ವಾರಕ್ಕೊಂದು ಕಗ್ಗ – 3
(ಬಾಳಿಗೊಂದು ನಂಬಿಕೆ – ಡಿ. ವಿ. ಜಿ.)

ಕಗ್ಗ ಮಾಲಿಕೆ – ಕಗ್ಗ 17

ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆ
ಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ?
ಹಾಲಾಹಲವ ಕುಡಿವ ಗಿರೀಶನಿರ್ದೊಡೀ
ಕಳವಳವದೇತಕೆಲೋ? – ಮಂಕುತಿಮ್ಮ

ತಳಮಳವಿದೇನಿಳೆಗೆ= ತಳಮಳವಿದು + ಏನು + ಇಳೆಗೆ, ದೇವಮನುಜರ್ =ದೇವದ + ಅನುಜರ್
ಜಳಧಿಯೊಳಾದಂತೆ = ಜಲಧಿಯೊಳು + ಆದಂತೆ, ಗಿರೀಶನಿರ್ದೊಡೀ= ಗಿರೀಶನು + ಇರ್ದೊಡೆ,
ಕಳವಳವದೇತಕೆಲೋ = ಕಳವಳವು + ಅದು+ ಏತಕೆ+ ಎಲೋ,
ದೇವದನುಜರ್ = ದೇವಲೋಕದ ಅಣ್ಣ ತಮ್ಮಂದಿರು , ಮಥಿಸೆ= ಕಡೆಯೆ, ಜಲಿಧಿ= ಸಮುದ್ರ, ಸುಧೆ= ಅಮೃತ, ಪೀಠಿಕೆ = ಭೂಮಿಕೆ, ಪ್ರಸ್ತಾವನೆ, ಹಾಲಾಹಲ= ವಿಷ, ಗಿರೀಶ= ಶಿವ

ತಳಮಳವದೇನು ಇಳೆಗೆ ? ದೇವದುಜರು ಮಥಿಸೆ ಜಲಧಿಯೊಳು ಆದಂತೆ, ಸುಧೆಗೆ ಪೀಠಿಕೆಯೇನು,
ಹಲಾಹಲವ ಕುಡಿಯಲು ಗಿರೀಶನಿರುವಾಗ ಕಳವಳವದು ಏತಕೆ ಎಲೋ ಮಂಕುತಿಮ್ಮ.

ಕ್ಷೀರಸಾಗರ ಮಂಥನದ ಪುರಾಣ ಪ್ರಸಂಗ. ದೂರ್ವಾಸ ಮುನಿಗಳ ಶಾಪಕ್ಕೆ ಸಿಕ್ಕಿ ಇಂದ್ರನು ಅಸುರರೊಂದಿಗಿನ ಯುದ್ಧದಲ್ಲಿ, ಸುರರ ಶಕ್ತಿ ಸಾಮರ್ಥ್ಯಗಳು ನಶಿಸಿ ಅಸುರರು ಬಲಿ ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡಾಗ ವಿಷ್ಣುವಿನ ರಾಜತಾಂತ್ರಿಕತೆಯಿಂದ ಸುರರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು ಅಮೃತಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆಗ ಸರ್ಪಗಳ ರಾಜ ವಾಸುಕಿಯನ್ನೇ ಹಗ್ಗ ಮಾಡಿಕೊಂಡು ಮಂದರಾಚಲವೆಂಬ ಬೆಟ್ಟವನ್ನು ಕಡೆಗೋಲಾಗಿ ಕ್ಷೀರಸಮುದ್ರವನ್ನು ಕಡೆಯಲಾರಂಭಿಸುತ್ತಾರೆ. ಮೊದಲು ಕೊಡದ ತುಂಬಾ ವಿಷ ಉದ್ಭವಿಸಿ ಎಲ್ಲರು ಭಯಭೀತರಾದರು. ಆಗ ಈಶ್ವರನು ಆ ವಿಷವನ್ನು ಕುಡಿದು ತನ್ನ ಕಂಠ (ಗಂಟಲು) ದಲ್ಲಿ ಇಟ್ಟುಕೊಂಡು ವಿಷಕಂಠನಾಗಿ ಎಲ್ಲರನ್ನು ಆ ಘನ ಘೋರ ವಿಷದಿಂದ ಪಾರು ಮಾಡುತ್ತಾನೆ.

ಈ ಪುರಾಣ ಪ್ರಸಂಗವನ್ನು ಉಪಯೋಗಿಸಿಕೊಂಡು ಮಾನ್ಯ ಗುಂಡಪ್ಪನವರು ಎಲ್ಲಾ ಕಾಲಕ್ಕೂ ಸರಿಹೊಂದುವಂತಹ ಕಗ್ಗವನ್ನು ರಚಿಸಿದ್ದಾರೆ. ಪ್ರಪಂಚಕ್ಕೆ ಒಂದು ಉತ್ತಮವಾದ ವಸ್ತು ಸಿಗಬೇಕಾದರೆ ಈ ತರಹದ ಮಂಥನಗಳು ನೆಡೆದಾಗ ಒಳ್ಳೆಯ ವಸ್ತುವಿಗಿಂತ ಮೊದಲು ಸಿಕ್ಕುವುದೇ ಕೆಟ್ಟದೆಂಬ ವಸ್ತುವು, ಆಗ ಕಳವಳ, ತಳಮಳ ಇದ್ದದ್ದೇ. ಗುಂಡಪ್ಪನವರು ಇಲ್ಲಿ ದೇವ – ದಾನವರನ್ನು ಒಳ್ಳೆಯ ಮತ್ತು ಕೆಟ್ಟ ಗುಣಗಳಿಗೆ ಸೂಚ್ಯವಾಗಿಸಿದ್ದಾರೆ. ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಪ್ರಮಾಣ ಮತ್ತು ಪರಿಮಾಣಗಳ ವ್ಯತ್ಯಾಸ ಅಷ್ಟೇ. ಒಂದು ವ್ಯಕ್ತಿಯಿಂದ ಮಹತ್ತರ ಕಾರ್ಯವಾಗಬೇಕಾದರೆ ಅಂತರ್ಯದಲ್ಲೂ ತಿಕ್ಕಾಟಗಳು ತುಮಲಗಳು ನಿರಂತರ ನಡೆಯಬೇಕು. ಸಮುದ್ರಮಥನದ ರೀತಿ. ನಮ್ಮ ಲೋಕದ ಮಹಾ ಮಹಿಮರೆಲ್ಲರಿಗೂ ಇಂಥಹ ಅನುಭವವಾಗಿದೆ. ಅವರ ಪ್ರಯತ್ನದಲ್ಲಿ ಅವರಿಗೆ ” ವಿಷದ” ರೂಪದಲ್ಲಿ ಬೇಕಾದಷ್ಟು ಕಷ್ಟಗಳು ಬಂದಿವೆ. ಆ ಮಹಾಮಹಿಮರೆಲ್ಲ ಅಂತಹ ಕಷ್ಟಗಳನ್ನೆಲ್ಲ ” ಪರಶಿವನು ಹಾಲಾಹಲವನ್ನು ಕುಡಿದಂತೆ ” ನುಂಗಿ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡಿದ್ದಾರೆ.


ನಮ್ಮ ದೇಶಕ್ಕೆ ಶಂಕರರು, ರಾಮಾನುಜರು, ಬಸವಣ್ಣನವರು, ನಮ್ಮ ದೇಶದ ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜಗುರು, ಬೋಸ್ ಮುಂತಾದ ಅನೇಕ ವೀರರು ಸ್ವಾರ್ಥ ತೊರೆದು ಲೋಕಕಲ್ಯಾಣಕ್ಕಾಗಿ ಕಷ್ಟಗಳೆಂಬ ವಿಷವನ್ನು, ಪರಶಿವನಂತೆ ಕುಡಿದ ದೃಷ್ಟಾಂತಗಳು ನಮಗೆ ಹೇರಳವಾಗಿ ಸಿಗುತ್ತದೆ.

ಅದೇ ರೀತಿ ಇಂದು ಇರುವ ಪರಿಸ್ಥಿತಿಯೂ ಬದಲಾಗಿ ಇಂದಿರುವ ವಿಷ ಮತ್ತ ವಿಷಮ ಪರಿಸ್ಥಿತಿ ( ಕಾಲ ಕಾಲಕ್ಕೆ ತಕ್ಕಂತೆ ಈಗಿನ ಕರೋನ ಅಥವಾ ನೆಡೆಯುತ್ತಿರುವ ರಷ್ಯಾ – ಉಕ್ರೇನ್ ಯುದ್ಧವಾಗಿರಬಹುದು) ಕರಗಿ ಅಮೃತ ಹುಟ್ಟುವುದಕ್ಕೆ ಈ ರೀತಿಯ ತಿಕ್ಕಾಟವೇ, ತುಮುಲಗಳೇ, ತಳಮಳವೇ ಪೀಠಿಕೆಯೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಅಂದು ಪರ ಶಿವನು ” ವಿಷ”ವನ್ನು ಕುಡಿದು ಲೋಕಕಲ್ಯಾಣವನ್ನು ಮಾಡಿದ ಹಾಗೆ ಇಂದೂ ಯಾರಾದರೂ ಬರಬಹುದೆಂದು ಆಶಿಸಬಹುದು. ಬಾಳಿನ ಅಥವಾ ಸಾಧನೆಯ ದಾರಿಯಲ್ಲಿ ಇಂತಹ ಮಂಥನಗಳಿಂದ ಒಳ್ಳೆಯದು ಮತ್ತು ಕೆಟ್ಟದು ಇದ್ದದ್ದೇ! ಆದರೆ ಎಲ್ಲಾ ಸಾಧನೆಗಳಲ್ಲೂ ಮೊದಲು ಇರುವುದೇ ಕಷ್ಟ ಕೋಟಲೆ (ವಿಷ) ಅನಂತರವೇ ಸಾಧನೆ (ಅಮೃತ). ಇದನ್ನು ಅರಿತು ಸಾಧಕರು ಕಳವಳ-ತಳಮಳ ಗೊಳ್ಳದೆ ಕಷ್ಟ ಕೋಟಲೆಗಳೆಂಬ ವಿಷವನ್ನು ತನ್ನ ಕಂಠದಲ್ಲಿ ಇರಿಸಿಕೊಳ್ಳಲ್ಲು ಈಶ್ವರನಿರುವಾಗ ತಾವು ಅದನ್ನು ದೈರ್ಯದಿಂದ ದೃತಿಗೆಡದೆ ಎಲ್ಲಾ ಕಷ್ಟಗಳನ್ನು ನುಂಗುತ್ತಾ ಮುನ್ನೆಡೆದರೆ ಸಾಧನೆ ಎಂಬುದು ಕಟ್ಟಿಟ್ಟ ಬುತ್ತಿ.

ಸಾಧನೆಯ ಹಾದಿಯಲ್ಲಿ ಮುನ್ನೆಡೆವಾಗ ಕಷ್ಟ ಕಾರ್ಪಣ್ಯಗಳು ಇದ್ದದ್ದೇ ಅವುಗಳಿಂದ ದೃತಿಗೆಡದೆ ಪರಮಾತ್ಮ ನೆಂಬುವವನು ಇರುವನೆಂದು ನಂಬಿ ಎಂದಿಗೂ ಆಶಾಭಾವನೆಯನ್ನು ಇಟ್ಟಿಕೊಂಡು ಮುನ್ನೆಡೆಯಬೇಕು ಎಂಬುದೇ ಈ ಕಗ್ಗದ ಸರಳ ತಾತ್ಪರ್ಯ.

ಮುಂದಿನವಾರ ಮತ್ತೊಂದು ಕಗ್ಗದೊಂದಿಗೆ…

ಕು ಶಿ ಚಂದ್ರಶೇಖರ್
ಯೌಟ್ಯೂಬ್ ಲಿಂಕ್ ಕೃಪೆ: utkarsha 2020

Related post

Leave a Reply

Your email address will not be published. Required fields are marked *