ಲೇಖಕಿ ಆಶಾ ರಘು – ಸಂದರ್ಶನ

“ಆವರ್ತ” ಇದು ವೇದೋತ್ತರ ಕಾಲ ಘಟ್ಟದ ಕಲ್ಪನೆಯಲ್ಲಿ ಮೂಡಿಬಂದತಹ ಕಾದಂಬರಿ. ಇದರ ಲೇಖಕಿ ಶ್ರೀಮತಿ ಆಶಾ ರಘು. “ಆವರ್ತ” 2014 ರಲ್ಲಿ ಪ್ರಥಮ ಆವೃತಿ ಬಿಡುಗಡೆಯಾಗಿ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಹಾಗೆಯೇ ಲೇಖಕಿ ಆಶಾ ರಘು ರವರಿಗೆ ಅನೇಕ ಸಾಹಿತ್ಯಾಭಿಮಾನಿಗಳನ್ನು ದೊರಕಿಸಿಕೊಟ್ಟಂತಹ ಕೃತಿ.

ಶ್ರೀಮತಿ ಆಶಾ ರಘು ರವರು ಬೆಂಗಳೂರಿನ ವಿಜಯನಗರ ಪಿ. ಯು. ಕಾಲೇಜು ಹಾಗು ಆದಿಚುಂಚನಗಿರಿ ಬಿ ಬಿ ಎಂ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿ, ನಂತರ ಸಾಹಿತ್ಯಕ್ಷೇತ್ರದಲ್ಲಿ ತಮ್ಮನು ಸಂಪೂರ್ಣ ತೊಡಗಿಸಿಕೊಂಡು “ಚೂಡಾಮಣಿ, ಕ್ಷಮಾದಾನ, ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು” ರಚಿಸಿ ಜೊತೆಗೆ “ಬೊಗಸೆಯಲ್ಲಿ ಕಥೆಗಳು, ಅಪರೂಪದ ಪುರಾಣ ಕಥೆಗಳು, ಆರನೇ ಬೆರಳು” ಕಥಾ ಸಂಕಲನಗಳು ಹೊರಬಂದು ಕನ್ನಡದ ಸಾಹಿತ್ಯಾಭಿಮಾನಿಗಳಿಗೆ ಹತ್ತಿರವಾದರು. “ಆವರ್ತ” ಇವರ ಚೊಚ್ಚಲ ಕಾದಂಬರಿ, “ಗತ, ಮಾಯೆ” ಕಾದಂಬರಿಗಳು ಆನಂತರ ಮೂಡಿ ಬಂದದ್ದು. ಅವರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅಲ್ಲದೆ “ಸೂರ್ಯನಾರಾಯಣ ಚಡಗ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ, ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿಗಳು ಲಭಿಸಿದೆ.

2018 ರಲ್ಲಿ ಸಾಹಿತ್ಯ ಬಂಡಾರ ದವರು ಎರಡನೇ ಆವೃತಿ ಹೊರತಂದು ಇದೀಗ ಬೇಡಿಕೆ ಹೆಚ್ಚಾಗಿ ಮೂರನೇ ಮುದ್ರಣವನ್ನು ಸಾಹಿತ್ಯಲೋಕ ಪಬ್ಲಿಕೇಷನ್ ನ ರಘುವೀರ್ ಸಮರ್ಥ್ವ ಹೊರತಂದಿದ್ದಾರೆ. ಅಲ್ಲದೇ ಈ ‘ಆವರ್ತ’ ದ ಬಗ್ಗೆ ಸಂಗ್ರಹಿಸಿದ ಅಭಿಪ್ರಾಯಗಳನ್ನು ‘ಆವರ್ತ-ಮಂಥನ’ ಎಂದು ಹೆಸರಿಸಿ ಮುದ್ರಿಸಿದ್ದಾರೆ. ಇದರೊಂದಿಗೆ ಆಶಾರಘು ಅವರ ಈವರೆಗಿನ ನಾಟಕಗಳನ್ನು ಒಗ್ಗೂಡಿಸಿ ‘ಪೂತನಿ ಮತ್ತಿತರ ನಾಟಕಗಳು’ ಸಂಕಲನವು ಮುದ್ರಣ ಕಂಡಿದೆ. ಈ ಮೂರು ಕೃತಿಗಳು ಇದೇ ಸೆಪ್ಟೆಂಬರ್ 10 ರಂದು ಶಿವಾನಂದ ಸರ್ಕಲ್ ಬಳಿಯ ಗಾಂಧಿ ಭವನದಲ್ಲಿ ಅನಾವರಣಗೊಳ್ಳಲಿವೆ.

ಆವರ್ತ’ ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ದಾಖಲೆ ಬರೆದ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ. ಆಶಾರಘು ಅವರು ಆನಂತರ ಹಲವಾರು ಕಾದಂಬರಿ, ನಾಟಕ ಹಾಗೂ ಸಣ್ಣಕತೆಗಳನ್ನು ರಚಿಸಿದ್ದಾರೆ. ಅವರ ಮೊದಲ ಕಾದಂಬರಿಯಾದ ‘ಆವರ್ತ’ ಕಾದಂಬರಿಯು ಈಗ ಮೂರನೇ ಆವೃತ್ತಿಯು ಲೋಕಾರ್ಪಣೆಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಸಾಹಿತ್ಯಲೋಕದ ಪಯಣದ ಬಗ್ಗೆ ಆಶಾರಘು ಇಲ್ಲಿ ಮಾತಾಡಿದ್ದಾರೆ

>ಎಲ್ಲರಿಗೂ ಗೊತ್ತಿದ್ದಂತೆ ‘ಆವರ್ತ’ ತಮ್ಮ ಮೊದಲ ಕೃತಿ. ಈ ಕಾದಂಬರಿಯನ್ನು ಬರೆಯಲು ತಾವು ಮಾಡಿಕೊಂಡ ಸಿದ್ಧತೆಗಳೇನು?

ಆವರ್ತ’ ಕಾದಂಬರಿಯು ವೇದೋತ್ತರ ಕಾಲಘಟ್ಟದಲ್ಲಿ ನಡೆದಿರುವಂತೆ ರಚಿಸಿರುವಂತಹದ್ದು. ಇದು ಐತಿಹಾಸಿಕ ಅಥವಾ ಪುರಾಣದಲ್ಲಿ ಘಟಿಸಿರುವ ಯಾವುದೇ ಘಟನೆಗಳನ್ನು ಆದರಿಸಿಲ್ಲ. ನನ್ನದೇ ಆದಂತಹ ಕಾಲ್ಪನಿಕ ಚೌಕಟ್ಟಿನಲ್ಲಿ ಕತೆಯ ಎಳೆಯನ್ನು ಸಿದ್ದಪಡಿಸಿಕೊಂಡಿದ್ದೇನೆ. ನನ್ನ ಕಲ್ಪನೆಯ ಪಾತ್ರಧಾರಿಗಳನ್ನು ಸೃಷ್ಟಿಸಿದ್ದೀನಿ. ಅಲ್ಲದೇ ನನ್ನದೇ ಆದ ನಕಾಶೆಯಲ್ಲಿ ಹಲವು ಸ್ಥಳಗಳನ್ನು ಕೂಡ ಸೃಷ್ಟಿಸಿದ್ದೀನಿ. ಇದರಲ್ಲಿ ನಾನು ಯೋಗ-ಭೋಗ ಸಮನ್ವಯ ತತ್ವವನ್ನು ಪ್ರತಿಪಾದಿಸಲು ಪ್ರಯತ್ನ ಪಟ್ಟಿದ್ದೀನೆ.

>ಅರಿಷಡ್ವರ್ಗಗಳ ಕಲ್ಪನೆಯನ್ನು ಕಥೆಯ ಆರಂಭದಿಂದ ಅಂತ್ಯದವರೆಗೂ ಆಯಾಯ ಕಾಲಘಟ್ಟಗಳ ಮೂಲಕ ಹೇಳಿದ್ದೀರ, ಇದನ್ನು ಓದುಗರು ಎಷ್ಟು ಮೆಚ್ಚಿದ್ದಾರೆ? ಈ ಬಗ್ಗೆ ಯಾವ ರೀತಿ ಅಭಿಪ್ರಾಯಗಳು ಬಂದವು?

ಕೆಲವು ಓದುಗರು ಮೆಚ್ಚಿದ್ದಾರೆ. ಮತ್ತೆ ಕೆಲವು ಓದುಗರು ನನ್ನನ್ನು ಆರೋಪಿಸಿಯೂ ಇದ್ದಾರೆ. ಅವರ ಆರೋಪ ಎಂದರೆ `ಸ್ತ್ರೀ ಪಾತ್ರಗಳಿಗೆ ಆಶಾ ರಘು ಅವರು ಅರಿಷಡ್ವರ್ಗಳನ್ನು ತಂದಿದ್ದಾರೆ. ಅದು ಸರಿಯಾದದ್ದು ಅಲ್ಲ, ಎಂದು ಆರೋಪಿಸಿದ್ದಾರೆ.
ಇಲ್ಲಿ ತಂದಿರುವಂತಹ ಅರಿಷಡ್ವರ್ಗಗಳು ಕಾದಂಬರಿಯ ನಾಯಕ ಪ್ರತೀಪನಲ್ಲಿ ಬರುವಂತದ್ದು. ಸ್ತ್ರೀ ಪಾತ್ರಗಳೇ ಅರಿಷಡ್ವರ್ಗಗಳು ಎಂದು ಚಿತ್ರಿಸಿಲ್ಲ! ಸ್ತ್ರೀ ಪಾತ್ರಗಳನ್ನು ಇಲ್ಲಿ ಸಾಂಕೇತಿಕವಾಗಿ ತರಲಾಗಿದೆ. ಕೊನೆಗೆ ಎಲ್ಲಾ ಸ್ತ್ರೀ ಪಾತ್ರಗಳಿಂದಲೂ ಅಭಿಮುಖನಾಗುತ್ತಾನೆ. ಹಾಗಾಗಿ ಈ ಕಾದಂಬರಿಯು ಯೋಗಾ-ಭೋಗ ಸಮನ್ವಯತತ್ವವನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಿದೆ ಹಾಗೂ ಇದೊಂದು ಸಾಂಕೇತಿಕ ಕಾದಂಬರಿ ಎಂಬುದು ನನ್ನ ಅಭಿಪ್ರಾಯ.

>’ಆವರ್ತ’ ದಲ್ಲಿ ಸೃಷ್ಟಿಸಿರುವ ಪಾತ್ರಗಳ ಹೆಸರು ಹಾಗೂ ಅಲ್ಲಿ ಬರುವ ಸ್ಥಳಗಳ ಹೆಸರುಗಳು ವಿಭಿನ್ನವಾಗಿವೆ, ಅವುಗಳ ಸೃಷ್ಟಿಗೆ ತಮ್ಮ ತಯಾರಿ ಹೇಗಿತ್ತು?

ನಾನು ಇದಕ್ಕಾಗಿ ಸಂಸ್ಕೃತ ಹಾಗೂ ಹಳೆಗನ್ನಡದ ನಿಘಂಟುಗಳನ್ನು ಬಳಸಿದೆ. ಹೂವುಗಳಿಗೆ ಹಾಗೂ ಸಸ್ಯಗಳಿಗೆ ಇರುವ ಹೆಸರುಗಳನ್ನು ಹುಡುಕಿದೆ. ಅಲ್ಲದೇ ಮಹಾಭಾರತ, ಶಿವಪುರಾಣಗಳಲ್ಲಿ ಓದಿದೆ ಅಲ್ಲಿ ಬರುವ ಸ್ಥಳಗಳಿಂದ ಪ್ರೇರಿತಳಾದೆ. ಇದರಲ್ಲಿ ಬರುವ ಫ್ಲಾಶ್ ಬ್ಯಾಕ್ ನಿರೂಪಣೆಯ ಶೈಲಿಯನ್ನು ಡಾ. ಎಸ್. ಎಲ್. ಭೈರಪ್ಪನವರ “ಪರ್ವ” ಕೃತಿಯಲ್ಲಿ ಗುರುತಿಸಿದ್ದೀನಿ. ಅದು ನನಗೆ ಪ್ರೇರಣೆಯೂ ಆಗಿದೆ. ಪ್ರತೀಪನ ಗತ ಜೀವನವನ್ನು ಪ್ರಸ್ತುತ ಜೀವನದ ಸನ್ನಿವೇಶದಲ್ಲಿ ಹೇಳುತ್ತಾ ಹೋಗಿದ್ದೀನಿ. ಆ ನಿರೂಪಣೆಯನ್ನು ಸಾಕಷ್ಟು ಓದುಗರು ಮೆಚ್ಚಿದ್ದಾರೆ ಕೂಡ.

>ಆವರ್ತ’ ಬರೆದ ನಂತರ ನಿಮ್ಮ ಮತ್ತೊಂದು ಕಾದಂಬರಿ ಹೊರ ಬರಲು ಬಹಳ ವರ್ಷಗಳೇ ಬೇಕಾಯ್ತು. ಅದಕ್ಕೆ ಬಲವಾದ ಕಾರಣವೇನಾದರೂ ಇದೆಯೇ?

-ಹೌದು ಇದೆ. 2014 ರಲ್ಲಿ ‘ಆವರ್ತ’ ರಚಿಸಿದ ಮೇಲೆ 2019ರ ತನಕ ನಾನು ಏನನ್ನು ರಚಿಸಲು ಆಗಲಿಲ್ಲ. ‘ಗತ’ ಬಿಡುಗಡೆಯಾದದ್ದು 2020ರಲ್ಲಿ. ‘ಆವರ್ತ’ ರಚಿಸಿದ ಮೇಲೆ ಜನ ಮೆಚ್ಚಿದರು ಎಂಬ ಕಾರಣಕ್ಕೋ ಅಥವಾ ನನಗೇ ಗರ್ವ ಬಂತೋ ಗೊತ್ತಿಲ್ಲ! ಒಂದೊಂದು ವಾಕ್ಯದ ರಚನೆಗೂ ಕಷ್ಟಪಡುವಂತಾಯಿತು. ಎಷ್ಟೋ ವಿಷಯ-ವಸ್ತುಗಳನ್ನು ಯೋಚಿಸಿ ಬರೆಯಲು ತೊಡಗಿದರೆ ಮುಂದಕ್ಕೆ ಹೋಗುತ್ತಲೇ ಇರಲಿಲ್ಲ. ಹೇಗೋ ಪ್ರಯತ್ನ ಪಟ್ಟು ಪುನರ್ಜನ್ಮದ ಕಲ್ಪನೆಯಿಟ್ಟು ಕೊಂಡು ‘ಗತ’ ರಚಿಸಿದೆ. ಕೆ.ಎನ್. ಗಣೇಶಯ್ಯನವರ ರೋಚಕತೆಯ ದಾಟಿಯಲ್ಲಿ ಕಾದಂಬರಿ ರಚಿಸಿದೆ ಎನ್ನಬಹುದು.

>’ಗತ’ ಕಾದಂಬರಿಯನ್ನು ಮೆಚ್ಚಿ ಡಾಕ್ಟರ್ ಎಸ್. ಎಲ್. ಭೈರಪ್ಪನವರು ತಮ್ಮ ನಿವಾಸದಲ್ಲೇ ಬಿಡುಗಡೆಯನ್ನೂ ಮಾಡಿದರು. ಅವರ ‘ನಾಯಿನೆರಳು’ ಕಾದಂಬರಿಯಲ್ಲಿನ ಪುನರ್ಜನ್ಮದ ಕಲ್ಪನೆಯನ್ನು ಈ ‘ಗತ’ ದ ರಚನೆಯಲ್ಲಿ ತಂದಿದ್ದೀರಾ?

ಭೈರಪ್ಪನವರು ‘ಗತ’ ಕಾದಂಬರಿಯನ್ನು ಓದಿಲ್ಲದೇ ಇರಬಹುದು! ‘ಆವರ್ತ’ ವನ್ನು ಅವರು ಓದಿದ್ದರು. ಆದರೆ ‘ಗತ’ ದ ಕಥೆಯನ್ನು ಭೈರಪ್ಪನವರಿಗೆ ಹೇಳಿದ್ದೆ. ಆದ್ದರಿಂದ ಕಥಾವಸ್ತು ರೋಚಕವಾಗಿದೆ ಎಂದೇ ಅವರು ಕೂಡ ಅಭಿಪ್ರಾಯ ಪಟ್ಟಿದ್ದರು ಅಲ್ಲದೇ ಮೆಚ್ಚಿ ಹಾರೈಸಿದರು. ಆನಂತರ ‘ಮಾಯೆ’ ಬರೆದೆ. ಅದರಲ್ಲಿ ತಾಂತ್ರಿಕತೆಯ ಜೊತೆಗೆ ನನ್ನ ಭಾವನಾತ್ಮಕ ಹಾಗು ರಸಗಟ್ಟುವ ಸನ್ನಿವೇಶಗಳನ್ನಿಟ್ಟು ನನ್ನ ಮೊದಲಿನ ದಾಟಿಯನ್ನು ಸಾಧಿಸಿದೆ. ಆ ಮೂಲಕ ಸ್ವಲ್ಪ ಮಟ್ಟಿಗೆ ಯಶಸ್ವಿಯಾದೆ. ಓದುಗರು ಕೂಡ ‘ಮಾಯೆ’ ಯನ್ನು ಮೆಚ್ಚಿದ್ದಾರೆ.

>ನಿಮ್ಮ ಮೊದಲ ಕಾದಂಬರಿಯಲ್ಲೇ ಅಷ್ಟೊಂದು ಪಾತ್ರಗಳನ್ನು ಸೃಷ್ಟಿಸಿ ಬೃಹತ್ ಕಾದಂಬರಿಯಾಗಿಸಿದಿರಿ. ಹೀಗೆ ಕಾದಂಬರಿ ಬರೆಯಲು ಆಸಕ್ತಿ ಮೂಡಿದ್ದು ಹೇಗೆ?

ನಂಜನಗೂಡಿನ ಹತ್ತಿರದ ಇರುವ ‘ಕುಲಗಾಣ’ ನಮ್ಮ ಊರು. ನನಗೆ ಸಾಹಿತ್ಯಾಸಕ್ತಿ ಬಂದದ್ದು ನಮ್ಮ ತಾಯಿಯಿಂದ. ಗೀತ ರಚನೆಕಾರರಾದ ಕೆ. ಕಲ್ಯಾಣ್ ಅವರು ನನ್ನ ಸೋದರ ಮಾವ. ಹೀಗೆ ಸಾಹಿತ್ಯದ ವಾತಾವರಣವೇ ಇದಕ್ಕೆ ಕಾರಣ. ಹಾಗೇ ನೋಡಿದರೆ `ಆವರ್ತ’ ನನ್ನ ಮೊದಲ ಕಾದಂಬರಿಯಲ್ಲ! ಚಿಕ್ಕಂದಿನಲ್ಲೇ ನಾನೊಂದು ಕಿರು ಕಾದಂಬರಿಯನ್ನೂ ರಚಿಸಿದ್ದೆ!
ಬಾಲ್ಯದಲ್ಲಿ ನಾವು ಆರ್ಥಿಕವಾಗಿ ಸಂಕಷ್ಟಗಳನ್ನು ಕಂಡಿದ್ದೆವು. ಆಗಾಗ ಬಾಡಿಗೆ ಮನೆಗಳನ್ನು ಬದಲಾಯಿಸುವುದು ಅನಿವಾರ್ಯವಾಗಿತ್ತು. ನಾನಾಗ ರಚಿಸಿದ್ದ ಆ ಕಿರು ಕಾದಂಬರಿಯ ಪ್ರತಿಯನ್ನು ಜೋಪಾನವಾಗಿ ಕಳೆಯದಂತೆ ಕಾಪಾಡಲು ನನ್ನ ಅಜ್ಜಿಯ ಕೈಯಲ್ಲಿ ಕೊಟ್ಟಿದ್ದೆ. ಆದರೆ ಅದು ನಿಜಕ್ಕೂ ಹೇಗೋ ಕಳೆದೇ ಹೋಯ್ತು.
ನನ್ನ ಕಾಲೇಜಿನ ದಿನಗಳಲ್ಲಿ ಪತ್ರಿಕೆಗಳಿಗೆ ಕಥೆ-ಕವನಗಳನ್ನು ಬರೆಯುತ್ತಿದ್ದೆ. ನಮ್ಮ ತಾಯಿಗೆ ಕಾದಂಬರಿಗಳನ್ನು ಓದುವ ಪರಿಪಾಟವಿತ್ತು. ಅವರು ಹೆಚ್ಚಾಗಿ ಓದುತ್ತಿದ್ದರು. ಆದರೆ ಅವರು ನನಗೆ ಓದಲು ಪ್ರೋತ್ಸಾಹಿಸುತ್ತಿರಲಿಲ್ಲ. ಕಾದಂಬರಿಗಳನ್ನು ಓದುತ್ತಾ ನಾನೆಲ್ಲಿ ಶಾಲೆಯ ಪಾಠಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತೀನೋ ಎಂಬ ಆತಂಕದಲ್ಲಿದ್ದರು. ತಾವು ಓದುತ್ತಿದ್ದ ಕಾದಂಬರಿಗಳನ್ನು ನನಗೆ ಸಿಗದಂತೆ ಅವಿತಿಡುತ್ತಿದ್ದರು. ಆದರೆ ನಾನು ಅಮ್ಮನಿಗೆ ಕಾಣದಂತೆ ಅವನ್ನೆಲ್ಲಾ ಹುಡುಕಿ ಓದುತಿದ್ದೆ. ನನ್ನ ಕಾಲೇಜು ದಿನಗಳಲ್ಲಿಯೇ ಆಗಿನ ಕಾಲದ ಸಾಹಿತ್ಯಕ್ಷೇತ್ರದಲ್ಲಿ ಖ್ಯಾತರಾಗಿದ್ದ ತ್ರಿವೇಣಿ, ಉಷಾ ನವರತ್ನರಾಮ್, ಅನುಪಮಾ ನಿರಂಜನ ಹಾಗೂ ಮುಂತಾದವರ ಕಾದಂಬರಿಗಳಿಂದ ಪ್ರಭಾವಿತಳಾಗಿದ್ದೆ. ಇದು ನನಗೆ ‘ಆವರ್ತ’ ರಚಿಸುವ ಸಮಯದಲ್ಲಿ ತುಂಬಾ ನೆರವಾಯ್ತು.

>ಸಾಹಿತ್ಯ ರಂಗದಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಲೇಖಕ ಅಥವಾ ಲೇಖಕಿಯರು ಯಾರು? ಅವರು ಪ್ರೇರಣೆಯಾಗಿದ್ದು ಹೇಗೆ?

ಚಿಕ್ಕಂದಿನಿಂದಲೂ ತ್ರಿವೇಣಿಯವರ ಕಾದಂಬರಿಗಳೆಂದರೆ ನನಗೆ ಅಚ್ಚುಮೆಚ್ಚು. ಅವರ ಮನೋವೈಜ್ಞಾನಿಕ ಕಥಾವಸ್ತುಗಳನ್ನು ಎಡೆಬಿಡದೆ ಓದುತ್ತಿದ್ದೆ. ದೇವನೂರು ಮಹಾದೇವ ಅವರ ‘ಒಡಲಾಳ’ವನ್ನು ನಾನು ಸಾಕಷ್ಟು ಇಷ್ಟಪಟ್ಟು ಓದಿದ್ದೆ. ಮಹಾದೇವ ಅವರ ಊರು ನಮ್ಮ ಊರಾದ ಕುಲಗಾಣದ ಸಮೀಪವೇ ಇದೆ. ಅಲ್ಲದೇ ಅವರು ಬಳಸುವ ಗ್ರಾಮ್ಯ ಭಾಷೆ ನನಗೇ ತುಂಬಾ ಇಷ್ಟವಾಗಿದೆ. ಹಾಗೂ ಅದೇ ರೀತಿ ಭಾಷೆಯನ್ನೂ ನನ್ನ ‘ಆರನೇ ಬೆರಳು’ ರಚನೆಯಲ್ಲಿ ಬಳಸಿದ್ದೀನಿ. ಹಾಗೆಯೇ ಭೈರಪ್ಪನವರ ಪ್ರಜ್ಞಾ ಪ್ರವಾಹವಾಗಿ ರಚಿಸುವ ಶೈಲಿ ಮತ್ತು ದಾಟಿಯು ನನಗೆ ಹೆಚ್ಚು ಇಷ್ಟವಾಗಿದೆ.

>ನಿಮ್ಮ ಎಷ್ಟು ನಾಟಕಗಳು ರಂಗ ಪ್ರಯೋಗವಾಗಿವೆ?

ಮೂರು ವರ್ಷಗಳ ಕಾಲ ನಾನು ‘ನವರಸ ಕಲಾಶಾಲೆ’ ಯನ್ನು ನಡೆಸಿದೆ. ಆ ಸಮಯದಲ್ಲಿ ಕ್ಷಮಾಧಾನ, ಬಂಗಾರದ ಪಂಜರ ಹಾಗೂ ಮುಂತಾದ ಹಲವು ನಾಟಕಗಳನ್ನು ನಿರ್ದೇಶಿಸಿದ್ದೀನಿ. ಈಗ ನನ್ನದೇ ರಚನೆಯ ಒಂಬತ್ತು ನಾಟಕಗಳನ್ನು ಸಂಗ್ರಹಿಸಿ ‘ಪೂತನಿ ಮತ್ತಿತರ ನಾಟಕಗಳು’ ಎಂಬ ಪುಸ್ತಕವು ಬಿಡುಗಡೆಯಾಗುತ್ತಿದೆ. ‘ಪೂತನಿ’ ನಾಟಕವನ್ನು ಮಲ್ಲಿಕಾರ್ಜುನ ಮಹಾಮನೆಯವರು ರಂಗ ಪ್ರಯೋಗಕ್ಕೆ ತರುವ ಪ್ರಯತ್ನದಲ್ಲಿದ್ದಾರೆ, ಮಾತುಕತೆಯ ಹಂತದಲ್ಲಿದೆ.

>ಸಾಹಿತ್ಯ ರಚನೆಯಲ್ಲಿ ನಿಮ್ಮ ಇಷ್ಟದ ಪ್ರಾಕಾರ ಯಾವುದು?

ಕಾದಂಬರಿಯೇ ನನ್ನ ಇಷ್ಟದ ಪ್ರಾಕಾರ. ಕಥೆ ಹಾಗೂ ನಾಟಕಗಳು ನನ್ನಲ್ಲಿ ಉದ್ಭವಿಸಿ ತಂತಾನೇ ರಚಿಸಿಕೊಂಡು ಹೋಗಿರುವಂತಹದ್ದು. ಆದರೆ ಚಿಕ್ಕಂದಿನಿಂದ ಕಾದಂಬರಿಯೇ ನನ್ನ ಮೆಚ್ಚಿನ ಪ್ರಾಕಾರ. ಹಾಗೂ ಅದರಲ್ಲೇ ಹೆಚ್ಚೆಚ್ಚು ತೊಡಗಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಿದ್ದೇನೆ.

>ನಿಮ್ಮ ಕೃತಿಗಳ ಮೊದಲ ಓದುಗರು ಯಾರು?

ನಿಮ್ಮ ಸಾಹಿತ್ಯ ರಚನೆಯಲ್ಲಿ ಅವರ ಪಾತ್ರವೇನು?ನನ್ನ ಪತಿ ರಘು ಅವರೇ ನನ್ನ ಕೃತಿಗಳ ಮೊದಲ ಓದುಗರು! ನಾನು ಆಯ್ಕೆ ಮಾಡಿಕೊಂಡ ಕಥಾವಸ್ತುವಿಗೆ ನೆರವಾಗುವಂತಹ ಪುಸ್ತಕಗಳನ್ನು ತಂದು ಕೊಡುತ್ತಾರೆ. ಅಲ್ಲದೇ ನಾನು ಬರೆದದ್ದನ್ನು ಓದಿ ನನ್ನೊಡನೆ ಚರ್ಚಿಸುತ್ತಾರೆ. ನನ್ನ ಸಾಹಿತ್ಯ ರಚನೆಗೆ ಅವರ ಬೆಂಬಲವು ಯಾವಾಗಲೂ ಇದ್ದೇ ಇರುತ್ತದೆ. ನನ್ನ ತಂಗಿ ದೀಪಾ ಕೂಡ ನನ್ನ ಬರವಣಿಗೆಗಳನ್ನು ಮೆಚ್ಚಿ ಚರ್ಚಿಸುತ್ತಾರೆ.

>ನಿಮ್ಮ ಮುಂದಿನ ಕೃತಿ ಯಾವುದು?

ಶಾರದಾಂಬೆಯ ಕೃಪೆಯಿಂದ ನನ್ನ ಮೊದಲಿನ ಬರಹದ ದಾಟಿಯು ಮತ್ತೆ ಈಗ ನನ್ನಲ್ಲಿ ಬಂದಿದೆ. ಚಿತ್ರರಂಗದ ನೆಲೆಗಟ್ಟಿನಲ್ಲಿ ‘ಚಿತ್ತರಂಗ’ ಎಂಬ ಕಾದಂಬರಿಯ ಬರವಣಿಗೆಯಲ್ಲಿ ತೊಡಗಿದ್ದೀನಿ. ಅದೀಗ ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಓದುಗರ ಮುಂದಿಡುವ ಯೋಚನೆಯೂ ಇದೆ.

ತುಂಕೂರ್ ಸಂಕೇತ್ ಮತ್ತು ಕು. ಶಿ. ಚಂದ್ರಶೇಖರ್

ಚಿತ್ರಗಳು: ನಿತಿನ್

Related post