ವಿಶ್ವ ಪ್ಯಾಂಗೋಲಿಯನ್ ದಿನ

ವಿಶ್ವ ಪ್ಯಾಂಗೋಲಿಯನ್ ದಿನ

ವಿಶ್ವ ಪ್ಯಾಂಗೋಲಿನ್ ದಿನವನ್ನು ಪ್ರತಿವರ್ಷ ಫೆಬ್ರವರಿ ಮೂರನೇ ಶನಿವಾರ ಆಚರಿಸಲಾಗುತ್ತದೆ.
ವಿಶ್ವದಲ್ಲಿ ಅತೀ ಹೆಚ್ಚು ಕಳ್ಳಸಾಗಣೆಗೆ ಬಲಿಯಾಗಿ ವಿನಾಶವಾಗುವ ಹಂತ ತಲುಪಿದ ಪ್ಯಾಂಗೋಲಿನ್ಗಳ ಬಗೆಗೆ ಅರಿವು ಹಾಗು ನಿಸರ್ಗದಲ್ಲಿ ಅವುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2012 ರಿಂದ ವಿಶ್ವ ಪ್ಯಾಂಗೋಲಿನ್ ದಿನವನ್ನು ಆಚರಿಸಲಾಗುತ್ತಿದೆ. ಪ್ಯಾಂಗೋಲಿನ್ ಅಥವಾ ಚಿಪ್ಪುಹಂದಿ ಬಗೆಗೆ ಕೆಲವು ಕುತೂಹಲಕರ ಮಾಹಿತಿ ಇಲ್ಲಿವೆ.

🔸ಚಿಪ್ಪು ಹಂದಿಗಳು ಆಫ್ರಿಕಾ ಹಾಗು ಏಷಿಯಾ ಖಂಡಗಳಿಗೆ ಸೀಮಿತವಾಗಿದ್ದು ಇವುಗಳಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಎಂಟು ಜಾತಿಗಳಿದ್ದು ನಾಲ್ಕು ಆಫ್ರಿಕಾದಲ್ಲಿದ್ದರೆ ಉಳಿದ ನಾಲ್ಕು ಏಷಿಯಾದಲ್ಲಿವೆ.
🔸 ಇವು ವಿಕಾಸದಲ್ಲಿ ಅಷ್ಟಾಗಿ ಮುಂದುವರಿಯದ ಹಳೆ ಜಗತ್ತಿನ ಪ್ರಾಣಿಗಳು, ಇವುಗಳ ಬಾಯಲ್ಲಿ ಹಲ್ಲುಗಳಿಲ್ಲ, ಕಿವಿಗಳು ವಿಶೇಷವಾಗಿ ಬೆಳೆದಿಲ್ಲ ಹಾಗು ಚಿಕ್ಕ ಕಣ್ಣುಗಳಿವೆ, ನಾಲಿಗೆ ದೇಹಕ್ಕಿಂತ ಉದ್ದವಾಗಿದೆ.
🔸 ಚಿಪ್ಪುಗಳ ಹೊದಿಕೆ ಇರುವ ಪ್ರಪಂಚದ ಏಕಮಾತ್ರ ಸಸ್ತನಿಗಳು ಇವು, ಏಷಿಯಾದ ಪ್ಯಾಂಗೋಲಿನ್ಗಳ ಮೈಮೇಲೆ ವಿರಳ ಕೂದಲುಗಳು ಇವೆ, ಕೂದಲುಗಳ ಇರುವಿಕೆ ಸಸ್ತನಿಗಳ ಮುಖ್ಯ ಲಕ್ಷಣಗಳಾಗಿವೆ.


🔸ಭಾರತದಲ್ಲಿ ಚೈನೀಸ್ ಪ್ಯಾಂಗೋಲಿನ್ ಹಾಗು ಇಂಡಿಯನ್ ಪ್ಯಾಂಗೋಲಿನ್ ಈ ಎರಡು ಜಾತಿಗಳಿವೆ.
🔸 ಪ್ಯಾಂಗೋಲಿನ್ಗಳಿಗೆ ಮಲಯ ಭಾಷೆಯಲ್ಲಿ ಗುಂಡಾಗಿ ಉರುಳು ಎಂಬ ಅರ್ಥವಿದೆ.
🔸 ಇವುಗಳ ಮುಖ್ಯ ಆಹಾರ, ಗೆದ್ದಲು ಇರುವೆ ಹಾಗು ಕೆಲವು ಹುಳುಗಳು(Maggot) ದಿನಕ್ಕೆ ಹತ್ತರಿಂದ ಇಪ್ಪತ್ತು ಸಾವಿರ ಇರುವೆ ಗೆದ್ದಲನ್ನು ತಿನ್ನಬಲ್ಲವು.
🔸 ಮರಿಗಳನ್ನ ಬಾಲದ ಮೇಲೆ ಕೂರಿಸಿಕೊಂಡು ಸವಾರಿ ಮಾಡುತ್ತವೆ.


🔸 ಕಾಂಕ್ರೀಟಿನಷ್ಟು ಗಟ್ಟಿಯಾದ ನೆಲವನ್ನು ಸುಲಭವಾಗಿ ಅಗೆಯುತ್ತವೆ,ಕಾಡಿನಲ್ಲಿ ದೊಡ್ಡ ಹಾಗು ಆಳವಾದ ಬಿಲಗಳನ್ನು ಕೊರೆವ ಶಕ್ತಿ ಚಿಪ್ಪು ಹಂದಿಗಳಿಗೆ ಮಾತ್ರ ಇದೆ, ಈ ಬಿಲಗಳಲ್ಲಿ ಮುಳ್ಳುಹಂದಿಗಳು ಹೆಬ್ಬಾವು ವಾಸಿಸುತ್ತವೆ.
🔸 ನಮ್ಮ ರಾಜ್ಯದಲ್ಲಿ ಇಂಡಿಯನ್ ಪ್ಯಾಂಗೋಲಿನ್ ಮಾತ್ರ ಕಾಣಿಸುತ್ತದೆ.
🔸 ಇವು ರಾತ್ರಿ ಸಂಚಾರಿಗಳು ನಿಧಾನವಾಗಿ ಚಲಿಸುತ್ತವೆ.
🔸 ಚಿಪ್ಪುಗಳು ನಮ್ಮ ಬೆರಳಿನ ಉಗುರುಗಳಂತೆ ಕೆರಾಟಿನ್ ಎಂಬ ಪದಾರ್ಥರಿಂದ ರಚನೆಯಾಗಿದ್ದು ಇವು ಯಾವುದೇ ಔಷಧಿಯ ಗುಣ ಹೊಂದಿಲ್ಲ.

ಮಾಂಸಕ್ಕಾಗಿ ಮಾತ್ರ ಬೇಟೆ ನಡೆಯುತ್ತಿದ್ದಾಗ ಇವುಗಳ ಸಂಖ್ಯೆ ಸ್ವಲ್ಪ ಸಮಾಧಾನಕರವಾಗಿತ್ತು, ಯಾವಾಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಚಿಪ್ಪು, ಮಾಂಸಕ್ಕೆ ಬೇಡಿಕೆ ಹೆಚ್ಚಾಯಿತೋ ಅಂದಿನಿಂದ ಇವುಗಳ ಬೇಟೆ ಹಾಗು ಜೀವಂತ ಸೆರೆ ಹಿಡಿಯುವಿಕೆ ಹೆಚ್ಚತೊಡಗಿತು. ಹಾರೆ ಗುದ್ದಲಿಯೊಂದಿಗೆ ಕಾಡು ನುಗ್ಗಿ ಚಿಪ್ಪುಹಂದಿಗಳ ಬಿಲಗಳನ್ನು ಅಗೆದು ಹಿಡಿಯತೊಡಗಿದರು. ಕಳೆದೊಂದು ದಶಕದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಪ್ಯಾಂಗೋಲಿನ್ಗಳ ಮಾರಣ ಹೋಮ ಮಾಡಲಾಗಿದೆ. ಚೀನಾ ಹಾಗು ವಿಯೆಟ್ನಾಂ ದೇಶಗಳಲ್ಲಿ ಚಿಪ್ಪುಹಂದಿ ಅಂಗಾಂಗಳಿಂದ ಸಾಂಪ್ರದಾಯಕ ಔಷಧಿ ತಯಾರಿಸುತ್ತಾರೆ.

ವೇಗವಾಗಿ ಅಳಿಯುತ್ತಿರುವ ಇವುಗಳನ್ನು ಸಂರಕ್ಷಣೆ ಮಾಡದ್ದಿದ್ದರೆ ಮುಂದಿನ ದಿನಗಳಲ್ಲಿ ಇವುಗಳನ್ನು ಚಿತ್ರಗಳಲ್ಲಿ ಮಾತ್ರ ನೋಡಲು ಸಾಧ್ಯವಿದೆ.1972 ರ ವನ್ಯಜೀವಿ ಕಾಯ್ದೆಯ ಶೆಡ್ಯೂಲ್ 1 ರಲ್ಲಿ ಸಂರಕ್ಷಣೆಗೊಳಪಟ್ಟಿವೆ.

ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಸರ್ವೇಷನ್ ಟ್ರಸ್ಟ್

Related post

Leave a Reply

Your email address will not be published. Required fields are marked *