ವಚನ ಸಾಹಿತ್ಯ ಮತ್ತು ಆರೋಗ್ಯ – ಡಾ. ಗುರುಸಿದ್ಧಯ್ಯಾ ಸ್ವಾಮಿ

ವಚನ ಸಾಹಿತ್ಯ ಮತ್ತು ಆರೋಗ್ಯ

ವಿವಿಧತೆಯಲ್ಲಿ ಏಕತೆ ಭಾರತದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದು. ಇಲ್ಲಿ ಹಲವು ಭಾಷೆ, ಧರ್ಮ, ಸಂಸ್ಕೃತಿಗಳು ಚಾಲ್ತಿಯಲ್ಲಿವೆ. ಇವೆಲ್ಲವುಗಳಿಂದಾಗಿ ಭಾರತ ಇಂದು ಜಗತ್ತಿನಲ್ಲಿ ಒಂದು ವೈಶಿಷ್ಟ್ಯಪೂರ್ಣ ದೇಶ ಎನಿಸಿದೆ.

ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದು. ಇದು ಭಾರತದ ದ್ವಿತೀಯ ಪ್ರಾಚೀನತಮ ಭಾಷೆಯಾಗಿದ್ದು ಇದಕ್ಕೆ ಶಾಸ್ತ್ರೀಯ ಭಾಷೆಯ ಪಟ್ಟ ಲಭಿಸಿದೆ. ಇದಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಸ್ಪಷ್ಟವಾದ ಇತಿಹಾಸವಿದೆ. ಕನ್ನಡ ಸಾಹಿತ್ಯ ಸಂಪೂರ್ಣ ಭಾರತದಲ್ಲಿಯೇ ಅತಿ ಹೆಚ್ಚು ಸಮೃದ್ಧವಾಗಿದ್ದು ಕನ್ನಡ ಸಾಹಿತ್ಯಕ್ಕೆ ಇಲ್ಲಿಯವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ.

ಕನ್ನಡ ಸಾಹಿತ್ಯಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಸ್ಪಷ್ಟವಾದ ಇತಿಹಾಸವಿದೆ. ಕನ್ನಡ ಸಾಹಿತ್ಯವನ್ನು ಅಧ್ಯಯನದ ಅನುಕೂಲಕ್ಕಾಗಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಕನ್ನಡದ ಆದಿಕವಿ ಪಂಪ. ಇವನ ಕಾಲ ಹತ್ತನೆಯ ಶತಮಾನ. ಪಂಪ-ಪೊನ್ನ-ರನ್ನ ಈ ಮೂವರನ್ನು ರತ್ನತ್ರಯರು ಎಂದು ಕರೆಯಲಾಗುತ್ತದೆ. ಹಳಗನ್ನಡ ಸಾಹಿತ್ಯ ಕಾಲಘಟ್ಟವನ್ನು ಕನ್ನಡ ಸಾಹಿತ್ಯದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ.

12 ನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ವಚನ ಸಾಹಿತ್ಯ ತುಂಬ ಹುಲುಸಾಗಿ ಬೆಳೆಯಿತು. ವಿಶ್ವ ಸಾಹಿತ್ಯಕ್ಕೆ ಕನ್ನಡ ವಚನ ಸಾಹಿತ್ಯದ ಕೊಡುಗೆ ಅಪಾರ. ಅದಕ್ಕಾಗಿ 12 ನೆಯ ಶತಮಾನದ ವಚನ ಸಾಹಿತ್ಯ ಕಾಲಘಟ್ಟಕ್ಕೂ ಕನ್ನಡ ಸಾಹಿತ್ಯದ ದ್ವಿತೀಯ ಸುವರ್ಣ ಯುಗ ಎಂದರೆ ತಪ್ಪಾಗಲಾರದು. 12 ನೆಯ ಶತಮಾನದಿಂದ ಆದುನಿಕ ಕಾಲದ ವರೆಗಿನ ಕನ್ನಡ ಸಾಹಿತ್ಯ ಘಟ್ಟವನ್ನು ನಡುಗನ್ನಡ ಸಾಹಿತ್ಯ ಎಂದು ಕರೆಯಲಾಗುತ್ತದೆ.

ಆಧುನಿಕ ಕಾಲದ ಹೊಸಗನ್ನಡ ಸಾಹಿತ್ಯವಂತೂ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಸಂಪೂರ್ಣ ಭಾರತದಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಅದಕ್ಕಾಗಿ ಹೊಸಗನ್ನಡ ಸಾಹಿತ್ಯ ಕಾಲಘಟ್ಟಕ್ಕೆ ಕನ್ನಡ ಸಾಹಿತ್ಯದ ಸುವರ್ಣ ಯುಗ ಎಂದು ಕರೆಯಲೇ ಬೇಕಾಗುತ್ತದೆ.

ಇಂದು ಜನಸಾಮಾನ್ಯ ಪ್ರತಿಯೊಂದು ಕ್ಷೇತ್ರದ ಕೇಂದ್ರಬಿಂದುವಾಗುತ್ತಿದ್ದಾನೆ. ಇಂದು ಜಗತ್ತು ಹೇಗಿದೆ ಎಂಬುದಕ್ಕಿಂತ ನಾನು ಹೇಗಿದ್ದೇನೆ? ನನ್ನ ವ್ಯಕ್ತಿತ್ವದ ವಿಕಸನ ಹೇಗೆ ಸಾಧ್ಯ? ನನ್ನ ಆರೋಗ್ಯ ನಾನು ಹೇಗೆ ಕಾಪಾಡಿಕೊಳ್ಳಬೇಕು? ಎಂಬುದು ಬಹಳ ಪ್ರಾಮುಖ್ಯತೆ ಪಡೆಯುತ್ತಿದೆ.

ಭಾರತ ದೇಶ ಪ್ರಾಚೀನ ಕಾಲದಿಂದಲೂ ಆರೋಗ್ಯಕ್ಕೆ ಮಹತ್ವ ಕೊಟ್ಟ ದೇಶವಾಗಿದೆ. ಇಂದು ಜಗತ್ತಿನ ಜನರೆಲ್ಲ ಅತಿ ಹೆಚ್ಚು ಗೌರವಿಸುತ್ತಿರುವ ಯೋಗ ಮತ್ತು ಆಯುರ್ವೇದಗಳು ಭಾರತವು ಜಗತ್ತಿಗೆ ಕೊಟ್ಟ ಅಮೂಲ್ಯ ಕೊಡುಗೆಗಳಾಗಿವೆ.

ವಚನ ಸಾಹಿತ್ಯ

ಕನ್ನಡ ಸಾಹಿತ್ಯದಲ್ಲಿ ಜನಸಾಮಾನ್ಯರಿಗೆ ಮೊಟ್ಟಮೊದಲು ಆದ್ಯತೆ ನೀಡಿದ ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ. ಪ್ರಸ್ತುತ ಲೇಖನದಲ್ಲಿ ಜನರ ವೈಯಕ್ತಿಕ ಹಾಗೂ ಸಾಮಾಜಿಕ ಆರೋಗ್ಯದ ಕುರಿತ ಪ್ರಶ್ನೆಗಳಿಗೆ ವಚನ ಸಾಹಿತ್ಯದ ಮುಂಬೆಳಕಿನಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.

‘ಕಾಯಕವೇ ಕೈಲಾಸ’ ಎಂಬುದು ಬಸವಣ್ಣನವರು ಜಗತ್ತಿಗೆ ಕೊಟ್ಟ ಬಹುಮುಖ್ಯ ಮಂತ್ರವಾಗಿದೆ. ಕಾಯಕ ಎಂದರೆ ಕೆಲಸ. ಬಸವಾದಿ ಶರಣರೆಲ್ಲ ಪ್ರತಿಯೊಬ್ಬರು ಒಂದೊಂದು ಕಾಯಕ ಮಾಡುವುದು ಕಡ್ಡಾಯವಾಗಿತ್ತು. ಇಂದು ಬಹುಸಂಖ್ಯೆಯ ಜನರಿಗೆ ಕಾಡುವ ಅನಾರೋಗ್ಯ ಸಮಸ್ಯೆಗಳು ದುಡಿಯದೆ ಕುಳಿತು ಊಟ ಮಾಡುವವರ ಸಮಸ್ಯೆಗಳಾಗಿವೆ. ಅದಕ್ಕಾಗಿ ಬಸವಣ್ಣನವರು ಕೊಟ್ಟ ಕಾಯಕ ಮಂತ್ರ ಇಂದಿಗೂ ಪ್ರಸ್ತುತ.

ಕಾಯಕದ ನಂತರ ವಚನ ಸಾಹಿತ್ಯ ಕೊಟ್ಟ ಇನ್ನೊಂದು ಮಂತ್ರ ಎಂದರೆ ದಾಸೋಹ. ದಾಸೋಹ ಎಂದರೆ ನಾವು ದುಡಿದು ಸಮಾಜದಿಂದ ಗಳಿಸಿದ ಹಣದಲ್ಲಿಯ ಸ್ವಲ್ಪ ಭಾಗವನ್ನು ಸಮಾಜದ ಒಳಿತಿಗಾಗಿ ಖರ್ಚು ಮಾಡುವುದು. ಇಂದು ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ವಿಷಮತೆಯನ್ನು ಬಗೆ ಹರಿಸಲು ಈ ದಾಸೋಹ ಅತ್ಯಂತ ಮಹತ್ವದ ಪರಿಹಾರವಾಗಿದೆ. ಸಾಮಾಜಿಕ ಆರೋಗ್ಯದ ಬೆಳವಣಿಗೆಯಲ್ಲಿ ದಾಸೋಹದ ಪಾತ್ರ ಬಹಳ ಮಹತ್ವದ್ದು.

ಜಾತಿ ಪದ್ದತಿ ನಮ್ಮ ದೇಶದ ಒಂದು ಸಾಮಾಜಿಕ ಸಮಸ್ಯೆಗಳಲ್ಲಿ ಒಂದು. ಬಸವಣ್ಣನವರು ಆರಂಭಿಸಿದ ವಚನ ಚಳುವಳಿಯಲ್ಲಿ ಲಿಂಗ, ವರ್ಣ ಮೊದಲಾದ ಯಾವುದೇ ರೀತಿಯ ಭೇದ ಭಾವ ಇರಲಿಲ್ಲ. ಬಸವಣ್ಣನವರು ‘ನಮ್ಮ ಕೂಡಲ ಸಂಗನ ಶರಣರೇ ಕುಲಜರು’ ಎಂದು ಹೇಳುವ ಮೂಲಕ ಜಾತಿ ಪದ್ದತಿಗೆ ಕೊಡಲಿ ಏಟು ಹಾಕಿದ್ದಾರೆ. ಮಾದಾರ ಚನ್ನಯ್ಯ ಕೂಡ ‘ಆಚಾರವೇ ಕುಲ’ ಎಂದು ಹೇಳಿದ್ದಾರೆ. ಇದು ಸಾಮಾಜಿಕ ಆರೋಗ್ಯದ ಅಡಿಪಾಯವಾಗಿದೆ.

ವಚನಕಾರರಲ್ಲಿ ಅನೇಕ ಜನರು ಯೋಗದ ಬಗ್ಗೆಯೂ ತಿಳಿದುಕೊಂಡವರಾಗಿದ್ದರು. ಅಂಥವರಲ್ಲಿ ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ, ಅಕ್ಕ ಮಹಾದೇವಿ ಮತ್ತು ಚೆನ್ನಬಸವಣ್ಣ ಪ್ರಮುಖರು. ಶರಣರು ದೇವರಲ್ಲಿ ನಂಬಿಕೆ ಉಳ್ಳವರಾಗಿದ್ದರು. ಆದರೆ ಮೂಢ ನಂಬಿಕೆಗಳನ್ನು ಅವರು ಎಂದೂ ಬೆಂಬಲಿಸಲಿಲ್ಲ.

ಎಲ್ಲ ಶರಣರು ದೇವರ ಕುರುಹು ಎಂದು ಇಷ್ಟಲಿಂಗವನ್ನು ಧರಿಸುತ್ತಿದ್ದರು. ಪ್ರತಿದಿನ ತಪ್ಪದೆ ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದರು. ಇಷ್ಟಲಿಂಗ ಪೂಜೆ ಇದು ಒಂದು ರೀತಿಯ ತ್ರಾಟಕ ಯೋಗವಾಗಿದೆ. ಶರಣರು ಇಷ್ಟಲಿಂಗ ಪೂಜೆಯನ್ನು ‘ಶಿವಯೋಗ’ ಎಂದು ಕರೆಯುತ್ತಿದ್ದರು. ಇಂದಿಗೂ ಹಳ್ಳಿಗಳಲ್ಲಿ ಜನರು ಶರಣರನ್ನು ಶಿವಯೋಗಿಗಳೆಂದೇ ಕರೆಯುತ್ತಾರೆ. ಸೊಲ್ಲಾಪುರದ ಶರಣ ಸಿದ್ದರಾಮನನ್ನು ‘ಶಿವಯೋಗಿ ಸಿದ್ಧರಾಮ’ ಎಂದೇ ಹೆಸರುವಾಸಿಯಾಗಿದ್ದ. ಸಿದ್ಧರಾಮ ಎಷ್ಟೊಂದು ಪ್ರಸಿದ್ಧ ಯೋಗಿಯಾಗಿದ್ದನೆಂದರೆ ‘ಯೋಗಿಯಾದರೆ ನನ್ನಂತಾಗಬೇಕು’ ಎಂದು ಸ್ವತಃ ಸಿದ್ಧರಾಮನೇ ತನ್ನ ಒಂದು ವಚನದಲ್ಲಿ ಹೇಳಿದ್ದಾನೆ.

Shivayogi Siddarama

ವಚನಕಾರರ ಮತ್ತೊಂದು ವಿಶೇಷತೆ ಎಂದರೆ ಆಹಾರಕ್ಕೆ ಅವರು ಕೊಡುವ ಗೌರವ. ವಚನಕಾರರು ಅನ್ನಕ್ಕೆ ‘ಪ್ರಸಾದ’ ಎಂದು ಕರೆಯುತ್ತಿದ್ದರು. ನಾವು ಊಟ ಮಾಡುವ ಅನ್ನದ ಪ್ರತಿಯೊಂದು ಅಗುಳು ಕೂಡ ದೇವರ ಪ್ರಸಾದ ಎಂದು ಅವರು ನಂಬಿದ್ದರು. ಈ ರೀತಿಯ ನಂಬಿಕೆಯಿಂದ ಅನೇಕ ರೀತಿಯ ಲಾಭಗಳಿವೆ. ಊಟ ಮಾಡುವಾಗ ಮನಸ್ಸು ಪ್ರಸನ್ನವಾಗಿರುತ್ತದೆ. ನಾವು ಊಟ ಮಾಡುವಾಗ ನಮ್ಮ ಮನಸ್ಸು ಹೇಗೆ ಇರುತ್ತದೆಯೋ ಮುಂದೆ ನಮ್ಮ ಭಾವನೆ ಮತ್ತು ಆಲೋಚನೆಗಳು ಕೂಡ ಅದೇ ರೀತಿ ತಯಾರಾಗುತ್ತವೆ. ಇಂದು ಮದುವೆ ಮುಂತಾದ ಹಲವಾರು ಸಮಾರಂಭಗಳಲ್ಲಿ ಹೊಟ್ಟೆಯಲ್ಲಿ ಹಸಿವು ಇದ್ದರೂ ಅರೆಹೊಟ್ಟೆ ಉಂಡು ಅನ್ನ ಹಾಳು ಮಾಡುವುದೇ ಒಂದು ಫ್ಯಾಶನ್ ಆಗಿ ಬಿಟ್ಟಿದೆ. ಒಂದು ವೇಳೆ ಇಂದು ಎಲ್ಲ ಜನರು ಅನ್ನಕ್ಕೆ ಪ್ರಸಾದ ಎಂದು ತಿಳಿದು ಎಷ್ಟು ಬೇಕೋ ಅಷ್ಟೇ ತೆಗೆದುಕೊಂಡು ಹಾಳು ಮಾಡದೆ ಊಟ ಮಾಡಿದರೆ ನಮ್ಮ ದೇಶದ ಧಾನ್ಯ ಸಂಪತ್ತು ವ್ಯರ್ಥ ಹಾಳಾಗುವುದು ತಪ್ಪುತ್ತದೆ.

ಇಂದು ಕೆಲವರು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಊಟ ಮಾಡುತ್ತಾರೆ. ಆದರೆ ಆ ಅನ್ನ ಪಚನವಾಗುವಷ್ಟು ಅವರು ಕೆಲಸ ಮಾಡುವುದಿಲ್ಲ. ಮತ್ತೆ ಕೆಲವರು ಬೇರೆಯವರ ಅನುಕರಣೆ ಮಾಡುತ್ತ ಜಂಕ್ ಫುಡ್ ತಿನ್ನುತ್ತಿದ್ದಾರೆ. ಇದರಿಂದಾಗಿ ಅನೇಕ ವ್ಯಾಧಿಗಳಿಗೆ ನಾವೇ ಆಮಂತ್ರಣ ಕೊಟ್ಟಂತಾಗುತ್ತಿದೆ. ಆಸ್ಪತ್ರೆಗೆ ಹೋಗಿ ಸೇವಿಸುವ ಕೆಲ ಔಷಧಗಳ ಅಡ್ಡ ಪರಿಣಾಮಗಳಿಂದಾಗಿ ಮತ್ತೆ ಹೊಸ ಹೊಸ ಕಾಯಿಲೆಗಳು ಬರುತ್ತಿವೆ. ವಚನಕಾರರು ಹೇಳಿದಂತೆ ಆಹಾರವನ್ನು ಪ್ರಸಾದ ಎಂದು ತಿಳಿದು ಸೇವಿಸಿದರೆ ಔಷಧಗಳನ್ನು ಊಟದಂತೆ ತಿನ್ನುವ ತಾಪತ್ರಯ ತಪ್ಪುತ್ತದೆ. ವಚನಕಾರರು ಸಸ್ಯಾಹಾರಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರು.

ನಮ್ಮ ದೇಶದ ಒಳ್ಳೆಯ ವ್ಯವಸ್ಥೆಗಳಲ್ಲಿ ಮದುವೆಯೂ ಒಂದು. ವಚನಕಾರರು ಗೃಹಸ್ಥಾಶ್ರಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ವಚನಕಾರರು ಮಹಿಳೆಯರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಬಸವಾದಿ ಶರಣರು ಪರಿಣತಿಯನ್ನು ‘ಮಹಾದೇವಿ’ ಎಂದು ಕರೆಯುತ್ತಿದ್ದರು. ಸಿದ್ಧರಾಮನಂತೂ ‘ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂದು ಕರೆದಿದ್ದಾನೆ. ಇಂದು ಎಲ್ಲ ಜನರು ವಚನಕಾರರನ್ನು ಅನುಸರಿಸಿ ಪರಸ್ತ್ರೀಯರನ್ನು ಗೌರವಿಸಿದರೆ ದಿನದಂದ ದಿನಕ್ಕೆ ಹೆಚ್ಚುತ್ತಿರುವ ಅತ್ಯಾಚಾರದಂತಹ ಪ್ರಕರಣಗಳು ಕಡಿಮೆ ಆಗಬಹುದು.

Haralayya-Kalyanamma

‘ಸ್ತ್ರೀ ಪೂಜೋಜ್ಯಾಯತೆ’ ಎಂದು ಹೇಳುವ ನಮ್ಮ ದೇಶದಲ್ಲಿ ‘ಸ್ತ್ರೀ ಸ್ವಾತಂತ್ರ್ಯಂ ನ ಅರ್ಹತಿ’ ಎಂಬ ಪದ್ಧತಿಯೂ ಚಾಲ್ತಿಯಲ್ಲಿತ್ತು. ಸಾವಿರಾರು ವರ್ಷಗಳಿಂದ ನಡೆದು ಬಂದ ಈ ಪರಂಪರೆಯನ್ನು ವಚನಕಾರರು ಮುರಿದರು. ಹೆಣ್ಣು ಮಕ್ಕಳಿಗೆ ಪುರುಷರಷ್ಟೇ ಸಮಾನ ಸ್ಥಾನಮಾನ, ಗೌರವ ಮತ್ತು ಅವಕಾಶಗಳನ್ನು ನೀಡಿದರು. ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದರು. ಸಂಪೂರ್ಣ ಜಗತ್ತಿನ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಲ್ಲ ವರ್ಗದ ಸ್ತ್ರೀಯರಿಗೂ ಶಿಕ್ಷಣ ನೀಡಿದರು. ಇದರಿಂದಾಗಿ ಅಕ್ಕ ಮಹಾದೇವಿ ಕನ್ನಡದ ಮೊದಲ ಕವಯಿತ್ರಿ ಎಂಬ ಗೌರವಕ್ಕೆ ಭಾಜನರಾಗುವಂತಾಯಿತು. 35 ಕ್ಕೂ ಹೆಚ್ಚು ಜನ ಮಹಿಳೆಯರು ಅತ್ಯಮೂಲ್ಯ ಎನಿಸುವಂತಹ ವಚನಗಳನ್ನು ಬರೆದರು. ಇದು ಜಗತ್ತಿನ ಇತಿಹಾಸದಲ್ಲಿಯ ಮೊಟ್ಟಮೊದಲ ಉದಾಹರಣೆಯಾಗಿದೆ. ಅರ್ಧ ನಾರಿ ನಟೇಶ್ವರನನ್ನು ಪೂಜಿಸುವ ಭಾರತದಲ್ಲಿ ಸ್ತ್ರೀಯರಿಗೆ ಸಮಾನ ಗೌರವ ವಚನಕಾರರಿಂದಾಗಿ ಲಭಿಸಿತು. ಮಹಿಳೆಯರ ಮಾನಸಿಕ ಆರೋಗ್ಯದ ಕಾಳಜಿ ವಹಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ.

ವಚನಕಾರರು ಮನೆಯ ಸ್ವಚ್ಚತೆಗೂ ಮಹತ್ವ ಕೊಡುತ್ತಿದ್ದರು.

“ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ , ಮನೆಯೊಳಗೆ ರಜ ತುಂಬಿ ,
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ
ತನುವಿನೊಳಗೆ ಹುಸಿ ತುಂಬಿ , ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ …..”

ಈ ವಚನದಲ್ಲಿ ಬಸವಣ್ಣನವರು ಮನೆಯ ಹಾಗೂ ಮನಸ್ಸಿನ ಸ್ವಚ್ಚತೆಯ ಮಹತ್ವದ ಕುರಿತು ಏಕಕಾಲಕ್ಕೆ ವಿವರಿಸಿದ್ದಾರೆ. ಕೊರೊನಾ ಅವಧಿಯಲ್ಲಿ ಅನೇಕ ಪಾಠಗಳನ್ನು ಕಲಿತ ನಮಗೆ ಸ್ವಚ್ಚತೆಯ ಮಹತ್ವ ಕುರಿತು ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.

ಇಂದು ವಿಜ್ಞಾನದ ಹೊಸ ಹೊಸ ಶೋಧಗಳಿಂದಾಗಿ ಜಗತ್ತು ಒಂದು ಚಿಕ್ಕ ಹಳ್ಳಿಯಂತಾಗಿ ಬಿಟ್ಟಿದೆ. ಆದರೆ ಜನರು ಪರಸ್ಪರ ದೂರ ಆಗುತ್ತಿದ್ದಾರೆ. ಆದರೆ ಬಸವಣ್ಣನವರು ಹೊಸಬರನ್ನು ಕೂಡ ‘ಇವನಾರವ ಇವನಾರವ?’ ಎಂದು ಹೇಳುತ್ತಿರಲಿಲ್ಲ. ಅವರು ಎಲ್ಲರನ್ನೂ ‘ಇವ ನಮ್ಮವ ಇವ ನಮ್ಮವ’ ಎಂದು ಕರೆಯುತ್ತಿದ್ದರು. ಇಂದು ಈ ತತ್ವದ ಅಗತ್ಯ ಬಹಳಷ್ಟು ಇದೆ.

Akkamahadevi – Basavanna

ನಮ್ಮ ದೇಶದಲ್ಲಿ ಇಂದು ಸಾಕ್ಷರತೆಯ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಸ್ವಚ್ಚತಾ ಆಂದೋಲನಗಳಿಂದಾಗಿ ಸ್ವಚ್ಚತೆಯ ಅರಿವು ಕೂಡ ಮೂಡುತ್ತಿದೆ. ಆದರೆ ಬಹುತೇಕ ಎಲ್ಲ ಜನರು ನೈತಿಕತೆಯ ಪಾತಾಳಕ್ಕೆ ಇಳಿಯುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆಯ ಲಕ್ಷಣ ಖಂಡಿತ ಅಲ್ಲ. ಅಂತರಂಗ ಶುದ್ಧಿ ಕುರಿತ ಇಂತಹ ಹಲವಾರು ಸಮಸ್ಯೆಗಳಿಗೆ ಬಸವಣ್ಣನವರ ಕೆಳಗಿನ ಒಂದು ವಚನ ಸಾಕು ಎನಿಸುತ್ತದೆ.

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲು ಬೇಡ
ಇದೇ ಅಂತರಂಗಶುದ್ಧಿ
ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ವಚನಕಾರರು ಹೇಳಿದ ಇಂತಹ ತತ್ವಗಳನ್ನು ಪಾಲಿಸಿದರೆ ಜಗತ್ತಿನ ಜನರೆಲ್ಲ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಡಾ. ಗುರುಸಿದ್ಧಯ್ಯಾ ಸ್ವಾಮಿ
ಸಹಾಯಕ ಪ್ರಾಧ್ಯಾಪಕರು
ಕನ್ನಡ ವಿಭಾಗ
ಸಿ. ಬಿ. ಖೇಡಗಿ ಮಹಾವಿದ್ಯಾಲಯ,
ಅಕ್ಕಲಕೋಟ
ಮಹಾರಾಷ್ಟ್ರ

Related post

2 Comments

  • Good

  • ಧನ್ಯವಾದಗಳು

Leave a Reply

Your email address will not be published. Required fields are marked *