ವಾಲಿ ವಧೆ – ಇದು ಹಳ್ಳಿ ಹುಡುಗರ ರಂಗ ಪಯಣ

ವಾಲಿ ವಧೆ – ನಾಟಕ ಪ್ರದರ್ಶನ

ಹಳ್ಳಿ ಹುಡುಗರೇ ನಟಿಸುವ ಶ್ರೀರಾಮಾಯಣ ದರ್ಶನಂ ಆಧಾರಿತ ನಾಟಕ ‘ವಾಲಿ ವಧೆ’

ಈ ನಾಟಕದ ಪಾತ್ರಧಾರಿಗಳು ರಂಗಭೂಮಿಯ ಸ್ಟಾರ್‌ಗಳು!

ಇಂಟ್ರೋ:
ಯಾವುದೇ ರಂಗ ತರಬೇತಿಗಳನ್ನೂ ಪಡೆಯದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಪುಟ್ಟ ಗ್ರಾಮದ ಶೇಷಗಿರಿಯಲ್ಲಿನ ಗಜಾನನ ಯುವಕ ಮಂಡಳಿಯ ಸ್ಥಳೀಯ ಕಲಾವಿದರು ಹಳೆಗನ್ನಡದ ನಾಟಕವನ್ನು ಮಾಡುತ್ತಾರೆ.

ಇವರು ಸ್ವಲ್ಪವೂ ತೊದಲದೇ, ಅಳುಕದೇ ಎಂತಹ ಹಿರಿಯ ಕಲಾವಿದರೂ ತಲೆದೂಗಿ ಮೆಚ್ಚುವಂತೆ ಅಭಿನಯಿಸುತ್ತಾರೆ, ಅಭಿನಯಿಸುತ್ತಿದ್ದಾರೆ!

ಇಲ್ಲಿಯವರೆಗೂ ಪ್ರದರ್ಶನಗೊಂಡ ಕಡೆಗಳಲ್ಲೆಲ್ಲಾ ಯಶಸ್ಸನ್ನು ಕಂಡ ನಾಟಕವಿದು. ಎಂತಹವರ ಮನಸ್ಸನ್ನು ಕಲಕಿಬಿಡುವ ನಾಟಕವಿದು. ರಂಜನೆಗೆ ಹೇಳಿ ಮಾಡಿಸಿದ ನಾಟಕ. ನೋಡದಿದ್ದರೆ ಸಾಕಷ್ಟು ಕಳೆದುಕೊಳ್ಳುದಂತೂ ಸತ್ಯ!

ಫೆಬ್ರವರಿ 27 ರಂದು ಎರಡು ನಾಟಕ ಪ್ರದರ್ಶನಗಳಿವೆ. ಮಧ್ಯಾಹ್ನ 3.30 ಕ್ಕೆ ಹಾಗೂ ಸಂಜೆ 7.30 ಕ್ಕೆ ಮತ್ತೊಂದು.
ಇದು ಬೆಂಗಳೂರಿನ ಬಸವೇಶ್ವರ ನಗರದ ಕೆ ಇ ಎ ಪ್ರಭಾತ್ ರಂಗಮಂದಿರದಲ್ಲಿ ಪ್ರದರ್ಶನವಾಗಲಿದೆ. ನಗ್ನ ಥಿಯೇಟರ್ ಅವರು ಅರ್ಪಿಸುತ್ತಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ನ ಎರಡು ಕಾವ್ಯ ಭಾಗದಿಂದ ಈ ನಾಟಕವನ್ನು ರಚಿಸಲಾಗಿದೆ.

ಗ್ರಾಮೀಣ ಬದುಕಲ್ಲಿ ಜೀವನ ಕಟ್ಟಿಕೊಂಡವರು ಈ ನಾಟಕದಲ್ಲಿ ಯಕ್ಷಗಾನ, ಕಳರಿ ಮತ್ತು ಮಣಿಪುರಿ ಕಲೆಯ ಕೆಲವು ಪಟ್ಟುಗಳನ್ನೂ ನುರಿತವರಂತೆ ಮಾಡಿ ತೋರಿಸುತ್ತಾರೆ. ಆಯಾಯ ದೃಶ್ಯಗಳಿಗೆ ತಕ್ಕ ಹಾವಭಾವ, ನಡಿಗೆಗಳಲ್ಲದೇ ಎಲ್ಲಾ ತರಹದ ಅಭಿನಯಕ್ಕೆ ಒಗ್ಗಿಕೊಂಡು ನಟಿಸುತ್ತಾರೆ. ಈ ಕಲಾವಿದರ ನಟಿಸುವ ಪರಿಯನ್ನು ನೋಡಿಯೇ ತಿಳಿಯಬೇಕು.

ರಂಗದ ಮೇಲೆ ಹೀಗಿರುವ ಈ ಅದ್ಭುತ ಕಲಾವಿದರು ನಿಜ ಜೀವನದಲ್ಲಿ ಹೇಗಿದ್ದಾರೆಂದು ಇಲ್ಲಿ ದಾಖಲಿಸಲಾಗಿದೆ.

ಶೇಷಗಿರಿ ನಾಟಕ ತಂಡದ ಕತೆ
ಸುಮಾರು ಮೂವತ್ತು ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿರುವ ಗಜಾನನ ಯುವ ಮಂಡಳಿಯ ಶೇಷಗಿರಿ ಎಂಬುದು ‘ಶೇಷಗಿರಿ ಕಲಾ ತಂಡ’ ವಾಗಿ ಬೆಳೆದಿದೆ. ಈ ತಂಡದ ರುವಾರಿ ಹಾಗೂ ಅಧ್ಯಕ್ಷರಾದ ಪ್ರಭು ಗುರುಪ್ಪನವರ ಹಾಗೂ ಕಾರ್ಯದರ್ಶಿಗಳಾದ ನಾಗರಾಜ ಧಾರೇಶ್ವರ ಅವರ ಶ್ರಮ ದೊಡ್ಡದು.

ಸುಮಾರು ಇನ್ನೂರೈವತ್ತು ಮನೆಗಳಿರುವ ಈ ಪುಟ್ಟ ಗ್ರಾಮದಲ್ಲಿ ಕಲೆಯ ಆಸಕ್ತಿಯನ್ನು ಅರಳಿಸಿದ್ದಾರೆ.

ಗ್ರಾಮೀಣ ಬದುಕಿನ ಜನರಲ್ಲಿ ನಾಟಕದ ಅಭಿರುಚಿಯನ್ನು ಬೆಳೆಸಿದ್ದಲ್ಲದೇ ಅವರಿಂದ ಉತ್ತಮ ನಾಟಕಗಳನ್ನು ಪ್ರದರ್ಶಿಸುವ ಮೂಲಕ ನಾಡಿನ ರಂಗಪ್ರಿಯರನ್ನು ಸೆಳೆದಿದ್ದಾರೆ.

ಸರ್ಕಾರದ ಹಲವು ಅನುದಾನಗಳನ್ನು ಪಡೆದು ಕೋಟಿಗೂ ಮೀರಿದ ವೆಚ್ಚದ ಸುಸಜ್ಜಿತ ರಂಗಮಂದಿರವನ್ನು ಕಟ್ಟಿಸಿದ್ದಾರೆ. ಹೊರಗಿನಿಂದ ರಂಗ ತಂಡಗಳೂ ಇಲ್ಲಿಗೆ ಬಂದು ನಾಟಕಗಳನ್ನು ಪ್ರದರ್ಶಿಸುತ್ತಾರೆ.

ನಿರ್ದೇಶಕರ ಪರಿಚಯ:
ಎಂ ಗಣೇಶ್ ಉಡುಪಿ ಈ ನಾಟಕದ ನಿರ್ದೇಶಕರು. ಮೂಲತಃ ಉಡುಪಿಯವರಾದ ಇವರು ಯಕ್ಷಗಾನದ ಕಲಾವಿದರು. ನೀನಾಸಂ ಪದವಿ ಪಡೆದು ಜನಮನದಾಟ, ಆಟಮಾಠ, ನೀನಾಸಂ ಮರು ತಿರುಗಾಟಗಳಲ್ಲಿ ನಟರಾಗಿ, ತಂತ್ರಜ್ಞಾನದ ಕೆಲಸದವರಾಗಿ ಗುರುತಿಸಿಕೊಂಡಿದ್ದಾರೆ.

ರಂಗಾಯಣ ಮೈಸೂರಿನ ಭಾರತೀಯ ರಂಗ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರಾಗಿದ್ದರು. ಚೋಮನ ದುಡಿ, ಪಂಚವಟಿ, ನೆರೆ, ಸತ್ರು ಅಂದ್ರೇ ಸಾಯ್ತಾರಾ?, ಆಲಿವರ್, ರಾಮಧ್ಯಾನ ಚರಿತೆ, ಏ ತಾಯೇ ನೆಲದವ್ವ, ನಳ ದಮಯಂತಿ, ಸತ್ಯ ಹರಿಶ್ಚಂದ್ರಗಳನ್ನು ನಿರ್ದೇಶಿಸಿದ್ದಾರೆ. ಈಗ ಕನ್ನಡದ ಘಟ್ಟಕಾವ್ಯದ ರುಚಿಯನ್ನು ಇಂದಿನ ತಲೆಮಾರಿಗೆ ಮುಟ್ಟಿಸುವುದಕ್ಕಾಗಿ ಮತ್ತು ಸಂಬಂಧಗಳು ಪಲ್ಲವಗೊಳ್ಳುತ್ತಿರುವ ಸಂದರ್ಭದಲ್ಲಿ ಪ್ರೀತಿಯ ರೂಪಕವೇ ಆಗಿದೆ ಈ ನಾಟಕ.

ಇದೇ ನಿರ್ದೇಶಕರು ತುಳುವಿನಲ್ಲೂ ಈ ನಾಟಕವನ್ನು ಪ್ರದರ್ಶಿಸಿದ್ದಾರೆಂಬುದು ಇವರ ಹೆಗ್ಗಳಿಕೆಯಾಗಿದೆ.

ಈ ನಾಟಕದಲ್ಲಿ ಮೇಳದವರ ಶ್ರಮ ಹಾಗೂ ಕಲೆಗಾರಿಕೆಯೂ ಯಾರೂ ಮೆಚ್ಚುವಂತಹದ್ದು. ನಾಟಕದ ಗೆಲುವಿಗೆ ಸಮಾಸಮ ಕೊಡುಗೆ ಕೊಟ್ಟಿದ್ದಾರೆ.

ಈ ನಾಟಕ ಹುಟ್ಟಿದ್ದು ಹೇಗೆ?
ರಂಗಶಂಕರದ ಯುವ ನಿರ್ದೇಶಕ ಶಿಬಿರದಲ್ಲಿ ಆಯ್ಕೆಯಾದ ಈ ನಾಟಕದ ಎಂ ಗಣೇಶ್ ಉಡುಪಿ ಅವರು ಸ್ಟುಡೆಂಟ್ ಪ್ರೊಡಕ್ಷನ್‌ಗಾಗಿ ಈ ನಾಟಕವನ್ನು ಆಯ್ಕೆ ಮಾಡಿಕೊಂಡರು. ಶೇಷಗಿರಿಯ ಈ ಕಲಾವಿದರನ್ನು ಬಳಸಿಕೊಂಡು ಸತತ ಹದಿಮೂರು ದಿನಗಳು ತರಬೇತಿ ನೀಡಿದರು. ಹಳಗನ್ನಡದ ನಾಟಕವನ್ನು ಹಳ್ಳಿಯ ಈ ಆಸಕ್ತ ಯುವಕರಿಗೆ ಕಲಿಸಿದರು. ಮೊದಲ ಪ್ರದರ್ಶನ ಶೇಷಗಿರಿಯಲ್ಲಿನ ರಂಗಮಂದಿರದಲ್ಲೇ ಆಯ್ತು. ಇಲ್ಲಿ ಆಯ್ಕೆಯಾದ ಈ ನಾಟಕವು ರಂಗಶಂಕರದಲ್ಲಿ ಪ್ರದರ್ಶನಗೊಂಡಿತು. ಆನಂತರ ನಾಡಿನ ಹಲವಾರು ಊರುಗಳಲ್ಲಿ ಪ್ರದರ್ಶನಗೊಂಡು ಹೋದಲ್ಲೆಲ್ಲಾ ಪ್ರಶಂಸೆಗೆ ಪಾತ್ರವಾಗಿದೆ.
ವಾಲ್ಮೀಕಿ ರಾಮಾಯಣದ ದುಷ್ಟ ವಾಲಿಯನ್ನು ಕುವೆಂಪು ಅವರು ವಿಭಿನ್ನವಾಗಿ ಚಿತ್ರಿಸಿದ್ದಾರೆ. ಇಲ್ಲಿ ವಾಲಿ ಸಾಯುವ ಘಟ್ಟದಲ್ಲಿ ಪ್ರೀತಿಗಾಗಿ ಹಂಬಲಿಸಿ ತುಡಿಯುವ ತನ್ನ ಅಹಂಕಾರಕ್ಕೆ ತಾನೇ ನಾಚಿ ಪಶ್ಚಾತ್ತಾಪ ಪಡುವ ವಿವೇಕದೊಂದಿಗಿನ ಪ್ರೇಮದ ಬದುಕನ್ನು ಇಚ್ಚಿಸುವ ಅಣ್ಣ ವಾಲಿಯನ್ನಾಗಿ ಚಿತ್ರಿಸಿದ್ದಾಾರೆ. ಪ್ರಶಾಂತ ಉದ್ಯಾವರ ಹಾಗೂ ಭವನ ಅವರ ಪ್ರಸಾದನ ಮನ ಸೆಳೆಯುತ್ತದೆ. ಉಡುಪು ವಸ್ತ್ರಾಂಲಕಾರಗಳು ಗಮನೀಯವಾಗಿ ನಾಟಕದ ಘನತೆಯನ್ನು ಹೆಚ್ಚಿಸಿದೆ. ಇದೊಂದು ಸಂಗೀತದ ಪ್ರಧಾನ ನಾಟಕವಾಗಿದ್ದು ಗಣೇಶ್ ಅವರು ನಿರ್ದೇಶನ ಜೊತೆಗೆ ಮೇಳವನ್ನೂ ನಿಭಾಯಿಸುತ್ತಾ ತಾವೇ ಹಾಡಿ ನಾಟಕದ ಕಟ್ಟುವಿಕೆಯಲ್ಲಿ ಯಶ ಕಂಡಿದ್ದಾರೆ.

ಪಾತ್ರ ಪರಿಚಯ
ಜಮೀರ್ ಪಠಾಣ
ಪಾತ್ರ: ರಾಮ
ಚಿಕ್ಕವರಿರುವಾಗ ಈ ತಂಡದ ನಾಟಕದ ರಿಹರ್ಸಲ್ ನಡೆಯುವಾಗ ಕಿಂಡಿಯಲ್ಲಿ ಬಗ್ಗಿ ನೋಡುತ್ತಿದ್ದೆವು. ಅಲ್ಲಿನ ಅವರ ರಿಯಾಕ್ಷನ್ ನೋಡಿ ಖುಷಿಯಾಗ್ತಿತ್ತು. ಆದರೆ ಅಲ್ಲಿ ನಟಿಸುತ್ತಿದ್ದವರು ನಮ್ಮನ್ನು ಹೊಡೆದೋಡಿಸುತ್ತಿದ್ದರು. ಹಾಗಾಗಿ ತಾನೂ ನಾಟಕದಲ್ಲಿ ನಟಿಸಿದರೆ ಹೀಗೆ ಯಾರೂ ಹೊಡೆಯಲ್ವಲ್ಲಾ ಎಂದು ನಿರ್ಧರಿಸಿ ನಾನು ನಟನಾದೆ ಎಂದು ಹೇಳುವ ಜಮೀರ್ ತನ್ನ ಅಣ್ಣನಿಂದ ಸ್ಫೂರ್ತಿ ಪಡೆದು ರಂಗಭೂಮಿಗೆ ಬಂದವರು. ಇವರ ಅಣ್ಣ ಶಬ್ಬೀರ್ ಈ ಹಿಂದೆ ಇದೇ ತಂಡದ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.
ಜಮೀರ್ ಇಲ್ಲಿಯವರೆಗೂ ಒಂಬತ್ತು ನಾಟಕಗಳಲ್ಲಿ ನಟಿಸಿದ್ದಾರೆ. ಬಿಕಾಂ ಮಾಡಿದ್ದರೂ ಜೀವನೋಪಾಯಕ್ಕೆ ಶೇಷಗಿರಿಯಿಂದ ತಿಳವಳ್ಳಿಯ ನಡುವೆ ಏಳು ಕಿಮೀ ದೂರಕ್ಕೆ ದಿನವೂ ಆಟೋ ಬಾಡಿಗೆ ಓಡಿಸ್ತಾರೆ. ಸಂಜೆ ಸಮಯದಲ್ಲಿ ಥಿಯೇಟರ್ ಚಟುವಟಿಕೆ. 2010ರಿಂದ ನಾಟಕದಲ್ಲಿ ನಟಿಸುತ್ತಿದ್ದಾರೆ. ‘ಮಹಾಭಾರತದ ಒಂದು ಸಂಜೆ’ ನಾಟಕದಲ್ಲಿ ಕೃಷ್ಣನಾಗಿ ನಟಿಸಿದ್ದರು. ನೀನಾಸಂ, ಎನ್‌ಎಸ್‌ಡಿಗಳಿಗೆ ಹೋಗಲು ಆಸೆಯಿದ್ದರೂ ಮನೆಯಲ್ಲಿ ಜೀವನಕ್ಕೆ ತೊಂದರೆಯಾಗುತ್ತೆಂದು ಹೋಗಿಲ್ಲ. ಅಪ್ಪ-ಅಮ್ಮನ ಹೊಣೆ ಹಾಗೂ ಮನೆಯ ನಿರ್ವಹಣೆಗಾಗಿ ಊರಲ್ಲೇ ಉಳಿದಿದ್ದಾರೆ. ತರಬೇತಿಗೆ ಹೋದರೆ ಅದಕ್ಕೆ ತಗುಲುವ ಖರ್ಚು ಹಾಗೂ ಆ ದಿನಗಳಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಹಾಗಾಗಿ ಯಾವುದೇ ತರಬೇತಿಗೂ ಹೋಗದೆ ಡ್ರೈವಿಂಗ್ ಕೆಲಸದ ಹೊರತಾದ ಎಲ್ಲಾ ಸಮಯವನ್ನು ಈ ತಂಡಕ್ಕಾಗಿ ಮೀಸಲಿಟ್ಟು ನಟಿಸುತ್ತಿದ್ದಾರೆ.

ದೇವಿಪ್ರಸಾದ ಎರತೋಡಿ
ಪಾತ್ರ: ವಾಲಿ

ಮೆಕ್ಯಾನಿಕಲ್ ಡಿಪ್ಲೊಮಾ ಮುಗಿಸಿದ್ದಾರೆ. ಆದರೆ ಎಲ್ಲಿಗೂ ಕೆಲಸಕ್ಕೆ ಹೋಗದೇ ಊರಲ್ಲೇ ಉಳಿದಿದ್ದಾರೆ. ಇವರ ತಂದೆ ನಿವೃತ್ತ ಪಿಡಬ್ಲ್ಯೂಡಿ ಉದ್ಯೋಗಿ. ಅವರ ನೆರವಲ್ಲೇ ಜೀವನ ನಡೆಸುತ್ತಾ ರಂಗಭೂಮಿಯಲ್ಲಿ ತೊಡಗಿದ್ದಾರೆ. ಈ ವರ್ಷ ಪೂರ್ತಿ ರಂಗಭೂಮಿಯಲ್ಲೇ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದಾರೆ. ಅಲ್ಲದೇ ತಂಡದ ಎಲ್ಲಾ ಕೆಲಸದಲ್ಲೂ ತೊಡಗಿರುತ್ತಾಾರೆ.

ಸಿದ್ದು ಕೊಂಡೋಜಿ
ಪಾತ್ರ: ಸುಗ್ರೀವ
ಇವರಿಗೆ ವ್ಯವಸಾಯವೇ ಮೂಲಾಧಾರ. ಇತ್ತೀಚಿಗಷ್ಟೇ ದೈಹಿಕ ಶಿಕ್ಷಕರ ತರಬೇತಿ, ಬಿಪಿಎಡ್ ಮುಗಿಸಿದ್ದಾರೆ. ಬೆಳಗಿನ ಹೊತ್ತು ಕಾಲೇಜು ಓದು. ಮಧ್ಯಾಹ್ನ ವ್ಯವಸಾಯದ ಕೆಲಸ ಮಾಡಿ ಸಂಜೆಗೆ ಈ ತಂಡದ ಕಾರ್ಯಕ್ರಮಗಳಲ್ಲಿ ತೊಡಗುತ್ತಾರೆ.

ಉದಯ್ ಬಿ
ಪಾತ್ರ: ಬಾಲ ಸುಗ್ರೀವ
ಈ ಹುಡುಗನು ಈ ಸರ್ತಿ ಐದನೇ ಕ್ಲಾಸ್ನಲ್ಲಿ ಓದ್ತಾ ಇದ್ದಾನೆ. ಈ ತಂಡ ಪ್ರತಿಭಾನ್ವಿತ ಬಾಲಕ. ಈ ನಾಟಕದಲ್ಲಿ ಬರುವ ಈ ಹುಡುಗನ ಮಾತು, ಅಭಿನಯ, ಹಾವಭಾವಗಳು ಎಂತಹವರ ಮನಸ್ಸನ್ನೂ ಆರ್ದ್ರಗೊಳಿಸದೇ ಇರದು.

ಸಣ್ಣಪ್ಪ ಗೊರವರ
ಪಾತ್ರ: ಲಕ್ಷ್ಮಣ
ಬಿಎ ಓದಿದ್ದಾರೆ. ಪೊಲೀಸ್ ಕೆಲಸಕ್ಕೆ ಪ್ರಯತ್ನಿಸಿದ್ದರೂ ಕೆಲಸ ದೊರೆತಿಲ್ಲ. ಇವರ ಕುಟುಂಬದಲ್ಲಿ ಸುಮಾರು ಮೂವತ್ತು-ನಲವತ್ತು ಕುರಿಗಳಿವೆ. ಹಾಗಾಗಿ ಊರಲ್ಲೇ ಇದ್ದು ಕುರಿ ಕಾಯುವ ಕೆಲಸ ಮಾಡ್ತಿದ್ದಾರೆ. ಕುರಿ ಸಾಕಣೆಯಲ್ಲದೇ ಕೃಷಿಯನ್ನೂ ಅವಲಂಬಿಸಿದ್ದಾರೆ. ಸಂಜೆಯ ಹೊತ್ತು ಈ ರಂಗ ತಂಡದ ಕೆಲಸಗಳಲ್ಲಿ ತೊಡಗುತ್ತಾರೆ.

ಜಗದೀಶ ಕಟ್ಟಿಮನಿ
ಪಾತ್ರ: ಆಂಜನೇಯ

ಊರು ಹಾನಗಲ್. ಓದಿದ್ದು ಬಿಎ. ಒಮ್ಮೆ ಎನ್‌ಎಸ್‌ಎಸ್ ಕ್ಯಾಂಪ್‌ಗಾಗಿ ಶೇಷಗಿರಿಗೆ ಬಂದಿದ್ದರು. ಆಗ ಅಲ್ಲಿನ ನಾಟಕ ತಂಡದ ಚಟುವಟಿಕೆಯನ್ನು ನೋಡಿ ಆ ಊರಲ್ಲೇ ಇದ್ದು ಬಿಟ್ಟಿದ್ದಾರೆ. ಜೀವನ ನಿರ್ವಹಣೆಗೆ ಮನೆಗಳಿಗೆ ವಾಲ್ ಪೇಂಟಿಂಗ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಬೆಳಗಿನ ಹೊತ್ತು ಊರೂರಿಗೆ ಹೋಗಿ ಮನೆಗಳಿಗೆ ಪೇಂಟ್ ಮಾಡುತ್ತಾ ತಮ್ಮ ಖುಷಿಗಾಗಿ ಈ ತಂಡದ ನಾಟಕಗಳಲ್ಲಿ ನಟಿಸುತ್ತಿದ್ದಾರೆ.

ಸಿದ್ದಪ್ಪ ರೊಟ್ಟಿ
ಪಾತ್ರ: ರಾಕ್ಷಸ

ಇವರು ಕೃಷಿಯ ಜತೆಗೆ ಚಿಕ್ಕದೊಂದು ಹೊಟೇಲ್ ಅನ್ನು ಮಾಡಿಕೊಂಡಿದ್ದಾರೆ. ಅದರೊಂದಿಗೆ ಈ ತಂಡದ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾ ನಟಿಸುತ್ತಾರೆ.

ಹರೀಶ ಗುರಪ್ಪನವರ
ಪಾತ್ರ: ಜಾಂಬವ

ಹತ್ತನೇ ಕ್ಲಾಸ್ ಮುಗಿಸಿಕೊಂಡು ಕೃಷಿ ಕಾರ್ಯಗಳನ್ನು ಮಾಡುವ ಮೂಲಕ ಜೀವನವನ್ನು ಕಟ್ಟಿಕೊಂಡಿದ್ದಾರೆ. ಈ ತಂಡದ ಅಧ್ಯಕ್ಷರಾದ ಪ್ರಭು ಗುರಪ್ಪನವರ ಅವರ ಅಣ್ಣನ ಮಗನಾಗಿದ್ದು ಚಿಕ್ಕಪ್ಪನವರಿಂದ ಸ್ಪೂರ್ತಿ ಪಡೆದು ನಟನೆಯಲ್ಲಿಯೇ ಹೆಚ್ಚು ಆಸಕ್ತರಾಗಿದ್ದಾರೆ.

ರಾಧಾ ರಾಣಿ
ಪಾತ್ರ: ತಾರಾ

ಇವರು ಬೆಳಗಾವಿಯವರಾಗಿದ್ದು ನೀನಾಸಂ ತರಬೇತಿ ಪಡೆದಿದ್ದು ಇದೀಗ ನೃತ್ಯ ತರಬೇತಿಯನ್ನೂ ಪಡೆಯುತ್ತಿದ್ದಾರೆ. ನಾಲ್ಕೈದು ಪ್ರದರ್ಶನಗಳಿಂದ ಇವರು ಈ ಪಾತ್ರ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಧಾರವಾಡದ ನಾಟಕ ಕಲಾವಿದೆ ರಂಜಿತಾ ಜಾದವ್ ಈ ಪಾತ್ರ ಮಾಡುತ್ತಿದ್ದರು.

ಸ್ಥಳ: ಕೆಇಎ ಪ್ರಭಾತ್ ರಂಗ ಮಂದಿರ, ಬಸವೇಶ್ವರ ನಗರ, ಬೆಂಗಳೂರು.

ಫೆಬ್ರವರಿ ೨೭ರ ಮಧ್ಯಾಹ್ನ 3.30 ಕ್ಕೆ ಹಾಗೂ ಸಂಜೆ 7.30ಕ್ಕೆ ತಪ್ಪದೆ ನೋಡಿ ರಂಗತಂಡವನ್ನು ಅಭಿನಂದಿಸಿ ಪ್ರೋತ್ಸಾಹಿಸಿ…

ಸಾಹಿತ್ಯಮೈತ್ರಿ ತಂಡ

ಲೇಖನ ಕೃಪೆ : ಕನ್ನಡಪ್ರಭ

Related post

Leave a Reply

Your email address will not be published. Required fields are marked *