ್ದರಿಂದ, ಪ್ಲೀಸ್ ಬದಲು ‘ಬ್ಲೀಸ್’ ಎನ್ನುತ್ತಾರೆ; ಹಾಗೆಯೇ ಪೋಸ್ಟ್ ಬದಲು ‘ಬೋಸ್ಟ್’ ಮುಂತಾಗಿ) ನಾನು ಆತನ ಮಾತು ಮೀರದೆ, ಇಳಿದು ಅವನನ್ನು ಹಿಂಬಾಲಿಸುವ ಮುನ್ನ, ಎದುರಿಗೆ ಇದ್ದ ದೊಡ್ಡಕ್ಷರಗಳ ಬೋರ್ಡ್ ನೋಡಿದೆ. ಅದು ನನಗೆ ಕೆಲಸದ ಪತ್ರದಲ್ಲಿದ್ದ ಹಾಗಿತ್ತು ಅನ್ನಿಸಿತು (Wakaaladda Badbaadada Shaqaalaha ee Soomaaliyeed ಅಂದರೆ ಇಂಗ್ಲೀಷಲ್ಲಿ “ಸೋಮಾಲಿ ಸೋಶಿಯಲ್ ಸೆಕ್ಯೂರಿಟಿ ಏಜನ್ಸಿ” ಎಂದು). ನೇರವಾಗಿ ಮಹಡಿಯಲ್ಲಿದ್ದ ‘ಡೈರೆಕ್ಟರ್ ಜನರಲ್’ ಕಛೇರಿಗೆ ಕರೆದೊಯ್ದ. ಅವರು “ಹ್ಯಾವ್ ಎ ಸೀಟ್, ಬ್ಲೀಸ್” ಅಂದರು. ನಮ್ಮ ಹಿಂದೆಯೇ, ಮುಸ್ತಾಫ ಎಂಬ ಮ್ಯಾನೇಜರ್ ಸಹ ಬಂದಿದ್ದು, ಆತನಿಗೆ ಸೋಮಾಲಿಯಲ್ಲಿ ಏನೋ ಹೇಳಿದರು. ಆತ “ದತೋರೆ, ಕಾಲೆ” ಎಂದ. (ಕಾಲೆ=ಬಾ/ಬನ್ನಿ) “ಯು ಗೋ ವಿತ್ ಹಿಮ್” ಎಂದು ಡಿ.ಜಿ. ಹೇಳಿದರು. ಅಲ್ಲಿಗೆ ನನ್ನ ಮತ್ತು ಆ ಕಛೇರಿಯ ನಂಟಿಗೆ ನಾಂದಿ ಹಾಡಿದ ಹಾಗಾಯಿತು.ದೊಡ್ಡನ ವೈದ್ಯ ಕಾಯಕ ಮತ್ತು ರೋಗಿಗಳ ತಪಾಸಣೆಗಾಗಿ ಒಂದು ಉತ್ತಮವಾದ ಪ್ರತ್ಯೇಕ ಕೊಠಡಿಯೇ ಇತ್ತು. ಮೇಲಾಗಿ, ಭಾಷೆಯ ತರ್ಜುಮೆಗಾಗಿ ಅಲ್ಪಸ್ವಲ್ಪ ಇಂಗ್ಲೀಷ್ ತಿಳಿದಿದ್ದ, ಹುಸೇನ್ ಎಂಬ ವ್ಯಕ್ತಿಯ ಸಹಾಯ ಇತ್ತು. ಮೊದಲ ದಿನವೇ ರೋಗಿಗಳ ಭರ್ಜರಿ ಸಂದಣಿ! ನನ್ನ ಕೆಲಸ ರೋಗಿಯನ್ನು ಪರೀಕ್ಷಿಸಿ ಚೀಟಿ ಬರೆದು ಕೊಡುವುದಷ್ಟೆ. ಔಷಧ ಮುಫತ್ತಾಗಿ ಕೊಡಲು ಬೇರೊಂದು ದೊಡ್ಡ ಔಷಧಾಲಯವೇ ಇತ್ತು. ಇಂಜಕ್ಷನ್ ಬರೆದರೆ ಅದನ್ನು ಚುಚ್ಚಲು ಒಬ್ಬ, ಹಾಗೂ ಔಷಧ ಕೊಡಲು ಇನ್ನೊಬ್ಬ ಅಲ್ಲಿದ್ದರು. ಹಾಗಾಗಿ ವೈದ್ಯರಿಗೆ, ಆಸ್ಪತ್ರೆಯ ಥರ ಯಾವುದೇ ಇಂಜಕ್ಷನ್ ಕೊಡುವ ಕೆಲಸ ಇರಲಿಲ್ಲ. ನೋಂದಾಯಿಸಿಕೊಂಡ ಎಲ್ಲ ರೀತಿ ಕೆಲಸಗಾರರಿಗೆ (ಸರ್ಕಾರಿ ಅಥವ ಇನ್ನಿತರ) ಮತ್ತವರ ಕುಟುಂಬಕ್ಕೆ ಈ ರೀತಿಯ ಅನುಕೂಲವನ್ನು ಅಂಥ ದೇಶದಲ್ಲಿ ಕಂಡು ನನಗೆ ಆಶ್ಚರ್ಯ ಆದದ್ದು ನಿಜ!

ಅಂದಿನ ಕೆಲಸದ ಮಧ್ಯೆ, ಒಬ್ಬ ಇಟಲಿಯ ಹಾಗೂ ಇನ್ನೊಬ್ಬ ಈಜಿಪ್ಟ್ ದೇಶದ ವೈದ್ಯರು, ಬೇರೆ ಬೇರೆಯಾಗಿ ಬಂದು ನನ್ನನ್ನು ಪರಿಚಯ ಮಾಡಿಕೊಂಡು, “ವೆಲ್ಕಮ್ ಅಂಡ್ ಬೆಸ್ಟ್ ವಿಶಸ್” ಹೇಳಿ ಹೋದರು. ಅದು ನನ್ನ ಆಶ್ಚರ್ಯಕ್ಕೆ ಕಾರಣವಾಗಿ ಖುಷಿ ನೀಡಿತು. ಸರಿಯಾಗಿ ಇನ್ನೂ ಮಧ್ಯಾಹ್ನ ಎರಡು ಗಂಟೆ ಕೂಡ ಇಲ್ಲ, ಅಷ್ಟರಲ್ಲಿ ಚಾಲಕ ಹಾಜರ್. ಬೆಳಿಗ್ಗೆ ಎಂಟರಿಂದ ಮಧ್ಯಾಹ್ನ ಎರಡು ಗಂಟೆ ತನಕ ಮಾತ್ರ ಅಲ್ಲಿ ಕೆಲಸದ ವೇಳೆ; ಇಡೀ ದೇಶದಲ್ಲೇ ಎಲ್ಲ ಶಾಖೆಗಳಲ್ಲೂ ಸಹ. ಮೊಗದಿಶು ಹಿಂದೂಮಹಾಸಾಗರದ ಕರಾವಳಿಲ್ಲಿದ್ದು ಸೆಕೆ ತುಸು ಹೆಚ್ಚು. ಆದರೆ, ಅರಬ್ ದೇಶಗಳಷ್ಟು ಸುತರಾಂ ಅಲ್ಲ. ಆದಾಗ್ಯೂ, ಅರಬ್ ಮಾದರಿ ಕೆಲಸದ ವೇಳೆಯನ್ನು ಇವರೂ ಅನುಸರಿಸಿದ್ದರು; ಕುರುಡು ನಕಲು ಅಂದರೇ ಸರಿ! ಇಲ್ಲಿಯೂ ಸಹ ವಾರದ ರಜ ಶುಕ್ರವಾರ, ಇಸ್ಲಾಮಿಕ್ ರಾಷ್ಟ್ರ ಆದುದರಿಂದ.

ಸಯೀದ್ ಮಹಮ್ಮದ್ ಅಬ್ದುಲ್ಲಾ ಹಸನ್ ಸ್ಮಾರಕ

ಮೊದಲದಿನ ಅಲ್ಲವೇ, ಹಾಗಾಗಿ ಹೊರಡುವ ಮುನ್ನ ಮ್ಯಾನೇಜರ್ ಮುಸ್ತಾಫನನ್ನು ಕಂಡು, ಹೊಗಲು ಅನುಮತಿ ಕೇಳಿದೆ. ಆತ ಹೋಟೆಲ್ ವಾಸ್ತವ್ಯದ ಬಗ್ಗೆ ವಿಚಾರಿಸಿ, ರೂಮಿಂದ ಹೊರಬಂದು ಬೀಳ್ಕೊಟ್ಟ. ವಾಹನದಲ್ಲಿ ಕೂತಾಗ, ನನ್ನ ಪ್ರತಿದಿನದ ಸಾರಥಿಯಾಗುವ ಆತನ ಹೆಸರು ಕೇಳಿದೆ. ಅಬ್ದುಲ್ ಖಾದರ್ ಎಂದ.

‘ಊಟ’ದ ನಂತರ ಹಾಗೇ ಹಾಸಿಗೆಗೆ ಒರಗಿದೆ. ಬಹುಶಃ ಬೆಳಿಗ್ಗೆ ಬೇಗ ಎದ್ದ ಪರಿಣಾಮ, ಮತ್ತೆ ಕಣ್ಣು ಬೆಳಕು ಕಂಡಾಗ, ಐದೂವರೆ. ತಯಾರಾಗಿ, ಮೇಲೆ ತಿಂಡಿಮನೆಗೆ ಹೋಗಿ ‘ಶಾ’ (‘ಚಾ ಅಥವ ಟೀ’ಗೆ ಅಲ್ಲಿಯ ಮಾತು) ಆರ್ಡರ್ ಮಾಡಿದೆ. ಟೀ, ಕಾಫಿ ಏನೇ ಆಗಲಿ ಹಾಲಿರದೆ ಬ್ಲ್ಯಾಕ್ – ಇಡೀ ದೇಶದಲ್ಲಿ. ನಮ್ಮ ಭಾರತೀಯರ ಮನೆಗಳಲ್ಲಿ, ‘ನೀಡೋ’ ಎಂಬ ಸ್ವಿಟ್ಸರ್ಲೆಂಡಿಂದ ಆಮದಾದ ಹಾಲುಪುಡಿ ಉಪಯೋಗಿಸಿ ಕಾಫಿ ಮತ್ತು ಟೀ ಮಾಡುತ್ತಿದ್ದರು. ಹೊರಗೆ, ಅನೇಕ ದೇಶಗಳ ರೀತಿ, ಸೋಮಾಲಯ ಕೂಡ ಕಪ್ಪು ಕಾಫಿ/ಟೀ ಮಯ. ಹಾಗಂತ ಜಗತ್ತಿನೆಲ್ಲೆಡೆ ಹಾಲು ಬೆರೆತ ಕಾಫಿ/ಟೀ ಇರುವುದೇ ಇಲ್ಲ ಎಂದಲ್ಲ.

ಎಂದಿನ ಹಾಗೆ ನನ್ನ ಭ್ರಮಣಶೀಲ ಚಪಲ ಹೋಟೆಲಿಂದ ಆಚೆ ತಳ್ಳಿತು. ಈ ಬಾರಿ ಸ್ವಲ್ಪ ಧೀರನಾಗಿ, ತಪ್ಪಿದರೆ, ಶಬೆಲ್ಲಿ ಅಂತ ಕೇಳಿದರಾಯಿತೆಂಬ ಭಂಡ ಎದೆಗಾರಿಕೆ ಸ್ವಯಂ ಮೂಡಿ, ತುಸು ಹೆಚ್ಚು ಉಚಾಯಿಸಿ ಹೊರಟೆ!

ದಿ ಕ್ಯಾಥೊಲಿಕ್ ಕೆಥೆಡ್ರಲ್

ಹೀಗೆ ಪ್ರತಿ ಸಾಯಂಕಲ ನನ್ನ ಕಾಲ ಕಳೆದು ಹೋಗುತ್ತಿತ್ತು. ಅಂತಹ ಒಂದು ಸಂಜೆ ಅಲ್ಲಿಯ ಮುಖ್ಯ ಇಗರ್ಜಿ (ದಿ ಕ್ಯಾಥೊಲಿಕ್ ಕೆಥೆಡ್ರಲ್) ನೋಡಿದೆ. ಇನ್ನೊಮ್ಮೆ “ದಿ ಗ್ರೇಟ್ ಇಸ್ಲಾಮಿಕ್ ಯೂನಿಟಿ ಮಾಸ್ಕ್” ಎಂಬ ಮಸೀದಿಯನ್ನು, ಮತ್ತೊಮ್ಮೆ, ಸಯೀದ್ ಮಹಮ್ಮದ್ ಅಬ್ದುಲ್ಲಾ ಹಸನ್ (1856-1920) ಎಂಬವರ ಸ್ಮಾರಕ ಪುತ್ಥಳಿ ಕಂಡೆ. ಇಲ್ಲಿ ಆ ಪುತ್ಥಳಿಯ ವ್ಯಕ್ತಿಯ ಬಗ್ಗೆ ಒಂದೆರಡು ಮಾತು: ಅವರು ಸೋಮಾಲಿಯಾದ ಧಾರ್ಮಿಕ ಹಾಗೂ ರಾಷ್ಟ್ರಭಕ್ತ ನಾಯಕರಾಗಿ, ಚಳವಳಿ ಆರಂಭಿಸಿ ಬ್ರಿಟಿಷ್, ಇಟಾಲಿಯನ್ ಮತ್ತು ಇಥಿಯೋಪಿಯನ್ ಸಾಮ್ರಾಜ್ಯಗಳ ಮೇಲೆ ಹೋರಾಡಿ, ಸೋಮಾಲಿ ಸ್ವಾತಂತ್ರ್ಯಕ್ಕೆ ಕಾರಣರಾದರು; ಅಷ್ಟೇ ಅಲ್ಲದೆ, ಇಸ್ಲಾಮಿಕ್ ಚಳವಳಿಗೂ ಅವರೇ ಕಾರಣರಾದರು.

ಕ್ರಮೇಣ ನನ್ನ ವೈದ್ಯ ಕೆಲಸದಲ್ಲಿ ಖುಷಿ ಇದ್ದರೂ, ಇನ್ನೂ ಎಷ್ಟು ದಿನ ಹೆಂಡತಿ ಕಾಣದೆ ಕಂಗಾಲಾಗಿ ಕಾಯುವುದು ಎನ್ನಿಸಿ, ಒಮ್ಮೆ ಮುಸ್ತಾಫಾನನ್ನು, ನಾನು ಹರ್ಗೀಸಾಕ್ಕೆ ವಾಪಸ್ಸಾಗಬೇಕೆಂದು ಮತ್ತು ಹೆಂಡತಿ ಬಿಟ್ಟು ಬಂದಿರುವ ಬಗ್ಗೆ ಹೇಳಿದೆ. ಅದಕ್ಕವನು, ಈಗ ಇಂಚಾರ್ಜ್ ಇರುವವರು ಸಹಾಯಕ ಡಿ.ಜಿ. ಆದ್ದರಿಂದ ಆ ಕೆಲಸ ಅಸಾಧ್ಯವೆಂದೂ, ಅದಕ್ಕೆ ಯೂರೋಪ್ ಟ್ರಿಪ್ ಹೋಗಿರುವ ಡಿ.ಜಿ. ಬರಬೇಕು ಎಂದ. ಇನ್ನೂ ಹದಿನೈದು ದಿನ ಆಗಬಹುದೆಂದು ಹೇಳಿ, ಶಬೆಲ್ಲಿಯಲ್ಲಿ ನಾನು ಕೇವಲ ಒಂದು ವಾರ ಮಾತ್ರ ಇರಲು ಅವಕಾಶ ಇದೆಯೆಂದೂ, ನಂತರ ನನ್ನ ವಸತಿ ನಾನೇ ನೋಡಿಕೊಳ್ಳಬೇಕಂದೂ ಹೇಳಿ ನನಗೆ ಇನ್ನೊಂದು ಆಘಾತ ಕೊಟ್ಟ! ಅಣ್ಣ ಹೇಳಿದ್ದ ಆ ಪಶುವೈದ್ಯ ಡಾ. ಜಾರ್ಜ್ ಸಹ ಪ್ರತ್ಯಕ್ಷ ಆಗಿರಲಿಲ್ಲ; ಅಂದಮೇಲೆ ಮಂದೇನು?!

ಮುಂದುವರೆಯುವುದು…

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

2 Comments

  • Excellent narration keep it up

  • ಡಾ. ನೀಲಕಂಠ ಮೂರ್ತಿಯವರ ಬರಹವು ಮಾಗಿದ ಮಾವಿನ ಹಣ್ಣಿನ ರೀತಿ ಇದೆ , ಆದಷ್ಟು ಶೀಘ್ರ ಅವರ ಪುಸ್ತಕ ಹೊರ ಬರಲಿ

Leave a Reply

Your email address will not be published. Required fields are marked *