ವಾರಕ್ಕೊಂದು ಕಗ್ಗ – 4 (ಬಾಳಿಗೊಂದು ನಂಬಿಕೆ) – ಡಿ. ವಿ. ಜಿ.

ಕಗ್ಗ ಮಾಲಿಕೆ – ಕಗ್ಗ ೨೭೮

ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್ |
ಕಾಣಿಸುವರನ್ನವನು? ಹಸಿವವರ ಗುರುವು ||
ಮಾನವನುಮಂತುದರಶಿಷ್ಯನವನಾ ರಸನೆ |
ನಾನಾವಯವಗಳಲಿ – ಮಂಕುತಿಮ್ಮ ||

ಗಾರ್= ಗೆ, ಯಾರು ಕಾಣಿಸುವರನ್ನವನು = ಕಾಣಿಸುವರು+ಅನ್ನವನು// ಹಸಿವವರ = ಹಸಿವು + ಅವರ//ಮಾನವನುಮಂತುದರಶಿಷ್ಯನವನಾ=ಮಾನವನುಂ+ಅಂತು+ಉದರ+ಶಿಷ್ಯನ್+ಅವನ+ಆ// ನಾನಾವಯವಗಳಲಿ=ನಾನಾ+ಅವಯವಗಳಲಿ
ರಸನೆ = ನಾಲಿಗೆ// ಅವಯವಗಳು = ಅಂಗಾಂಗಗಳು.

ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಬಹು ಮುಖ್ಯವಾದ ವಾಸ್ತವಿಕ ವಿಷಯವನ್ನು ಮುಂದಿಡುತ್ತಾರೆ. ಭೂಮಿಯ ಮೇಲಿರುವ ಸಕಲ ಜೀವಜಂತುಗಳಿಗೆ (ಆನೆ, ಇರುವೆ, ಕಾಗೆ, ಕಪ್ಪೆ ಇತ್ಯಾದಿ…) ಆಹಾರವನ್ನು ಯಾರು ಕೊಡುತ್ತಾರೆ? ಈ ಎಲ್ಲಾ ಜೀವಜಂತುಗಳು ತಮಗೆ ಹಸಿವಾದಾಗ ತಾವೇ ಹುಡುಕಿ ಹೊರಡುತ್ತವಲ್ಲವೇ! ಹಾಗಾಗಿ ಅವುಗಳ ಹಸಿವೆ ಆಹಾರ ಹುಡುಕಲು ಅವಕ್ಕೆ ಗುರು. ಹಾಗೆಯೇ ಮನುಷ್ಯನಿಗೂ ಸಹ ಅವನ ಹೊಟ್ಟೆಯೇ ಅವನಿಗೆ ಗುರು.

ಕನಕದಾಸರು ಹೇಳಿದಂತೆ “ಎಲ್ಲರು ಮಾಡುವುದು ಹೊಟ್ಟೆಗಾಗಿ” ಆದರೆ ಮನುಷ್ಯನ ಹಸಿವು ಬರಿಯ ಹೊಟ್ಟೆಯ ಹಸಿವಲ್ಲ. ಮನುಷ್ಯ ತನ್ನ ವಿಕಸಿತ ಬುದ್ದಿವಂತಿಕೆಯಿಂದ ಸಾವಿರಾರು ವಿಧಗಳನ್ನು ಆಹಾರಕ್ಕಾಗಿ ಕಂಡುಕೊಂಡಿದ್ದಾನೆ. ಅವನ ನಾಲಿಗೆಯ ಚಪಲಕ್ಕೆ ಜಗತ್ತಿನಾದ್ಯಂತ ಅಸಂಖ್ಯ ವಿಧ ವಿಧವಾದ ಭಕ್ಷ್ಯ ಭೋಜನಗಳು ತಯಾರಾಗುತ್ತವೆ. ದಿನ ದಿನವೂ ಹೊಸ ಹೊಸ ರುಚಿಗಳು ಭಕ್ಶ್ಯಗಳ ರೂಪದಲ್ಲಿ ಅನ್ವೇಷಣೆಗೊಳ್ಳುತ್ತಲೇ ಇವೆ.

ಪ್ರಾಣಿ ಪಕ್ಷಿ ಜಂತುಗಳಿಗೆ ಈ ಹಸಿವು ತನ್ನ ಹೊಟ್ಟೆಪಾಡಿಗಾಗಿ ಮಾತ್ರ ಆದರೆ ಮನುಷ್ಯನ ಈ ಹಸಿವು ಬರಿಯ ಪಾಕಶಾಸ್ತ್ರಕ್ಕೆ ಮಾತ್ರ ಸೀಮಿತವಲ್ಲ. ಅದು ನಾನಾ ರೀತಿಗಳಲ್ಲಿ ಇರುತ್ತದೆ. ಜ್ಞಾನದ ಹಸಿವು, ಲೋಕತಿರುಗುವ ಹಸಿವು, ಆದ್ಯಾತ್ಮಿಕ ಹಸಿವು, ಅನ್ವೇಷಣೆಯ ಹಸಿವು ಈ ತರಹದ ಹಸಿವುಗಳು ಮನುಷ್ಯನ ಏಳಿಗೆಗೆ ಹಾಗು ಮನುಕುಲದ ಉದ್ದಾರಕ್ಕೆ ಉಪಯೋಗವಾದರೆ, ಅವನ ಇನ್ನಿತರ ಹಸಿವುಗಳಾದ, ಲೋಭದ ಹಸಿವು, ಕಾಮದ ಹಸಿವು, ಕೀರ್ತಿಯ ಹಸಿವು, ಇನ್ನಿತರೇ (ಪಟ್ಟಿ ಬಹಳ ಉದ್ದ ಇದೆ) ಹಸಿವುಗಳು ಇಡೀ ಪ್ರಪಂಚಕ್ಕೆ ಮಾರಕವಾಗಿದೆ.

ಮನುಷ್ಯನನ್ನು ಬಿಟ್ಟು ಇನ್ನಿತರ ಜೀವಿಗಳಿಗೆ ಈ ಹಸಿವು ಹೊಟ್ಟೆ ತುಂಬಿದ ನಂತರ ಸುಮ್ಮನಾಗುತ್ತದೆ. ಹುಲಿ, ಸಿಂಹಗಳು ತನ್ನ ಹೊಟ್ಟೆಯ ಹಸಿವು ಹಿಂಗಿದಾಗ ತನ್ನ ಸುತ್ತ ಮುತ್ತ ಜಿಂಕೆ ಕಡವೆಗಳು ಓಡಾಡುತ್ತ ಇದ್ದರು ಸುಮ್ಮನೆ ಇರುತ್ತವೆ ಮತ್ತೆ ಅದು ತನ್ನ ದಾಳಿಯನ್ನು ಪ್ರಾರಂಭಿಸುವುದು ಹೊಟ್ಟೆಯ ಹಸಿವು ಕಾಣಿಸಿಕೊಂಡಾಗ ಮಾತ್ರ ತನ್ನ ಹೊಟ್ಟೆಯ ಪಾಡಿಗಾಗಿ ಮಾತ್ರ. ಆದರೆ ಮನುಷ್ಯನಿಗೆ ಈ ಹಸಿವು ಯಾವಾಗಲೂ ಹಿಂಗಿಲ್ಲ, ಅವನ ಅಸ್ತಿತ್ವದ ಪ್ರತೀ ಒಂದು ಆಯಾಮಕ್ಕೂ ಹಲವಾರು ಮುಖಗಳಿದ್ದು ಪ್ರತೀ ಮುಖಕ್ಕೂ ಅದರದ್ದೇ ಆದ ತೀರದ ಹಸಿವಿದೆ. ಇದು ಸಹಜವಾದದ್ದೇ. ಹಾಗೆ ಹಸಿವಿದ್ದರೆ ಮಾತ್ರ ಅವನು ಕ್ರಿಯಾಶೀಲನಾಗಿರಲು ಸಾಧ್ಯ. ಆದರೆ ” ಅತಿ ಸರ್ವತ್ರ ವರ್ಜ್ಯೇತ್ ” ಎನ್ನುವಹಾಗೆ ಅವನ ಹಸಿವೂ ಸಹ ಮಿತವಾಗಿದ್ದರೆ ಹಿತವಾಗಿರುತ್ತದೆ. ತನ್ನ ಲೋಭ ದುರಾಸೆಗಳಿಂದಾಗಿ ಮತ್ತಷ್ಟು ಮಗದಷ್ಟು ಬೇಕು ಎನ್ನುತ್ತಾ ಮಿತಿ ಮೀರಿದರೆ ಮನುಷ್ಯನಿಗೆ ಅದೋಗತಿ.

ಪ್ರತಿಯೊಬ್ಬರೂ ತಮ್ಮ ತಮ್ಮ ಯೋಗ್ಯತೆಯನ್ನರಿತು, ತಮ್ಮ ಮಿತಿಯನ್ನರಿತು ಆಸೆ ಪಡಬೇಕು. ತೃಪ್ತಿಯಿಂದಿರಬೇಕು, ಅದೇ ಮನುಕುಲಕ್ಕೆ ಹಿತ.

ಮುಂದಿನ ವಾರ ಮತ್ತೊಂದು ಕಗ್ಗದೊಂದಿಗೆ…

ಕು ಶಿ ಚಂದ್ರಶೇಖರ್
ಕಗ್ಗ ವಾಚನ ಕೃಪೆ: ದೀಪಕ್ ಕಶ್ಯಪ್

Related post

Leave a Reply

Your email address will not be published. Required fields are marked *