ವಿಜಯಧಾರೆ

ಒಂದು ಹೂ ಕುಂಡದ ಕಿರು ಕಥೆ

ಅದು ಒಡೆದ ಹೂಕುಂಡದ ಒಂದು ಭಾಗ. ಬೆಂಗಳೂರಿನ ಸೈನ್ಸ್ ಮ್ಯೂಸಿಯಂ ಒಂದರಲ್ಲಿ ಪ್ರದರ್ಶನಕ್ಕೆಂದು ಇಟ್ಟಿದ್ದರು. ಮುನ್ನೂರು ವರ್ಷಗಳ ಹಿಂದೆ ಪಡಾಯಿ ಸಾಮ್ರಾಜ್ಯದ ರಾಣಿ ರುಕುಮಾಯಿ ಬಳಿ ಈ ಹೂಕುಂಡ ಇತ್ತಂತೆ. ತನ್ನ ರಾಜ್ಯವೆಲ್ಲಾ ಶತ್ರುಗಳಿಂದ ಧ್ವಂಸವಾದಾಗ ಈ ಕುಂಡವೂ ನುಚ್ಚುನೂರಾಯಿತಂತೆ. ಅದಾದ ಒಂದಷ್ಟು ವರ್ಷಗಳಲ್ಲಿ ಆ ಜಾಗವು ಒಂದು ಪ್ರೇಕ್ಷಣೀಯ ಸ್ಥಳವಾಯಿತಂತೆ. ಆ ಸ್ಥಳಕ್ಕೆ ಅಲೆಮಾರಿಯೊಬ್ಬ ಭೇಟಿ ನೀಡಿ, ಒಡೆದ ಹೂಕುಂಡವನ್ನು ಗಮನಿಸಿ ವಿಶೇಷವೆನಿಸಿದಾಗ ಅದನ್ನು ತಂದು ಮ್ಯೂಸಿಯಂಗೆ ಒಪ್ಪಿಸಿದಂತೆ.

“ಹೂಕುಂಡಗಳಲ್ಲೇ ವಿಶೇಷವಾದದ್ದು ವಿಜಯಧಾರೆ” ಎಂದು ಪಡಾಯಿಯ ಮುದುಕ ಮುದುಕಿಯರು ಹೇಳುತ್ತಿದ್ದ ಕಥೆಗಳಲ್ಲಿ ವಿಜಯಧಾರೆಯೂ ಉಳಿದುಬಂದಿದೆ.

ಮುನ್ನೂರು ವರ್ಷಗಳ ಹಿಂದೆ ಪಡಾಯಿಯ ರಾಜ ಮೊಹಬ್ಬತ್ ನ ರಾಜ್ಯದ ಮೇಲೆ ಶತ್ರುಗಳು ದಾಳಿ ಮಾಡಿ, ನಾಲ್ಕೈದು ಬಾರಿ ವಿಜಯಗಳಿಸಿ ರಾಜನನ್ನು ಅವಮಾನಿಸಿದರು. ಇದರಿಂದ ಕುಪಿತಗೊಂಡ ಮೊಹಬ್ಬತ್ ರಾಜ ಸುಧೀರ್ಘ ತಪಸ್ಸು ನಡೆಸಿದ. ತಪಸ್ಸನ್ನು ಮೆಚ್ಚಿ, ಒಬ್ಬಳು ಗಂಧರ್ವ ದೇವತೆ ಪ್ರತ್ಯಕ್ಷಳಾಗಿ ರಾಜನಿಗೆ ವಿಶೇಷವಾದ ಹೂಕುಂಡವನ್ನು ಕೊಟ್ಟಳು. ಅದರ ಹೆಸರು ವಿಜಯಧಾರೆ. ‘ಈ ಹೂಕುಂಡದಲ್ಲಿನ ಬಳ್ಳಿ ಹೂಬಿಡುವವರೆಗೂ ಕಾದು, ಆ ಹೂವುಗಳ ಪರಿಮಳವನ್ನು ನೀನೊಬ್ಬನೇ ಹೀರಬೇಕು. ಆಗ ನಿನಗೆ ಕೈತಪ್ಪಿಹೋದ ನಿನ್ನ ರಾಜ್ಯದ ಸಂಪತ್ತನ್ನು ಗೆಲ್ಲುವ ಶಕ್ತಿ ಬರುತ್ತದೆ’ ಎಂದು ಹೇಳಿ ಮಾಯವಾದಳು. ಅದರಂತೆಯೇ ಮೊಹಬ್ಬತ್ ಪಾಲಿಸಿದ. ಹಾಗೆಯೇ ಒಂದೇ ವರ್ಷದಲ್ಲಿ ಶತ್ರು ರಾಜ್ಯಗಳ ಮೇಲೆ ಯುದ್ಧ ಮಾಡಿ, ತನ್ನ ಸಂಪತ್ತನ್ನು ಹಿಂಪಡೆದ. ಇದರಿಂದ ಆಶ್ಚರ್ಯಗೊಂಡ ಶತ್ರುಗಳು ಪಕ್ಕದ ದೇಶದಿಂದ ಒಬ್ಬಳು ರೂಪದರ್ಶಿಯನ್ನು ಕರೆಸಿ, ಸೇವಕಿಯಂತೆ ಗೂಢಾಚಾರಿಣಿಯಾಗಿ ಮೊಹಬ್ಬತ್ ನ ರಾಜ್ಯಕ್ಕೆ ಕಳುಹಿಸಿದರು. ಸೇವಕಿಯ ಮೈಮಾಟವನ್ನು ಕಂಡು ಬೆರಗಾದ ಮೊಹಬ್ಬತ್ ಆಕೆಯಿಂದ ಆಕರ್ಷಿತನಾಗಿ ಅವಳನ್ನು ಆನಂದಿಸಲು ಶುರುಮಾಡಿದ. ಒಂದು ದಿನ ಆಲಂಘನೆಯಲ್ಲಿದ್ದಾಗ, ವಿಜಯಧಾರೆಯ ರಹಸ್ಯವನ್ನು ರುಕುಮಾಯಿಗೆ ಹೇಳಿಬಿಟ್ಟ. ಅಂದಿನಿಂದ ಸೇವಕಿ ರುಕುಮಾಯಿ ವಿಜಯಧಾರೆ ಹೂವಿನ ಸುಗಂಧವನ್ನು ತಾನೇ ಹೀರಲು ಪ್ರಾರಂಭಿಸಿದಳು. ಅದರಿಂದ ಮೊಹಬ್ಬತ್ ನ ಶಕ್ತಿ ಕುಂದುತ್ತಾಹೋಯಿತು. ಇದನ್ನು ತಿಳಿದ ಶತ್ರುಗಳು ಮತ್ತೆ ಮೊಹಬ್ಬತ್ ರಾಜ್ಯದ ಮೇಲೆ ಯುದ್ಧ ಮಾಡಿ ಮೊಹಬ್ಬತ್ ನನ್ನು ಸಾಯಿಸಿಬಿಟ್ಟರು. ರುಕುಮಾಯಿ ಮೊಹಬ್ಬತ್ ರಾಜ್ಯದ ರಾಣಿಯಾದಳು. ನಂತರ ವಿಜಯಧಾರೆಯ ಶಕ್ತಿಯಿಂದ ರುಕುಮಾಯಿ ತನ್ನನ್ನು ಕಳಿಸಿದ್ದ ಪಕ್ಕದ ರಾಜ್ಯಗಳ ಮೇಲೆ ಯುದ್ಧ ಮಾಡಿ ಎಲ್ಲಾ ಸಂಪತ್ತನ್ನು ವಶಪಡಿಸಿಕೊಳ್ಳಲು ಪಿತೂರಿ ನಡೆಸಿದ್ದಳು. ಈ ವಿಷಯ ತಿಳಿದ ಅಕ್ಕಪಕ್ಕದವರು ರುಕುಮಾಯಿಯ ಮೇಲೆ ದಾಳಿ ಮಾಡಿ ಮೊದಲು ಹೂಕುಂಡವನ್ನು ನುಚ್ಚುನೂರು ಮಾಡಿದರು. ನಂತರ ಯುದ್ಧದ್ದಲ್ಲಿ ಎಲ್ಲರೂ ಸತ್ತರು. ಸುಮಾರು ವರ್ಷಗಳ ತರುವಾಯ ಆ ಹಾಳಾದ ಸ್ಥಳ ಪ್ರೇಕ್ಷಣೀಯ ಸ್ಥಳವಾಗಿ ಬದಲಾಯಿತು. ಅಲ್ಲಿ ಸಿಕ್ಕಿದ ವಿಜಯಧಾರೆ ಹೂಕುಂಡದ ಚೂರು ಇಂದಿಗೂ ಸೂರ್ಯ, ಚಂದ್ರ, ನಕ್ಷತ್ರಗಳನ್ನೂ ಮೀರಿಸುವಂತೆ ಅಗಾಧವಾಗಿ ಹೊಳೆಯುತ್ತಿದೆ.

ಅನಂತ ಕುಣಿಗಲ್

Related post