ಸಮುದ್ರಯಾನದ ಸಾಹಸಗಾತಿ “ಲೆಫ್ಟಿನೆಂಟ್ ಕಮಾಂಡರ್ ಪಿ. ಸ್ವಾತಿ”

ಸಮುದ್ರಯಾನದ ಸಾಹಸಗಾತಿ “ಲೆಫ್ಟಿನೆಂಟ್ ಕಮಾಂಡರ್ ಪಿ. ಸ್ವಾತಿ”

ಭಾರತ ದೇಶದ ಇತಿಹಾಸದಲ್ಲೇ ಅದ್ಭುತವಾದ ಛಾಪನ್ನು ಮೂಡಿಸಿ ಆರು ಮಹಿಳಾ ಸೈನ್ಯಾಧಿಕಾರಿಗಳ ರೋಚಕ ಸಮುದ್ರಯಾನದ ಸಾಹಸಗಾಥೆಯ ತಾರಿಣಿ “ಲೆಫ್ಟಿನೆಂಟ್ ಕಮಾಂಡರ್ ಪಿ.ಸ್ವಾತಿ“. ತಾರಿಣಿ ಎಂಬುವುದು ಯಾವುದೋ ಒಂದು ಕಾಲ್ಪನಿಕ ಕತೆಯಲ್ಲ. ಭಾರತದ ನೌಕಾದಳವು ತನ್ನ ಒಂದು ಹಡಗಿಗೆ ಐ.ಎನ್.ಎಸ್ ತಾರಿಣಿ ಎಂದು ವಿಶಿಷ್ಟವಾಗಿ ಇಟ್ಟ ಹೆಸರಿದು. ಈ ಹಡಗಿನಲ್ಲಿ ನೌಕಾದಳದ ಆರು ಮಹಿಳಾ ಸೈನ್ಯಾಧಿಕಾರಿಗಳು ಸುಮಾರು 21,600 ನಾಟಿಕಲ್ ಮೈಲುಗಳ ದೂರವನ್ನು (40,003 ಕಿ.ಮೀ) ಸಮುದ್ರಯಾನದ ಮೂಲಕ ಪ್ರಪಂಚಕ್ಕೊಂದು ಸುತ್ತು ಸುತ್ತಿ ಸಾವನ್ನೇ ಗೆದ್ದು ಮತ್ತೆ ಭೂಮಿಗೆ ಬಂದಿಳಿದಿದ್ದಾರೆ. ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಇಂತಹ ವಿಶೇಷ ಸಾಹಸವನ್ನು ಕೈಗೊಂಡು ಅದರಲ್ಲಿ ಗೆದ್ದು ಭಾರತೀಯ ನಾರಿಯರು ಯಾವುದರಲ್ಲೂ ಕಡಿಮೆಯಿಲ್ಲವೆಂದು ನೌಕಾಪಡೆಯ ಮಹಿಳಾ ಸೈನ್ಯಾಧಿಕಾರಿಗಳು ವಿಶ್ವಕ್ಕೇ ತೋರಿಸಿಕೊಟ್ಟಿದ್ದಾರೆ.

ಮನೆಯಲ್ಲಿ ಈಗಾಗಲೇ ಎರಡು ಮಂದಿ ಹೆಣ್ಣು ಮಕ್ಕಳಿದ್ದು ಮೂರನೆಯದ್ದಾದರೂ ಗಂಡು ಮಗು ಜನಿಸಲಿ ಎಂಬ ಆಸೆಯನ್ನು ಹೊತ್ತುಕೊಂಡಿದ್ದಾಗಲೇ ಈಕೆಯೂ ತನ್ನ ತಂದೆ ತಾಯಿಗೆ ಮೂರನೇ ಹೆಣ್ಣು ಮಗಳಾಗಿ ಜನಿಸುತ್ತಾಳೆ. ಮೂರನೆಯದ್ದೂ ಹೆಣ್ಣು ಮಗುವಾದಾಗ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಈ ದಂಪತಿಗಳು ಸಹಜವಾಗಿಯೇ ಬಹಳಷ್ಟು ಅಧೀರರಾಗಿದ್ದರು. ಆದರೆ ಈ ಹೆಣ್ಣು ಮಗುವೇ ಮುಂದೊಂದು ದಿನ ಏಷ್ಯಾ ಖಂಡದಲ್ಲೇ ಪ್ರಥಮವಾಗಿ ಸುದೀರ್ಘ 254 ದಿವಸಗಳ ಸಮುದ್ರಯಾನ ಮಾಡಿದ ಮಹಿಳಾ ಸೈನ್ಯಾಧಿಕಾರಿಗಳ ತಂಡದ ಒಬ್ಬ ಸದಸ್ಯೆಯಾಗಿ ಬೆಳೆಯುತ್ತಾಳೆಂದು ತಿಳಿದಿದ್ದರೆ ಬಹುಶಃ ಆ ದಂಪತಿಗಳು ಅಂದು ಹೆಣ್ಣು ಮಗು ಹುಟ್ಟಿತೆಂದು ಹೀಗೆಳೆಯುತ್ತಿರಲಿಲ್ಲವೇನೋ. ಆ ಹೆಣ್ಣು ಮಗುವೇ ಆಂಧ್ರಪ್ರದೇಶ ಈಗಿನ ವಿಶಾಖಪಟ್ಟಣ ವೈಝಾಗ್‌ನ ಲೆಫ್ಟಿನೆಂಟ್ ಕಮಾಂಡರ್ ಪಿ.ಸ್ವಾತಿ.

ಆಂಧ್ರಪ್ರದೇಶ ಇಂದಿನ ವಿಶಾಖಪಟ್ಟಣಂ ಅಥವಾ ವೈಝಾಗ್‌ ನ ಪುಟ್ಟ ಕ್ಯಾಂಟೀನ್ ಒಂದರಲ್ಲಿ ಕೆಲಸ ಮಾಡಿಕೊಂಡಿರುವ ಆದಿನಾರಾಯಣ್ ಇವರಿಗೆ ತಮ್ಮ ಮನೆಯಿಂದ ಯಾರಾದರೂ ಒಬ್ಬರು ಸೈನ್ಯಕ್ಕೆ ಸೇರಬೇಕೆಂಬ ಕನಸಿತ್ತು. ತಂದೆಯ ಈ ಕನಸನ್ನು ನನಸು ಮಾಡಿದವಳೇ ಇವರ ಮೂರನೆಯ ಮಗಳು ಪಿ.ಸ್ವಾತಿ. ಕಾಲೇಜು ವಿದ್ಯಾಭ್ಯಾಸದ ಸಂದರ್ಭದಲ್ಲೇ ಎನ್.ಸಿ.ಸಿ ಕ್ಯಾಂಪ್‌ಗಳಲ್ಲಿ ಭಾಗವಹಿಸುತ್ತಾ ಬಿಳಿ ಬಣ್ಣದ ಸಮವಸ್ತ್ರ ಧರಿಸಿ ನೌಕಾದಳದಲ್ಲಿ ತಾನು ಕೆಲಸ ಮಾಡಬೇಕೆಂಬ ಆಸೆಯು ಈಕೆಯ ಮನದಾಳದಲ್ಲಿ ಮೂಡಿತ್ತು. ಈಕೆಯ ಕನಸುಗಳಿಗೆ ಪುಷ್ಠಿ ನೀಡಿ ಪೋಷಿಸಿದವರು ಕಮಾಂಡರ್ ಕೃಷ್ಣಕುಮಾರ್. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳನ್ನು ಜೋಪಾನವಾಗಿ ಭಾರತೀಯ ತಾಯಂದಿರು ಕಾಯ್ದುಕೊಳ್ಳುತ್ತಾರಾದರೂ ಸ್ವಾತಿಯು ಇದರಿಂದ ವಿಮುಖಳಾಗಿ ಬೆಳೆಯುತ್ತಾಳೆ.

ಭಾರತದಲ್ಲಿ ಹೆಣ್ಣುಮಕ್ಕಳನ್ನು ಬೇಕಾಬಿಟ್ಟಿಯಾಗಿ ಎಲ್ಲೆಲ್ಲೂ ದೂರದ ಊರುಗಳಿಗೆ ಪ್ರಯಾಣ ಮಾಡಲು ಬಿಡುವುದಿಲ್ಲ ಆದರೆ ನಿನ್ನ ಹೆತ್ತವರಿಗೆ ಹೇಳಿಯೇ ನೀನು ಓಡಾಡುವ ವಯಸ್ಸು ಮುಗಿದು ಹೋಯಿತು, ಇನ್ನು ಏನಿದ್ದರೂ ನೀನೊಬ್ಬಳೇ ಓಡಾಡಿ ಸಾಧನೆ ಮಾಡಬೇಕು” ಎಂದು ಕಮಾಂಡರ್ ಕೃಷ್ಣಕುಮಾರ್ ಹೇಳಿದ ಮಾತಿನಿಂದ ಪ್ರೇರಣೆಗೊಂಡು ಹೆತ್ತವರಿಗೂ ತಿಳಿಸದೆ ನೌಕಾದಳದ ರ‍್ಯಾಲಿಯಲ್ಲಿ ಭಾಗವಹಿಸಿ ಅಲ್ಲಿ ನೌಕಾದಳಕ್ಕೆ ಆಯ್ಕೆಯಾಗುತ್ತಾಳೆ ಸ್ವಾತಿ. ಮುಂದೊಂದು ದಿನ ಗಣರಾಜ್ಯೋತ್ಸವದ ಮಹಿಳಾ ಸೈನ್ಯಾಧಿಕಾರಿಗಳ ಪಥ ಸಂಚಲನದಲ್ಲಿ ತಾನು ಭಾಗವಹಿಸುವುದನ್ನು ತನ್ನ ಹೆತ್ತವರು ದೂರದರ್ಶನದಲ್ಲಿ ನೋಡಿ ಹೆಮ್ಮೆ ಪಡಬಹುದೆಂದು ಈಕೆ ಕನಸಿನಲ್ಲೂ ಎಣಿಸಿರಲಿಲ್ಲ. ರಾಜ್ಯದ ಪ್ರತಿಷ್ಠಿತ ವಾರ್ತಾ ಚಾನೆಲ್‌ಗಳು ತನ್ನ ಸಾಧನೆಯ ಸಂದರ್ಶನವನ್ನು ದೇಶದಾದ್ಯಂತ ಪ್ರಸಾರ ಮಾಡುತ್ತದೆ, ದೇಶವೇ ಕೊಂಡಾಡುವ ಸಾಹಸಿ ಹೆಣ್ಣುಮಗಳು ನಾನಾಗಲಿದ್ದೇನೆ ಎಂಬುದಾಗಲಿ ಈಕೆಯ ಮನಸ್ಸಿನಲ್ಲಿಯೂ ಅನಿಸಿರಲಿಕ್ಕಿಲ್ಲ.

ಭಾರತೀಯ ನೌಕಾದಳಕ್ಕೆ ಸೇರಿದ ಖುಷಿಯಲ್ಲಿದ್ದ ಪಿ.ಸ್ವಾತಿ ಅವರಲ್ಲಿ ನಾವು ಯಾಕೆ ಸಮುದ್ರಯಾನ ಮಾಡಬಾರದೆಂಬ ಪ್ರಶ್ನೆಯು ಚಿಗುರೊಡೆದಿತ್ತು. ಇದಕ್ಕಾಗಿ ಸ್ವಾತಿಯು ನ್ಯಾಷನಲ್ ಜಿಯೋಗ್ರಫಿ ಸಂಸ್ಥೆಯ ಪ್ರಮುಖರನ್ನು ಭೇಟಿಯಾಗಿ ತಮ್ಮ ಸಮುದ್ರಯಾನದ ಕನಸನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು. ಸ್ವಾತಿ ಅವರ ಈ ಕನಸನ್ನು ಧನಾತ್ಮಕವಾಗಿ ಒಪ್ಪಿಕೊಂಡ ನ್ಯಾಷನಲ್ ಜಿಯೋಗ್ರಫಿ ಸಂಸ್ಥೆಯ ಪ್ರಮುಖರು ನೌಕಾದಳಕ್ಕೆ ಸೇರಿದ ಇನ್ನೂ ಐದು ಮಂದಿ ಮಹಿಳಾ ಸೈನ್ಯಾಧಿಕಾರಿಗಳನ್ನು ಆರಿಸಿ ತಂಡವನ್ನು ರಚಿಸುತ್ತಾರೆ. ಈ ತಂಡದಲ್ಲಿ ಉತ್ತರಾಖಂಡ್‌ನ ಲೆ| ಕಮಾಂಡರ್ ವರ್ತಿಕಾ ಜೋಶಿ, ಹಿಮಾಚಲ ಪ್ರದೇಶದ ಲೆ| ಕಮಾಂಡರ್ ಪ್ರತಿಭಾ ಜಾಮವಾಲ್, ಹೈದರಾಬಾದ್‌ನ ಲೆ| ಐಶ್ವರ್ಯ ಬೋಡಪಟ್ಟಿ, ಮಣಿಪುರದ ಲೆ| ಎಸ್.ವಿಜಯಾದೇವಿ, ಡೆಹರಾಡೂನ್‌ನ ಲೆ| ಪಾಯಲ್ ಗುಪ್ತಾ, ವೈಝಾಗ್‌ನ ಲೆ| ಕಮಾಂಡರ್ ಪಿ.ಸ್ವಾತಿ ಇದ್ದರು.

ಐ.ಎನ್.ಎಸ್. ತಾರಿಣಿ ತಂಡವನ್ನು ಸಮುದ್ರ ಯಾನಕ್ಕಾಗಿ ಸಜ್ಜುಗೊಳಿಸಲು ವಿಶೇಷ ಸೈನ್ಯಾಧಿಕಾರಿಯಾಗಿ ಕ್ಯಾಪ್ಟನ್ ದಿಲೀಪ್ ದೊಂಡೆ ಇವರನ್ನು ನೌಕಾಸೇನೆಯು ನೇಮಿಸುತ್ತದೆ. 2014 ರಿಂದ 2017 ರವರೆಗೆ ಮೂರು ವರ್ಷ ಕಠಿಣವಾದ ತರಬೇತಿಯನ್ನು ನೀಡಿ ತಂಡವನ್ನು ಸಿದ್ಧಗೊಳಿಸಿದ ಕ್ಯಾಪ್ಟನ್ ದಿಲೀಪ್ ದೋಂಡೆ ಹೇಳಿದ ಮಾತೆಂದರೆ “ಸಮುದ್ರ ಪ್ರಯಾಣಕ್ಕೆ ಕಾಲಿಡುತ್ತಿರುವ ನೀವು ಮತ್ತೆ ಬದುಕಿ ಮರಳುವುದು ಕಷ್ಟ” ಎಂದು!! ತಮಗೆ ಮೂರು ವರ್ಷ ಸಮುದ್ರಯಾನದ ಶಿಕ್ಷಣವನ್ನು ಕೊಟ್ಟ ಕ್ಯಾ.ದಿಲೀಪ್ ಇವರ ಬಾಯಲ್ಲಿ ಈ ಮಾತನ್ನು ಕೇಳಿಯೂ ಈ ಆರು ಧೀರ ಭಾರತೀಯ ಪುತ್ರಿಯರು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ.

ಕೇವಲ 55 ಅಡಿ ಉದ್ದವಿರುವ ಸಾಮಾನ್ಯ ನೌಕೆಯಲ್ಲಿ (ಸೈಲಿಂಗ್ ಬೋಟ್) ಸಾಗರದ ಕಠಿಣ ಪರಿಸ್ಥಿತಿಯಲ್ಲಿ ಸತತವಾಗಿ 8 ತಿಂಗಳ ಕಾಲ ಆರು ಮಂದಿ ಮಹಿಳೆಯರು ಸುಮಾರು 21,600 ನಾಟಿಕಲ್ ಮೈಲುಗಳಷ್ಟು ದೂರ (ಸರ್ಕಮ್ ನೇವಿಗೇಟ್) ಪ್ರಯಾಣಿಸಿ, 5 ದೇಶಗಳಿಗೆ ಭೇಟಿ ನೀಡಿ, 4 ಖಂಡಗಳನ್ನು ಹಾದು, 3 ಸಾಗರಗಳನ್ನು ದಾಟಿ, ಭೂಮಧ್ಯ ರೇಖೆಯನ್ನು 2 ಬಾರಿ ದಾಟಿದ ಈ ಐತಿಹಾಸಿಕ ಸಾಧನೆಯೇ ನಾವಿಕ್ ಸಾಗರ್ ಪರಿಕ್ರಮ. 2017 ಫೆಬ್ರವರಿ ತಿಂಗಳಿನಲ್ಲಿ ಗೋವಾದ ಅಕ್ವೇರಿಸ್ ಶಿಪ್ ಯಾರ್ಡಿನಲ್ಲಿ ನಿರ್ಮಿಸಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಐ.ಎನ್.ಎಸ್ ತಾರಿಣಿ ಎಂಬ ಸ್ವದೇಶಿ ನಿರ್ಮಿತ ಲಘು ನೌಕೆಯಲ್ಲಿ ಈಕೆಯು ತನ್ನ ತಂಡದೊಂದಿಗೆ ಪ್ರಪಂಚವನ್ನೇ ಒಂದು ಸುತ್ತು ಸುತ್ತಿ ಬಂದಿದ್ದಾಳೆ. ಸುತ್ತಲೂ ಸಮುದ್ರದ ನೀರನ್ನು ಬಿಟ್ಟು ಬೇರೆ ಏನನ್ನೂ ನೋಡಲು ಸಾಧ್ಯವಿಲ್ಲದ ಹಾಗೂ ರೌದ್ರಾವತಾರದ ಸಾಗರದಲ್ಲಿ ಕೇವಲ 55 ಅಡಿ ಉದ್ದದ ಸಾಮಾನ್ಯ ನೌಕೆಯ ಮೂಲಕ ಪ್ರಪಂಚವನ್ನೇ ಸುತ್ತುವುದು ಎಂತಹ ಧೀರನ ಎದೆಯನ್ನೂ ಝಲ್ಲೆನಿಸುವಂತೆ ಮಾಡುತ್ತದೆ.

2017 ಸಪ್ಟೆಂಬರ್‌ನಲ್ಲಿ ಗೋವಾದ ಬಂದರಿನಿಂದ ಆರಂಭಗೊಂಡ ಈ ಐತಿಹಾಸಿಕ ಸಾಗರ ಯಾತ್ರೆಯ ಮೂಲಕ ಅಕ್ಟೋಬರ್ 23, 2017 ರಂದು ಆಸ್ಟ್ರೇಲಿಯಾದ ಫ್ರೀಮ್ಯಾಂಟಲ್ ಬಂದರು, ನವಂಬರ್ 29, 2017 ರಂದು ನ್ಯೂಜಿಲ್ಯಾಂಡ್ ದೇಶದ ಲಿಟಲ್ಟನ್ ಪೋರ್ಟ್, ಜನವರಿ 21, 2018 ರಂದು ಫಾಲ್ಕಾಂಡ್ ದ್ವೀಪ, ಮಾರ್ಚ್ 2, 2018 ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಬಂದರು ಮೂಲಕ ಮೇ 21, 2018 ರಂದು ಮತ್ತೆ ಗೋವಾದ ಬಂದರಿಗೆ ಸ್ವಾತಿ ಮತ್ತವರ ತಂಡ ತಲುಪಿದಾಗ ನಿರ್ಮಲಾ ಸೀತಾರಾಮನ್ ಭಾರತೀಯ ನೌಕಾಪಡೆಯ ಇತರ ಅಧಿಕಾರಿಗಳ ಜೊತೆ ತಾರಿಣಿ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಫ್ರೀಮ್ಯಾಂಟಲ್ ಬಂದರಿನಿಂದ ನ್ಯೂಜಿಲ್ಯಾಂಡ್ ದೇಶದ ಲಿಟಲ್ಟನ್ ಪೋರ್ಟ್ ಕಡೆಗಿನ ಪ್ರಯಾಣವು ಈ ಮಹಿಳಾ ತಂಡದ ಸಾಮರ್ಥ್ಯ, ತಾಳ್ಮೆ, ದೈಹಿಕ, ಮಾನಸಿಕ ಕ್ಷಮತೆ ಪರೀಕ್ಷಿಸುವ ಘಟ್ಟವಾಗಿತ್ತು. ಏಕೆಂದರೆ ಸುಮಾರು 41 ದಿನಗಳ ಕಾಲ ಪೆಸಿಫಿಕ್ ಸಾಗರದಲ್ಲಿ ಉಂಟಾದ ಸೂಪರ್ ಸೈಕ್ಲೋನ್ ಚಂಡಮಾರುತದ ಸಂದಿಗ್ಧ ಪರಿಸ್ಥಿತಿಯಲ್ಲಿಯೇ ಇವರು ಸಾಗರದ ಮಧ್ಯೆ ನಡೆಸಿದ ಪ್ರಯಾಣವು ಪರಿಣಿತ ಪುರುಷ ನಾವಿಕರನ್ನೂ ನಾಚಿಸುವಂತಿತ್ತು. “ಪೆಸಿಫಿಕ್ ಸಾಗರದ ಪ್ರಕ್ಷುಬ್ಧ ಪರಿಸ್ಥಿತಿ ಹೇಗಿತ್ತೆಂದರೆ ಸುಮಾರು 10 ಮೀ ಎತ್ತರದ ಅಲೆಗಳು ನಮ್ಮ ಹಡಗಿಗೆ ಅಪ್ಪಳಿಸುತ್ತಿರುವುದು ಒಂದೆಡೆಯಾದರೆ, ಸುಮಾರು 140 ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಬಲವಾದ ಗಾಳಿ ಯಾವಾಗ ಬೇಕಿದ್ದರೂ ನಮ್ಮನ್ನು ಸಮುದ್ರ ಪಾಲಾಗಿಸಬಹುದಿತ್ತು” ಎನ್ನುತ್ತಾರೆ ಲೆ| ಕರ್ನಲ್ ಸ್ವಾತಿ ಪಿ.

ಗಂಡು ಪುತ್ರನ ನಿರೀಕ್ಷೆಯಲ್ಲಿದ್ದ ಕುಟುಂಬದಲ್ಲಿ ನಿರ್ಲಕ್ಷ್ಯದ ಹೆಣ್ಣುಮಗಳಾಗಿ ಹುಟ್ಟಿ ಸಾಧನೆಯ ಹಲವು ಮೆಟ್ಟಿಲುಗಳನ್ನು ಕಠಿಣ ಪರಿಶ್ರಮ, ಬದ್ಧತೆ ಮತ್ತು ಸವಾಲಿನಿಂದ ಸ್ವೀಕರಿಸಿ ಭಾರತೀಯ ನೌಕಾಪಡೆಯ ಆರು ಮಹಿಳಾ ಯೋಧರ ತಂಡದ ಸದಸ್ಯೆಯಾಗಿ ಐ.ಎನ್.ಎಸ್ ತಾರಿಣಿ ನೌಕೆಯ ಮೂಲಕ ಬರೋಬ್ಬರಿ 8 ತಿಂಗಳುಗಳ ವಿಶ್ವಯಾನವನ್ನು ಯಶಸ್ವಿಯಾಗಿ ಪೂರೈಸಿ ಬಂದ ಸ್ವಾತಿ.ಪಿ ಇಂದು ವಿಶ್ವವೇ ಗುರುತಿಸುವ ಹೆಣ್ಣುಮಗಳಾಗಿ ದೇಶ ರಾಜ್ಯ ಹಾಗೂ ಕುಟುಂಬಕ್ಕೇ ಕೀರ್ತಿಯನ್ನು ತಂದಿದ್ದಾಳೆ. ಸಮುದ್ರಮಾರ್ಗದಲ್ಲಿ ವಿಶ್ವಯಾನ ಮಾಡಿದ ಭಾರತದ ಆರು ನಾರಿಯರ ಈ ಸಾಹಸಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ‘ತೆಂಜಿಂಗ್ ನೋರ್ಗೆ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಹೆಣ್ಣೆಂದು ಹೀಗಳೆಯುವ ಬದಲು ಆಕೆಯನ್ನೂ ಗಂಡಿಗೆ ಸಮಾನವಾಗಿ ಬೆಳೆಸಿದಲ್ಲಿ ಪ್ರಪಂಚವೇ ಗುರುತಿಸುವ ಸಾಧಕಿಯಾಗಬಲ್ಲಳು ಎನ್ನುವುದಕ್ಕೆ ಪಿ.ಸ್ವಾತಿಯೇ ಉತ್ತಮ ಉದಾಹರಣೆ.

ಸಂತೋಷ್ ರಾವ್ ಪೆರ್ಮುಡ
“ಪೆರ್ಮುಡ ಮನೆ”, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ 574198
ದೂ: 9742884160

Related post

Leave a Reply

Your email address will not be published. Required fields are marked *