ವಾರಕ್ಕೊಂದು ಕಗ್ಗ – 1

ಕಗ್ಗ ಮಾಲಿಕೆ – 1

“ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ” ಹೆಸರನ್ನು ಅರಿಯದವರ್ಯಾರು ? ಡಿ. ವಿ. ಜಿ ಎಂದೇ ಪ್ರಸಿದ್ಧರಾಗಿ ಶಿಕ್ಷಣ, ಸಾಹಿತ್ಯ, ಪತ್ರಿಕೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗುಂಡಪ್ಪನವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ದರಾದವರು.
ಡಿ. ವಿ .ಜಿ ರಚಿಸಿದ ಮಂಕುತಿಮ್ಮನ ಕಗ್ಗಗಳು ಕನ್ನಡದ ಆಧುನಿಕ ಭಗವದ್ಗೀತೆ ಎಂದೇ ಎಲ್ಲರು ಭಾವಿಸುವ ಉತ್ಕ್ರಷ್ಟ ಸಂಕಲನ. ಇದು 1943 ರಲ್ಲಿ ಪ್ರಕಟವಾದ ಅತ್ಯಂತ ಪ್ರಸಿದ್ಧ ಮತ್ತು ಜನಪ್ರಿಯವಾದ ಪ್ರಮುಖ ಸಾಹಿತ್ಯಗಳಲ್ಲಿ ಒಂದು.
ರಾಮಾಯಣ ಮಹಾಭಾರತ ದಲ್ಲಿ ನೆಡೆದ ಘಟನೆಗಳನ್ನು ಉಲ್ಲೇಖಿಸಿ ಜೊತೆಗೆ ವಿಜ್ಞಾನದ ಅವಿಷ್ಕಾರ ಹಾಗು ಮುಖ್ಯವಾಗಿ ಜೀವನದ ಮೌಲ್ಯಗಳನ್ನು “ಮಂಕುತಿಮ್ಮನ ಕಗ್ಗ” ಗಳಲ್ಲಿ ಕಾಣಬಹುದು. ಸಾಹಿತ್ಯಮೈತ್ರಿ ಯಲ್ಲಿ ವಾರಕ್ಕೊಂದು ಆಯ್ದ ಕಗ್ಗ (ಕ್ರಮದಲ್ಲಿ ಅಲ್ಲ) ಹಾಗು ಅದರ ತಾತ್ಪರ್ಯವನ್ನು ಪ್ರಕಟಿಸಲಾಗುವುದು. ನಿಮ್ಮೆಲ್ಲರ ಪ್ರೋತ್ಸಾಹ ಅತ್ಯಗತ್ಯ…

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆಂದು ಜನಂ //
ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ
ಆ ವಿಚಿತ್ರಕೆ ನಮಿಸೊ – ಮಂಕು ತಿಮ್ಮ //

ಮಾಯಾಲೋಲನಾದ ಶ್ರೀ ವಿಷ್ಣು ವಿಶ್ವಕ್ಕೆ ಮೂಲ. ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಸರ್ವೋತ್ತಮ, ಪುರುಷೋತ್ತಮ, ಹೀಗೆ ಅಸಂಖ್ಯ ಹೆಸರುಗಳಿಂದ ಕರೆಸಿಕೊಳ್ಳುವ ಆ ಭಗವಂತನೆಂಬ ಶಕ್ತಿಯನ್ನು ಜನರು ಕಾಣದಿದ್ದರೂ ಭಕ್ತಿ ಪ್ರೀತಿಗಳಿಂದ ನಂಬಿರುವಂತಹ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಡಿ. ವಿ. ಜಿ ಯವರು.

ಗಾಯನ: ಡಾ|| ರಾಜಕುಮಾರ್

ನಾವಿರುವ ಭೂಮಿಯಂತಹ ಅದೆಷ್ಟೋ ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಡಲವೂ ಸೇರಿದಂತೆ ಲಕ್ಷಾಂತರ ಸೌರಮಂಡಲಗಳಿರುವ ನಮ್ಮ ಕ್ಷೀರಪಥವೂ (Milkyway) ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಆಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆ ಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಆ ಒಂದು ಕಾಣದ ಶಕ್ತಿ. ಅದನ್ನೇ ಎಲ್ಲರು ಬೇರೆ – ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಕಗ್ಗದ ಆಂತರ್ಯ ಮತ್ತು ವಿಶ್ವದ ಒಂದು ಅನುವಷ್ಟೂ ಅಲ್ಲದ ನಾವು ಆ ಶಕ್ತಿಯ ಅಧೀನದಲ್ಲಿರುವುದರಿಂದ, ಕಾಣದ ಆ ಶಕ್ತಿಗೆ ಭಕ್ತಿಯಿಂದ ಹಾಗು ಪ್ರೀತಿಯಿಂದ ನಮಿಸಬೇಕು.

ಈ ಕಗ್ಗದಲ್ಲಿ ಡಿ ವಿ ಜಿ ಯವರು ರಚಿಸಿದಂತೆ ಮನುಷ್ಯ ತನ್ನ ಬುದ್ಧಿ ಬಲದಿಂದ ಸೃಷ್ಟಿಯಲ್ಲಿರುವ ಎಲ್ಲಾ ಜೀವಿಗಳಿಗಿಂತ ಮೇಲುಗೈಯನ್ನು ಸಾಧಿಸಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ತಾನೇ ಉತ್ತಮ ಎಂದು ತಿಳಿದಿದ್ದರೂ ಲಕ್ಷಾಂತರ ಭೂಮಿಗಳು ಹಾಗು ಕ್ಷೀರಪಥಗಳನ್ನು ಹೊಂದಿರುವ ಈ ವಿಶ್ವದಲ್ಲಿ ಮನುಷ್ಯ ಒಂದು ಅಣು ವಷ್ಟೇ ಆದ್ದರಿಂದ ಇಂತಹ ಮನುಷ್ಯರಲ್ಲದೆ ಬೇರೆಲ್ಲಾ ಜೀವಿಗಳನ್ನು ಸಲಹುತ್ತಿರುವ ಆ ಒಂದು ಕಾಣದ ಶಕ್ತಿಯ ವಿಚಿತ್ರಕ್ಕೆ ನಮಿಸಬೇಕು ಎಂದು ಇದರ ತಾತ್ಪರ್ಯ.

ಮುಂದಿನವಾರ ಮತ್ತೊಂದು ಕಗ್ಗದೊಂದಿಗೆ…

ಕು ಶಿ ಚಂದ್ರಶೇಖರ್

ಕಗ್ಗ ಕೃಪೆ: kagga.sanchaya.net
ಹಾಡಿರುವವರು: ಡಾ|| ರಾಜಕುಮಾರ್
ಯೌಟ್ಯೂಬ್ ಲಿಂಕ್ : ಮುರಳೀಧರ್

Related post

Leave a Reply

Your email address will not be published. Required fields are marked *