ವಾಸಂತಿ ನಲಿದಾಗ – ಚಲನಚಿತ್ರ ವಿಮರ್ಶೆ

ವಾಸಂತಿ ನಲಿದಾಗ

ನಿರ್ದೇಶನ: ರವೀಂದ್ರ ವೆಂಶಿ
ನಿರ್ಮಾಣ: ಜೇನುಗೂಡು ಫಿಲಂಸ್
ತಾರಾಗಣ: ರೋಹಿತ್‌ ಶ್ರೀಧರ್‌, ಭಾವನಾ ಶ್ರೀನಿವಾಸ್‌, ಸಾಯಿ ಕುಮಾರ್‌,
ಸುಧಾರಾಣಿ, ಜೀವಿತಾ ವಸಿಷ್ಠ, ಸಾಧುಕೋಕಿಲ ಇತರರು

‘ವಾಸಂತಿ ನಲಿದಾಗ” ಇದು ಹೊಸದಾಗಿ ಬಿಡುಗಡೆಯಾಗಿರುವ ಒಂದು ಸರಳ ಪ್ರೇಮಕಥೆಯ ಚಿತ್ರ. ಜೇನುಗೂಡು ಫಿಲಂಸ್ ನಿರ್ಮಾಣದಲ್ಲಿ ನಿರ್ದೇಶಕ ರವೀಂದ್ರ ವೆಂಶಿ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಪ್ರೇಮಕಥೆಯಾದರು ಸಹ ಮನೆಯವರೆಲ್ಲ ಕುಳಿತು ಮುಜುಗರವಿಲ್ಲದೆ ನೋಡುವಂತಹ ಚಿತ್ರವನ್ನು ಕೊಟ್ಟಿದ್ದಾರೆ.

ಕಷ್ಟಪಟ್ಟು ಉದ್ಯಮದಲ್ಲಿ ಬೆಳೆದ ತಂದೆಗೆ (ಸಾಯಿಕುಮಾರ್) ಮಗ ( ರೋಹಿತ್‌ ಶ್ರೀಧರ್‌) ನದೇ ಚಿಂತೆ ಕಳವಳ. ಕಾಲೇಜು ಓದುತ್ತಿರುವ ಮಗ ಕೆಟ್ಟವನಲ್ಲದಿದ್ದರೂ ಜವಾಬ್ಧಾರಿ ಅರಿಯದವನು. ತಂದೆ ಮಗನ ಸಂಬಂಧ ಸ್ನೇಹಿತರ ತರ ಒಟ್ಟಿಗೆ ಕೂತು ಕುಡಿಯುವಷ್ಟು. ಮಗ ಕಾಲೇಜ್ ಟಾಪರ್ ಆದ ಮೊದಲ ನಾಯಕಿಯ (ಜೀವಿತಾ ವಸಿಷ್ಠ) ಪ್ರೇಮದ ಆಕರ್ಷಣೆಯಲ್ಲಿ ಬಿದ್ದು ಅವಳಿಂದ ತಿರಸ್ಕೃತನಾದಾಗಲೂ ಅತಿಯಾಗಿ ಕಳವಳಪಡುವುದು ತಂದೆಯೇ. ಮಗ ಕಳೆದುಹೋದ ಪ್ರೀತಿಯ ಬಗ್ಗೆ ತಲೆಕೆಡಿಸಿಕೊಳ್ಳದೆ ಹೋದಾಗ ಗಾಬರಿಗೊಂಡು ಮಗನಿಗೆ ನಮ್ಮೆಲ್ಲರಿಂದ ಒಂದು ವರ್ಷ ದೂರ ಇದ್ದು ಓದಿನ ಬಗ್ಗೆ ಕಾಳಜಿವಹಿಸು ಎಂದು ದೂರದೂರಿನ ಕಾಲೇಜಿಗೆ ಖರ್ಚಿಗೂ ಕಾಸು ಕೊಡದಂತೆ ಕಳುಹಿಸುವಷ್ಟರಲ್ಲಿ ಮೊದಲರ್ಧದ ವಿರಾಮ. ಸೆಕೆಂಡ್ ಹಾಫ್ ನಲ್ಲಿ ನಾಯಕನ ಗೆಟಪ್ ಹಾಗು ನಡತೆಯಲ್ಲಿ ಸಂಪೂರ್ಣ ಬದಲಾವಣೆ, ಎರಡನೇ ಮುಗ್ಧ ನಾಯಕಿ (ಭಾವನಾ ಶ್ರೀನಿವಾಸ್‌)ಳ
ಜೊತೆ ಸ್ನೇಹ,. ನಾಯಕ ಕೊನೆಗೂ ಜವಾಬ್ಧಾರಿ ಅರಿತನೆ? ಪ್ರೀತಿ ಸಂಬಂಧಗಳ ಪ್ರಾಮುಖ್ಯತೆ ಅರ್ಥವಾಯಿತೇ ಪೂರ್ತಿ ಸಿನಿಮಾ ನೋಡಿ.

ರವೀಂದ್ರ ವೆಂಶಿ ತಮಗೆ ಸಿಕ್ಕಿದ ಅವಕಾಶವನ್ನು ತನ್ನ ಒಳ್ಳೆಯ ನಿರ್ದೇಶನದಿಂದ ಸಾಭೀತುಪಡಿಸಿದರೆ, ಹೊಸ ಪರಿಚಯದ ನಾಯಕ ರೋಹಿತ್ ತಮ್ಮ ಮೊದಲ ಚಿತ್ರದಲ್ಲೇ ಚೆನ್ನಾಗಿ ಅಭಿನಯಿಸಿ ಚಿತ್ರರಂಗಕ್ಕೆ ತಾನು ಒಬ್ಬ ಭರವಸೆಯ ಮುಂದಿನ ನಟ ಎಂದು ತಮ್ಮ ಅಭಿನಯದಿಂದ ನಿರೂಪಿಸಿದ್ದಾರೆ. ಯಾವುದೇ ಅಬ್ಬರದ ಎಂಟ್ರಿ ಸೀನ್ ಇಲ್ಲದಿದ್ದರೂ ಸರಳವಾಗಿ ತೆರೆಯಮೇಲೆ ಕಾಣಿಸಿಕೊಳ್ಳುವ ರೋಹಿತ್ ಮೊದಲ ನೋಟದಲ್ಲಿ ಚಿಕ್ಕ ಹುಡುಗನ ತರ ಕಾಣಿಸಿದರೂ ಸಂಭಾಷಣೆ ಒಪ್ಪಿಸುವ ವೈಖರಿ, ಹಾವ ಭಾವ ಹಾಗು ಸಾಹಸ ದೃಶ್ಯಗಳು ಮತ್ತು ಭಾವನಾತ್ಮಕ ದೃಶ್ಯಗಳಲ್ಲಿ ಉತ್ತಮವಾಗಿ ಅಭಿನಯಸಿ ಪ್ರೇಕ್ಷಕರ ಮನಗೆದಿದ್ದಾರೆ. ಜೀವಿತಾ ವಸಿಷ್ಠ (ಮೊದಲನೇ ನಾಯಕಿ) ತಮ್ಮ ಕಣ್ಣೋಟಕಷ್ಟೇ ಸೀಮಿತ ಆದರೆ ದ್ವಿತೀಯಾರ್ಧದಲ್ಲಿ ಬರುವ ಭಾವನಾ ಶ್ರೀನಿವಾಸ್‌ (ಎರಡನೇ ನಾಯಕಿ) ಅಭಿನಯ ಮುಗ್ದತೆಯಿಂದ ಕೂಡಿದ್ದು ಪ್ರೇಕ್ಷಕರನ್ನು ಸೆಳೆಯುತ್ತಾರೆ. ಸಾಯಿಕುಮಾರ್ ಕಾಳಜಿಯಿರುವ ತಂದೆಯಾಗಿ ತಮ್ಮ ಭಾವಪೂರ್ಣ ಅಭಿನಯ ನೀಡಿದರೆ ಸುಧಾರಾಣಿ ತಾಯಿಯಾಗಿ ಚೆನ್ನಾಗಿ ಅಭಿನಯಿಸಿದ್ದಾರೆ. ಇಡೀ ಚಿತ್ರದ ತುಂಬಾ ಪ್ರೇಕ್ಷಕರಿಗೆ ಎಲ್ಲೂ ಬೋರಾಗದಂತೆ ಸಾಧು ಕೋಕಿಲ ಹಾಗು ಇನ್ನಿತರ ಹಾಸ್ಯ ಕಲಾವಿದರು ನೋಡಿಕೊಂಡಿದ್ದಾರೆ.

ಮೊದಲಾರ್ಧದ ಸಿನಿಮಾ ನಗರದ ವೈಭವವನ್ನು ತೋರಿಸಿದರೆ ದ್ವಿತೀಯಾರ್ಧದ ತುಂಬಾ ಗ್ರಾಮೀಣ ಹಿನ್ನಲೆಯಲ್ಲಿ ಪರಿಸರದ ಸುಂದರ ಚಿತ್ರಣವನ್ನು ಛಾಯಾಗ್ರಾಹಕ ಪ್ರಮೋದ್ ಭರಾಟಿ ಸೆರೆಹಿಡಿದಿದ್ದಾರೆ. ಹೊಸ ಪ್ರತಿಭೆ ಶ್ರೀ ಗುರು ಸಂಗೀತ ನಿರ್ದೇಶನದಲ್ಲಿ ಯೋಗರಾಜ್ ಭಟ್, ಡಾ|| ವಿ. ನಾಗೇಂದ್ರಪ್ರಸಾದ್ ರವರ ಸಾಹಿತ್ಯದ ಎಲ್ಲಾ ಹಾಡುಗಳು ಚೆನ್ನಾಗಿವೆ. ಚಿತ್ರಕಥೆಯಲ್ಲಿ ಅಷ್ಟೇನು ಹೊಸತನವಿಲ್ಲದಿದ್ದರೂ ರವೀಂದ್ರ ವೆಂಶಿ ರವರ ಕಥೆ ವಿಸ್ತರಣೆ ಹಾಗು ನಿರೂಪಣೆ ಉತ್ತಮವಾಗಿದೆ. ಒಟ್ಟಿನಲ್ಲಿ ಮನೆ ಮಂದಿಯೆಲ್ಲ ಮುಜುಗರವಿಲ್ಲದೆ ಒಟ್ಟಿಗೆ ಕೂತು ನೋಡುವಂತಹ ಸಿನಿಮಾ “ವಾಸಂತಿ ನಲಿದಾಗ”.

ಕನ್ನಡ ಚಿತ್ರಗಳನ್ನು ಓ ಟಿ ಟಿ ಯಲ್ಲಿ ಬರುವವರೆಗೂ ಕಾಯದೆ ಚಿತ್ರಮಂದಿರದಲ್ಲಿ ನೋಡಿ ಟಾಕೀಸ್ ಮಾಲೀಕರನ್ನು ಉಳಿಸಿ ಹಾಗು ಕನ್ನಡ ಸಿನೆಮಾಗಳನ್ನು ಬೆಂಬಲಿಸಿ.

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *