ನಿನ್ನೊಂದಿಗಿಷ್ಟು ಮಾತು
ದೀರ್ಘ ಮೌನದ ನಂತರವೂ
ಉಳಿದದ್ದು ಇನ್ನಷ್ಟು ಮತ್ತಷ್ಟು
ನೀನೇ ಬೇಕೆಂಬ ವಾಂಛೆ
ನಿನ್ನೆಡೆಗಿನ ಆಕರ್ಷಣೆಗೆ
ಇದು ಇಷ್ಟೇ ಎಂದು
ಗೆರೆ ಎಳೆಯಲಾರೆ
ಆಗಸದಷ್ಟು ಎಂದು
ಬಾಯಲ್ಲಿ ಹೇಳಿ ಬೀಗಲಾರೆ
ನಿನ್ನ ಆರಾಧಿಸಲು
ನನ್ನವೇ ಕಾರಣಗಳುಂಟು
ನಿನಗಾಗಲಿ ಜಗಕಾಗಲಿ
ವಿವರಿಸಲಾಗದ ನಂಟು
ನೀ ತೋರಿದ ಸ್ನೇಹಕ್ಕೆ
ಪ್ರೀತಿ ಪ್ರೇಮಗಳೆಂದು
ನೀನು ಹೆಸರಿಸಲಾರೆ
ಅದು ಅಷ್ಟೇ ಎಂದು
ನಾನು ಕಡೆಗಣಿಸಲಾರೆ
ನಿನ್ನೊಲುಮೆ ನನ್ನೆದೆಯಲಿ
ಅರಳಿ ಹೂವಾಗಿದೆ
ಕಾನನದ ಕುಸುಮವೊಲು
ಸುಗಂಧ ಸೂಸುತಿದೆ
ನಿನ್ನೊಂದು ಮಾತಿಗೆ
ಕಾಯುವ ತವಕದೊಳಗೂ
ಪುಳಕಗೊಳ್ಳುವ ಪರಿ
ಇರಲಿ ಹೀಗೇ, ಹೃದಯ
ಅರಳುತಿರಲಿ ಪ್ರತಿ ಮುಂಜಾನೆ
ಸೌಜನ್ಯ ದತ್ತರಾಜ
ಫೋಟೋ ಕೃಪೆ : ವರ್ಲ್ಡ್ ಆರ್ಟ್ ಕಮ್ಯೂನಿಟಿ
1 Comment
Very good lines very impressive