ವಾರಕ್ಕೊಂದು ಕಗ್ಗ – 5 (ಬಾಳಿಗೊಂದು ನಂಬಿಕೆ) – ಡಿ. ವಿ. ಜಿ

ಕಗ್ಗ ಮಾಲಿಕೆ – ಕಗ್ಗ 430

ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ ।
ಇಬ್ಬರಾಗುವೆನೆಂದನಂತೆ ಪರಬೊಮ್ಮಂ ॥
ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? ।
ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ

ಒಬ್ಬನುಣುವೂಟದಲಿ=ಒಬ್ಬನು+ಉಣುವ+ಊಟದಲಿ,ಇಬ್ಬರಾಗುವೆನೆಂದನಂತೆ=ಇಬ್ಬರು+ಆಗುವೆ+ಎಂದನಂತೆ, ಹೆಬ್ಬದುಕನೊಂಟಿತನದೊಳದೇನು=ಹೆಬ್ಬದುಕನು+ಒಂಟಿತನದೊಳು+ಅದೇನು, ಉಣುವ=ತಿನ್ನುವ, ಹೆಬ್ಬದುಕನು=ದೊಡ್ಡದಾದ ಜೀವನವ,

ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಒಬ್ಬಂಟಿ ಜೀವನದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ನಾವು ಒಬ್ಬರೇ ಕುಳಿತು ಊಟ ಮಾಡಿದರೆ ಅದರಲ್ಲಿ ಏನು ಸುಖವಿರುತ್ತದೆ? ಇಬ್ಬರಾದರೆ ಪರಸ್ಪರ ವಿಷಯಗಳನ್ನು, ಕಷ್ಟ ಸುಖಗಳನ್ನು ಹಂಚಿಕೊಳ್ಳಬಹುದು. ಒಬ್ಬನೇ ಊಟ ಮಾಡಿದರೆ ನಮ್ಮ ಹೊಟ್ಟೆ ತುಂಬಬಹುದು ಆದರೆ ನಮ್ಮ ಮನಸ್ಸು ತುಂಬುವುದಿಲ್ಲ. ಅದು ಸದಾ ಏಕಾಂಗಿಯಾಗೇ ಇದ್ದುಬಿಡುತ್ತದೆ.

ತೈತ್ತರೇಯದಲ್ಲಿ ” ಅನ್ನಂ ಬಹು ಕುರ್ವೀತ” ಎಂದು ಹೇಳಲ್ಪಟ್ಟಿದೆ. ಇದರ ಅರ್ಥ ಅನ್ನವನ್ನು
(ಆಹಾರವನ್ನು) ಹೆಚ್ಚಾಗಿ ಮಾಡು. ಏಕೆಂದರೆ ಯಾವ ಗಳಿಗೆಯಲ್ಲಿ ಯಾರು ಮನೆಗೆ ಬರುತ್ತಾರೋ ಗೊತ್ತಿಲ್ಲ. ಬಂದವರಿಗೆ ” ತಸ್ಮಾತ್ ಯಯಾಕಯಾಚ ವಿಧಾಯ ಬಹ್ವನ್ನಂ ಪ್ರಾಪ್ನುಯಾತ್” ಎಂದರೆ ಬಂದವರಿಗೆ ಹೇಗಾದರೂ ಮಾಡಿ ಊಟವನ್ನು ನೀಡು ಎಂದು ಹೇಳುತ್ತದೆ. ಇದು ಕೇವಲ ಅನ್ನಕ್ಕೆ ಮಾತ್ರ ಅನ್ವಯವಲ್ಲ. ಯಾವುದೂ ಇದರಿಂತ ಹೊರತಲ್ಲ!

ಮನುಷ್ಯ ಸಂಘ ಜೀವಿಯಾದ್ದರಿಂದಲೇ ಮಾನವ ಸಮುದಾಯ ಅಸಂಖ್ಯ ಪಂಗಡಗಳಾಗಿ ವಿಕಾಸವಾಗಿರುವುದು. ಮನುಷ್ಯನ ಏನೇ ಸಾಧನೆ ಅನ್ವೇಷಣೆಗಳಿದ್ದರು ಅದು ಒಬ್ಬನಿಂದ ಆದದ್ದಲ್ಲ. ಪರಸ್ಪರ ವಿಷಯ ಹಂಚಿಕೆ, ವಿಷಯ ಸಮಾಲೋಚನೆ ಮಾಡಲು ಒಬ್ಬನಿಂದ ಸಾಧ್ಯವಿಲ್ಲ, ಅದು ವಿಜ್ಞಾನವಾಗಿರಲಿ ಅಥವಾ ಆಧ್ಯಾತ್ಮವಾಗಿರಲಿ. ಪರರಿಂದ ಪಡೆಯಬೇಕು, ಪರರಿಗೆ ಕೊಡಬೇಕು, ಪರಸ್ಪರ ಹೊಂದಾಣಿಕೆಯಲ್ಲಿ ಜೀವಿಸಬೇಕು ಎನ್ನವುದೇ ಮೂಲ ಉದ್ದೇಶ. ಇದೇ ಅರ್ಥದಲ್ಲಿ “ತಬ್ಬಿಕೊಳೊ ವಿಶ್ವವನು” ಎಂದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಹಾಗಾಗಿ ನಾವು ಒಬ್ಬಂಟಿಯಾಗಿ ಜೀವನ ಸೆವೆಸುವುದು ಬೇಡ ಎಲ್ಲರೊಂದಿಗೆ ಬೆರೆತು ಜ್ಞಾನವನು ಹೆಚ್ಚಿಸಿಕೊಂಡು, ಹಂಚಿಕೊಂಡು ಲೋಕಕ್ಕೆ ತಮ್ಮಿಂದಾದ ಏನಾದರೂ ಕಾಣಿಕೆ ನೀಡಿ ಬೆರೆತು ಬಾಳೋಣ.

ಕು ಶಿ ಚಂದ್ರಶೇಖರ್
ಮಾಹಿತಿ ನೆರವು : https://kaggarasadhaare.wordpress.com/
ಕಗ್ಗ ವಾಚನ: ಚೈತನ್ಯ ಭಾರತ ಸಮಿತಿ, ತಿಪಟೂರು

Related post

Leave a Reply

Your email address will not be published. Required fields are marked *