ವಿಶ್ವ ಟೆಲಿವಿಷನ್ ದಿನ – ನವೆಂಬರ್ 21

ವಿಶ್ವ ಟೆಲಿವಿಷನ್ ದಿನ – ನವೆಂಬರ್ 21

ಟಿ ವಿ ಕಂಡು ಹಿಡಿದ್ದದ್ದು ಯಾರು?

ನವೆಂಬರ್ 21 ವಿಶ್ವ ಟೆಲಿವಿಷನ್ ದಿನ, ಮಾನವನ ದ್ಯೆನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಹಾಗು ಪ್ರಪಂಚದಲ್ಲಿ ಸಂವಹನ ಕ್ಷೇತ್ರದಲ್ಲಿ ಆದ ಕ್ರಾಂತಿಯನ್ನು ನೆನೆಯುವ ಸಲುವಾಗಿ 17 ಡಿಸೆಂಬರ್ 1996 ರಂದು ಯುನ್ಯೆಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಪ್ರತಿ ವರ್ಷದ ನವಂಬರ್ 21 ನ್ನು ವಿಶ್ವ ಟೆಲಿವಿಷನ್ ದಿನವೆಂದು ಘೋಷಿಸಿತು. ನೀವು ದಿನವೂ ನಿಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸುವ ಈ ಟಿ ವಿ ಯನ್ನು ಯಾರು ಕಂಡು ಹಿಡಿದರು ಎಂದು ನೀವೆಂದಾದರೂ ಯೋಚಿಸಿದ್ದಿರಾ?

ಇಪ್ಪತ್ತನೆ ಶತಮಾನದ ಅಧ್ಬುತ ಸಂಶೋದನೆ ಏನೆಂದು ಕೇಳಿದರೆ ಅದು ಟಿ ವಿ ಎಂದು ಹೇಳಬಹುದು, ಹೌದು ಈಗ ಟಿವಿ ಇಲ್ಲದ ಮನೆ ಇಲ್ಲವೆಂದೇ ಹೇಳಬೇಕು. ಹದಿನೆಂಟು ಸೇಂಟಿ ಮೀಟರ್ ಪರದೆಯ ಟಿವಿಯಿಂದ ಹಿಡಿದು ಐದಾರು ಅಡಿ ತೆಳು ಪರದೆಯ ಟಿ ವಿ ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ, ಹೌದು ಈ ಟಿ ವಿಯನ್ನು ಕಂಡು ಹಿಡಿದವರಾರು? ಗೊತ್ತೇ? ಬಲ್ಬ್, ರೇಡಿಯೋ, ಮತ್ತು ದೂರವಾಣಿ ಕಂಡು ಹಿಡಿದಂತೆ ಟಿ ವಿ ಯನ್ನು ಕಂಡು ಹಿಡಿದ ಕೀರ್ತಿ ಕೇವಲ ಒಬ್ಬ ವಿಜ್ಞಾನಿಗೆ ಸಲ್ಲುವುದಿಲ್ಲಾ!! ಟಿವಿಯನ್ನು ಕಂಡು ಹಿಡಿದ ಕೀರ್ತಿ ಹಲವಾರು ಸಂಶೋಧಕರಿಗೆ ಸಲ್ಲುತ್ತದೆ.

ಹದಿನೆಂಟನೇ ಶತಮಾನದಿಂದಲೂ ಟಿ ವಿ ಯಂತಹ ವಸ್ತುವೊಂದನ್ನು ಕಂಡು ಹಿಡಿಯಬೇಕೆಂದು ಹಲವಾರು ವಿಜ್ನಾನಿಗಳು ಪ್ರಯತ್ನಿಸುತ್ತಿದ್ದರು. ಮೊದಮೊದಲು ವಿದ್ಯುನ್ಮಾನ, ದೃಷ್ಟಿಶಾಸ್ತ್ರ ಮತ್ತು ಯಾಂತ್ರಿಕ ವಿಜ್ಞ್ನಾನವನ್ನು ಉಪಯೋಗಿಸಿಕೊಂಡು ಪ್ರತಿಬಿಂಬವನ್ನು ಸೆರೆಹಿಡಿದು ಅದನ್ನು ಪರದೆಯಲ್ಲಿ ಮೂಡಿಸುವ ಪ್ರಯತ್ನಗಳು ನೆಡೆದ್ದಿದ್ದವು. 1800 ರ ಪ್ರಾರಂಭದಲ್ಲಿ ಸೆರೆಹಿಡಿದ ಪ್ರತಿಬಿಂಬವನ್ನು ಮೊದಲಿಗೆ ಫ್ಯಾಕ್ಸ್ ಯಂತ್ರದ ಮೂಲಕ ರವಾನಿಸಲಾಯಿತು. ದೂರವಾಣಿ ಯಂತ್ರದ ಆವಿಷ್ಕಾರವಾದ ಮೇಲೆ ಬಿಂಬಗಳನ್ನು ವಿದ್ಯುನ್ಮಾನ ಯಂತ್ರದ ಮೂಲಕ ಸೆರೆ ಹಿಡಿದ ಬಿಂಬವನ್ನು ಟೆಲಿಫೊನೋಸ್ಕೊಪ್ ಎಂಬ ಯಂತ್ರದ ಮೂಲಕ ರವಾನಿಸುವಲ್ಲಿ ಯಶಸ್ವಿಯಾದರು. ವಿಜ್ಞಾನದ ಬಗ್ಗೆ ಕಾಲ್ಪನಿಕ ಕಥೆಗಳನ್ನು ಬರೆಯುತ್ತಿದ್ದ ಅಂದಿನ ಕಥೆಗಾರರು ಮುಂದೊಂದು ದಿನ ಬೆಳಕು ಶಬ್ದದ ಹಾಗೆ ತಂತಿಯ ಮೂಲಕ ಪ್ರಸಾರವಾಗುತ್ತದೆ ಎಂದಿದ್ದರು. ಈ ಕಲ್ಪನೆ ನಿಜವಾಗಲು ಹಲವಾರು ಸಂಶೋಧಕರು ಹಗಲಿರುಳು ಶ್ರಮಪಟ್ಟರು. ಜನರು ಏನನ್ನಾದರೂ ನೋಡುತ್ತಾರೆ ಪರಸ್ಪರ ಒಬ್ಬರನೊಬ್ಬರನ್ನು ನೋಡುವುದನ್ನು ಬಿಟ್ಟು ಎಂಬುದು ಟಿ ವಿ ಬಂದ ಮೇಲೆ ನಿಜವಾಗಿದೆ.

ಮ್ಯೆಕಲ್ ಜೋರ್ಡ್ ಹಾಗು ಜೋಸೆಫ್ ಹೆನ್ರಿಯ ವಿದ್ಯುನ್ಮಾನದಲ್ಲಿ ಕ್ರಾಂತಿಕಾರಿ ಸಂಶೊಧನೆಗಳು, ಅಬ್ಬೆಕ್ಯಾಸಲ್ಲಿ ಕಂಡುಹಿಡಿದ ಪ್ಯಾನ್ ಟೆಲಿಗ್ರಾಂ ಜಾರ್ಜ ಕ್ಯಾರಿ, ಎಡಿಸನ್ ಬೆಲ್ ಹಾಗೂ ಮುಂತಾದವರ ಸಂಶೊಧನೆ ನಿಪ್ಕೋವ್ ಸಂಶೋಧನೆಗೆ ನಾಂದಿಹಾಡಿತು. ಪೌಲ್ ನಿಪ್ಕೊವ್ ಎಂಬ ಜರ್ಮನಿಯ ಹುಡುಗ ತಿರುಗುವ ತಟ್ಟೆಯೊಂದನ್ನು ತಯಾರಿಸಿ ಅದಕ್ಕೆ ಪೇಟೆಂಟ್ ಸಹ ಪಡೆದ್ದಿದ್ದನು. ಇದರಲ್ಲಿ ಅನೇಕ ರಂದ್ರಗಳಿದ್ದು ಇವು ಸಮಾನಾಂತರ ದೂರದಲ್ಲಿ ಮಾಡಿದ್ದು ಡಿಸ್ಕನ್ನು ತಿರುಗಿಸಿದಾಗ ಬೆಳಕು ಎಲ್ಲಾ ತಟ್ಟೆಗಳ ಮೂಲಕ ಹಾದುಹೊಗುತ್ತಿತ್ತು. ಬೆಳಕನ್ನು ಹೀರುವ ಸೆಲಿನಿಯಂಗಳ ಮೂಲಕ ಹಾದು ಹೊಗುತ್ತಿತ್ತು ಹೀಗೆ ಹಾದು ಹೋಗುವಾಗ ಅದು ವಿದ್ಯುತ್ ಕಾಂತೀಯ ತರಂಗಗಳನ್ನು ಉತ್ಪಾದಿಸುತ್ತಿತ್ತು, ಅದರೆ ಹೀಗೆ ಹಾದು ಹೋದ ತರಂಗಗಳು ಅಸ್ಪಸ್ಟ ಚಿತ್ರಗಳನ್ನಷ್ಟೆ ನೀಡಲು ಸಮರ್ಥವಾಗಿದ್ದವು. ಮುಂದಿನ ದಿನಗಳಲ್ಲಿ ಬಂದ ಕೆಲವು ಸಂಶೋಧಕರು ಕನ್ನಡಿಗಳನ್ನು ಬಳಸಿಕೊಂಡು ಡ್ರಮ್‌ಗಳನ್ನು ತಯಾರಿಸಿ ಅದರಲ್ಲಿ ಬಿಂಬಗಳನ್ನು ಸೆರೆಹಿಡಿದು ಅದನ್ನು ವಿದ್ಯುತವಾಹಕಗಳ ಮೂಲಕ ಪ್ರಸಾರ ಮಾಡುವಲ್ಲಿ ಯಶಸ್ವಿಯಾದರೂ ಸೆಲಿನಿಯಂ ವಾಹಕಗಳು ಅಷ್ಟು ಶಕ್ತಿಯುತವಾಗಿಲ್ಲದ್ದಿದ್ದರಿಂದ ಸೆರೆಹಿಡಿದ ಬಿಂಬಗಳನ್ನು ಪರದೆಯ ಮೇಲೆ ಚಲಿಸುವ ಬಿಂಬಗಳನ್ನಾಗಿ ಮೂಡಿಸುವಲ್ಲಿ ವಿಫಲವಾಯಿತು.

ಇದಾಗಿ ಕೆಲ ದಶಕಗಳ ನಂತರ ಅಂದರೆ 1920 ರಲ್ಲಿ ಸ್ಕಾಟಿಶ್ ಸಂಶೋಧಕ ಜಾನ್ ಬ್ಯೆರ್ಡ್ ಹಲವು ತೆಳುವಾದ ಪಾರದರ್ಶಕ ನಳಿಕೆಗಳನ್ನು ಉಪಯೋಗಿಸಿ ಅದರ ಮೂಲಕ ಬಿಂಬಗಳನ್ನು ಪರದೆಯ ಮೇಲೆ ಮೂಡಿಸುವಲ್ಲಿ ಯಶಸ್ವಿಯಾದನು. ಇದು ನಿಪ್ಕೊವ್ ಸಂಶೋಧನೆಯ ಪರಿವರ್ತಿತ ಅವೃತ್ತಿಯಾಗಿದೆ ಎಂದು ಇದನ್ನು ಪೇಟೆಂಟ್ ಮಾಡಿಸುವಾಗ ಬ್ಯೆರ್ಡ್ ಹೇಳಿದ್ದನು. ಪ್ರತಿಪಲಿಸುವ ಬೆಳಕಿನ ಸಹಾಯದಿಂದ ಮೊದಲ ಟಿ ವಿ ತಯಾರಿಸುವುದರಲ್ಲಿ ಮೊದಲಿಗ ಎಂಬ ಹೆಗ್ಗಳಿಕೆಗೆ ಬ್ಯೆರ್ಡ್ ಪಾತ್ರನಾದನು. ಉತ್ತಮ ಛಾಯ ವಿದ್ಯುತ್ ವಾಹಕಗಳು ಹಾಗೂ ಸುಧಾರಿಸಿದ ಸಂಕೇತಗಳನ್ನು ಹೀರಿಕೊಳ್ಳುವ ವಿದ್ಯುತ್ ಕೋಶಗಳು ಹಾಗೂ ಧ್ವನಿವರ್ದಕಗಳನ್ನು ಉಪಯೋಗಿಸುವ ಮೂಲಕ ಚಲಿಸುವ ತನ್ನ ಕ್ಯೆಬೆರಳುಗಳ ಬಿಂಬಗಳನ್ನು ಪರದೆಯ ಮೇಲೆ ಮೂಡಿಸಲು ಯಶಸ್ವಿಯಾದನು. 1924 ರ ಫೆಬ್ರವರಿಯಲ್ಲಿ ಲಂಡನಿನ ಸೆಲ್ಫಿಡ್ಜ್ ಡೆಪಾರ್ಟ್ಮೆಂಟಲ್ ಅಂಗಳದಲ್ಲಿ ಮೂರು ವಾರಗಳ ಕಾಲ ಮೊದಲಬಾರಿಗೆ ಸಾರ್ವಜನಿಕರಿಗೆ ಈ ಟಿ ವಿಯ ಪರದೆಯ ಮೇಲೆ ಚಲಿಸುವ ಬಿಂಬಗಳ ಪ್ರದರ್ಶನ ಮಾಡಿಸಿದ್ದನು, ಅಕ್ಟೋಬರ್ 2, 1925 ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ, ಅಂದು ಬ್ಯೆರ್ಡ್ ಪೂರ್ಣ ಪ್ರಮಾಣದಲ್ಲಿ ದೃಶ್ಯ ಹಾಗು ಶ್ರವಣಮಾದ್ಯಮವನ್ನು ಉಪಯೋಗಿಸಿಕೊಂಡು ಚಲಿಸುವ ಬಿಂಬಗಳನ್ನು ಪರದೆಯ ಮೇಲೆ ಮೂಡಿಸುವಲ್ಲಿ ಯಶಸ್ವಿಯಾದನು. ಸೆಕೆಂಡ್‌ಗೆ ಐದು ಚಿತ್ರಗಳಂತೆ ಮೂವತ್ತು ಸಾಲುಗಳ ಲಂಬವಾಗಿ ನಿಂತು ಚಲಿಸುವ ಚಿತ್ರಗಳನ್ನು ಮೂಡಿಸುವಲ್ಲಿ ಯಶಸ್ವಿಯಾದನು. ಮನುಷ್ಯನ ಮೆದುಳು ವಿವಿಧ ಭಂಗಿಯಲ್ಲಿರುವ ತಟಸ್ಥ ಬಿಂಬಗಳು ಪ್ರತಿ ಸೆಕೆಂಡ್‌ಗೆ ಹದಿನ್ಯೆದುಕ್ಕಿಂತ ಹೆಚ್ಚಾಗಿ ಬಂದಾಗ ಅದನ್ನು ಚಲಿಸುವ ಬಿಂಬಗಳಾಗಿ ಪರಿವರ್ತಿಸುತ್ತದೆ ಎಂಬ ನಿಯಮದ ಮೇಲೆ ಟಿ ವಿಯನ್ನು ತಯಾರಿಸಲಾಗಿದೆ.

ಪರದೆಯ ಮೇಲೆ ಮೊದಲು ಮೂಡಿದ ಚಿತ್ರ ಬ್ಯೆರ್ಡ್ನ ಕಛೇರಿಯ ಹುಡುಗ ವಿಲಿಯಂ ಎಡ್ವರ್ಡ್, ಟಿ ವಿ ಪರದೆಯ ಮೇಲೆ ಮೊದಲು ಮೂಡಿದ ಮಾನವನ ಚಿತ್ರ ಎಂಬ ಹೆಗ್ಗಳಿಕೆಗೆ ವಿಲಿಯಮ್ ಪಾತ್ರನಾದನು. 1927 ರಲ್ಲಿ ಬ್ಯೆರ್ಡ್ 438 ಕಿ.ಮಿ ದೂರವಾಣಿ ತಂತಿಯ ಮೂಲಕ ಲಂಡನ್ ನಿಂದ ದೂರದ ಗ್ಲಾಸ್ಗೋವರೆಗೂ ಪ್ರಸಾರಮಾಡುವುದರಲ್ಲಿ ಯಶಸ್ವಿಯಾದನು. ಇಷ್ಟೆ ಅಲ್ಲದೆ ವಿಡಿಯೊ ರೆಕಾರ್ಡಿಂಗ್ ತಂತ್ರಜ್ಞಾನವನ್ನು ಕಂಡು ಹಿಡಿದ ಕೀರ್ತಿಯು ಬ್ಯೆರ್ಡ್ಗೆ ಗೆ ಸೇರುತ್ತದೆ. ಬ್ಯೆರ್ಡ್ ಕಂಡು ಹಿಡಿದ ಟಿ ವಿ ಕಪ್ಪು ಬಿಳುಪಿನ ಟಿ ವಿ ಯಾಗಿತ್ತು. ಪರದೆಯ ಮೇಲೆ ಕಪ್ಪು ಹಾಗೂ ಬಿಳುಪಿನಲ್ಲಿ ದೃಶ್ಯವನ್ನು ನೊಡಲು ಮಾತ್ರ ಸಾಧ್ಯವಾಗಿತ್ತು, ಧ್ವನಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ದೃಶ್ಯವನ್ನು ಸೆರೆಹಿಡಿಯುವಾಗ ಧ್ವನಿಯನ್ನು ಮುದ್ರಣ ಮಾಡುವ ತಂತ್ರಜ್ಞ್ನಾನವನ್ನು ಕಂಡು ಹಿಡಿದನು. ಬ್ಯೆರ್ಡ್ ಅಲ್ಲದೇ ಇದೇ ಅವಧಿಯಲ್ಲಿ ಹಂಗೇರಿಯ ಕಲ್ಮಾನ್, ರಷ್ಯದ ಲಿಯೋನ್ ಥರ್ಮ್ ಫಿಲಿಯೋ ಟ್ರಾನ್ಸರ್ಥ್ ಅವರ ಕೊಡುಗೆಯೂ ಸಹ ಇಂದಿನ ಪೂರ್ಣ ಪ್ರಮಾಣದ ಟಿ ವಿ ಸಂಶೋಧನೆಯಲ್ಲಿ ಇದೆ ಎಂದರೆ ತಪ್ಪಾಗಲಾರದು.

1938 ರಲ್ಲಿ ವಾರ್ನರ್ ಏಂಬ ಜರ್ಮನ್ ಸಂಶೋಧಕ ಮೊದಲ ಬಾರಿಗೆ ಬಣ್ಣದ ಟಿವಿಯನ್ನು ಕಂಡು ಹಿಡಿದನು. 1939 ರಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಟಿವಿಯನ್ನು ಸ್ಯಾನ್ ಫ್ರ್ಯಾನ್ಸಿಸ್ಕೊದ ಅಂತಾರಾಷ್ಟ್ರೀಯ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ಡ್ಯುಮಾಂಟ್ ಎಂಬ ಕಂಪೆನಿ ಮೊದಲಿಗೆ ಟಿ ವಿಗಳನ್ನು ಉತ್ಪಾದಿಸಲು ಪ್ರಾರಂಭಿಸಿದ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪೀಟರ್ ಗೋಲ್ಡ್ ಮಾರ್ಕ ಮಾರ್ಗದರ್ಶನದಲ್ಲಿ ಬ್ಯೆರ್ಡ್ ತಂತ್ರಜ್ಞಾನವನ್ನು ಬಳಸಿಕೊಂಡು ಪೂರ್ಣ ಪ್ರಮಾಣದ ಬಣ್ಣದ ಟಿವಿ 1940 ರಲ್ಲಿ ತಯಾರಾಯಿತು. 1948 ರ ಹೊತ್ತಿಗೆ ಅಮೇರಿಕಾದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಟಿವಿಗಳು ಮಾರಾಟವಾಗಿದ್ದವು.

ಇಂದಿನ ಕೇಬಲ್ ಟಿ ವಿ ತಂತ್ರಜ್ಞಾನವನ್ನು ಕಂಡು ಹಿಡಿದ ಕೀರ್ತಿ ಪೆನ್ಸಲ್ವೇನಿಯಾದ ಮೌಂಟೆನ್ಸ್ ಕಂಪನಿಗೆ ಸೇರುತ್ತದೆ. ಪೆನ್ಸಲ್ವೆನೀಯಾದ ಸರ್ವಿಸ್ ಎಲೆಕ್ಟ್ರಿಕ್ ಕಂಪೆನಿಯ ವಾಲ್ಸನ್ ಹಾಗೂ ಆತನ ಹೆಂಡತಿ ಮಾರ್ಗರೇಟ್ ಮೊದಲ ಬಾರಿಗೆ ಕೇಬಲ್ ಟಿ ವಿ ಯನ್ನು ಕಂಡುಹಿಡಿದರು. ಜಿನೆತ್ ಕಾರ್ಪೋರೇಶನ್ 1950 ರಲ್ಲಿ ರಿಮೋಟ್ ಕಂಟ್ರೋಲ್ ಟಿವಿಯನ್ನು ಕಂಡುಹಿಡಿದರು. ಈ ಕಂಪೆನಿಯ ಸಂಸ್ಥಾಪಕ ಎಮ್ಯಾಕ್ ಡೊನಾಲ್ಡ್ ಮುಂದೊಂದು ದಿನ ಜಾಹೀರಾತುಗಳು ಟಿ ವಿ ಯನ್ನು ಆಳಲಿದೆ, ಈ ಜಾಹೀರಾತುಗಳಿಂದ ತಪ್ಪಿಸಿಕೊಳ್ಳಲು ಏನಾದರೊಂದು ಸಾಧನವೊಂದನ್ನು ಕಂಡು ಹಿಡಿಯಬೇಕೆಂದು ತನ್ನ ನೌಕರರಿಗೆ ಹೇಳುತ್ತಿದ್ದನು. ಇದರ ಫಲವಾಗಿಯೇ ರಿಮೋಟ್ ಕಂಟ್ರೋಲ್ ಹುಟ್ಟಿಕೊಂಡಿತು. ಪೂರ್ಣ ಪ್ರಮಾಣದ ರಿಮೋಟ್ ಕಂಟ್ರೋಲ್‌ನ್ನು ಕಂಡುಹಿಡಿದ ಕೀರ್ತಿ ಜೆನೆತ್ ಕಂಪೆನಿಯ ಇಂಜಿನಿಯರ್ ಉಜಿನ್ ಪೊಲಿಗೆ ಸಲ್ಲುತ್ತದೆ.

ಮೊದಮೊದಲು ಬಂದ ಟಿ ವಿಗಳು ಇಡಿ ಟೇಬಲನ್ನು ಅಕ್ರಮಿಸಿಕೊಳ್ಳುತ್ತಿದ್ದವು. ಚಿಕ್ಕ ಟಿವಿಗಳು, ಬಾಗಿಲು ಇರುವ ಟಿ ವಿಗಳು ನಂತರದ ದಿನಗಳಲ್ಲಿ ರೂಪಾಂತರಗೊಂಡು ಗೊಡೆಗೆ ತಗಲು ಹಾಕುವಂತಹ ಚಪ್ಪಟೆ ಎಲ್‌ ಸಿ ಡಿ ಹಾಗೂ ಎಲ್‌ ಇ ಡಿ ಯಂತಹ ಚಪ್ಪಟೆ ಟಿ ವಿ ಗಳವರೆಗೂ ಬಂದು ನಿಂತಿದೆ, ಟಿ ವಿ ಗಳಲ್ಲಿ 3-ಡಿ ಟಿ ವಿ ಗಳು ಇತ್ತೀಚಿನ ಅವಿಷ್ಕಾರವಾಗಿದ್ದು ಇದು ನೋಡುಗರನ್ನು ನಿಜವಾಗಲೂ ತಮ್ಮ ಕಣ್ಣ ಮುಂದೆ ನೆಡೆಯುತ್ತಿದೆಯೆನೋ ಎಂಬಂತಹ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಯಾವ ಕೋನದಲ್ಲಿ ಕುಳಿತು ನೋಡಿದರೂ ಸಮಾನವಾಗಿ ಕಾಣುವಂತಹ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಉತ್ತಮವಾದ ದೃಶ್ಯಗಳು, ಅತ್ಯಂತ ಸ್ಪಷ್ಟವಾದ ಧ್ವನಿ ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುವ ಟಿ ವಿ ಗಳಲ್ಲದೆ ಯು ಎಸ್‌ ಬಿ ಪೊರ್ಟಗಳಿರುವ ಟಿ ವಿ ಗಳು ಬಂದಿದ್ದು ಪೆನ್ ಡ್ರೈವ್ ಗಳಲ್ಲಿ ಇರುವ ನಮಗಿಷ್ಟವಾದ ಸಿನಿಮಾಗಳನ್ನು ನೋಡಬಹುದಲ್ಲದೆ ಮಕ್ಕಳಿಗೆ ವಿಡಿಯೋ ಗೇಮ್ಸಗಳನ್ನು ಹಾಕಿ ನೋಡಬಹುದು. ಈಗ ಇಂಟರ್ನೆಟ್ ವೈಫೈ, ಬ್ಲೂಟೂತ್ ಉಪಯೋಗಿಸಿ ಓ ಟೀ ಟಿ ಮೂಲಕ ಸಿನಿಮಾಗಳನ್ನು ಥಿಯೇಟರ್ ಬದಲು ಟಿ ವಿ ಯಲ್ಲೇ ನೋಡಬಹುದಾಗಿದೆ.

ಟಿ ವಿ ಎಂಬುದೊಂದು ಉತ್ತಮ ಮನೋರಂಜನೆಯ ಸಾಧನವಾಗಿದ್ದು, ಕೆಲವರಿಗೆ ಟಿ ವಿ ಯಿಲ್ಲದ ಜೀವನವನ್ನು ಉಹಿಸಿಕೊಳುವುದು ಕಷ್ಟ. ಈ ಟಿ ವಿ ಕೆಲವರಿಗೆ ಮನ್ನಸ್ಸನ್ನು ಉಲ್ಲಾಸಗೊಳಿಸಿದರೆ, ಕೆಲವರಿಗೆ ಮನೋರಂಜನೆಯ ಸಾಧನ, ಕೆಲವರಿಗೆ ಗೆಳೆಯ, ಇನ್ನು ಕೆಲವರಿಗೆ ಶ್ಯೆಕ್ಷಣಿಕ ಕಾರ್ಯಕ್ರಮಗಳನ್ನು ನೀಡುವ ಮಾರ್ಗದರ್ಶಕ. ಈ ಟಿ ವಿ ಮಾಧ್ಯಮದಿಂದ ಹೊರಬಂದ ಪ್ರತಿಭೆಗಳು ಅದೆಷ್ಟೊ? ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಟಿವಿ ಆವಿಷ್ಕಾರಗೊಂಡಾಗಿನಿಂದಲೂ ರೂಪಾಂತರವಾಗುತ್ತಲೇ ಇದ್ದು ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮ ತಂತ್ರಜ್ನಾನದಿಂದ ಕೂಡಿದ ಟಿ ವಿ ಗಳು ಮನೋರಂಜನೆಯನ್ನು ನೀಡಲಿವೆ ಎಂದರೆ ತಪ್ಪಾಗಲಾರದು.

ಡಾ.ಪ್ರಕಾಶ್.ಕೆ.ನಾಡಿಗ್
ಚಿತ್ರಗಳು: ಅಂತರ್ಜಾಲ

Related post

Leave a Reply

Your email address will not be published. Required fields are marked *