ಕಗ್ಗ ಮಾಲಿಕೆ – ಕಗ್ಗ 478
ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ।
ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ।।
ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು ।
ಮುಗುಳು ದುಡಿತಕೆ ತಣಿಸು – ಮಂಕುತಿಮ್ಮ ।।
ನೀರೆರೆದು=ನೀರು+ಎರೆದು, ಮುಳ್ಳಿರಿತಗಳ=ಮುಳ್ಳ+ಇರಿತಗಳ, ನಗುವುದೊಂದರೆನಿಮಿಷ=ನಗುವು+ಒಂದು+ಅರೆ+ನಿಮಿಷ, ಬಾಳ್ಮುಗಿಯುವುದು=ಬಾಳು+ಮುಗಿಯುವುದು.
ಜಗಿವ =ಚುಚ್ಚುವ, ಸೈರಿಸೆ=ಸಹಿಸಿಕೊಂಡರೆ, ಅರೆ=ಅರ್ದ, ಮುಗುಳು=ಮೊಗ್ಗು.
ಆ ಗುಲಾಬಿ ತೋಟದ ಮಾಲಿ, ನೆಲ ಅಗೆದು ಸಸಿಯ ನೆಟ್ಟು, ಅದಕ್ಕೆ ಗೊಬ್ಬರವ ಕೊಟ್ಟು ನೀರೆರೆದು, ಸೈರಣೆಯಿಂದ ಆ ಗಿಡದ ಮುಳ್ಳುಗಳಿಂದ ಚುಚ್ಚಿಸಿಕೊಂಡು, ಪ್ರೀತಿಯಿಂದ ಆ ಗಿಡವನ್ನು ಬೆಳೆಸಿದರೆ ಒಂದು ದಿನ ಹೂ ಬಿಟ್ಟು, ಅಲ್ಪಕಾಲವಾದರೂ ಜಗಕೆ ಸಂತಸವನ್ನು ಕೊಡುತ್ತಾ ನಲಿದಾಗ, ಮಾಲಿಯ ಅಷ್ಟೂ ದುಡಿತಕ್ಕೂ ಒಂದು ಸಾರ್ಥಕ್ಯದ ಭಾವ ಮೂಡುತ್ತದೆ, ಎಂದು ಜಗತ್ತಿನಲ್ಲಿ ‘ಆನಂದ’ವನ್ನು ಅನುಭವಿಸುವ ಪರಿಯ ಮತ್ತೊಂದು ಕೋನವನ್ನು ನಮಗೆ ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು, ನಮಗೆ ಈ ಮುಕ್ತಕದಲ್ಲಿ.
ನಾವು ಈ ದೃಷ್ಟಾಂತವನ್ನು ಬೇರೆ ಯಾವುದೇ ಹೂವಿನ ಗಿಡಕ್ಕೂ ಹೋಲಿಸಿಕೊಳ್ಳಬಹುದು. ಪಾರಿಜಾತದ ಗಿಡವನ್ನು ನೋಡಿದಾಗ ಗುಂಡಪ್ಪನವರು ಹೇಳುವ ‘ನಗುವುದೊಂದರೆನಿಮಿಷ’ ದ ಅನುಭವ ನಮಗೆ ಆಗುತ್ತದೆ.
ಕೀಳಲೂ ಬಾರದ, ಮುಟ್ಟಿದರೆ ನಲುಗುವ ಆದರೂ ತನ್ನ ಸುಗಂಧದಿಂದ ಸುತ್ತು ಪರಿಸರವನ್ನು ಸುವಾಸಿತಗೊಳಿಸುವ ಪಾರಿಜಾತಕ್ಕೆ ‘ನಗಲು ಬಾಳ್ಮುಗಿಯುವುದು’ ಎನ್ನುವುದು ಸಮರ್ಪಕವಾಗಿ ಅನ್ವಯವಾಗುತ್ತದೆ.
ಹೀಗೆ ಜಗತ್ತಿನಲ್ಲಿ ಜನಿಸಿದ ನಾವುಗಳು ನಮ್ಮ ನಮ್ಮ ಪೂರ್ವ ಕರ್ಮಾನುಸಾರ ನಾವು ಮಾಡುವ ಪ್ರತೀ ಕೆಲಸದಲ್ಲೂ ತೊಡಕುಗಳನ್ನು ಎದುರಿಸುತ್ತಾ, ನಿವಾರಿಸುತ್ತಾ ಬದುಕುವಾಗ ಕೆಲ ಸಂದರ್ಭಗಳಲ್ಲಿ ನಮಗೆ ಸಂತೋಷವನ್ನು ನೀಡುವ ಕ್ಷಣಗಳು ಹಲವಾರಿರಬಹುದು. ಅದು ಅಲ್ಪ ಕಾಲದ ಸಂತೋಷವೇ ಆದರೂ ನಾವು ಅದನ್ನು ತುಂಬು ಹೃದಯದಿಂದ ಅನುಭವಿಸಬೇಕು ಮತ್ತು ಆನಂದಿಸಬೇಕು.’ ಅಯ್ಯೋ ಇದು ಕ್ಷಣಿಕ ಅಥವಾ ತಾತ್ಕಾಲಿಕ ಸುಖ, ಇದರಿಂದೇನಾಗಬೇಕು’ ಎಂದು ಸಂದ ಆನಂದವನ್ನೂ ಅನುಭವಿಸದೆ ಕೇವಲ ಕೊರತೆಗಳನ್ನೇ ಎಣಿಸುತ್ತಾ ಬದುಕಿದರೆ ಜೀವನ ದುರ್ಭರವಾಗಿಬಿಡುತ್ತದೆ.
ನಮ್ಮ ಜೀವನದಲ್ಲಿ ನಾವು ಮಾಡುವ ಕಾಯ ಕರ್ಮಕ್ಕೆ ಸಿಗುವ ಸುಖ ಸಂತೋಷ ಆನಂದ ತೃಪ್ತಿ ಎಲ್ಲವೂ ಹೂ ಗಿಡದ ಮೊಗ್ಗುಗಳಂತೆ. ಅವುಗಳು ಅರಳಿದಾಗ ಮತ್ತು ತಮ್ಮ ಸುಗಂಧವನ್ನು ಪಸರಿಸಿದಾಗ ನಮ್ಮ ದುಡಿಮೆಗೆ ಒಂದು ಸಾರ್ಥಕ್ಕ್ಯ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.ಅಂತಹ ಸಣ್ಣ ಸಣ್ಣ ಮತ್ತು ತಾತ್ಕಾಲಿಕ ಸುಖಗಳು ನಮ್ಮನ್ನು ಆ ಆನಂದದ ಕ್ಷಣಗಳನ್ನು ವಿಸ್ತರಿಸಿಕೊಳ್ಳುವ ಹಾಗೆ ಪ್ರೇರೇಪಿಸಬೇಕು.
ನಾವು ನಮ್ಮ ದುಡಿಮೆಯಿಂದ ನಮ್ಮಲ್ಲೇ ಸೃಷ್ಟಿಸಿಕೊಂಡ ಆನಂದದ ಮೊಗ್ಗನ್ನು ಅರಳಿಸಿ ಹೂವಾಗಿಸಿ ನಾವೂ ಆನಂದಪಟ್ಟು ಅನ್ಯರಿಗೂ ಆನಂದ ನೀಡುವ ಭಾಗ್ಯ ನಮ್ಮದಾದರೆ ನಮ್ಮ ಜೀವನ ಸಾರ್ಥಕವಾದಂತೆಯೇ ಅಲ್ಲವೇ?
ಡಾ|| ಡಿ. ವಿ. ಗುಂಡಪ್ಪ
ಮಾಹಿತಿ ತಾತ್ಪರ್ಯ : https://kaggarasadhaare.wordpress.com/
ವಾಚನ : ಅಂಗೀರಸ ಬ್ಲಾಗ್ ಯೂಟ್ಯೂಬ್ ಚಾನೆಲ್