ವಿಶ್ವದ ಅನಧಿಕೃತ ಅತ್ಯಂತ ಚಿಕ್ಕ ದೇಶ ಸೀಲ್ಯಾಂಡ್
ಜಗತ್ತಿನಲ್ಲಿ ಗಾತ್ರದಲ್ಲಿ, ಜನಸಂಖ್ಯೆಯಲ್ಲಿ ಮತ್ತು ಶ್ರೀಮಂತಿಕೆಯಲ್ಲಿ ಅನೇಕ ದೊಡ್ಡ ಮತ್ತು ಸಣ್ಣ ರಾಷ್ಟ್ರಗಳಿವೆ. ದೊಡ್ಡ ರಾಷ್ಟ್ರಗಳ ಪೈಕಿ ರಷ್ಯಾ, ಅಮೆರಿಕ, ಚೀನಾ, ಬ್ರೆಜಿಲ್, ಆಸ್ಟ್ರೇಲಿಯಾ, ಕೆನಡಾ ಮತ್ತು ಭಾರತಗಳು ಕ್ರಮವಾಗಿ ಪ್ರಥಮ ಏಳು ಸ್ಥಾನಗಳಲ್ಲಿವೆ. ಹಾಗೇ ಪ್ರಪಂಚದಲ್ಲಿ ಅನೇಕ ಸಣ್ಣ ದೇಶಗಳಿದ್ದು, ಅವುಗಳ ಜನಸಂಖ್ಯೆ ಒಂದು ಲಕ್ಷಕ್ಕಿಂತಲೂ ಕಡಿಮೆಯಿದೆ. ಆದರೆ ಇಲ್ಲೊಂದು ತೀರಾ ಸಣ್ಣ ದೇಶವೊಂದಿದ್ದು, ಅದರ ಹೆಸರು ಸೀಲ್ಯಾಂಡ್ ದೇಶ. ಈ ದೇಶದ ಒಟ್ಟು ಸುತ್ತಳತೆಯು ಒಂದು ಟೆನಿಸ್ ಕೋರ್ಟ್ನಷ್ಟಿದೆ. ಇಲ್ಲಿನ ಒಟ್ಟು ಜನಸಂಖ್ಯೆ ಕೇವಲ 27 ಜನರು ಮಾತ್ರ. ಈ ಸಣ್ಣ ದೇಶದ ಆರ್ಥಿಕತೆಯು ಸಂಪೂರ್ಣವಾಗಿ ದೋಣಿಗಳ ಮೇಲೆ ಅವಲಂಬಿತವಾಗಿದೆ.
ಸೀಲ್ಯಾಂಡ್ ದೇಶವು ಕೇವಲ 6,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಈ ದೇಶವನ್ನು ಗೂಗಲ್ ನಕ್ಷೆಗಳಲ್ಲೂ ಕಂಡುಹಿಡಿಯಲಾಗದು. ಈ ದೇಶವು ಇಂಗ್ಲೆಂಡಿನ ಉತ್ತರ ಸಫೊಲ್ ಸಮುದ್ರ ತೀರದಿಂದ ಸುಮಾರು 12 ಕಿ.ಮೀ ದೂರದ ಪಾಳುಬಿದ್ದಿರುವ ಎಚ್‌ಎಂ ಫೋರ್ಟ್ ರಫ್ಸ್ನಲ್ಲಿದ್ದು, ಇದನ್ನು ರಫ್ಸ್ ಟವರ್ ಎಂದೂ ಕರೆಯಲಾಗುತ್ತದೆ. ಈ ಸ್ಥಳವನ್ನು ಎರಡನೇ ವಿಶ್ವಯುದ್ಧದ ಸಮಯದಲ್ಲಿ ವಿಮಾನ ವಿರೋಧಿ ರಕ್ಷಣಾತ್ಮಕ ಗನ್ ಪ್ಲಾಟ್‌ಫಾರ್ಮ್ ಆಗಿ ಬ್ರಿಟನ್ ನಿರ್ಮಿಸಿತ್ತೆಂದು ಇತಿಹಾಸದಿಂದ ತಿಳಿಯುತ್ತದೆ.
ರಫ್ಸ್ ಗೋಪುರವು ಮೌನ್ಸೆಲ್ ಸಮುದ್ರ ಕೋಟೆಯಾಗಿದ್ದು, 1967ರಲ್ಲಿ ಈ ರದ್ದುಗೊಳಿಸಿದ ರಫ್ಸ್ ಟವರನ್ನು ಪಾಡಿ ರಾಯ್ ಬೇಟ್ಸ್ ಕುಟುಂಬವು ತನ್ನ ಸ್ವಂತ ನಿಲ್ದಾಣವನ್ನು ಸ್ಥಾಪಿಸುವ ಉದ್ದೇಶದಿಂದ ಪೈರೇಟ್ ರೇಡಿಯೋ ಪ್ರಸಾರಕರ ಗುಂಪಿನಿAದ ಖರೀದಿಸಿದರು. ನಂತರ ಅದನ್ನು ಬ್ರಿಟನ್ ದೇಶದಿಂದ ಬೇರ್ಪಡಿಸಿ ಸ್ವತಂತ್ರ ಸಾರ್ವಭೌಮ ರಾಷ್ಟ್ರವೆಂದು ಘೋಷಿಸಿದರು. ಸೀಲ್ಯಾಂಡ್‌ನ್ನು 1978ರಲ್ಲಿ ಕೂಲಿ ಸೈನಿಕರು ಆಕ್ರಮಿಸಿದರೂ ಅವರ ದಾಳಿಯನ್ನು ಹಿಮ್ಮೆಟ್ಟಿಸಲಾಯಿತು. ಇದನ್ನು ವಿಶ್ವದ ಅತ್ಯಂತ ಚಿಕ್ಕ ದೇಶವೆನ್ನಲಾಗಿದ್ದರೂ, ಇದು ಬ್ರಿಟಿಷ್ ಪ್ರಾದೇಶಿಕ ವ್ಯಾಪ್ತಿಯ ನೀರಿನಲ್ಲಿಯೇ ಇರುವುದರಿಂದ ಇದನ್ನು ಯಾವುದೇ ಪ್ರತ್ಯೇಕ ಸ್ವತಂತ್ರ ರಾಜ್ಯ ಯಾ ದೇಶವಾಗಿ ಗುರುತಿಸಲಾಗಿಲ್ಲ.
ತದನಂತರ ರಾಯ್ ಬೇಟ್ಸ್ ತಮ್ಮ ಕುಟುಂಬದೊಂದಿಗೆ ಇಲ್ಲಿ ವಾಸಿಸಲಾರಂಭಿಸಿದರು. ರಾಯ್ ಬೇಟ್ಸ್ ಅವರು ಸೀಲ್ಯಾಂಡ್ ದೇಶಕ್ಕಾಗಿ ಅಂಚೆ ಚೀಟಿಗಳು, ಪಾಸ್ ಪೋರ್ಟ್ಗಳು ಮತ್ತು ಕರೆನ್ಸಿಯನ್ನೂ ಬಿಡುಗಡೆ ಮಾಡಿದ್ದಾರೆ. ಇಲ್ಲಿನ ಕರೆನ್ಸಿಯಲ್ಲಿ ರಾಯ್ ಬೇಟ್ಸ್ ಅವರ ಪತ್ನಿ ಜಾನ್ ಬೇಟ್ಸ್ ಅವರ ಚಿತ್ರವಿದ್ದು, ಈ ದೇಶವು ತನ್ನದೇ ಆದ ರಾಷ್ಟ್ರಧ್ವಜವನ್ನೂ ಹೊಂದಿದೆ. ಅದು ಕೆಂಪು, ಬಿಳಿ ಮತ್ತು ಕಪ್ಪು ಬಣ್ಣವನ್ನು ಹೊಂದಿದೆ. 2012ರಲ್ಲಿ ರಾಯ್ ಬೇಟ್ಸ್ರ ಮರಣದ ನಂತರ, ಅವರ ಮಗ ಮೈಕೆಲ್ ಬೇಟ್ಸ್ ತನ್ನನ್ನು ಸೀಲ್ಯಾಂಡ್ ರಾಜಕುಮಾರ ಎಂದು ಘೋಷಿಸಿಕೊಂಡು ಅವರ ಪತ್ನಿ ಲಾರೆನ್ ಮತ್ತು ಮಗಳು ಕಾರ್ಲೋಟ್ ಅವರೊಂದಿಗೆ ಸೀಲ್ಯಾಂಡ್ ದೇಶದಲ್ಲಿ ವಾಸಿಸುತ್ತಿದ್ದಾರೆ. ಸೀಲ್ಯಾಂಡ್‌ನ ವ್ಯಾಪ್ತಿಯು ತೀರಾ ಸಣ್ಣದಾಗಿದ್ದು, ಇಲ್ಲಿನ ಜನರಿಗೆ ಸ್ವ-ಉದ್ಯೋಗ ಅವಕಾಶವಿಲ್ಲ. ಈ ದೇಶಕ್ಕೆ ಅಂತರರಾಷ್ಟಿçÃಯ ಮಟ್ಟದಲ್ಲಿ ದೇಶಗಳಿಂದ ಮನ್ನಣೆ ಸಿಗಲಿಲ್ಲವಾದ್ದರಿಂದ ಈಗಲೂ ವಿಶ್ವದ ಅತ್ಯಂತ ಸಣ್ಣ ದೇಶವಾಗಿ ವ್ಯಾಟಿಕನ್ ಸಿಟಿಯೇ ಗುರುತಿಸಿಕೊಂಡಿದೆ. ಇದರ ವಿಸ್ತೀರ್ಣ ಕೇವಲ 44 ಹೆಕ್ಟೇರ್ ಇದ್ದು, ಇಲ್ಲಿನ ಜನಸಂಖ್ಯೆ 800 ಇದೆ.
ಇತಿಹಾಸ
1943ರಲ್ಲಿ ಎರಡನೆಯ ಮಹಾಯುದ್ಧದ ಸಮಯದಲ್ಲಿ ‘ಎಚ್.ಎಮ್ ಫೋರ್ಟ್ ರಫ್ಸ್ ಯುನೈಟೆಡ್ ಕಿಂಗ್‌ಡಮ್‌ನ್ನು’ ಮೌನ್ಸೆಲ್ ಕೋಟೆಗಳ ಪೈಕಿ ಒಂದಾಗಿ ನಿರ್ಮಿಸಲಾಯಿತು. ಇದನ್ನು ಹತ್ತಿರದ ನದೀಮುಖಗಳಲ್ಲಿನ ಪ್ರಮುಖ ಹಡಗು ಮಾರ್ಗಗಳನ್ನು ಜರ್ಮನಿಯ ನಾಜಿಗಳ ನೌಕಾ ಪಡೆಯ ಕ್ರೀಗ್ಸ್ಮರೀನ್ ಹಡಗುಗಳನ್ನು ಯುದ್ಧ ವಿಮಾನಗಳಿಂದ ರಕ್ಷಿಸುವ ಉದ್ದೇಶದಿಂದ ನಿರ್ಮಿಲಾಗಿತ್ತು. ಇದು ತೇಲುವ ಪಾಂಟೂನ್ ಬೇಸ್ ಮತ್ತು ಎರಡು ಟೊಳ್ಳಾದ ಗೋಪುರಗಳ ಮೇಲ್ಛಾವಣಿಯನ್ನು ಹೊಂದಿದ್ದು, ಅದರ ಮೇಲೆ ಇತರ ರಚನೆಗಳನ್ನು ಸೇರಿಸಲು ಅವಕಾಶವಿರುವಂತೆ ನಿರ್ಮಿಸಲಾಗಿತ್ತು. ನಂತರ ಕೋಟೆಯನ್ನು ರಫ್ ಸ್ಯಾಂಡ್ಸ್ ಸ್ಯಾಂಡ್ ಬಾರ್ ಇರುವ ಜಾಗಕ್ಕೆ ಬಲಶಾಲಿ ಟಗ್‌ಗಳ ಮೂಲಕ ಎಳೆಯಲಾಯಿತು, ಅಲ್ಲಿ ಅದರ ತಳವು ಮರಳಿನಲ್ಲಿ ಶಾಶ್ವತವಾಗಿ ಹೂತು ಹೋಗುವಂವAತೆ ಮಾಡಲಾಯಿತು. ಇದು ಸಫೊಲ್ ಕರಾವಳಿಯಿಂದ 13ಕಿ.ಮೀ ದೂರದಲ್ಲಿದೆ. ಆಗ ಯುನೈಟೆಡ್ ಕಿಂಗ್‌ಡಮ್‌ನ ಸಮುದ್ರ ವ್ಯಾಪ್ತಿಯಾದ 6 ಕಿ.ಮೀ ದೂರದಿಂದ ಹೊರಗಿನ ಅಂತರಾಷ್ಟ್ರೀಯ ಸಮುದ್ರದಲ್ಲಿತ್ತು. 2ನೆಯ ವಿಶ್ವಯುದ್ಧದ ಅವಧಿಯುದ್ದಕ್ಕೂ ಈ ಸೌಲಭ್ಯವನ್ನು 150-300 ಅಮೆರಿಕಾದ ರಾಯಲ್ ನೌಕಾಪಡೆಯ ಸಿಬ್ಬಂದಿಗಳು ಆಕ್ರಮಿಸಿಕೊಂಡಿದ್ದರು. 1956 ರಲ್ಲಿ ವಿಶ್ವಯುದ್ಧ ಪೂರ್ಣಗೊಂಡ ನಂತರ ಸೈನಿಕರು ಇದನ್ನು ಬಿಟ್ಟು ಹೋದರು. ಮೌನ್ಸೆಲ್ ಕೋಟೆಗಳು 1950ರ ದಶಕದಲ್ಲಿ ನಿಷ್ಕ್ಟ್ರಿಯಗೊಂಡವು.
ಉದ್ಯೋಗ ಮತ್ತು ಸ್ಥಾಪನೆ
ರಫ್ಸ್ ಟವರನ್ನು 1965ರಲ್ಲಿ ಲಂಡನ್‌ನ ಜ್ಯಾಕ್ ಮೂರ್ ಮತ್ತು ಅವರ ಮಗಳು ಜೇನ್ ಆಕ್ರಮಿಸಿಕೊಂಡು ‘ಪೈರೇಟ್ ಸ್ಟೇಷನ್ ವಂಡರ್ಫುಲ್ ರೇಡಿಯೋ’ ಪ್ರಾರಂಭಿಸಿದರು. 1967ರಲ್ಲಿ ಈ ಕೋಟೆಯನ್ನು ಬ್ರಿಟಿಷ್ ಪ್ರಜೆ ಮತ್ತು ಪೈರೇಟ್ ರೇಡಿಯೋ ಪ್ರಸಾರಕ ಮೇಜರ್ ಪ್ಯಾಡಿ ರಾಯ್ ಬೇಟ್ಸ್ ಖರೀದಿಸಿ, ಪೈರೇಟ್ ಬ್ರಾಡ್‌ಕಾಸ್ಟರ್‌ಗಳ ಗುಂಪನ್ನು ಅಲ್ಲಿಂದ ಹೊರಹಾಕಿ ರೇಡಿಯೋ ಎಸ್ಸೆಕ್ಸ್ ಪ್ರಾರಂಭಕ್ಕೆ ಉದ್ದೇಶಿಸಿದ್ದರು. ಆ ವಿಶಾಲ ಪ್ಲಾಟ್‌ಫಾರ್ಮ್ನಲ್ಲಿ ಅಗತ್ಯ ಸಲಕರಣೆಗಳು ಇದ್ದರೂ ಪ್ರಸಾರವನ್ನು ಆರಂಭಿಸಲಿಲ್ಲ. ನಂತರ ಬೇಟ್ಸ್ ರಫ್ಸ್ ಟವರ್‌ನ ಸ್ವಾತಂತ್ರ‍್ಯವನ್ನು ಘೋಷಿಸಿ ಮತ್ತು ಅದನ್ನು ಸೀಲಾಂಡ್‌ನ ಪ್ರಭುತ್ವವೆಂದು ಪರಿಗಣಿಸಿದರು.
1968ರಲ್ಲಿ, ಸೀಲ್ಯಾಂಡ್‌ನ ಪ್ಲಾಟ್‌ಫಾರ್ಮ್ ಬಳಿ ಸಮುದ್ರಯಾನದ ಗುರುತನ್ನು ಹಾಕಲು ಬ್ರಿಟಿಷ್ ಕೆಲಸಗಾರರು ತೆರಳಿದಾಗ ರಾಯ್ ಬೇಟ್ಸ್ ಇದು ತನ್ನ ಪ್ರಾದೇಶಿಕ ವ್ಯಾಪ್ತಿಯೆಂದು ಎಚ್ಚರಿಸಿದರು. ಅಷ್ಟೇ ಅಲ್ಲದೇ ಮೈಕೆಲ್ ಬೇಟ್ಸ್ (ಪ್ಯಾಡಿ ರಾಯ್ ಬೇಟ್ಸ್ ಅವರ ಮಗ) ಕೋಟೆಯ ಹಿಂದಿನಿಂದ ಎಚ್ಚರಿಕೆಯ ಗುಂಡುಗಳನ್ನು ಹಾರಿಸುವ ಮೂಲಕ ಕೆಲಸಗಾರರನ್ನು ಬೆದರಿಸಲು ಯತ್ನಿಸಿದರು. ಆ ಸಂದರ್ಭದಲ್ಲಿ ಬೇಟ್ಸ್ ಬ್ರಿಟಿಷ್ ಪ್ರಜೆ ಆಗಿದ್ದರಿಂದ, ಈ ಘಟನೆಯ ಕಾರಣಕ್ಕೆ ಬಂದೂಕು ಹೊಂದಿದ ಆರೋಪದ ಮೇಲೆ ಬೇಟ್ಸ್ರನ್ನು ಇಂಗ್ಲೆಂಡಿನ ನ್ಯಾಯಾಲಯಕ್ಕೆ ಕರೆಸಲಾಯಿತು. ಆದರೆ ನ್ಯಾಯಾಲಯವು (ಈಗ ಸೀಲಾಂಡ್ ಎಂದು ಕರೆಯುತ್ತಿರುವ) ಈ ವೇದಿಕೆಯು ಬ್ರಿಟಿಷ್ ಪ್ರಾದೇಶಿಕ ಮಿತಿಗಳಿಂದ (ದೇಶದ ನೀರಿನ 6ಕಿ.ಮೀ ಮಿತಿಯಿಂದ ಹೊರ ಭಾಗದಲ್ಲಿ) ಹೊರಗಿದೆ ಎಂದು ತೀರ್ಪು ನೀಡಿದ್ದರಿಂದ ಈ ಪ್ರಕರಣ ಬಿದ್ದು ಹೋಯಿತು. 1975ರಲ್ಲಿ ಬೇಟ್ಸ್ ಸೀಲ್ಯಾಂಡ್‌ಗಾಗಿ ಸಂವಿಧಾನವನ್ನು ಪರಿಚಯಿಸಿ ರಾಷ್ಟçಧ್ವಜ, ರಾಷ್ಟçಗೀತೆ, ಕರೆನ್ಸಿ ಮತ್ತು ಪಾಸ್‌ಪೋರ್ಟ್ಗಳನ್ನು ಪರಿಚಯಿಸಿದರು.
ದೇಶದ ಮೇಲಿನ ದಾಳಿ ಮತ್ತು ಬಂಡಾಯ ಸರ್ಕಾರ
1978ರಲ್ಲಿ ಅಲೆಕ್ಸಾಂಡರ್ ಅಚೆನ್‌ಬ್ಯಾಕ್ ತನ್ನನ್ನು ಸೀಲಾಂಡ್‌ನ ಪ್ರಧಾನ ಮಂತ್ರಿಯೆAದು ವಿವರಿಸಿದ್ದು, ಬೇಟ್ಸ್ ಮತ್ತು ಆತನ ಪತ್ನಿ ಇಂಗ್ಲೆಂಡ್ ದೇಶದಲ್ಲಿದ್ದಾಗ ಹಲವಾರು ಜರ್ಮನ್ ಮತ್ತು ಡಚ್ ಕೂಲಿ ಸೈನಿಕರ ಮೂಲಕ ಹಲವು ಸ್ಪೀಡ್‌ಬೋಟ್‌ಗಳು, ವೈಯಕ್ತಿಕ ವಾಟರ್ ಕ್ರಾಫ್ಟ್ಗಳು ಮತ್ತು ಹೆಲಿಕಾಪ್ಟರ್‌ಗಳ ಸಹಾಯದಿಂದ ಸೀಲ್ಯಾಂಡ್ ಪ್ಲಾಟ್‌ಫಾರ್ಮ್ಗೆ ನುಗ್ಗಿ ಬೇಟ್ಸ್ರ ಮಗ ಮೈಕೆಲ್‌ನ್ನು ಒತ್ತೆಯಾಳಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿದನು. ಆದರೆ ಮೈಕೆಲ್‌ನು ಸೀಲ್ಯಾಂಡನ್ನು ಉಳಿಸಿಕೊಳ್ಳಲು ಅಚೆನ್‌ಬಾಚ್ ಮತ್ತವನ ಕೂಲಿ ಸೈನಿಕರನ್ನು ಅವರು ಆಯುಧ ಸಹಿತವಾಗಿ ಇರುವಂತೆಯೇ ಸುತ್ತುವರಿದನು. ಸೀಲಾಂಡ್ ಪಾಸ್‌ಪೋರ್ಟ್ ಹೊಂದಿದ್ದ ಜರ್ಮನ್ ವಕೀಲ ಅಚೆನ್‌ಬಾಚ್ ಮೇಲೆ ಸೀಲಾಂಡ್‌ಗೆ ದೇಶದ್ರೋಹ ಮಾಡಿದ ಆರೋಪ ಹೊರಿಸಿ, ಅವನು 35,000 ಅಮೆರಿಕನ್ ಡಾಲರ್ ಮೊತ್ತವನ್ನು ದಂಡವಾಗಿ ಪಾವತಿಸದಿದ್ದರೆ ಅವರನ್ನು ಬಂಧಿಸುವುದಾಗಿ ಮೈಕೆಲ್ ಘೋಷಿಸಿದನು.
ಆಗ ಜರ್ಮನಿಯು ಲಂಡನ್ ರಾಯಭಾರ ಕಚೇರಿಯ ಮೂಲಕ ಸೀಲ್ಯಾಂಡಿಗೆ ತನ್ನ ರಾಜತಾಂತ್ರಿಕರನ್ನು ಕಳುಹಿಸಿ, ಅಚೆನ್‌ಬಾಚ್ ಬಿಡುಗಡೆಗಾಗಿ ಮಾತುಕತೆ ನಡೆಸಿತು. ಹಲವು ವಾರಗಳ ಮಾತುಕತೆಯ ನಂತರ ರಾಯ್ ಬೇಟ್ಸ್ ಅವರನ್ನು ಬಿಡುಗಡೆಗೊಳಿಸಿದರು. ರಾಜತಾಂತ್ರಿಕರ ಭೇಟಿಯ ನಂತರ ಜರ್ಮನಿಯಿಂದ ಸೀಲಾಂಡ್‌ಗೆ ವಾಸ್ತವಿಕ ಮಾನ್ಯತೆ ದೊರೆಯಿತೆನ್ನುವ ಉಲ್ಲೇಖವಿದೆ. ಸೀಲ್ಯಾಂಡನ್ನು ಐಷಾರಾಮಿ ಹೋಟೆಲ್ ಮತ್ತು ಕ್ಯಾಸಿನೊವಾಗಿ ಪರಿವರ್ತಿಸಲು ಜರ್ಮನ್ ಮತ್ತು ಡಚ್ ಉದ್ಯಮಿಗಳ ಜತೆಗೆ ಬೇಟ್ಸ್ ಪ್ರಯತ್ನಿಸಿದರೂ ಈ ಒಪ್ಪಂದವು ಮುರಿದು ಬಿತ್ತು. ಜನವರಿ 2007ರಲ್ಲಿ, ಸ್ವೀಡನ್ ದೇಶದ ಪೈರೇಟ್ ಬೇ ಮತ್ತು ಸ್ಪ್ಯಾನಿಷ್ ಎಸ್ಟೇಟ್ ಕಂಪನಿ ಸೀಲ್ಯಾಂಡನ್ನು ಖರೀದಿಸಲು ಪ್ರಯತ್ನಿಸಿ ವಿಫಲವಾದವು. ಸೀಲಾಂಡ್ ಈಗ ಬ್ರಿಟಿಷ್ ಪ್ರಾದೇಶಿಕ ನೀರಿನಲ್ಲಿದ್ದು, ಕಾನೂನು ಅಕಾಡೆಮಿ ಜಾನ್ ಗಿಬ್ಸನ್ ಅವರ ಅಭಿಪ್ರಾಯದ ಪ್ರಕಾರ ಸೀಲಾಂಡ್ ಒಂದು ಸ್ವತಂತ್ರ ರಾಷ್ಟçವಾಗಿ ಗುರುತಿಸಲ್ಪಡುವ ಸಾಧ್ಯತೆ ಕಡಿಮೆ. ಏಕೆಂದರೆ ಸೀಲ್ಯಾಂಡ್ ಮಾನವ ನಿರ್ಮಿತ ರಚನೆಯಾಗಿದೆ.
ಅಗ್ನಿ ಅವಘಡ
2006ರಲ್ಲಿ ರಫ್ಸ್ ಗೋಪುರದ ಮೇಲ್ಭಾಗದ ಪ್ಲಾಟ್‌ಫಾರ್ಮ್ ವಿದ್ಯುತ್ ದೋಷದಿಂದ ಅಗ್ನಿಗಾಹುತಿಯಾಯಿತು. ಆ ಸಂದರ್ಭ ರಾಯಲ್ ಏರ್ ಫೋರ್ಸ್ ಹೆಲಿಕಾಪ್ಟರ್ ಗಾಯಗೊಂಡವರನ್ನು ನೇರವಾಗಿ ಟವರ್‌ನಿಂದ ಇಪ್ಸ್ವಿತ್ಚ್ ಆಸ್ಪತ್ರೆಗೆ ವರ್ಗಾಯಿಸಿತು. ಸ್ಥಳೀಯ ಅಗ್ನಿಶಾಮಕ ಟಗ್ ಬೆಂಕಿಯನ್ನು ನಂದಿಸುವವರೆಗೂ ಹಾರ್ವಿಚ್ ಲೈಫ್ ಬೋಟ್ ರಫ್ಸ್ ಟವರ್ ಬಳಿ ರಕ್ಷಣೆಯನ್ನು ನೀಡಿತ್ತು. ಈ ಹಾನಿಯನ್ನು ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಸರಿಪಡಿಸಲಾಯಿತು.
ಸಂಸ್ಥಾಪಕರ ಸಾವು
ರಾಯ್ ಬೇಟ್ಸ್ ತನ್ನ 91ನೇ ವಯಸ್ಸಿನಲ್ಲಿ ಆಲ್‌ಝೈಮರ್ ಎನ್ನುವ ಮೆದುಳಿನ ಕಾಯಿಲೆಯಿಂದ ನಿಧನರಾದ ನಂತರ ಅವರ ಮಗ ಮೈಕೆಲ್ ಸೀಲ್ಯಾಂಡ್‌ನ ರಾಜಪ್ರತಿನಿಧಿಯಾದನು. ಮೈಕೆಲ್ ಬೇಟ್ಸ್ ಸಫೊಲ್‌ನಲ್ಲಿ ವಾಸಿಸುತ್ತಿದ್ದು, ಅಲ್ಲಿ ಕುಟುಂಬ ಸಮೇತರಾಗಿ ‘ಫ್ರುಟ್ಸ್ ಆಫ್ ದಿ ಸೀ’ ಎಂಬ ಮೀನುಗಾರಿಕೆ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಈ ದೇಶವು ನಾಣ್ಯಗಳು ಮತ್ತು ಅಂಚೆ ಚೀಟಿಗಳನ್ನು ಒದಗಿಸುವುದು, ಕಡಲಾಚೆಯ ಇಂಟರ್ನೆಟ್ ಹೋಸ್ಟಿಂಗ್ ಸೌಲಭ್ಯ ಅಥವಾ ‘ಡೇಟಾ ಹೆವೆನ್’ ಸ್ಥಾಪನೆ ಸೇರಿದಂತೆ ಹಲವು ವಾಣಿಜ್ಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ಸೀಲ್ಯಾಂಡ್ ಆಡಳಿತ ವ್ಯವಸ್ಥೆ
ಕಾನೂನುಬದ್ಧ ಸ್ಥಿತಿಯ ಹೊರತಾಗಿಯೂ, ಸೀಲಾಂಡನ್ನು ಬೇಟ್ಸ್ ಕುಟುಂಬವು ಮಾನ್ಯತೆ ಪಡೆದ ಸಾರ್ವಭೌಮ ಘಟಕದಂತೆ ನಿರ್ವಹಿಸುತ್ತಿದ್ದು, ಅವರೇ ಇಲ್ಲಿನ ಅನುವಂಶಿಕ ರಾಜ ಆಡಳಿತಗಾರರು. ರಾಯ್ ಬೇಟ್ಸ್ ತನ್ನನ್ನು ‘ಪ್ರಿನ್ಸ್ ರಾಯ್’ ಮತ್ತು ಆತನ ಪತ್ನಿ ‘ಪ್ರಿನ್ಸೆಸ್ ಜೋನ್’ ಎಂದು ಘೋಷಿಸಿಕೊಂಡಿದ್ದಾರೆ. ಬೇಟ್ಸ್ ಅವರ ಮಗನನ್ನು 1999 ರಿಂದ ಬೇಟ್ಸ್ ಕುಟುಂಬವು ‘ಪ್ರಿನ್ಸ್ ರೀಜೆಂಟ್’ ಎಂದು ಉಲ್ಲೇಖಿಸಿದೆ. ಅಂದರೆ ಅವರು ಸೀಲಾಂಡ್‌ನ ‘ರಾಜ್ಯ ಮುಖ್ಯಸ್ಥ’ ಮತ್ತು ಅದರ ‘ಸೀಲಾಂಡ್ ಸರ್ಕಾರದ ಮುಖ್ಯಸ್ಥ’ ಆಗಿ ಕಾರ್ಯನಿರ್ವಹಿಸುತ್ತಾರೆ.
ಈ ದೇಶವು ‘ರಾಷ್ಟçದ ಸ್ಥಾನಮಾನಕ್ಕೆ ಹಕ್ಕು ನೀಡುವ ಚಿಕ್ಕ ಪ್ರದೇಶ’ ಈ ಕಾರಣಕ್ಕಾಗಿ ಗಿನ್ನೆಸ್ ದಾಖಲೆಯನ್ನು ಹೊಂದಿದೆ. ಸೀಲಾಂಡ್ ದೇಶಕ್ಕೆ ರಾಷ್ಟçಗೀತೆಯೂ ಇದ್ದು, ಈ ಗೀತೆಯನ್ನು ಲಂಡನ್ ನಿವಾಸಿ ಬೆಸಿಲ್ ಸಿಮೊನೆಂಕೊ ರಚಿಸಿದ್ದಾರೆ. ಇದು ಕೇವಲ ವಾದ್ಯಗೀತೆ (ಮ್ಯೂಸಿಕ್) ಆಗಿರುವುದರಿಂದ ಇದಕ್ಕೆ ಯಾವುದೇ ರೀತಿಯ ಲಿಖಿತ ಸಾಹಿತ್ಯವಿಲ್ಲ. 2005ರಲ್ಲಿ ಈ ಗೀತೆಯನ್ನು ಸ್ಲೊವಾಕ್ ರೇಡಿಯೋ ‘ಸಿಂಫನಿ ಆರ್ಕೆಸ್ಟಾç’ ರೆಕಾರ್ಡ್ ಮಾಡಿ ಅದರ ಸಿ.ಡಿ ‘ನ್ಯಾಷನಲ್ ಅಂಥೆಮ್ಸ್ ಆಫ್ ದಿ ವರ್ಲ್ಡ್’ ಸಂಪುಟದಲ್ಲಿ ಬಿಡುಗಡೆ ಮಾಡಿತು.
ಕ್ರೀಡಾ ಕ್ಷೇತ್ರದಲ್ಲಿ ಸೀಲ್ಯಾಂಡ್
ಸೀಲ್ಯಾಂಡ್ ದೇಶವನ್ನು ಯಾವುದೇ ಅಂತರರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಗುರುತಿಸಿಲ್ಲ, ಮತ್ತು ಕ್ರೀಡೆಯಲ್ಲಿ ಸಂಪೂರ್ಣವಾಗಿ ಸೀಲಾಂಡ್ ದೇಶದ ಆಟಗಾರರನ್ನೇ ಹೊಂದಿದ ತಂಡವನ್ನು ರಚಿಸಲು ಅಗತ್ಯವಿರುವಷ್ಟು ಜನಸಂಖ್ಯೆಯೂ ಇಲ್ಲಿಲ್ಲ. ಆದರೂ ಸೀಲಾಂಡ್ ದೇಶದವರಲ್ಲದ ಅಧಿಕೃತ ರಾಷ್ಟ್ರೀಯ ಕ್ರೀಡಾಪಟುಗಳು ಈ ದೇಶದಲ್ಲಿ ಇದ್ದಾರೆಂದು ಸೀಲಾಂಡ್ ಹೇಳಿಕೊಂಡಿದೆ. ಈ ಕ್ರೀಡಾಪಟುಗಳು ಕರ್ಲಿಂಗ್, ಮಿನಿ ಗಾಲ್ಫ್, ಫುಟ್ಬಾಲ್, ಫೆನ್ಸಿಂಗ್, ಟೇಬಲ್ ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್ ನಂತಹ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ. 2004ರಲ್ಲಿ ರಾಷ್ಟಿçÃಯ ತಂಡವು ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಲ್ಯಾಂಡ್ ಐಲ್ಯಾಂಡ್ಸ್ ಫುಟ್ಬಾಲ್ ತಂಡದೆದುರು ಆಡಿ, 2-2 ರಿಂದ ಸಮಬಲ ಸಾಧಿಸಿತ್ತು.
2004ರಲ್ಲಿ ಪರ್ವತಾರೋಹಿ ಸ್ಲೇಡರ್ ಓವಿಯಟ್ ಸೀಲ್ಯಾಂಡ್ ಧ್ವಜವನ್ನು ಮುಜ್ತಾಗ್ ಅಟಾದಲ್ಲಿ ಹಾರಿಸಿದ್ದರು. 2007ರಲ್ಲಿ, ಮೈಕೆಲ್ ಮಾರ್ಟೆಲ್ಲೆ ಕೆನಡಾದ ಕ್ವಿಬೆಕ್ ನಗರದಲ್ಲಿ ನಡೆದ ಕುಂಗ್ ಫೂ ವಿಶ್ವಕಪ್‌ನಲ್ಲಿ ಸೀಲಾಂಡ್‌ನ್ನು ಪ್ರತಿನಿಧಿಸಿದ್ದರು. ಪ್ರಿನ್ಸಿಪಾಲ್ ಮಾರ್ಷಲ್ ಆರ್ಟ್ಸ್ ಅಥ್ಲೀಟ್ ಮತ್ತು ಚಾಂಪಿಯನ್ ಹುದ್ದೆಯನ್ನು ಹೊಂದಿದ್ದ ಮಾರ್ಟೆಲ್ಲೆ ಎರಡು ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್‌ಶಿಪ್ ವೇದಿಕೆಯಲ್ಲಿ ಕಾಣಿಸಿಕೊಂಡ ಮೊದಲ ಸೀಲ್ಯಾಂಡ್ ಕ್ರೀಡಾಪಟುವೆನಿಸಿದರು. 2009ರಲ್ಲಿ, ಸೀಲಾಂಡ್ ‘ಸೀಲಾಂಡ್ ಫುಟ್ಬಾಲ್ ಅಸೋಸಿಯೇಶನ್’ ಇದರ ಮೂಲಕ ವಿವಾ ವಿಶ್ವಕಪ್‌ನಲ್ಲಿ ಸ್ಪರ್ಧಿಸಿ ಚಾಗೋಸ್ ದ್ವೀಪಗಳ ವಿರುದ್ಧ ಪಂದ್ಯವನ್ನು ಆಡಿ 3-1 ಅಂತರದಲ್ಲಿ ಸೋತಿತು.
2009 ಮತ್ತು 2010ರಲ್ಲಿ, ಯುನೈಟೆಡ್ ಕಿಂಗ್‌ಡಮ್, ಐರ್ಲೆಂಡ್ ಮತ್ತು ನೆದರ್‌ಲ್ಯಾಂಡ್ಸ್ನಲ್ಲಿ ವಿವಿಧ ಕ್ಲಬ್ ಪಂದ್ಯಾವಳಿಗಳಲ್ಲಿ ಆಡಲು ಸೀಲಾಂಡ್ ತನ್ನ ತಂಡಗಳನ್ನು ಕಳುಹಿಸಿದೆ. 2013ರಲ್ಲಿ ಪರ್ವತಾರೋಹಿ ಕೆಂಟನ್ ಕೂಲ್ ಎವರೆಸ್ಟ್ ಶಿಖರದ ಮೇಲೆ ಸೀಲಾಂಡ್ ಧ್ವಜವನ್ನು ಹಾರಿಸಿದರು. 2015ರಲ್ಲಿ, ಓಟಗಾರ ಸೈಮನ್ ಮೆಸೆಂಜರ್ ಪ್ರಪಂಚವನ್ನು ಸುತ್ತು ಸವಾಲಿನ ಭಾಗವಾಗಿ ಸೀಲಾಂಡ್‌ನಲ್ಲಿ ಅರ್ಧ ಮ್ಯಾರಥಾನ್ ಓಡಿದ್ದರು. ಆಗಸ್ಟ್ 2018ರಲ್ಲಿ ಸ್ಪರ್ಧಾತ್ಮಕ ಈಜುಗಾರ ರಿಚರ್ಡ್ ರಾಯಲ್ ಸೀಲ್ಯಾಂಡ್ ನಿಂದ ಮುಖ್ಯ ಭೂಮಿಗೆ 12ಕಿ.ಮೀ ದೂರವನ್ನು 3 ಗಂಟೆ 29 ನಿಮಿಷಗಳಲ್ಲಿ ಈಜಿದ ಮೊದಲ ವ್ಯಕ್ತಿಯಾಗಿ ಗುರುತಿಸಿಕೊಂಡರು.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160