ವಿಶ್ವ ರಂಗಭೂಮಿ ದಿನದ ಸಂದೇಶ – 2022

ಸಂದೇಶಕಾರರು : ಪೀಟರ್ ಸೆಲ್ಲರ್ಸ್
ಕನ್ನಡ ಅನುವಾದ – ಬಿ. ಸುರೇಶ

ಪೀಟರ್ ಸೆಲ್ಲಾರ್ಸ್ ಅಮೇರಿಕನ್ ರಂಗಭೂಮಿ ನಿರ್ದೇಶಕರಾಗಿದ್ದು,

ಪೀಟರ್ ಸೆಲ್ಲಾರ್ಸ್

ವಿಶ್ವ ರಂಗಭೂಮಿ ದಿವಸದ ಅಂಗವಾಗಿ ಸಮಸ್ತ ರಂಗಕಲಾವಿದರಿಗೆ ತಮ್ಮ ಸಂದೇಶವನ್ನು ಕಳಿಸಿದ್ದು ಅದನ್ನು ಖ್ಯಾತ ರಂಗನಿರ್ದೇಶಕ ಬಿ. ಸುರೇಶ್ ರವರು ಕನ್ನಡದಲ್ಲಿ ಅನುವಾದಿಸಿದ್ದಾರೆ.

ಬಿ. ಸುರೇಶ

ಪ್ರಿಯ ಸಂಗಾತಿಗಳೇ,

ಇಡೀ ಜಗತ್ತು ಕ್ಷಣಕ್ಷಣದ ಸುದ್ದಿ ಪ್ರವಾಹದಲ್ಲಿ ಮುಳುಗಿರುವಾಗ, ಸೃಜನಶೀಲವೃತ್ತಿಯವರಾದ ನಾವೆಲ್ಲರೂ ನಮ್ಮ ನೈಜ್ಯ ಶಕ್ತಿ , ಸಾಮರ್ಥ್ಯ, ದೃಷ್ಟಿಕೋನ ಬಳಸಿ ಈ ಮಹಾಕಾಲದ, ಮಹಾ ಬದಲಾವಣೆಯ ಪರ್ವದ, ಮಹಾನ್ ತಿಳುವಳಿಕೆಯ, ಮಹಾನ್ ಪ್ರತಿಬಿಂಬದ, ಮಹಾನ್ ದೃಷ್ಟಿಯನ್ನು ನಮ್ಮ ಕ್ರಿಯಾಶೀಲತೆಗೆ ಆಹ್ವಾನಿಸಬಹುದೇ?
ನಾವೀಗ ಮನುಕುಲದ ಚರಿತ್ರೆಯ ಮಹಾನ್ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಈ ಅವಧಿಯಲ್ಲಿ ನಮ್ಮೊಳಗೆ ಆಗುತ್ತಿರಬಹುದಾದ ತೀವ್ರ ಹಾಗೂ ಮುಖ್ಯವಾದ ಬದಲಾವಣೆಗಳನ್ನು, ನಮ್ಮ ನಡುವಿನ ಸಂಬಂಧಗಳನ್ನು ಗ್ರಹಿಸುವುದು ಮತ್ತು ಅವುಗಳನ್ನು ಮಾತು, ಭಾವದ ಮೂಲಕ ಪ್ರಕಟಗೊಳಿಸುವುದು ಸುಲಭವಲ್ಲ.

ದಿನವೆಲ್ಲ ನಾವು ಕೇವಲ ಸುದ್ಧಿಚಕ್ರದಲ್ಲಿ ಸಿಲುಕಿಲ್ಲ ಬದಲಿಗೆ ಕಾಲದ ಅಂಚಿನಲ್ಲಿರುವರಂತೆ ಜೀವಿಸಿದ್ದೇವೆ. ನಮ್ಮ ಅನುಭವದ ಗಾಢತೆಯನ್ನು ತಿಳಿಸಲು ದಿನಪತ್ರಿಕೆಗಳಾಗಲಿ, ಇನ್ನಿತರ ಮಾದ್ಯಮಗಳಾಗಲಿ ಸಿದ್ಧವಾಗಿಲ್ಲ. ಯಾವ ಭಾಷೆಗೆ, ಯಾವ ಚಲನೆಗೆ ಯಾವ ಪ್ರತಿಮೆಗೆ ನಮ್ಮ ಅನುಭವವನ್ನು ಕಟ್ಟಿಕೊಡುವ ಸಾಮರ್ಥ್ಯ ಇದೆ? ಬದುಕಿನ ಅನುಭವವನ್ನು ಜಾಳಾದ ಸುದ್ದಿ ಆಗಿಸುವುದರ ಹೊರತಾಗಿ ನೋಡುಗನಲ್ಲಿ ಅನುಭೂತಿ ಮೂಡಿಸುವಂತೆ ದಾಟಿಸುವುದು ಹೇಗೆ?

ರಂಗಭೂಮಿಯೊಂದೇ ನಿಜವಾದ ಅರ್ಥದಲ್ಲಿ ನಮ್ಮ ಅನುಭವ ದಾಟಿಸಬಲ್ಲ ಮಾಧ್ಯಮ.

ನಿರಂತರ ಸುಳ್ಳು ಸುದ್ದಿಗಳ, ಕಪಟ ಪ್ರಚಾರಿಗಳ, ಹುಸಿ ಮುನ್ಸೂಚನೆಗಳ ಬಲೆಯಿಂದಾಚೆಗೆ ಸಾಗಿ ಬದುಕಿನ ಅನಂತತೆಯನ್ನು, ಸಾತತ್ಯವನ್ನು, ಸಾಂಗತ್ಯವನ್ನು ತಿಳಿ ನೀಲಿ ಬಾನಿನಂತೆ ಇತರರಿಗೆ ತಲುಪಿಸುವುದಾದರೂ ಹೇಗೆ? ಕಳೆದೆರಡು ವರ್ಷಗಳ ಮಹಾಮಾರಿ ಜನರ ಮನಸ್ಸನ್ನು ಮುದುಡಿಸಿದೆ, ಬದುಕುಗಳನ್ನು ಸಂಕುಚಿತಗಳಿಸಿದೆ, ಸಂಬಂಧಗಳನ್ನು ಮುರಿದಿದೆ ಮತ್ತು ನಮ್ಮನು ಮರಳಿ ಸೊನ್ನೆಯಾಗಿಸಿದೆ. ಈಗ ಅದ್ಯಾವ ಬೀಜಗಳನ್ನು ಬಿತ್ತುವುದು? ಯಾವ ಭೂಮಿಯನ್ನು ಮರುಪೂರಣಗೊಳಿಸುವುದು? ಅತಿಯಾಗಿರುವ, ಅತಿಕ್ರಮಿಸಿರುವ ಅನಗತ್ಯ ವಿಷಯಗಳನ್ನು ತೆಗೆಯಬೇಕಿದೆ. ಹಲವಾರು ಹಂಚಿನಲ್ಲಿ ಬದುಕುತ್ತಿದ್ದಾರೆ. ಹಿಂಸೆ ಎಂಬುದು ಅತಾರ್ಕಿಕವಾಗಿ ಅನಪೇಕ್ಷಿತವಾಗಿ ತಾಂಡವ ಆಡುತಿದ್ದೆ. ವ್ಯವಸ್ಥೆಯ ಹಲವು ಅಂಗಗಳು ಈ ಹಿಂಸೆಗೆ ಮೂಕ ಸಾಕ್ಷಿಗಳಾಗಿವೆ.

ಈ ಹಂತದಲ್ಲಿ ನೆನಪಿನ ಕಣಜ ತೆರೆದಿಡಬಲ್ಲ ಆಚರಣೆ ಯಾವುದು? ನಾವು ಯಾವ ನೆನಪಿನ ಕೋಶ ತೆರೆಯಬೇಕು? ನಮ್ಮ ಯಾವ ಚಲನೆಗಳನ್ನು ಮರುರೂಪಿಸಬೇಕು? ಮರಳಿ ತಾಲೀಮು ಆರಂಭಿಸಲು ಸರಿ ದಾರಿ ಯಾವುದು?

ಇವೆಲ್ಲ ಪ್ರಶ್ನೆಗಳಿಗೆ ಉತ್ತರವಾಗಬಲ್ಲ ಹೊಸ ಆಚರಣೆಗಳನ್ನುಳ್ಳ ಹೊಸ ರಂಗಭೂಮಿ ಕಟ್ಟಬೇಕಿದೆ. ಅದಕ್ಕಾಗಿ ನಾವೆಲ್ಲರೂ ಸೇರಬೇಕಿದೆ. ನಮ್ಮೆಲ್ಲ ತಲ್ಲಣಗಳನ್ನು ಹಂಚಿಕೊಳ್ಳಬೇಕಿದೆ. ಸಂಕಟಗಳ ಕೈತುತ್ತು ಪಡೆದು ಸಮಾನತೆಯ, ಸಹನೆಯ ನೋಡುಗ – ಕೇಳುಗ ಸೇರಬಲ್ಲಂತಹ ತೆರಪುಗಳನ್ನು ರೂಪಿಸಬೇಕಿದೆ.

ಮನುಷ್ಯರು, ದೇವರು, ಗಿಡಗಂಟಿಗಳು, ಪಶು-ಪಕ್ಷಿಗಳು, ಮಳೆಯ ಹನಿ, ಕಣ್ಣೀರ ಬಿಂದುಗಳ ಜೊತೆಗೆ ಮರುಜೀವ ಪಡೆಯಬಹುದಾದ ಎಲ್ಲವುಗಳಿಗೆ ಸ್ವಾಸ್ಥ್ಯ ನೀಡಬಲ್ಲ ಭೂಮಿ ಎಂದರೆ ಅದು ರಂಗಭೂಮಿ. ಸಮಾನತೆ, ಸಹನತೆಯ ದೀಪಗಳು ಈ ರಂಗಭೂಮಿಯನ್ನು ಬೆಳಗುತ್ತಿವೆ. ಸಮಚಿತ್ತತೆ, ಸಮಾನ ಕ್ರಿಯೆ ಸಹನೆಗಳ ಜೊತೆಗೆ ಅಪಾಯಗಳನ್ನು ತೊಡೆಯಬಲ್ಲ ಸಾವಯವ ಸಂಭಂದದಿಂದ ರಂಗಭೂಮಿ ಜೀವಂತವಾಗಿದೆ.

ಬುದ್ದನು ತನ್ನ “ಅವತಂಶಕ ಸುತ್ತ” ದಲ್ಲಿ ಮನುಷ್ಯನ ನೆಮ್ಮದಿಯ ಜೀವನಕ್ಕೆ ಬೇಕಾದ ಹತ್ತು ಸಹನೆಗಳ ಬಗ್ಗೆ ತಿಳಿಸಿದ್ದಾನೆ. ಅವುಗಳಲ್ಲಿ ಒಂದು – ಎಲ್ಲವನ್ನು ಕೇವಲ ಮರೀಚಿಕೆ ಎಂದು ಗುರುತಿಸಬಲ್ಲ ಸಹನೆ. ರಂಗಭೂಮಿಯು ಯಾವಾಗಲೂ ಇಂತಹ ಮರೀಚಿಕೆಗಳನ್ನು ಪರಿಚಯಿಸುವ ಸಾಧನವಾಗಿದೆ. ಆ ಮೂಲಕ ಭ್ರಮೆಗಳನ್ನು, ಅಂಧಶ್ರದ್ಧೆಗಳಿಂದ ಬಿಡುಗಡೆ ನೀಡುವ ಶಕ್ತಿ ರಂಗಭೂಮಿಗಿದೆ. ನಾವಿಂದು ಬದಲಿ ವಾಸ್ತವಗಳನ್ನು ಗುರುತಿಸಲಾಗದ, ಭಿನ್ನ ದಾರಿಗಳನ್ನು ಹುಡುಕದ, ಅಸ್ಪಷ್ಟವಾಗಿರುವ ಸಂಭಂದದ ಕೊಂಡಿಗಳನ್ನು ಗಮನಿಸದ ಹಾಗೆ ಗ್ರಸ್ಥರಾಗಿದ್ದೇವೆ.

ನಮ್ಮ ಮನಸ್ಸು, ಇಂದ್ರಿಯ, ಜಿಹ್ವೆ, ಗ್ರಹಣ, ಮತ್ತು ಕಲ್ಪನಾ ಶಕ್ತಿಗಳ ಮೂಲಕ ನಮ್ಮ ಚರಿತ್ರೆಯ ಮರು ಓದು ಮಾತ್ರವಲ್ಲದೆ, ಭವಿಷ್ಯವನ್ನು ಸಹ ಹೊಸದಾಗಿ ರೂಪಿಸಬೇಕಿದೆ. ಈ ಕೆಲಸ ಏಕಾಂತದಲ್ಲಿ ಸಾದಿತವಾಗುವುದಿಲ್ಲ. ಹಾಗಾಗಿ ನಾವೆಲ್ಲರೂ ಕೈ ಜೋಡಿಸಬೇಕು. ಎಲ್ಲರೂ ಒಂದಾಗಿ ರಂಗಕ್ರಿಯೆ ನೆಡೆಸಬೇಕು ಎಂದು ತಿಳಿಸಲು ಇದು ಆಹ್ವಾನ.

ಈ ವರೆಗಿನ ನಿಮ್ಮೆಲ್ಲರ ದುಡಿಮೆಗೆ ಧನ್ಯವಾದ ತಿಳಿಸುತ್ತ.

ಪೀಟರ್ ಸೆಲ್ಲರ್ಸ್
ಅನುವಾದ : ಬಿ. ಸುರೇಶ

Related post

Leave a Reply

Your email address will not be published. Required fields are marked *