ವಿಶಿಷ್ಟ ಪ್ರಣಯದ ಹಕ್ಕಿ ಈ ಕುಂಜಪಕ್ಷಿ

ವಿಶಿಷ್ಟ ಪ್ರಣಯದ ಹಕ್ಕಿ ಈ ಕುಂಜಪಕ್ಷಿ

ಹದಿಹರೆಯದ ಹುಡುಗರು ಹುಡುಗಿಯರನ್ನು ಆಕರ್ಷಿಸಿ ತನ್ನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಗೆ ಬಗೆಯ ಕಸರತ್ತುಗಳನ್ನು ಮಾಡುವುದು ಒಂದೆರಡಲ್ಲ! ಅದು ಪ್ರಕೃತಿ ಸಹಜವಾದ ನಿಯಮವು ಹೌದು. ಅದೇ ರೀತಿ ಪಕ್ಷಿಪ್ರಪಂಚದಲ್ಲೂ ಕೂಡ ಗಂಡು ಹಕ್ಕಿ ಹೆಣ್ಣು ಹಕ್ಕಿಯನ್ನು ಆಕರ್ಷಿಸಲು ನಾನಾ ರೀತಿ ಕೂಗುವುದು, ಗಾಳಿಯಲ್ಲಿ ಮೇಲಕ್ಕೆ ಕೆಳಕ್ಕೆ ಹಾರುತ್ತ ಶಿಳ್ಳೆ ಹೊಡೆಯುವುದು, ನರ್ತಿಸುವುದು, ಇನ್ನೂ ಅನೇಕ ವಿಧದಲ್ಲಿ ಪ್ರಣಯಕ್ಕೆ ಸೆಳೆಯಲು ಪ್ರಯತ್ನಿಸಿ ಸಂತಾನೋತ್ಪತ್ತಿಯನ್ನು ಮಾಡಿಕೊಳ್ಳುವುದು ಪ್ರಕೃತಿ ಆಯೋಜಿಸಿರುವ ನಿಯಮ ಎನ್ನಬಹುದು. ಇದರಲ್ಲಿ ಕೊಂಚ ವಿಭಿನ್ನವಾಗಿ ತನ್ನ ಸಂಗಾತಿಯನ್ನು ಪ್ರಣಯಕ್ಕೆ ಸೆಳೆಯಲು ಆಸ್ಟ್ರೇಲಿಯ ಖಂಡದ “ಬೋವರ್” ಎಂಬ ಪಕ್ಷಿಜಾತಿ ಅಕ್ಷರಶಃ ರಂಗಕರ್ಮಿಗಳೇ ಆಗುತ್ತವೆ ಎಂಬುದು ನಿಜಕ್ಕೂ  ಸೋಜಿಗದ ಸಂಗತಿ.

“ಪಿಟಿಲೋನೋರಿಂಚಿಡೆ” (Ptilonorhynchidae) ಎಂಬ ಪಕ್ಷಿ ಕುಟುಂಬಕ್ಕೆ ಸೇರುವ ಬೋವರ್ ಪಕ್ಷಿಗಳನ್ನು ಕನ್ನಡದಲ್ಲಿ ಕುಂಜಪಕ್ಷಿಗಳು ಎಂದು ಕರೆಯುತ್ತಾರೆ. ತಮ್ಮ ಪ್ರಣಯಕೇಳಿಗಾಗಿ ಲತಾ ಕುಂಜಗಳನ್ನೇ ಇವು ನಿರ್ಮಿಸುವುದರಿಂದ ಈ ಹೆಸರು ಬಂದಿರಬಹುದು. ಆಸ್ಟ್ರೇಲಿಯ, ನ್ಯೂಗಿನಿಯಾಗಳ ದ್ವೀಪಗಳಲ್ಲಿ ಕಾಣಸಿಗುವ ಈ ಕುಂಜಪಕ್ಷಿಗಳನ್ನು ಸುಮಾರು ಇಪ್ಪತ್ತು ಉಪಜಾತಿಗಳಲ್ಲಿ ತಜ್ಞರು ಗುರುತಿಸಿದ್ದಾರೆ. ಈ ಇಪ್ಪತ್ತು ಉಪಜಾತಿಗಳಲ್ಲಿ ಎಲ್ಲಾ ಹಕ್ಕಿಗಳು ಒಂದಕ್ಕಿಂತ ಒಂದು ವಿಭಿನ್ನವಾದ ಅಂಗವಿನ್ಯಾಸವನ್ನು ಹೊಂದಿವೆ. ಈ ಹಕ್ಕಿಗಳು ವಿಶೇಷವಾಗಿ ತನ್ನ ಸಂಗಾತಿಯನ್ನು ಆಕರ್ಷಿಸಲು ಕಟ್ಟುವ ಕಲಾಸೌಧಗಳಿಗೆ ಹೆಸರುವಾಸಿಯಾಗಿವೆ.

ಆಗಸ್ಟ್ ತಿಂಗಳಿನಿಂದ ಜನವರಿಯವರೆಗೂ ತನ್ನ ಸಂಗಾತಿಗಳನ್ನು ಕೂಡಿ ಸಂತಾನೋತ್ಪತ್ತಿ ಮಾಡುವ ಕುಂಜಪಕ್ಷಿಗಳ ಕಾರ್ಯ ವಿಧಾನ ಬಹಳ ವಿಶಿಷ್ಟ. ಇದರ ಆರಂಭವನ್ನು ಗಂಡು ಹಕ್ಕಿಯು ದಟ್ಟ ಕಾಡಿನ ನೆಲದಲ್ಲಿ ಮರಗಳ ಒಣಗಿದ ರೆಂಬೆ ಕೊಂಬೆಗಳನ್ನು ತಂದು ಅದನ್ನು  3 ರಿಂದ 4 ಅಡಿಯ ವಿಸ್ತಾರದಲ್ಲಿ ಗುಡಿಸಿಲಿನ ಆಕಾರದಲ್ಲಿ ಕಟ್ಟಿ ಅದಕ್ಕೆ ಕಮಾನಿನ ರೀತಿಯಲ್ಲಿ ಸಣ್ಣ ಸಣ್ಣ ಹುಲ್ಲುಕಡ್ಡಿಗಳಿಂದ ಬಹು ವಿಶಿಷ್ಟವಾಗಿ ರಾಜಮಾರ್ಗವನ್ನೇ ನಿರ್ಮಿಸುತ್ತವೆ. ಆನಂತರ ಮುಂದಿನ ಕೆಲಸ ಗುಡಿಸಿಲನ ಮುಂದಿನ ಜಾಗವನ್ನು ನದಿಯ ತೀರದಲ್ಲಿ ಸಿಗುವ ಪುಟ್ಟ ಪುಟ್ಟ ಬಣ್ಣ ಬಣ್ಣದ ಕಲ್ಲುಗಳನ್ನು, ಬಗೆಬಗೆಯ ಹೂವುಗಳನ್ನು, ಆರ್ಚಿಡ್ ಸಸ್ಯದ ಎಲೆಗಳನ್ನು, ಬಸವನಹುಳುಗಳ ಚಿಪ್ಪು ಮುಂತಾದವುಗಳನ್ನು ತಂದು ಹರಡಿ ಹೊದಿಸಿ ಶೃಂಗರಿಸಿ ಹೆಣ್ಣು ಹಕ್ಕಿಗಾಗಿ ಕಾಯುತ್ತವೆ. ಹೆಣ್ಣು ಹಕ್ಕಿಗಳು ಅವನ್ನು ನೋಡಿದ ತಕ್ಷಣ ಒಪ್ಪಿಕೊಳ್ಳುವುದಿಲ್ಲ ಏಕೆಂದರೆ ಸಿಂಗಾರಗೊಂಡ ಪ್ರಣಯದ ಜಾಗಗಳನ್ನು ಅವು ಅಳೆದು ತೂಗಿ ವಿಭಿನ್ನವಾಗಿದ್ದರೆ ಮಾತ್ರ ಒಪ್ಪಿಗೆಯ ಸೂಚನೆಯಾಗಿ ತನ್ನ ಕಾಲನ್ನು ಕೆರೆದು ತನ್ನ ಪುಕ್ಕಗಳನ್ನು ಮೇಲೆತ್ತಿ ಗಂಡು ಹಕ್ಕಿಯ ಜೊತೆ ಸೇರುತ್ತವೆ.

ಹೆಣ್ಣು ಹಕ್ಕಿಗಳ ಮನಒಲಿಸಲು ಗಂಡು ಹಕ್ಕಿಗಳು ಇನ್ನಿಲ್ಲದಂತೆ ತಮ್ಮ-ತಮ್ಮಲ್ಲೇ ವಿಪರೀತ ಪೈಪೋಟಿ ನೆಡೆಸುತ್ತವೆ. ಎಷ್ಟೋ ಬಾರಿ ಕೆಲವು ಗಂಡು ಹಕ್ಕಿಗಳು ಬೇರೆ ಹಕ್ಕಿಗಳ ಜಾಗಕ್ಕೆ ಅವು ಇಲ್ಲದ ಸಮಯದಲ್ಲಿ ಹೋಗಿ ಅವುಗಳು ಸಿಂಗರಿಸಿದ ಜಾಗದಿಂದ ಆಕರ್ಷವಾದ ವಸ್ತುಗಳನ್ನು ಕದ್ದು ತಂದು ತಮ್ಮ ಗೂಡುಗಳನ್ನು ಶೃಂಗರಿಸುವ ಕುತಂತ್ರವನ್ನು ಸಹ ಪ್ರದರ್ಶಿಸುತ್ತವೆ ಎಂದರೆ ಹೆಣ್ಣು ಕುಂಜ ಹಕ್ಕಿಗಳ ಸಂಗಕ್ಕೆ ಇನ್ನೆಷ್ಟು ಮಹತ್ವ ಇರಬಹುದು!

ಸಿಂಗಾರಗೊಂಡ ಕಲಾಸೌಧಗಳು ಹೆಣ್ಣು ಹಕ್ಕಿಯನ್ನು ಪ್ರಣಯಕ್ಕೆ ಆಕರ್ಷಿಸಿ ಸೆಳೆಯಲು ಮಾತ್ರ, ಪ್ರಣಯದ ಅಂತಿಮ ಅವಧಿಯಲ್ಲಿ ಹೆಣ್ಣು ಹಕ್ಕಿಗಳು ತಾವಿಡುವ ಮೊಟ್ಟೆಗಳ ಭದ್ರತೆಗಾಗಿ ಹತ್ತಿರದ ಎತ್ತರದ ಮರಗಳಲ್ಲಿ ಸಾದಾರಣ ಗೂಡು ಕಟ್ಟುತ್ತವೆ. ಒಮ್ಮೆಗೆ 1 ರಿಂದ 3 ರವರೆಗೂ ಮೊಟ್ಟೆಗಳನ್ನು ಇಡುವ ಹೆಣ್ಣು ಹಕ್ಕಿಯು 17 ರಿಂದ 27 ದಿನದವರೆಗೂ ಕಾವು ಕೊಟ್ಟು ಮರಿಮಾಡುತ್ತವೆ. ಈ ಬೋವರ್ ಹಕ್ಕಿಗಳು ಅವುಗಳ ಉಪಜಾತಿಗಳ ಅನುಗುಣವಾಗಿ  6 ರಿಂದ 30 ವರ್ಷದವರೆಗೂ ಜೀವಿಸುತ್ತವೆ.

ಪಕ್ಷಿ ಪ್ರಪಂಚದಲ್ಲಿ ಕುಶಲ ಕರ್ಮಿಗಳೆಂದೇ ಹೆಸರಾದ ಕುಂಜಪಕ್ಷಿಗಳು ತನ್ನ ವಿಶಿಷ್ಟವಾದ ರಚನೆಯಿಂದಾಗಿ ಜಗತ್ತಿನ ಎಷ್ಟೋ ಸಂಶೋಧಕರ ಕಣ್ಣು ಸೆಳೆದಿವೆ. ತಜ್ಞರು ದಶಕಗಳ ಕಾಲ ಇದರ ಗುಡಿಸಿಲಿನ ರಚನೆಯೇ ಇದು ವಾಸಿಸುವ ಗೂಡೆಂದು ತಿಳಿದಿದ್ದರು, ಆನಂತರಗಳ ಸಂಶೋಧನೆಯಿಂದ ಅವುಗಳ ಕಲಾಸೌಧವು ಹೆಣ್ಣು ಹಕ್ಕಿಗಳ ಮನಒಲಿಸಿ ಪ್ರಣಯಕ್ಕೆ ಸೆಳೆಯುವ ಪ್ರದರ್ಶನ ಮಾತ್ರವೆಂದು ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೆ ಸಂಶೋಧನೆಯ ಭಾಗವಾಗಿ ನಿರ್ಮಿತವಾಗಿರುವ ಅವುಗಳ ಜಾಗವನ್ನು ಸಂಶೋಧನೆಯ ಭಾಗವಾಗಿ ಕೈಯಾರೆ ಕೊಂಚ ಮಟ್ಟಿಗೆ ಬದಲಿಸಿ ನೋಡಿದಾಗ ಹೆಣ್ಣು ಹಕ್ಕಿಗಳು ಅವುಗಳ ಹತ್ತಿರ ಸುಳಿಯದಿದ್ದು ನೋಡಿ ವಿಸ್ಮಯಪಟ್ಟಿದ್ದಾರೆ.

ಮನುಷ್ಯರು ಬಿಸಾಕುವ ತಂಪು ಪಾನಿಯಾದ ಮುಚ್ಚಳದಂತ ವಸ್ತುಗಳನ್ನು ಸಹ ಇವುಗಳು ಉಪಯೋಗಿಸಿ ತಮ್ಮ ಕಲಾಸೌಧಗಳಿಗೆ ಕೊಡುವ ಮೆರಗನ್ನು ಕಂಡು ನಿಜಕ್ಕೂ ಅಚ್ಚರಿಯಾಗುತ್ತದೆ.

ಚಂದ್ರಶೇಖರ್ ಕುಲಗಾಣ

Related post

Leave a Reply

Your email address will not be published. Required fields are marked *